ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಲಾಡ್ಜ್‌ ಮಾಲೀಕನ ವಿರುದ್ಧದ ಪೋಕ್ಸೊ ಪ್ರಕರಣ ರದ್ದುಗೊಳಿಸಿದ ಹೈಕೋರ್ಟ್

Published 21 ಆಗಸ್ಟ್ 2024, 16:25 IST
Last Updated 21 ಆಗಸ್ಟ್ 2024, 16:25 IST
ಅಕ್ಷರ ಗಾತ್ರ

ಬೆಂಗಳೂರು: ‘ಯುವಕನೊಬ್ಬ ಸರ್ಕಲ್‌ನಲ್ಲಿ ಸ್ಥಾಪಿಸಲಾದ ವೆಂಕಟೇಶ್ವರ ಸ್ವಾಮಿ ಪ್ರತಿಮೆಯೊಂದರ ಮುಂದೆ ಹಾರ ಬದಲಾಯಿಸಿ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಮದುವೆಯಾಗಿ ಸ್ಥಳೀಯ ಲಾಡ್ಜ್‌ವೊಂದರಲ್ಲಿ ತಂಗಿದ್ದ’ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಲಾಡ್ಜ್‌ ಮಾಲೀಕರ ವಿರುದ್ಧವೂ ದಾಖಲಾಗಿದ್ದ ಪೋಕ್ಸೊ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿದೆ.

‘ನನ್ನ ವಿರುದ್ಧ ಕರ್ನಾಟಕದ ಜಿಲ್ಲಾ ಕೇಂದ್ರವೊಂದರ ಮಹಿಳಾ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ ಐಪಿಸಿ, ಪೋಕ್ಸೊ ಹಾಗೂ ಬಾಲ್ಯ ವಿವಾಹ ತಡೆ ಕಾಯ್ದೆಯ ವಿವಿಧ ಕಲಂಗಳಡಿಯಲ್ಲಿನ ಕ್ರಿಮಿನಲ್‌ ಪ್ರಕರಣವನ್ನು ರದ್ದುಪಡಿಸಬೇಕು’ ಎಂದು ಕೋರಿದ್ದ ನೆರೆಯ ಆಂಧ್ರಪ್ರದೇಶದ 46 ವರ್ಷದ ಉದ್ಯಮಿಯೊಬ್ಬರ ಮನವಿಯನ್ನು ಏಕಸದಸ್ಯ ನ್ಯಾಯಪೀಠ ಮಾನ್ಯ ಮಾಡಿದೆ.

ಪ್ರಕರಣವೇನು?:

ಬೆಂಗಳೂರಿನ ಕಾಲೇಜೊಂದರಲ್ಲಿ ಪಿಯುಸಿ ಓದುತ್ತಿದ್ದ ಬಾಲಕಿಯನ್ನು ಯುವಕನೊಬ್ಬ 2022ರ ನವೆಂಬರ್‌ 28ರಂದು ಆಂಧ್ರಪ್ರದೇಶಕ್ಕೆ ಕರೆದುಕೊಂಡು ಹೋಗಿ ಮದುವೆಯಾಗಿದ್ದ. ಇಬ್ಬರೂ ಸ್ಥಳೀಯ ಲಾಡ್ಜ್‌ವೊಂದರಲ್ಲಿ ತಂಗಿದ್ದರು. ಮಗಳು ಕಾಣೆಯಾದ ಬಗ್ಗೆ ಪೋಷಕರು ದೂರು ನೀಡಿದ್ದರು. ಈ ದೂರಿನ ಅನ್ವಯ ಐವರನ್ನು ಆರೋಪಿಗಳನ್ನಾಗಿ ಕಾಣಿಸಲಾಗಿತ್ತು.

ಪ್ರಕರಣದಲ್ಲಿ ನಾಲ್ಕನೇ ಆರೋಪಿಯಾಗಿದ್ದ ಅರ್ಜಿದಾರರು ಲಾಡ್ಜ್‌ ಮಾಲೀಕರು, ‘ನನಗೂ ಈ ಪ್ರಕರಣಕ್ಕೂ ಸಂಬಂಧವಿಲ್ಲ. ಹುಡುಗ ಮತ್ತು ಹುಡುಗಿ ನಮ್ಮ ಲಾಡ್ಜ್‌ಗೆ ಬಂದು ರೂಂ ಕೇಳಿದ್ದರು. ನಮ್ಮ ಲಾಡ್ಜ್‌ ಮ್ಯಾನೇಜರ್‌ ಕೊಟ್ಟಿದ್ದರು. ಆದರೆ, ನಂತರ ಯುವಕನ ವಿರುದ್ಧ ಪೋಕ್ಸೊ ಮತ್ತು ಇತರೆ ಕ್ರಿಮಿನಲ್‌ ಪ್ರಕರಣ ದಾಖಲಾಗಿದ್ದು ಇದರಲ್ಲಿ ನನ್ನನ್ನೂ ಆರೋಪಿಯನ್ನಾಗಿ ಮಾಡಲಾಗಿದೆ. ನಾನು ನಿರಪರಾಧಿ. ಹಾಗಾಗಿ ನನ್ನ ವಿರುದ್ಧದ ಕ್ರಿಮಿನಲ್‌ ಪ್ರಕರಣ ರದ್ದುಪಡಿಸಬೇಕು’ ಎಂದು ಕೋರಿ ಅವರು ಹೈಕೋರ್ಟ್‌ನಲ್ಲಿ ಕ್ರಿಮಿನಲ್‌ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು. ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಪಿ.ಪ್ರಸನ್ನ ಕುಮಾರ್, 'ಬಾಲಕಿ ಮ್ಯಾಜಿಸ್ಟ್ರೇಟ್‌ ಮುಂದೆ ನೀಡಿದ್ದ ಹೇಳಿಕೆಯಲ್ಲಿ, ನಾನು ಮತ್ತು ನನ್ನ ಗಂಡ (ಯುವಕ) ಲಾಡ್ಜ್‌ನಲ್ಲಿ ತಂಗಿದ್ದು ನಿಜ. ಆದರೆ ದೈಹಿಕ ಸಂಪರ್ಕ ಬೆಳೆಸಿರಲಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಆದ್ದರಿಂದ, ಈ ಪ್ರಕರಣದಲ್ಲಿ ಅರ್ಜಿದಾರರ ವಿರುದ್ಧದ ಪ್ರಕರಣವನ್ನು ಮುಂದುವರಿಸುವುದು ಅನ್ಯಾಯ ಮತ್ತು ಕಾನೂನಿನ ದುರುಪಯೋಗವಾಗುತ್ತದೆ’ ಎಂದು ವಿವರಿಸಿದ್ದರು.

ಇದನ್ನು ಮಾನ್ಯ ಮಾಡಿದ ನ್ಯಾಯಪೀಠ ಅರ್ಜಿದಾರರ ವಿರುದ್ಧದ ಕ್ರಿಮಿನಲ್‌ ಪ್ರಕರಣವನ್ನು ರದ್ದುಪಡಿಸಿ ಆದೇಶಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT