ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈತ್ರಿ ಮರುಪರಿಶೀಲಿಸಲು ಕೈಮುಗಿದು ಪ್ರಾರ್ಥನೆ ಮಾಡುತ್ತೇನೆ: ಸಿ.ಎಂ. ಇಬ್ರಾಹಿಂ

Published 22 ಅಕ್ಟೋಬರ್ 2023, 10:58 IST
Last Updated 22 ಅಕ್ಟೋಬರ್ 2023, 10:58 IST
ಅಕ್ಷರ ಗಾತ್ರ

ಬೆಂಗಳೂರು: ‘ಬಿಜೆಪಿ ಜೊತೆಗಿನ ಮೈತ್ರಿ ವಿಚಾರವನ್ನು ಮರು ಪರಿಶೀಲಿಸುವಂತೆ ಎಚ್.ಡಿ. ದೇವೇಗೌಡರಿಗೆ ಮತ್ತೊಮ್ಮೆ ಕೈಮುಗಿದು ಪ್ರಾರ್ಥನೆ ಮಾಡುತ್ತೇನೆ’ ಎಂದು ಸಿ.ಎಂ. ಇಬ್ರಾಹಿಂ ಹೇಳಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಜೆಡಿಎಸ್‌ ಜಿಲ್ಲಾ ಘಟಕಗಳ ಅಧ್ಯಕ್ಷರು, ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ. ಯಾರನ್ನೂ ನಾನು ಬಹಿರಂಗವಾಗಿ ಕರೆಯುತ್ತಿಲ್ಲ. ಲೋಕಸಭೆ ಚುನಾವಣೆಗೆ ಇನ್ನೂ ಸಮಯವಿದೆ, ಮಾತನಾಡೋಣ ಎಂದು ಅವರಿಗೆಲ್ಲ ಹೇಳಿದ್ದೇನೆ’ ಎಂದರು.

‘ಪ್ರಧಾನಿ ಮೋದಿ, ಕೇಂದ್ರ ಸಚಿವ ಅಮಿಶ್ ಶಾ ಅವರಿಗೆ ಗೌರವ ಕೋಡೋಣ. ಅವರ ಜೊತೆ ವ್ಯಕ್ತಿಗತವಾಗಿ ಯಾವುದೇ ಭಿನ್ನಮತವಿಲ್ಲ. ಸೈದ್ಧಾಂತಿಕವಾಗಿ ವಿರೋಧವಿದೆ’ ಎಂದರು.

‘ಕೇರಳ, ತಮಿಳುನಾಡು, ರಾಜಸ್ಥಾನ ಬಳಿಕ ಕಾರ್ಯಕ್ರಮದ ನಿಮಿತ್ತ ಉದಯಪುರಕ್ಕೆ ಹೋಗುತ್ತಿದ್ದೇನೆ. ಇದೇ​ 26 ರಂದು ಮುಂಬೈಗೆ ಹೋಗುತ್ತಿದ್ದೇನೆ. ಬೇರೆ ಪಕ್ಷದ ನಾಯಕರನ್ನು ಭೇಟಿ ಮಾಡುತ್ತೇನೆ. ಒಂದೇ ಕಡೆ ಕುಳಿತುಕೊಳ್ಳುವವ ನಾನಲ್ಲ. ನಾನು ತ್ರಿಲೋಕ ಸಂಚಾರಿ’ ಎಂದು ಹೇಳಿದರು.

‘ನೀವು ತಾಂತ್ರಿಕವಾಗಿ, ಮಾನಸಿಕವಾಗಿ ಇನ್ನೂ ಜೆಡಿಎಸ್​ನಲ್ಲಿ ಇದ್ದೀರಾ’ ಎಂಬ ಪ್ರಶ್ನೆಗೆ, ‘ನೂರಕ್ಕೆ ನೂರರಷ್ಟು ನಾನು  ಜೆಡಿಎಸ್​ನಲ್ಲಿದ್ದೇನೆ. ನಾನೇ ಅದರ ಅಧ್ಯಕ್ಷ. ದೇವೇಗೌಡರು ತಪ್ಪು ಮಾಡಿದ್ದಾರೆ ಎಂದು ನೋವು ಆಗಿಲ್ಲ. ಅದನ್ನು ಸರಿಪಡಿಸಿಕೊಂಡು ಹೋಗಬೇಕಿದೆ. ನಮ್ಮ ಸಂಸ್ಕೃತಿಗೆ ಅನುಗುಣವಾಗಿ ಹೋಗಬೇಕಿದೆ’ ಎಂದರು.

‘ರಾಜ್ಯ ಸಮಿತಿ ವಿಸರ್ಜಿಸಲು ಅದೇನು ಕೋಳಿ ಮೊಟ್ಟೆನಾ? ಒಡೆದು ಆಮ್ಲೆಟ್ ಮಾಡಲು. ಚುನಾವಣೆ ಮೂಲಕ ಆಯ್ಕೆ ಆಗಿರುವ ಸಮಿತಿ. ಚುನಾವಣಾ ಆಯೋಗದಲ್ಲಿ ನೋಂದಣಿ ಆಗಿರುವ ಪಕ್ಷ. ನಿಯಮ ಪ್ರಕಾರ ಪಕ್ಷವನ್ನು ನಡೆಸಬೇಕು. ನನ್ನಿಚ್ಛೆ ಪ್ರಕಾರ ಪಕ್ಷ ನಡೆಸಲು ಆಗಲ್ಲ. ಕೋರ್ ಕಮಿಟಿ ಎಚ್‌.ಡಿ ದೇವೇಗೌಡರು ಮಾಡಿದ್ದಲ್ಲ, ನಾನು ಮಾಡಿದ್ದು. ಪದಾಧಿಕಾರಿಗಳನ್ನು ಮಾಡಿದ್ದೂ ನಾನು. ರಾಜ್ಯದಲ್ಲಿ ಜೆಡಿಎಸ್ ಅಧ್ಯಕ್ಷರಿಗೆ ಅಧಿಕಾರ. ಸಂವಿಧಾನಕ್ಕೆ ವಿರುದ್ಧವಾಗಿ ಅಧ್ಯಕ್ಷರು ನಡೆದರೆ ಮೂರಲ್ಲಿ ಎರಡರಷ್ಟು ಬಹುಮತದ ಸದಸ್ಯರಿಂದ ನೋಟಿಸ್ ಕೊಡಬೇಕು. ಸಭೆ ಕರೆದು ಅಧ್ಯಕ್ಷರನ್ನು ತೆಗೆಯಬೇಕಾಗುತ್ತದೆ’ ಎಂದೂ ವಿವರಿಸಿದರು.

‘ಜೆಡಿಎಸ್ ವರಿಷ್ಠರ ವಿರುದ್ಧ​ ಕೋರ್ಟ್‌ ಮೊರೆ ಹೋಗುತ್ತೀರಾ’ ಎಂಬ ಪ್ರಶ್ನೆಗೆ, ‘ಇದೇ 26ರ ಬಳಿಕ ನೋಡೋಣ. ಅಲ್ಲಿಯವರೆಗೂ ವರಿಷ್ಠರು ಏನಾದರೂ ತೀರ್ಮಾನ ಮಾಡುತ್ತಾರಾ ನೋಡೋಣ. ದೇವೇಗೌಡರ ಮೇಲೆ ನನಗೆ ವಿಶ್ವಾಸವಿದೆ. ಆದರೆ, ಕುಮಾರಸ್ವಾಮಿ ತೀರ್ಮಾನ ಮಾಡಬೇಕು. ಅವರ ಮೇಲೆ ನನಗೆ ಭರವಸೆ ಇಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT