ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾಕಿಷ್ಟು ಅಧಿಕಾರದ ಹಪಾಹಪಿ: ಮುರುಘಾ ಶರಣರಿಗೆ ಹೈಕೋರ್ಟ್‌ ಪ್ರಶ್ನೆ

Published 9 ಜನವರಿ 2024, 14:38 IST
Last Updated 9 ಜನವರಿ 2024, 14:38 IST
ಅಕ್ಷರ ಗಾತ್ರ

ಬೆಂಗಳೂರು: ‘ಷರತ್ತುಬದ್ಧ ಜಾಮೀನು ಪಡೆದು ಜೈಲಿನಿಂದ ಹೊರಬಂದಿರುವ ನಿಮಗೆ ಅಧಿಕಾರ ನಡೆಸಲು ಯಾಕೆ ಅಷ್ಟೊಂದು ಹಪಾಹಪಿ‘ ಎಂದು ಹೈಕೋರ್ಟ್‌, ಚಿತ್ರದುರ್ಗ ಮುರುಘಾ ಮಠದ ಪೀಠಾಧಿಪತಿ ಶಿವಮೂರ್ತಿ ಶರಣರನ್ನು ಪ್ರಶ್ನಿಸಿದೆ.

‘ಪೋಕ್ಸೊ ಪ್ರಕರಣದ ಆರೋಪಿಯಾಗಿ ನ್ಯಾಯಾಂಗ ಬಂಧನದಿಂದ ಹೊರಬಂದ ನಂತರ ಶರಣರು ಮುರುಘಾ ಮಠದ ಎಸ್‌ಜೆಎಂ ವಿದ್ಯಾಪೀಠದ ಅಧ್ಯಕ್ಷರಾಗಿ ಕಾರ್ಯಭಾರ ವಹಿಸಿಕೊಳ್ಳುವ ಮೂಲಕ ನ್ಯಾಯಾಂಗ ನಿಂದನೆ ಎಸಗಿದ್ದಾರೆ‘ ಎಂದು ಆರೋಪಿಸಿ ಎಸ್‌ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿ ನಿರ್ದೇಶಕ ಆರ್‌.ನಾಗರಾಜ್ ಸಲ್ಲಿಸಿರುವ ಸಿವಿಲ್‌ ನ್ಯಾಯಾಂಗ ನಿಂದನೆ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್ ಅವರಿದ್ದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ಹಾಜರಿದ್ದ ಹಿರಿಯ ವಕೀಲ ಧನಂಜಯ ಜೋಶಿ ಅವರು, ‘ಮಠದ ಆಡಳಿತಕ್ಕೆ ಸಂಬಂಧಿಸಿದಂತೆ ಇದೇ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ವಿಭಾಗೀಯ ನ್ಯಾಯಪೀಠ ನೀಡಿದ್ದ ಆದೇಶವನ್ನು ಶರಣರು ಉಲ್ಲಂಘಿಸಿದ್ದಾರೆ‘ ಎಂಬ ಅಂಶವನ್ನು ನ್ಯಾಯಪೀಠದ ಗಮನಕ್ಕೆ ತಂದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ಶರಣರೇ ನಿಮಗೆ ಯಾಕಿಷ್ಟು ಅಧಿಕಾರದ ಆತುರ. ದೋಷಾರೋಪಗಳಿಂದ ಮುಕ್ತರಾಗುವತನಕ ದೂರ ಇರುವುದು ಒಳಿತಲ್ಲವೇ? ಜಿಲ್ಲಾ ಪ್ರಧಾನ ನ್ಯಾಯಾಧೀಶರು ಉಸ್ತುವಾರಿ ವಹಿಸುವಂತೆ ಇದೇ ಕೋರ್ಟ್‌ ಹೇಳಿತ್ತಲ್ಲವೇ? ಹಾಗೊಂದು ವೇಳೆ ಜಿಲ್ಲಾ ಪ್ರಧಾನ ನ್ಯಾಯಾಧೀಶರು ಸಮರ್ಪಕವಾಗಿ ಕಾರ್ಯಭಾರ ಮಾಡುತ್ತಿಲ್ಲ ಎಂದಾದರೆ ಅದನ್ನು ನೋಡಿಕೊಳ್ಳಲು ನಾವಿಲ್ಲವೇ? ನಿಮಗ್ಯಾಕೆ ಈ ಪರಿ ಅವಸರ‘ ಎಂದು ಅಸಮಾಧಾನ ಹೊರಹಾಕಿತು.

‘ನೀವು ಚುನಾವಣೆ ಮೂಲಕ ಗೆದ್ದು ಅಧಿಕಾರ ಹಿಡಿದಿದ್ದೀರಿ ಎಂದಾದರೆ ಸರಿ ಎನ್ನಬಹುದಿತ್ತು. ಆದರೆ, ನೀವು ಆ ರೀತಿ ಆಯ್ಕೆಯಾದವರಲ್ಲವಲ್ಲಾ? ಹಾಗಾಗಿ, ನೀವು ಇಂದಿನಿಂದ ವಿದ್ಯಾಪೀಠದ ಯಾವುದೇ ನೀತಿ ನಿರೂಪಣೆಯ ವಿಷಯಗಳಲ್ಲಿ ತೀರ್ಮಾನ ಕೈಗೊಳ್ಳಬಾರದು. ಕೇವಲ ದೈನಂದಿನ ವ್ಯವಹಾರಗಳಲ್ಲಿ ಮಾತ್ರವೇ ನಿಮ್ಮ ಪಾಲುದಾರಿಕೆ ಇರಲಿ‘ ಎಂದು ಮೌಖಿಕವಾಗಿ ಆದೇಶಿಸಿತು.

ಇದಕ್ಕೆ ಪ್ರತಿವಾದಿಗಳಾದ ಶಿವಮೂರ್ತಿ ಶರಣರು ಮತ್ತು ಬಸವಪ್ರಭು ಸ್ವಾಮೀಜಿ ಪರ ಹಾಜರಿದ್ದ ಹಿರಿಯ ವಕೀಲ ಉದಯ ಹೊಳ್ಳ ಅವರು, ’ಈ ವಿಷಯದಲ್ಲಿ ನಾನು ಪ್ರತಿವಾದಿಗಳ ಪರ ನ್ಯಾಯಪೀಠಕ್ಕೆ ಪೂರ್ಣ ಭರವಸೆ ಕೊಡುತ್ತೇನೆ. ಶರಣರು ವಿದ್ಯಾಪೀಠದ ನೀತಿ ನಿರೂಪಣೆಯ ವಿಷಯದಲ್ಲಿ ಯಾವುದೇ ತೀರ್ಮಾನ ಕೈಗೊಳ್ಳಬಾರದು ಎಂಬುದನ್ನು ಮನವರಿಕೆ ಮಾಡಿಕೊಡುತ್ತೇನೆ‘ ಎಂದು ನ್ಯಾಯಪೀಠಕ್ಕೆ ಮೌಖಿಕ ಮುಚ್ಚಳಿಕೆ ನೀಡಿದರು. ಇದನ್ನು ದಾಖಲಿಸಿಕೊಂಡ ನ್ಯಾಯಪೀಠ ವಿಚಾರಣೆಯನ್ನು ಫೆಬ್ರುವರಿ 5ಕ್ಕೆ ಮುಂದೂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT