ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮಚಂದ್ರಾಪುರ ಮಠ, ಸ್ವಾಮೀಜಿ ಬೆಂಬಲಿಸಿ ನಿರ್ಣಯ

Last Updated 30 ಡಿಸೆಂಬರ್ 2018, 20:20 IST
ಅಕ್ಷರ ಗಾತ್ರ

ಬೆಂಗಳೂರು: ನಮ್ಮ ಶ್ರದ್ಧೆ ಮತ್ತು ಭಕ್ತಿಯ ಕೇಂದ್ರವಾದ ರಾಮಚಂದ್ರಾಪುರ ಮಠ, ಗುರುಗಳಾದ ರಾಘವೇಶ್ವರ ಭಾರತೀ ಸ್ವಾಮೀಜಿ ವಿರುದ್ಧ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಮಾಡಿದ ಎಲ್ಲ ಆರೋಪಗಳನ್ನು ಖಂಡಿಸುವ ನಿರ್ಣಯವನ್ನು ಎರಡನೆಯ ವಿಶ್ವ ಹವ್ಯಕ ಸಮ್ಮೇಳನ ಕೈಗೊಂಡಿದೆ.

‘ಇನ್ನು ಮುಂದೆ ಇಂತಹ ಆರೋಪಗಳನ್ನು ಅಥವಾ ಅವಹೇಳನಕಾರಿ ಹೇಳಿಕೆಗಳನ್ನು ಯಾವುದೇ ವ್ಯಕ್ತಿ, ಸಂಘಟನೆ ಅಥವಾ ಮಠ ನೀಡಿದಲ್ಲಿ ಅವುಗಳ ವಿರುದ್ಧ ನಾವೆಲ್ಲ ಸಂಘಟಿತರಾಗಿ ಹೋರಾಡಲು ಬದ್ಧರಿದ್ದೇವೆ’ ಎಂಬ ಸಾಲುಗಳು ಕೂಡ ನಿರ್ಣಯದಲ್ಲಿವೆ.

ಅರಮನೆ ಮೈದಾನದಲ್ಲಿ ಭಾನುವಾರ ನಡೆದ ಸಮ್ಮೇಳನದ ಸಮಾರೋಪ ಕಾರ್ಯಕ್ರಮದಲ್ಲಿ ಒಟ್ಟು ಐದು ನಿರ್ಣಯಗಳನ್ನು ಕೈಗೊಳ್ಳಲಾಯಿತು. ಅಖಿಲ ಹವ್ಯಕ ಮಹಾಸಭಾ ಅಧ್ಯಕ್ಷ ಡಾ. ಗಿರಿಧರ ಕಜೆ ನಿರ್ಣಯಗಳನ್ನು ಮಂಡಿಸಿದರು. ಕಾರ್ಯಕ್ರಮದಲ್ಲಿ ಸೇರಿದ್ದವರು ನಿರ್ಣಯಗಳನ್ನು ಕರತಾಡನದ ಮೂಲಕ ಅನುಮೋದಿಸಿದರು.

ಸಮಾರೋಪದಲ್ಲಿ ಪಾಲ್ಗೊಂಡ ಶಿವಮೊಗ್ಗ ಜಿಲ್ಲೆಯ ಕೂಡಲಿ ಮಠದ ವಿದ್ಯಾಭಿನವ ವಿದ್ಯಾರಣ್ಯ ಭಾರತೀ ಸ್ವಾಮೀಜಿ, ‘ಮಠಗಳ ವಿಚಾರದಲ್ಲಿ ಸರ್ಕಾರ ಹಸ್ತಕ್ಷೇಪ ಮಾಡಬಾರದು. ಹಸ್ತಕ್ಷೇಪ ಮಾಡಿದರೆ ಅವ್ಯವಸ್ಥೆ ಉಂಟಾಗುತ್ತದೆ. ಮಠ, ಸಂಸ್ಕೃತಿ ಮೇಲಿನ ಆಕ್ರಮಣದ ವಿರುದ್ಧ ಹೋರಾಟ ಮಾಡದಿದ್ದರೆ ಧರ್ಮ ಉಳಿಯುವುದಿಲ್ಲ’ ಎಂದು ಹೇಳಿದರು.

ಸಮ್ಮೇಳನದ ನಿರ್ಣಯದಲ್ಲಿ ಅವರ ಮಾತುಗಳೂ ಧ್ವನಿಸಿದ್ದು, ‘ಯಾವುದೇ ರೀತಿಯಲ್ಲಿ, ಯಾವುದೇ ಕಾರಣಕ್ಕೂ ಮಠ, ದೇವಸ್ಥಾನಗಳನ್ನು ಸರ್ಕಾರ ಸ್ವಾಧೀನ ಮಾಡಿಕೊಳ್ಳುವುದನ್ನು ಖಂಡಿಸುತ್ತೇವೆ’ ಎಂಬ ನಿರ್ಣಯ ಕೈಗೊಳ್ಳಲಾಗಿದೆ. ‘ಮಠ, ದೇವಸ್ಥಾನಗಳಿಗೆ ಮೊದಲಿನಂತೆ ಸ್ವಾತಂತ್ರ್ಯವನ್ನು, ಸ್ವಾಯತ್ತೆಯನ್ನು ಮುಂದುವರಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸುತ್ತೇವೆ. ಮಠ, ದೇವಸ್ಥಾನಗಳ ರಕ್ಷಣೆಗೆ ನಾವು ಬದ್ಧರಾಗಿರುತ್ತೇವೆ’ ಎಂದೂ ನಿರ್ಣಯದಲ್ಲಿ ಹೇಳಲಾಗಿದೆ.

ಇತರ ನಿರ್ಣಯಗಳು: ‘ವಿಶ್ವಗುರುವೆಂದು ಮಾನ್ಯತೆ ಪಡೆದ ಭಾರತದ ಸಂಸ್ಕೃತಿ, ಸಂಸ್ಕಾರಗಳ ಸಂರಕ್ಷಣೆ ಹಾಗೂ ಸಂವರ್ಧನೆಗೆ ಬದ್ಧ. ಸನಾತನ ಧರ್ಮದ ಪ್ರಾವಿತ್ರ್ಯ, ಶ್ರೇಷ್ಠತೆ ಹಾಗೂ ಸರ್ವಮಾನ್ಯತೆಯನ್ನು ಕಾಪಾಡಲು ಸಿದ್ಧರಾಗಿರುತ್ತೇವೆ, ಬದ್ಧರಾಗಿರುತ್ತೇವೆ. ಸನಾತನ ಧರ್ಮಕ್ಕೂ, ಭಾರತೀಯತೆಗೂ ರತ್ನ ಸದೃಶ ಕೊಡುಗೆ ನೀಡುತ್ತಿರುವ ಹವ್ಯಕ ಸಂಸ್ಕೃತಿ ಮತ್ತು ಸಂಸ್ಕಾರಗಳನ್ನು ಉಳಿಸಿ-ಬೆಳೆಸಲು ಬದ್ಧರಾಗಿರುತ್ತೇವೆ.’

‘ಗುರು ಹೇಳಿದ್ದನ್ನು ಕೇಳಬೇಕು’: ‘ಗುರು ಹೇಳಿದ್ದನ್ನು ನಾವು ಕೇಳಬೇಕು. ಶಿಷ್ಯರು ಹೇಳಿದ್ದನ್ನು ಗುರು ಕೇಳುವುದಲ್ಲ. ನಾವು ಸಮಾಜದ ಸಂಘಟನೆ ಬೇಕು ಎನ್ನುವವರು, ವಿಘಟನೆ ಬಯಸುವವರಲ್ಲ’ ಎಂದು ಡಾ. ಕಜೆ ಹೇಳಿದರು.

‘ಆಡು ಮುಟ್ಟದ ಸೊಪ್ಪಿಲ್ಲ, ಹವ್ಯಕರು ಕೆಲಸ ಮಾಡದ ಕ್ಷೇತ್ರವಿಲ್ಲ’ ಎಂದು ಬಸವನಗುಡಿ ಕ್ಷೇತ್ರದ ಶಾಸಕ ರವಿ ಸುಬ್ರಹ್ಮಣ್ಯ ಮೆಚ್ಚುಗೆ ಸೂಚಿಸಿದರು. ‘ಹವ್ಯಕ ಸಂಸ್ಕೃತಿಯನ್ನು ಕೌಟುಂಬಿಕ ನೆಲೆಯಲ್ಲಿ ರಕ್ಷಿಸುವ ಹೊಣೆ ನಮ್ಮ ಮೇಲಿದೆ’ ಎಂದು ಶಿರಸಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಕೈಚಾಚದೆ ಸಾಧನೆ ಮಾಡಿದ್ದಾರೆ: ಬಿಎಸ್‌ವೈ

ಹವ್ಯಕರು ಬದಲಾವಣೆಗಳಿಗೆ ಹೊಂದಿಕೊಂಡು, ಯಾರಲ್ಲೂ ಕೈಚಾಚದೆ ಸಾಧನೆ ತೋರಿದ್ದಾರೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪ ಹೇಳಿದರು.

ಅಭಿವೃದ್ಧಿಯ ಫಲ ಸಮುದಾಯದ ಎಲ್ಲರಿಗೂ ಸಿಗುವಂತೆ ಆಗಬೇಕು. ಕಾಲೆಳೆಯುವ ಕೆಲಸಗಳು ಎಲ್ಲ ಕಾಲದಲ್ಲೂ ಇರುತ್ತವೆ. ಆದರೆ ಅದನ್ನು ಮೀರುವ ಶಕ್ತಿ ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

* ಜಗತ್ತಿನ ಏಕಮಾತ್ರ ಅವಿಚ್ಛಿನ ಗುರು ಪರಂಪರೆ ಅಂದರೆ ಅದು ರಾಮಚಂದ್ರಾಪುರ ಮಠ. ಇದರ ರಕ್ಷಣೆ ಹವ್ಯಕ ಮಹಾಸಭೆಯ ಹೊಣೆ. ಪರಂಪರೆಯನ್ನು ತುಂಡರಿಸಲು ಯಾರಿಂದಲೂ ಸಾಧ್ಯವಿಲ್ಲ.
-ಡಾ. ಗಿರಿಧರ ಕಜೆ, ಅಖಿಲ ಹವ್ಯಕ ಮಹಾಸಭಾ ಅಧ್ಯಕ್ಷ

* ಎಲ್ಲರನ್ನೂ ಜೊತೆಯಲ್ಲಿ ಕರೆದುಕೊಳ್ಳುವುದು ಹಾಗೂ ಸಮಷ್ಟಿಯ ಆರಾಧನೆಯೇ ಬ್ರಾಹ್ಮಣ್ಯ. ಸಂಕುಚಿತ ವಿಷಯಗಳ ಆರಾಧನೆ ಬ್ರಾಹ್ಮಣ್ಯವಲ್ಲ.
-ಅನಂತ ಕುಮಾರ ಹೆಗಡೆ, ಕೇಂದ್ರ ಸಚಿವ

* ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿ ನನ್ನ ವ್ಯಕ್ತಿತ್ವ ನಿರ್ಮಾಣ ಮಾಡಿದ್ದರಲ್ಲಿ ಹವ್ಯಕ ಸಮುದಾಯದವರ ಪಾಲು ಕೂಡ ಇದೆ.
- ನಳಿನ್ ಕುಮಾರ್ ಕಟೀಲ್, ಮಂಗಳೂರು ಸಂಸದ

* ಎಲ್ಲರನ್ನೂ ನಮ್ಮವರು ಎಂದೆಣಿಸಬೇಕು ಎಂದು ಬಸವಣ್ಣ ಹೇಳಿದ್ದನ್ನು ಹವ್ಯಕರು ‘ವಸುಧೈವ ಕುಟುಂಬಕಂ’ ಎನ್ನುವ ಮೂಲಕ ಪ್ರತಿಪಾದಿಸುತ್ತಿದ್ದಾರೆ.
-ನ್ಯಾಯಮೂರ್ತಿ ಡಿ.ವಿ. ಶೈಲೇಂದ್ರ ಕುಮಾರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT