ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಐಎಲ್ ಹಿಂಪಡೆಯಲು ₹5 ಕೋಟಿ ಬೇಡಿಕೆ: ಪ್ರಕರಣ ರದ್ದತಿಗೆ ಹೈಕೋರ್ಟ್ ನಕಾರ

Published 8 ಜುಲೈ 2023, 23:30 IST
Last Updated 8 ಜುಲೈ 2023, 23:30 IST
ಅಕ್ಷರ ಗಾತ್ರ

ಬೆಂಗಳೂರು: ಹೊಸನಗರದ ರಾಮಚಂದ್ರಾಪುರ ಮಠದ ವಿರುದ್ಧ ಆರ್ಥಿಕ ಅವ್ಯವಹಾರ ಆರೋಪ ಹೊರಿಸಿ ಈ ಸಂಬಂಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಿ, ಅದನ್ನು ಹಿಂಪಡೆಯಲು ₹ 5 ಕೋಟಿ ಬೇಡಿಕೆ ಇರಿಸಿದ್ದ ಐವರು ಆರೋಪಿಗಳ ವಿರುದ್ಧದ ಕ್ರಿಮಿನಲ್ ಪ್ರಕರಣ ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ.

ಈ ಸಂಬಂಧ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ಗೋಪಾಲ ಸದಾಶಿವ ಗಾಯತ್ರಿ, ರಾಜಗೋಪಾಲ ಅಡಿ, ಶೇಷಾನಂದ ವಿಶ್ವೇಶ್ವರ ಅಡಿ, ಅಮಿತ್ ನಾಡಕರ್ಣಿ ಮತ್ತು ಗಣಪತಿ ಗಜಾನನ ಹಿರೇ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಕೆ. ನಟರಾಜನ್ ಅವರಿದ್ದ ಏಕಸದಸ್ಯ ನ್ಯಾಯಪೀಠ ವಜಾಗೊಳಿಸಿದೆ.

‘ಈ ಕೃತ್ಯದಲ್ಲಿ ನೇರವಾಗಿ ಭಾಗಿಯಾಗಿದವರ ಜೊತೆ ಅರ್ಜಿದಾರರು ಸಂಪರ್ಕದಲ್ಲಿ ಇದ್ದಾರೆ ಎಂಬುದು ಮೇಲ್ನೋಟಕ್ಕೇ ವ್ಯಕ್ತವಾಗುತ್ತದೆ. ಬೇಡಿಕೆ ಮೊತ್ತದಲ್ಲಿ ₹ 10 ಲಕ್ಷ ಪಡೆಯುವಾಗ ಸಂಚನ್ನು ಬಯಲಿಗೆಳೆಯಲು ಹೆಣೆದ ಬಲೆಯಲ್ಲಿ ಬಿದ್ದಿದ್ದಾರೆ. ಹೀಗಾಗಿ, ಆರೋಪಿಗಳ ವಿರುದ್ಧದ ಅಪರಾಧ ಕೃತ್ಯವನ್ನು ಹಗುರವಾಗಿ ಪರಿಗಣಿಸಲಾಗದು’ ಎಂದು ನ್ಯಾಯಪೀಠ ತಿಳಿಸಿದೆ.

ಪ್ರಕರಣವೇನು?: ಅರ್ಜಿದಾರರು, ಸರ್ಕಾರೇತರ ಸ್ವಯಂಸೇವಾ ಸಂಸ್ಥೆ ‘ಅಸ್ತ್ರ’ ಎಂಬ ಸಂಘಟನೆ ಮತ್ತು ‘ಗೋಕರ್ಣ ಹಿತರಕ್ಷಣಾ ಸಮಿತಿ’ ಹೆಸರಿನಲ್ಲಿ ರಾಮಚಂದ್ರಾಪುರ ಮಠದ ವಿರುದ್ಧ ಆರ್ಥಿಕ ಅವ್ಯವಹಾರ ಆರೋಪ ಹೊರಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ನಂತರದಲ್ಲಿ ಈ ಅರ್ಜಿ ಹಿಂಪಡೆಯಲು ₹ 5 ಕೋಟಿ ಬೇಡಿಕೆ ಇರಿಸಿದ್ದರು ಎಂದು ಆರೋಪಿಸಿ ಮಠದ ಗಿರಿನಗರ ಶಾಖೆಯ ಮುಖ್ಯ ಆಡಳಿತ ಅಧಿಕಾರಿ ಕೃಷ್ಣ ಗಣೇಶ್ ಭಟ್ಟ, ಬೆಂಗಳೂರಿನ ಗಿರಿನಗರ ಪೊಲೀಸ್ ಠಾಣೆಯಲ್ಲಿ 2014ರ ಜ. 2 ಪ್ರಕರಣ ದಾಖಲಿಸಿದ್ದರು.

ಈ ಸಂಬಂಧ ತನಿಖೆ ನಡೆಸಿದ್ದ ಪೊಲೀಸರು ಭಾರತೀಯ ದಂಡ ಸಂಹಿತೆ (ಐಪಿಸಿ) ಕಲಂ 384, 504, 506 ಮತ್ತು 511ರ ಅಡಿ ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ನಗರದ 32ನೇ ಎಸಿಎಂಎಂ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದ್ದು, ಇದನ್ನು ರದ್ದುಪಡಿಸುವಂತೆ ಕೋರಿ ಆರೋಪಿಗಳು ಹೈಕೊರ್ಟ್ ಮೆಟ್ಟಿಲೇರಿದ್ದರು. ಮಠದ ಆಡಳಿತಾಧಿಕಾರಿ ಪರ ಪಿ.ಎನ್‌. ಮನಮೋಹನ್ ವಾದ ಮಂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT