ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ಗಾವಣೆ ವಿಚಾರ ಬೀದಿಯಲ್ಲಿ ಕುಳಿತು ಮಾತನಾಡುವುದಕ್ಕೆ ಸಾಧ್ಯವೇ?– ಸಚಿವ ಪರಮೇಶ್ವರ

Published 1 ಆಗಸ್ಟ್ 2023, 7:17 IST
Last Updated 1 ಆಗಸ್ಟ್ 2023, 7:17 IST
ಅಕ್ಷರ ಗಾತ್ರ

ಬೆಂಗಳೂರು: ‘ವರ್ಗಾವಣೆ ವಿಚಾರವಾಗಿ ಮುಖ್ಯಮಂತ್ರಿ ಜೊತೆ ರಹಸ್ಯವಾಗಿಯೇ ಮಾತನಾಡಿದ್ದೇನೆ. ವರ್ಗಾವಣೆ ವಿಚಾರವನ್ನು ಬೀದಿಯಲ್ಲಿ ಕುಳಿತು ಮಾತನಾಡುವುದಕ್ಕೆ ಸಾಧ್ಯವೇ? ಹಿಂದೆಯೂ ಮಾತನಾಡಿದ್ದೇವೆ. ಮುಂದೆಯೂ ರಹಸ್ಯವಾಗಿಯೇ ಮಾತನಾಡುತ್ತೇವೆ’ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು.

ಮುಖ್ಯಮಂತ್ರಿ ಜೊತೆ ರಹಸ್ಯ ಮಾತುಕತೆ ನಡೆಸಿರುವ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಮಂಗಳವಾರ ಪ್ರತಿಕ್ರಿಯಿಸಿದ ಅವರು, ‘ವರ್ಗಾವಣೆಯಂಥ ವಿಚಾರಗಳನ್ನು ಬೀದಿಯಲ್ಲಿ ಕುಳಿತು ಮಾತನಾಡುವುದಕ್ಕೆ ಆಗುತ್ತದೆಯೇ?’ ಎಂದರು.

‘‘ಬುಧವಾರ (ಆಗಸ್ಟ್‌ 2) ದೆಹಲಿಯಲ್ಲಿ ನಡೆಯಲಿರುವ ಸಭೆಯ ಕಾರ್ಯಸೂಚಿಯಲ್ಲಿ ಏನಿದೆ ಗೊತ್ತಿಲ್ಲ. ಈ ಹಿಂದೆ ಪಕ್ಷದ ನಾಯಕರುಗಳು ಇಲ್ಲಿಗೇ ಬರುತ್ತಿದ್ದರು. ಕೆಲವೊಮ್ಮೆ ನಮ್ಮನ್ನು ದೆಹಲಿಗೆ ಕರೆಸಿಕೊಳ್ಳುತ್ತಿದ್ದರು. ಗುಲಾಂ ನಬಿ ಆಜಾದ್ ಎಐಸಿಸಿ ಪ್ರಧಾನ ಕಾರ್ಯದರ್ಶಿ ಆಗಿದ್ದಾಗ ಅವರೇ ಸಚಿವರ ಜೊತೆಗೆ ಪ್ರತ್ಯೇಕವಾಗಿ ಮಾಹಿತಿ ಪಡೆದಿದ್ದರು. ದೆಹಲಿ ಸಭೆಯಲ್ಲಿ ಲೋಕಸಭೆ ಚುನಾವಣೆಗೆ ಸಿದ್ಧತೆ ಬಗ್ಗೆಯೂ ಚರ್ಚೆ ಆಗಬಹುದು. ಸಚಿವರ ಕಾರ್ಯ ಪರಿಶೀಲನೆ ಬಗ್ಗೆ ಯಾವುದೇ ಮಾಹಿತಿ ಇಲ್ಲ’ ಎಂದರು.

‘ಸಮನ್ವಯ ಸಮಿತಿ ರಚನೆ ವಿಚಾರದಲ್ಲಿ ಏನು ಅಭಿಪ್ರಾಯ ಇದೆಯೋ ಗೊತ್ತಿಲ್ಲ’ ಎಂದೂ ಹೇಳಿದರು.

ಮಂಗಳೂರಿನಲ್ಲಿ ಮತ್ತೆ ಮತೀಯ ಗೂಂಡಾಗಿರಿ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಅವರು, ‘ಮತೀಯ ಗೂಂಡಾಗಿರಿ ನಿಯಂತ್ರಣಕ್ಕೆ ಕಠಿಣ ಕ್ರಮ‌ ತೆಗೆದುಕೊಂಡಿದ್ದೇವೆ. ಪ್ರತ್ಯೇಕ ಘಟಕ ಸ್ಥಾಪನೆ ಮಾಡಿದ್ದೇವೆ. ಆ ಘಟಕ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ. ಘಟಕದ ಮಾಡಿದ ತಕ್ಷಣ ಇಂತಹ ವರ್ತನೆ ನಿಲ್ಲುತ್ತದೆ ಎಂದಲ್ಲ. ಇಂತಹ ಪ್ರಕರಣ ನಡೆಯಬಾರದೆಂದು ಪೊಲೀಸ್‌ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇವೆ. ಯಾವುದೇ ಧರ್ಮದವರು ಇಂಥ ಪ್ರಕರಣಗಳಲ್ಲಿ ಭಾಗಿಯಾದರೂ ಅವರ ಕ್ರಮ ಆಗಬೇಕು’ ಎಂದರು.

ಉಡುಪಿ ಕಾಲೇಜು ಪ್ರಕರಣ ಕುರಿತು ನ್ಯಾಯಾಂಗ ತನಿಖೆಗೆ ಬಿಜೆಪಿ ಆಗ್ರಹಿಸಿರುವ ಬಗ್ಗೆ ಮಾತನಾಡಿದ ಅವರು, ‘ಬಿಜೆಪಿಯವರು ವಿರೋಧ ಪಕ್ಷದಲ್ಲಿದ್ದಾರೆ. ಅವರು ಒತ್ತಾಯಿಸಲೇಬೇಕು. ಅವರು ಹೇಳಿದರು ಎಂದು ನಾವು ಅದನ್ನು ಕೇಳಬೇಕು ಅಂತೇನೂ ಇಲ್ಲ. ಅವರು ಬೇಕಾದರೆ ರಚನಾತ್ಮಕವಾಗಿ ಸಲಹೆ ಕೊಟ್ಟರೆ ಪರವಾಗಿಲ್ಲ. ಅದು ಬಿಟ್ಟು ಪ್ರತಿಭಟನೆ ಮಾಡುವುದಾರೆ ಮಾಡಲಿ. ಅವರ ಪಕ್ಷದ ಖುಷ್ಬೂ ಅವರೇ ಹೇಳಿದ ಮೇಲೂ ಅವರು ನಂಬಲಿಲ್ಲವೆಂದರೆ ಹೇಗೆ’ ಎಂದರು.

ಧರ್ಮಸ್ಥಳದ ಸೌಜನ್ಯಾ ಹತ್ಯೆ ಪ್ರಕರಣದ ಮರು ತನಿಖೆಯ ಬಗ್ಗೆ ಕೇಳಿದ ಪ್ರಶ್ನೆಗೆ, ‘ಈ ಪ್ರಕರಣದ ತನಿಖೆ ಬಗ್ಗೆ ಯಾವುದೇ ಯೋಚನೆ ಮಾಡಿಲ್ಲ. ಅಂತಹ ಯೋಚನೆ ಸದ್ಯಕ್ಕೆ ನಮ್ಮ ಮುಂದೆ ಇಲ್ಲ. ಮುಖ್ಯಮಂತ್ರಿಯಿಂದಲೂ ಯಾವುದೇ ಸೂಚನೆ ಬಂದಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT