ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಪ್ಪತಗುಡ್ಡ: 1 ಕಿ.ಮೀ ವ್ಯಾಪ್ತಿಯ ಗಣಿಗಾರಿಕೆ ನಿಷೇಧಕ್ಕೆ ಅಸ್ತು

ಸರ್ಕಾರದ ಆದೇಶ ಪ್ರಶ್ನಿಸಿದ್ದ ಅರ್ಜಿಗಳ ವಜಾ
Published 25 ಜೂನ್ 2024, 15:57 IST
Last Updated 25 ಜೂನ್ 2024, 15:57 IST
ಅಕ್ಷರ ಗಾತ್ರ

ಬೆಂಗಳೂರು: ಗದಗ ಜಿಲ್ಲೆಯ ಕಪ್ಪತಗುಡ್ಡ ವನ್ಯಜೀವಿ ಧಾಮದ ಅಂಚಿನಿಂದ ಒಂದು ಕಿಲೋ ಮೀಟರ್‌ ವ್ಯಾಪ್ತಿಯಲ್ಲಿನ ಕಲ್ಲು-ಮರಳು ಗಣಿಗಾರಿಕೆ ಚಟುವಟಿಕೆಗಳನ್ನು ನಿಷೇಧಿಸಿದ್ದ ರಾಜ್ಯ ಸರ್ಕಾರದ ಕ್ರಮವನ್ನು ಹೈಕೋರ್ಟ್‌ ಎತ್ತಿಹಿಡಿದಿದೆ.

ಗದಗ ಜಿಲ್ಲಾ ಕಾರ್ಯಪಡೆ ಸಮಿತಿಯ ಆದೇಶವನ್ನು ಪ್ರಶ್ನಿಸಿ ಬ್ಯಾಡಗಿ ತಾಲ್ಲೂಕು ಮೋಟೆಬೆನ್ನೂರು ಗ್ರಾಮದ ಎಸ್.ಆರ್‌.ಬಳ್ಳಾರಿ, ಕೆಲವು ಗಣಿಗಾರಿಕಾ ಕಂಪನಿಗಳೂ ಸೇರಿದಂತೆ ಒಟ್ಟು ಒಂಬತ್ತು ಜನ ಸಲ್ಲಿಸಿದ್ದ ರಿಟ್‌ ಅರ್ಜಿಗಳನ್ನು ವಜಾಗೊಳಿಸಿರುವ ಮುಖ್ಯ ನ್ಯಾಯಮೂರ್ತಿ ಎನ್‌.ವಿ.ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್‌ ಅವರಿದ್ದ ವಿಭಾಗೀಯ ನ್ಯಾಯಪೀಠವು, ಕಾಯ್ದಿರಿಸಿದ್ದ ತೀರ್ಪನ್ನು ಪ್ರಕಟಿಸಿದೆ.

‘ಕಪ್ಪತಗುಡ್ಡ ಮೀಸಲು ಅರಣ್ಯವನ್ನು ವನ್ಯಜೀವಿ ಧಾಮ ಎಂದು ಅಧಿಸೂಚನೆ ಹೊರಡಿಸಲಾಗಿದೆ. ಹೀಗಾಗಿ, ಈ ಅರಣ್ಯ ಪ್ರದೇಶದ ಸುತ್ತಲಿನ ಒಂದು ಕಿ.ಮೀ ಪ್ರದೇಶವು ನಿಷೇಧಿತ ವಲಯವಾಗುತ್ತದೆ. ಆದಾಗ್ಯೂ, ಪರಿಸರ ಸೂಕ್ಷ್ಮ ವಲಯದ ಅಧಿಸೂಚನೆ ಇಲ್ಲದೇ ಹೋದರೂ ಸಂರಕ್ಷಿತ ಪ್ರದೇಶದ ಅಂಚಿನಿಂದ ಒಂದು ಕಿ.ಮೀ ವ್ಯಾಪ್ತಿಯ ಸ್ಥಳವನ್ನು ಸಂರಕ್ಷಿಸಬೇಕಾಗುತ್ತದೆ. ಆದ್ದರಿಂದ, ಕಪ್ಪತಗುಡ್ಡ ವನ್ಯಜೀವಿ ಧಾಮದ ಅಂಚಿನಿಂದ ಒಂದು ಕಿ.ಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆ ಚಟುವಟಿಕೆಗಳಿಗೆ ಅನುಮತಿ ನೀಡಲು ಆಗದು’ ಎಂದು ನ್ಯಾಯಪೀಠ ತೀರ್ಪಿನಲ್ಲಿ ತಿಳಿಸಿದೆ. ರಾಜ್ಯ ಸರ್ಕಾರದ ಪರ ಎಸ್.ಎಸ್.ಮಹೇಂದ್ರ ವಾದ ಮಂಡಿಸಿದ್ದರು.

ಕಪ್ಪತಗುಡ್ಡ: ಇದು 244.15 ಚದರ ಕಿ.ಮೀ ವಿಸ್ತೀರ್ಣ ಹೊಂದಿದೆ. ಇಲ್ಲಿ ಸುಮಾರು 295 ಜಾತಿಯ ಔಷಧೀಯ ಸಸ್ಯಗಳಿವೆ. ಇದು ಯುನೆಸ್ಕೊ ಮಾನ್ಯತೆ ಪಡೆದಿರುವ ಐತಿಹಾಸಿಕ ತಾಣ ಎನಿಸಿದೆ. ಇಲ್ಲಿನ ವನ್ಯಜೀವಿ ಧಾಮವು 32,346 ಹೆಕ್ಟೇರ್‌ ವಿಸ್ತೀರ್ಣ ಹೊಂದಿದೆ.

ಪ್ರಕರಣವೇನು?: ಗದಗ ಜಿಲ್ಲಾ ಕಾರ್ಯಪಡೆ ಸಮಿತಿಯು (ಗಣಿ), ಗದಗ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ; ಜಿಲ್ಲಾ ಮರಳು ಮೇಲ್ವಿಚಾರಣಾ ಸಮಿತಿ, ಜಿಲ್ಲಾ ಕಲ್ಲು ಕ್ರಷರ್‌ಗಳ ಪರವಾನಗಿ ಮತ್ತು ನಿಯಂತ್ರಣ ಪ್ರಾಧಿಕಾರದ ಜೊತೆ 2022ರ ಸೆಪ್ಟೆಂಬರ್ 29ರಂದು ಸಭೆ ನಡೆಸಿತ್ತು.

ಈ ಸಭೆಯಲ್ಲಿ ಕಪ್ಪತಗುಡ್ಡ ವನ್ಯಜೀವಿ ಧಾಮದ ಅಂಚಿನಿಂದ ಒಂದು ಕಿ.ಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷೇಧಿಸಲು, 14 ಕ್ವಾರಿಗಳ ಗುತ್ತಿಗೆ ಅಮಾನತು ಮಾಡಲು ಮತ್ತು ಯಾವುದಾದರೂ ನಿಯಮ ಉಲ್ಲಂಘನೆಯಾಗಿದ್ದರೆ ಅಂತಹ ಗುತ್ತಿಗೆಗಳನ್ನು ರದ್ದುಪಡಿಸಲು ಸರ್ವಾನುಮತದಿಂದ ನಿರ್ಧಾರ ಕೈಗೊಳ್ಳಲಾಗಿತ್ತು.

ಇದರ ಅನ್ವಯ ಕಲ್ಲು ಕ್ವಾರಿ ಗುತ್ತಿಗೆಗಳನ್ನು ಅಮಾನತುಪಡಿಸಿ 2022ರ ಡಿಸೆಂಬರ್ 5ರಂದು ಗದಗ ಜಿಲ್ಲೆಯ ಗಣಿ–ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ನೇತೃತ್ವದ ಮತ್ತು ಸಕ್ಷಮ ಪ್ರಾಧಿಕಾರ ಆದೇಶಿಸಿತ್ತು.

ಈ ಆದೇಶವನ್ನು; ಕಪ್ಪತಗುಡ್ಡ ವನ್ಯಜೀವಿ ಧಾಮ ಗಡಿಯ ಒಂದು ಕಿ.ಮೀ ವ್ಯಾಪ್ತಿಯಲ್ಲಿ ಪರವಾನಗಿ ಪಡೆದು ಕಲ್ಲು ಹಾಗೂ ಮರಳು, ಗಣಿಗಾರಿಕೆ ನಡೆಸುತ್ತಿದ್ದ ಅರ್ಜಿದಾರರು ಪ್ರಶ್ನಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT