ಸೋಮವಾರ, 11 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆಯಲ್ಲಿ ಅಕ್ರಮ ಪ್ರಕರಣ: ಎಚ್‌.ಡಿ ರೇವಣ್ಣಗೆ ಪುನಃ ಸಮನ್ಸ್ ಜಾರಿಗೆ ಆದೇಶ

Published 30 ಅಕ್ಟೋಬರ್ 2023, 15:48 IST
Last Updated 30 ಅಕ್ಟೋಬರ್ 2023, 15:48 IST
ಅಕ್ಷರ ಗಾತ್ರ

ಬೆಂಗಳೂರು: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅಕ್ರಮ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದ ಶಾಸಕ ಎಚ್‌.ಡಿ. ರೇವಣ್ಣ ಅವರ ಆಯ್ಕೆ ಅನೂರ್ಜಿತಗೊಳಿಸಬೇಕು ಎಂದು ಕೋರಲಾದ ಅರ್ಜಿಯಲ್ಲಿ; ಸಮನ್ಸ್‌ ಜಾರಿಯಾಗದ ಕಾರಣ ರೇವಣ್ಣ ಅವರಿಗೆ ಮತ್ತೊಮ್ಮೆ ಸಮನ್ಸ್‌ ಜಾರಿಗೊಳಿಸಲು ಹೈಕೋರ್ಟ್‌ ಆದೇಶಿಸಿದೆ.

ಈ ಸಂಬಂಧ ಪರಾಜಿತ ಅಭ್ಯರ್ಥಿ ಜಿ.ದೇವರಾಜೇಗೌಡ ಸಲ್ಲಿಸಿರುವ ಚುನಾವಣಾ ತಕರಾರು ಅರ್ಜಿಯನ್ನು ನ್ಯಾಯಮೂರ್ತಿ ಜ್ಯೋತಿ ಮೂಲಿಮನಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ಹಿರಿಯ ವಕೀಲೆ ಪ್ರಮೀಳಾ ನೇಸರ್ಗಿ, ‘ಪತ್ರಿಕಾ ಪ್ರಕಟಣೆ ಮೂಲಕ ಸಮನ್ಸ್‌ ಜಾರಿಗೆ ಆದೇಶಿಸಬೇಕು‘ ಎಂದು ಮನವಿ ಮಾಡಿದರು. ಆದರೆ, ನ್ಯಾಯಪೀಠ ರೇವಣ್ಣ ಸೇರಿದಂತೆ ಎಲ್ಲ ಪ್ರತಿವಾದಿಗಳಿಗೆ ಮತ್ತೊಮ್ಮೆ ಸಮನ್ಸ್ ಜಾರಿಗೊಳಿಸಲು ಆದೇಶಿಸಿ ವಿಚಾರಣೆಯನ್ನು ನವೆಂಬರ್ 29ಕ್ಕೆ ಮುಂದೂಡಿತು. 

ಆರೋಪವೇನು?: ’ರೇವಣ್ಣ ಅವರ ನಾಮಪತ್ರದಲ್ಲಿ ಅವರ ಆಸ್ತಿ ವಿವರಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲ. ಅವರ ಪತ್ನಿ ಭವಾನಿ ಅವರ ಆಸ್ತಿಯ ವಿವರಗಳೂ ಸುಳ್ಳಿನಿಂದ ಕೂಡಿವೆ. ರೇವಣ್ಣ ಅಕ್ರಮ ಎಸಗಿ ಜಯಗಳಿಸಿದ್ದಾರೆ. ಆದ್ದರಿಂದ, ಅವರ ಆಯ್ಕೆಯನ್ನು ಅಸಿಂಧುಗೊಳಿಸಬೇಕು‘ ಎಂದು ಅರ್ಜಿದಾರರು ಕೋರಿದ್ದಾರೆ.

‘ಚುನಾವಣೆ ಸಂದರ್ಭದಲ್ಲಿ ಎಚ್‌.ಡಿ.ರೇವಣ್ಣ ಬೆಂಬಲಿಗರು ಅಣ್ಣೆಹಳ್ಳಿಯಲ್ಲಿ ಮತದಾರರಿಗೆ ಎರಡು ಕೋಳಿ ಮತ್ತು ₹ 2 ಸಾವಿರ ನಗದು ಹಂಚಿ ಮತ ಹಾಕಿಸಿಕೊಂಡಿದ್ದಾರೆ. ಶಾಂತಿ ಗ್ರಾಮದ ಬಳಿ ಜನರಿಗೆ ದುಡ್ಡು, ಕೋಳಿಯ ಆಮಿಷ ಒಡ್ಡುತ್ತಿದ್ದುದನ್ನು ತಡೆಯಲು ಹೋದಾಗ ರೇವಣ್ಣ ಅವರ ಬೆಂಬಲಿಗರು ನಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ‘ ಎಂಬ ಆರೋಪದಡಿ 30 ಮಂದಿ ವಿರುದ್ಧ ದೂರು ದಾಖಲಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT