ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಯನೂರು ಮಂಜುನಾಥ್‌ ಆರೋಪದಲ್ಲಿ ಹುರುಳಿಲ್ಲ: ಡಾ.ಕೆ. ಸುಧಾಕರ್‌

Last Updated 7 ಜೂನ್ 2022, 15:17 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಷ್ಟ್ರೀಯ ಆರೋಗ್ಯ ಅಭಿಯಾನದ (ಎನ್‌ಎಚ್‌ಎಂ) ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ನೌಕರರಿಗೆ ವೇತನ ಪರಿಷ್ಕರಣೆ, ರಜೆ ಮತ್ತು ಇತರ ಸೌಲಭ್ಯಗಳನ್ನು ಒದಗಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಈ ವಿಚಾರದಲ್ಲಿ ವಿಧಾನ ಪರಿಷತ್‌ ಸದಸ್ಯ ಆಯನೂರು ಮಂಜುನಾಥ್‌ ಮಾಡಿರುವ ಆರೋಪಗಳಲ್ಲಿ ಹುರುಳಿಲ್ಲ’ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ಹೇಳಿದ್ದಾರೆ.

ಆಯನೂರು ಮಂಜುನಾಥ್‌ ಮಾಡಿರುವ ಆರೋಪಗಳಿಗೆ ಪತ್ರಿಕಾ ಹೇಳಿಕೆ ಮೂಲಕ ಪ್ರತಿಕ್ರಿಯೆ ನೀಡಿರುವ ಅವರು, ‘ಶ್ರೀನಿವಾಸಚಾರಿ ನೇತೃತ್ವದ ಸಮಿತಿ ಅನುಷ್ಠಾನದ ಕುರಿತು ಸಿಬ್ಬಂದಿ ಸಂಘಟನೆ (ಕೆಎಸ್‌ಎಚ್‌ಒಸಿಇಎ) ಪದಾಧಿಕಾರಿಗಳ ಜತೆ ಹಲವು ಸಭೆ ನಡೆಸಿ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಸಂಘಟನೆಯ ಗೌರವಾಧ್ಯಕ್ಷರಾಗಿರುವ ಆಯನೂರು ಕೂಡ ಸಭೆಗಳಲ್ಲಿ ಭಾಗವಹಿಸಿದ್ದರು. ಈಗ ಅವರೇ ವ್ಯತಿರಿಕ್ತವಾದ ಹೇಳಿಕೆ ನೀಡಿರುವುದು ಆಶ್ಚರ್ಯ ಉಂಟುಮಾಡಿದೆ’ ಎಂದಿದ್ದಾರೆ.

‘ಗುತ್ತಿಗೆ ನೌಕರರ ಸೇವೆಯನ್ನು ಕಾಯಂ ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ. ಆದರೂ, ಅವರನ್ನು ಸೇವೆಯಲ್ಲಿ ಮುಂದುವರಿಸಲಾಗಿದೆ. 38 ವೃಂದಗಳ 17,033 ಹೊರಗುತ್ತಿಗೆ ನೌಕರರಿಗೆ ವೇತನ ಪರಿಷ್ಕರಣೆಗೆ ಶಿಫಾರಸು ಮಾಡಿದ್ದು, ಇದಕ್ಕಾಗಿ ₹ 71.26 ಕೋಟಿ ಹೆಚ್ಚುವರಿ ಅನುದಾನ ಕೋರಿ ಆರ್ಥಿಕ ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗಿದೆ. ಕಾನೂನು ವ್ಯಾಪ್ತಿಯಲ್ಲಿ ಒದಗಿಸಲು ಸಾಧ್ಯವಿರುವ ಎಲ್ಲ ಸೌಲಭ್ಯಗಳನ್ನೂ ಅವರಿಗೆ ನೀಡಲು ಪ್ರಯತ್ನ ಮಾಡಲಾಗುತ್ತಿದೆ’ ಎಂದು ತಿಳಿಸಿದ್ದಾರೆ.

ಎನ್‌ಎಚ್‌ಎಂ ಗುತ್ತಿಗೆ ನೌಕರರಿಗೆ ರಜೆ ಸೌಲಭ್ಯ ನೀಡಲಾಗಿದೆ. ಈ ನೌಕರರನ್ನು ಆಯುಷ್ಮಾನ್‌ ಭಾರತ್‌– ಆರೋಗ್ಯ ಕರ್ನಾಟಕ ಯೋಜನೆಯಡಿ ತರಲಾಗಿದೆ. ಜಿಲ್ಲೆಯೊಳಗೆ ಒಂದು ಬಾರಿ ಪರಸ್ಪರ ಒಪ್ಪಿಗೆ ಮೇರೆಗೆ ವರ್ಗಾವಣೆಗೂ ಅವಕಾಶ ನೀಡಲಾಗಿದೆ. ವಿಶೇಷ ಸೇವಾ ಭತ್ಯೆ ಹಾಗೂ ಮರಣ ಅಥವಾ ಅಂಗವೈಕಲ್ಯದ ಸಂದರ್ಭದಲ್ಲಿ ಪರಿಹಾರ ನೀಡಲು ಕ್ಷೇಮನಿಧಿ ವ್ಯಾಪ್ತಿಗೆ ತರುವುದಕ್ಕೂ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಹೇಳಿದ್ದಾರೆ.

‘ಸಚಿವನಾಗಿ ಅಧಿಕಾರ ವಹಿಸಿಕೊಂಡ ಬಳಿಕ ಇಲಾಖೆಯ ಸಿಬ್ಬಂದಿಗೆ ಸೌಲಭ್ಯ ಒದಗಿಸುವ ವಿಚಾರದಲ್ಲಿ ಕೈಗೊಂಡ ತೀರ್ಮಾನಗಳ ಕುರಿತು ನನಗೆ ತೃಪ್ತಿ ಇದೆ. ನನ್ನ ಕಾರ್ಯಕ್ಷಮತೆ ಏನು ಎಂಬುದು ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಮತ್ತು ಜನರಿಗೆ ಗೊತ್ತಿದೆ’ ಎಂದು ಸುಧಾಕರ್‌ ಅವರು ಆಯನೂರು ಮಂಜುನಾಥ್‌ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT