ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕವಯತ್ರಿ ನಾಗಶ್ರೀ ಶ್ರೀರಕ್ಷ ಅವರ ಬದುಕುವ ಛಲವನ್ನು ಬೆಂಬಲಿಸಿ

ಕ್ಯಾನ್ಸರ್ ಚಿಕಿತ್ಸೆಗೆ ಸಹಾಯ ಮಾಡಿ
Last Updated 9 ಜುಲೈ 2018, 12:35 IST
ಅಕ್ಷರ ಗಾತ್ರ

ಓ ನನ್ನ ಜೀವವೇ
ಬರೆಯುವುದೇನೆಂದು
ತಿಳಿದಿಲ್ಲ ನನಗೆ
ಒಂದು ಸಲ ಹುದುಗಿ ಬಿಡುತ್ತೇನೆ
ಎಲ್ಲಾದರೂ
ನಿನ್ನ ದೇಹದ ಒಳಗೆ

ಅದೇನೋ ತಿಳಿಯುತ್ತಿಲ್ಲ
ಹಾಯಾಗಿ ಮಲಗಿದ್ದೇನೆ
ನೀನು ಬಿಟ್ಟು ಹೊರಟ
ಕಂಪನದ ಮಂಪರಿನಲ್ಲಿ
ನಿನ್ನ ದೇಹದ ಕೂದಲಿನ
ಕಚಗುಳಿಗೆ ನನ್ನ ಮೈಯೆಲ್ಲಾ
ನುಂಗಿಕೊಳ್ಳುತ್ತಿದೆ

ಪ್ರೇಮದ ಬಗ್ಗೆ, ಬದುಕಿನ ಬಗ್ಗೆ ಇಷ್ಟು ಉಜ್ವಲ ಸಾಲುಗಳನ್ನು ಬರೆದಿರುವುದು ಮೂವತ್ತೆರಡು ವರ್ಷದ ಕವಯಿತ್ರಿ ನಾಗಶ್ರೀ ಶ್ರೀರಕ್ಷ. ‘ನಕ್ಷತ್ರ ಕವಿತೆಗಳು’ ಸಂಕಲನದ ಖ್ಯಾತಿಯ ಅವರು ಈಗಲೂ ಮಲಗಿದ್ದಾರೆ. ಆದರೆ ಹಾಯಾಗಿ ಅಲ್ಲ. ಕ್ಷಣ ಕ್ಷಣಕ್ಕೂ ಮೈಯೇರುತ್ತಿರುವ ಯಮರೂಪಿ ಸರ್ಕೋಮಾ ಕ್ಯಾನ್ಸರ್‌ನೊಂದಿಗೆ ಹೋರಾಡುತ್ತ, ಕಿಮೊಥೆರಪಿಯ ಯಾತನೆಯನ್ನು ಭರಿಸುತ್ತ, ದೇಹದೊಳಗೆ ವ್ಯಾಪಿಸುತ್ತಿರುವ ಆರು ಕ್ಯಾನ್ಸರ್‌ ಟ್ಯೂಮರ್‌ಗಳನ್ನು ಹತ್ತಿಕ್ಕಲು ಒದ್ದಾಡುತ್ತ, ಈಗಲೂ ಅವರು ಮಲಗಿದ್ದಾರೆ. ‘ಅಮ್ಮ ಹುಷಾರಾಗಿ ಬರ್ತಾಳೆ’ ಎಂಬ ತಂದೆಯ ಮಾತನ್ನೇ ನಂಬಿದ್ದಾರೆ ಅವರ ಮೂರು ವರ್ಷದ ಕಂದಮ್ಮ.

ತಮಗೆ ಕ್ಯಾನ್ಸರ್ ಇದೆ ಎಂದು ನಾಗಶ್ರೀ ಅವರಿಗೆ ತಿಳಿದಿದ್ದು ಎರಡು ವರ್ಷಗಳ ಹಿಂದೆ. ತೊಡೆಯ ಭಾಗದಲ್ಲಿ ಕಾಣಿಸಿಕೊಂಡ ಈ ಸರ್ಕೋಮಾ ನಿಧಾನವಾಗಿ ಶ್ವಾಸಕೋಶದ ಕಡೆಗೆ ಹಬ್ಬಲಾರಂಭಿಸಿತ್ತು. ತಕ್ಷಣವೇ ಚಿಕಿತ್ಸೆ ಪಡೆದುಕೊಂಡರೂ ಕ್ಯಾನ್ಸರ್ ಕಣಗಳು ಶ್ವಾಸಕೋಶವನ್ನು ತಲುಪಿಬಿಟ್ಟಿದ್ದವು. ಮುಂದಿನ ಹಂತದ ಚಿಕಿತ್ಸೆಗಾಗಿ ಅವರು ಸಿಂಗಪುರಕ್ಕೆ ತೆರಳಿದರು. ಅಲ್ಲಿ ಒಂಬತ್ತು ಗಂಟೆಗಳ ಶಸ್ತ್ರಚಿಕಿತ್ಸೆ ನಡೆಸಿ ಎಡಭಾಗದ ಶ್ವಾಸಕೋಶವನ್ನೇ ತೆಗೆಯಲಾಯಿತು. ಚಿಕಿತ್ಸೆ ಯಶಸ್ವಿಯಾಗಿ ಕ್ಯಾನ್ಸರ್ ಕಣಗಳನ್ನು ನಾಶಗೊಳಿಸಲಾಗಿದೆ ಎಂಬ ಭರವಸೆಯೂ ವೈದ್ಯರಿಂದ ಸಿಕ್ಕಿತು. ಆದರೆ ಹಾಗೆ ಹೇಳಿ ಒಂದೂವರೆ ತಿಂಗಳಲ್ಲಿಯೇ ಮತ್ತೆ ಸರ್ಕೋಮಾ ಅವರ ಕರುಳ ಬಳಿ ಕಾಣಿಸಿಕೊಂಡಿತ್ತು. ಈಗ ಆರು ಕ್ಯಾನ್ಸರ್ ಟ್ಯೂಮರ್‌ಗಳು ಅವರ ದೇಹದ ಹಲವು ಅಂಗಗಳನ್ನು ಕಬಳಿಸುತ್ತಿವೆ. ಕಳೆದ ಎರಡು ವರ್ಷಗಳಲ್ಲಿ ಮೂರು ಬಾರಿ ಈ ಮಾರಿ ಅವರನ್ನು ಹಿಡಿದಿದೆ.

ಇನ್ನೊಮ್ಮೆ ನದೀ ತೀರಕ್ಕೆ ಬರುವೆ
ನಿನ್ನ ಒದ್ದೆ ಕಂಗಳ ಹರವಿಗೆ
ಉದ್ದನೆ ಕಾಲು ನೀಡಿಕೊಂಡು
ಸದಾ ಅಲ್ಲಿರುವ ನಿನ್ನನ್ನೂ
ಹರಿದು ಹೋಗುವ ನಿನ್ನ
ಆಳದ ಸುಖವನ್ನೂ
ಬೇನೆಯಲ್ಲೇ ನೋಡುವೆ
ಈ ನನ್ನ ಸುಡುವ ತೀರದ ನೆರಳೂ
ಸುಳಿಯದಿರಲಿ

ಹೀಗೆ ಬೇನೆಯಲ್ಲಿಯೇ ಬದುಕ ನೋಡುವ ಪ್ರೀತಿಸುವ ಕಾವ್ಯವನ್ನು ಬರೆದ ನಾಗಶ್ರೀ ಅವರ ಬದುಕೂ ಈಗ ನೋವಿನ ಬೆಂಕಿಯಲ್ಲಿ ಬೇಯುತ್ತಿದೆ. ಅದರ ನಡುವೆಯೂ ಚಿಗುರುವ ಹಂಬಲದಲ್ಲಿ ಬದುಕನ್ನು ಗಟ್ಟಿಯಾಗಿ ಹಿಡಿದು ನಡೆಯುತ್ತಿದ್ದಾರೆ. ಈ ಎರಡು ವರ್ಷಗಳಲ್ಲಿ ಹಲವು ಬಗೆಯ ಚಿಕಿತ್ಸೆಗಳಿಗೆ ದೇಹವನ್ನು ಒಡ್ಡಿಕೊಂಡಿದ್ದಾರೆ.

ಕ್ಯಾನ್ಸರ್‌ನ ಚಿಕಿತ್ಸೆ ದುಬಾರಿಯದ್ದು. ಕಳೆದು ಎರಡು ವರ್ಷಗಳಿಂದ ನಾಗಶ್ರೀ ಕುಟುಂಬ ಅವರಿಗಾಗಿ ಸಾಕಷ್ಟು ಹಣ ವ್ಯಯಿಸಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಈಗಲೂ ಅವರು ಸಿಂಗಪುರಕ್ಕೆ ತೆರಳಿ ಕಿಮೋಥೆರಪಿ ಪಡೆದು ವಾಪಸ್ಸು ಬರುತ್ತಿದ್ದಾರೆ. ಅದಕ್ಕೆ ತಗುಲುವ ವೆಚ್ಚವೂ ಅಪಾರ. ಚಿಕಿತ್ಸೆಯಿನ್ನೂ ಬಾಕಿ ಇದೆ. ಹಣದ ಅಗತ್ಯವಿದೆ. ನಾಗಶ್ರೀ ಅವರೊಳಗಿನ ಬದುಕುವ ಛಲಕ್ಕೆ ನೀವೂ ಧನಬೆಂಬಲ ನೀಡಬಹುದು.

ಏನೂ ಹೇಳಲಾರವು ಸುಮ್ಮನೆ
ನಾನೀಗ ಸತ್ತಂತೆ, ಮತ್ತೆ ಹುಟ್ಟಿದಂತೆ
ಕಂಗಾಲಾಗಿದ್ದೇನೆ
ನನ್ನನ್ನು ನಾನೇ ನೋಡಲಾಗದಷ್ಟು
ಕರುಣೆ ನನಗೆ
ಒಂದು ಸಲ ಹೊಕ್ಕಿ ಬಿಡುತ್ತೇನೆ
ಹೇಗಾದರೂ
ಮತ್ತೆ ಇತ್ತ ಈ ಕನಸಿಗೆ
ಬರಲಾರೆ

ಎಂದು ಮನಸ್ಸು ಆರ್ದ್ರಗೊಳಿಸುವಂತೆ ಬರೆದ ನಾಗಶ್ರೀ ಅವರಿಗೆ ನಮ್ಮ ಕೈಲಾದ ಹಣಸಹಾಯ ಮಾಡಿ ಸಂತೈಸೋಣವೇ?

ನಾಗಶ್ರೀ ಅವರ ಪತಿ ಶ್ರೀರಕ್ಷ ಆರ್‌. ಅವರ ಬ್ಯಾಂಕ್‌ ಖಾತೆಗೆ ಸಹೃದಯರು ನೇರವಾಗಿ ಹಣ ಸಂದಾಯ ಮಾಡಬಹುದು. ಖಾತೆಯ ವಿವರಗಳು:

Sriraksha R

A/c: 000201617914

ICICI bank, M.G.Road branch, Bangalore

IFSC- ICIC0000002

ಸಂಪರ್ಕ ಸಂಖ್ಯೆ 9739865954 (ಶ್ರೀರಕ್ಷ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT