ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ದೋಷಿ ಹೆಸರು ಮರೆಮಾಚದಿದ್ದರೆ ಹಕ್ಕಿಗೆ ಧಕ್ಕೆ: ಹೈಕೋರ್ಟ್‌

Published 28 ಫೆಬ್ರುವರಿ 2024, 14:05 IST
Last Updated 28 ಫೆಬ್ರುವರಿ 2024, 14:05 IST
ಅಕ್ಷರ ಗಾತ್ರ

ಬೆಂಗಳೂರು: ‘ಸಂವಿಧಾನ ಕೊಡಮಾಡಿರುವ ಮೂಲಭೂತ ಹಕ್ಕುಗಳು ಖಾಸಗಿತನದ ಹಕ್ಕುಗಳೂ ಆಗಿದ್ದು, ವ್ಯಕ್ತಿಯೊಬ್ಬ ಗೌರವಯುತವಾಗಿ ಬದುಕುವುದನ್ನು ಎತ್ತಿಹಿಡಿದಿದೆ. ಇದನ್ನು ಯಾರೂ ಮರೆಯಬಾರದು’ ಎಂದು ಹೈಕೋರ್ಟ್‌ ಹೇಳಿದೆ.

‘ಕ್ರಿಮಿನಲ್‌ ಆರೋಪದ ಪ್ರಕರಣದಲ್ಲಿ ನಿರ್ದೋಷಿಯಾಗಿರುವ ನನ್ನ ಹೆಸರನ್ನು ಹೈಕೋರ್ಟ್‌ನ ಡಿಜಿಟಲ್‌ ದಾಖಲೆಗಳಿಂದ ತೆಗೆದುಹಾಕಲು ರಿಜಿಸ್ಟ್ರಾರ್ ಜನರಲ್‌ ಅವರಿಗೆ ನಿರ್ದೇಶಿಸಬೇಕು’ ಎಂದು ಕೋರಿ 28 ವರ್ಷದ ವಿದ್ಯಾವಂತ ಯುವಕ ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಾನ್ಯ ಮಾಡಿ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಸಿ.ಎಚ್‌.ಹನುಮಂತರಾಯ ಅವರು, ‘ಅರ್ಜಿದಾರನ ವಿರುದ್ಧ ಪೊಲೀಸರು ನ್ಯಾಯಾಲಯಕ್ಕೆ ‘ಬಿ’ ರಿಪೋರ್ಟ್ ಸಲ್ಲಿಸಿದ್ದು ಅದು ಪುರಸ್ಕೃತವಾಗಿದೆ. ಆದರೂ, ಅವರು ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿಯ ವಿವರಗಳು ಕೋರ್ಟ್‌ನ ವೆಬ್‌ಸೈಟ್‌ ಮತ್ತು ಇತರೆ ಕಾನೂನು ಜಾಲತಾಣಗಳಲ್ಲಿ ಇನ್ನೂ ಗೋಚರವಾಗುತ್ತಿವೆ’ ಎಂದು ಆಕ್ಷೇಪಿಸಿದರು.

‘ಅರ್ಜಿದಾರರ ಬಗೆಗಿನ ಮಾಹಿತಿಯು ಅಧಿಕೃತ ವೆಬ್‌ಸೈಟ್‌ ಮುಖಾಂತರ ಸಾರ್ವಜನಿಕರಿಗೆ ಸುಲಭವಾಗಿ ಲಭ್ಯವಾಗುತ್ತಿದ್ದು ಇದರಿಂದ ಅವರ ಜೀವನೋಪಾಯವೇ ಕಷ್ಟವಾಗಿದೆ. ಎಲ್ಲಿಯೂ ನೌಕರಿ ಸಿಗದೆ, ಇಡೀ ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ. ಸಮಾಜದಲ್ಲಿ ಗೌರವದಿಂದ ಬಾಳ್ವೆ ನಡೆಸಲು ತೊಂದರೆಯಾಗುತ್ತಿದೆ. ಆದ್ದರಿಂದ, ಅವರ ಹೆಸರನ್ನು ಹೈಕೋರ್ಟ್‌ನ ಡಿಜಿಟಲ್‌ ದಾಖಲೆಗಳು ಹಾಗೂ ಸಾಮಾಜಿಕ ಜಾಲತಾಣಗಳಿಂದ ತೆಗೆದು ಹಾಕಲು ನಿರ್ದೇಶಿಸಬೇಕು’ ಎಂದು ಮನವಿ ಮಾಡಿದರು.

ಇದನ್ನು ಮಾನ್ಯ ಮಾಡಿದ ನ್ಯಾಯಪೀಠ, ‘ನ್ಯಾಯಾಲಯ ನಿರ್ದೋಷಿ ಎಂದು ಘೋಷಿಸಿದ ನಂತರವೂ ಆರೋಪಿಯಾಗಿದ್ದವರ ಹೆಸರನ್ನು, ಸಾಮಾಜಿಕ ಜಾಲತಾಣಗಳಲ್ಲಿ ಇರಗೊಟ್ಟರೆ ಅದು, ಗೌರವಯುತವಾಗಿ ಬದುಕುವ ವ್ಯಕ್ತಿಯೊಬ್ಬನ ಹಕ್ಕಿಗೂ ಖಂಡಿತಾ ಧಕ್ಕೆ ಉಂಟು ಮಾಡುವ ಅಂಶ’ ಎಂಬ ಅಭಿಪ್ರಾಯದೊಂದಿಗೆ, ಹೈಕೋರ್ಟ್‌ ವೆಬ್‌ಸೈಟ್‌ನಲ್ಲಿರುವ ಪ್ರಕರಣದ ವಿವರಗಳಲ್ಲಿ ಅರ್ಜಿದಾರರ ಹೆಸರನ್ನು ಮರೆಮಾಚುವಂತೆ ಹೈಕೋರ್ಟ್ ರಿಜಿಸ್ಟ್ರಿಗೆ ಆದೇಶಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT