ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಳ್ಳು ಕೇಸು ದಾಖಲಿಸುವ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಿ: ಹೈಕೋರ್ಟ್‌

Last Updated 18 ಸೆಪ್ಟೆಂಬರ್ 2018, 15:51 IST
ಅಕ್ಷರ ಗಾತ್ರ

ಬೆಂಗಳೂರು: ‘ಕಾನೂನು ಬಾಹಿರ ಚಟುವಟಿಕೆ ನಿಯಂತ್ರಣ ಕಾಯ್ದೆಯಡಿ ಅಮಾಯಕ ವ್ಯಕ್ತಿಗಳ ಮೇಲೆ ಸುಳ್ಳು ಕೇಸು ದಾಖಲಿಸಿದ ಪೊಲೀಸರ ವಿರುದ್ಧ ಶಿಸ್ತು ಕ್ರಮ ಜರುಗಿಸಿ’ ಎಂದು ರಾಜ್ಯ ಗೃಹ ಇಲಾಖೆಗೆ ಹೈಕೋರ್ಟ್‌ ನಿರ್ದೇಶಿಸಿದೆ.

‘ನನ್ನ ವಿರುದ್ಧ ಪೊಲಿಸರು ದಾಖಲಿಸಿರುವ ಪ್ರಕರಣ ರದ್ದುಪಡಿಸಬೇಕು’ ಎಂದು ಕೋರಿ ಮತ್ತೀಕೆರೆಯ ಆರ್.ಕೃಷ್ಣ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ಮಾನ್ಯ ಮಾಡಿದೆ.

ಕೃಷ್ಣ ವಿರುದ್ಧ ಸಿಸಿಬಿ ಪೊಲೀಸರು ದಾಖಲಿಸಿದ್ದ ದೂರು ಹಾಗೂ ಯಶವಂತಪುರ ಠಾಣೆ ಪೊಲೀಸರು ಸಲ್ಲಿಸಿದ್ದ ದೋಷಾರೋಪ ಪಟ್ಟಿಯನ್ನು ರದ್ದುಪಡಿಸಲಾಗಿದೆ.

‘ಅರ್ಜಿದಾರರ ವಿರುದ್ಧ 2010ರಲ್ಲಿ ದೂರು ದಾಖಲಿಸಿದ್ದ ಅಂದಿನ ಸಿಸಿಬಿ ಇನ್‌ಸ್ಪೆಕ್ಟರ್ ಎಚ್.ಕೆ.ಮರಿಸ್ವಾಮಿ ಗೌಡ ಮತ್ತು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದ ಅಂದಿನ ಯಶವಂತಪುರ ಠಾಣಾ ಇನ್‌ಸ್ಪೆಕ್ಟರ್ ಸೇರಿದಂತೆ ತಪ್ಪಿತಸ್ಥರ ವಿರುದ್ಧ ಮೂರು ತಿಂಗಳಲ್ಲಿ ಶಿಸ್ತು ಕ್ರಮ ಜರುಗಿಸಿ ವರದಿ ಸಲ್ಲಿಸಬೇಕು’ ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಗೃಹ ಇಲಾಖೆ ಕಾರ್ಯದರ್ಶಿ ಮತ್ತು ಪೊಲೀಸ್ ಮಹಾನಿರ್ದೇಶಕರಿಗೆ ಆದೇಶಿಸಲಾಗಿದೆ.

ಪ್ರಕರಣವೇನು?: ಕಾಶ್ಮೀರದ ನಿವಾಸಿ ಎನ್ನಲಾದ ಆರೀಫ್ ಎಂಬುವರು 2006ರ ಫೆಬ್ರುವರಿ 5ರಿಂದ 14ರವರಗೆ ಶಿವಾಜಿ ನಗರದ ಬೈತುಲ್ ಮಹಲ್ ಲಾಡ್ಜ್‌ನಲ್ಲಿ ತಂಗಿದ್ದರು.

ಆರೀಫ್‌ ಚಲನವಲನಗಳ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದ ಸಿಸಿಬಿ ಪೊಲೀಸರು ಲಾಡ್ಜ್‌ನ ಮೇಲ್ವಿಚಾರಕರ ವಿಚಾರಣೆ ನಡೆಸಿದ್ದರು.

‘ನೀವು ಆರೀಫ್‌ನಿಂದ ಸುಳ್ಳು ದಾಖಲೆ ಪಡೆದು ತಂಗಲು ಅವಕಾಶ ನೀಡಿದ್ದೀರಿ‘ ಎಂದು ಸುಳ್ಳು ದಾಖಲೆ ಸೃಷ್ಟಿಸಿದ ಆರೋಪದಡಿ ಕೃಷ್ಣ ವಿರುದ್ಧ ದೂರು ದಾಖಲಿಸಿದ್ದರು.

‘ಆರೀಫ್‌ನ ಬಾಡಿಗೆ ಮನೆಯ ಕರಾರು ಪತ್ರದಲ್ಲಿನ ಅಂಶಗಳನ್ನು ನಾನು ಬೆರಳಚ್ಚು ಮಾಡಿಕೊಟ್ಟಿದ್ದೇನೆ. ಪ್ರಕರಣಕ್ಕೂ ನನಗೆ ಯಾವ ಸಂಬಂಧವಿಲ್ಲ. ಪೊಲೀಸರು ಸುಳ್ಳು ದೂರು ದಾಖಲಿಸಿದ್ದು ಅದನ್ನು ರದ್ದುಪಡಿಸಬೇಕು’ ಎಂದು ಕೋರಿ ಕೃಷ್ಣ ಹೈಕೋರ್ಟ್‌ ಮೆಟ್ಟಿಲೇರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT