ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಸ್ಯಶಾಸ್ತ್ರ ಸಹಾಯಕ ಪ್ರಾಧ್ಯಾಪಕರ ನೇಮಕಾತಿಯಲ್ಲಿ ಅಕ್ರಮ: ಅಭ್ಯರ್ಥಿ ಆರೋಪ

Last Updated 14 ಸೆಪ್ಟೆಂಬರ್ 2018, 6:36 IST
ಅಕ್ಷರ ಗಾತ್ರ

ಬಳ್ಳಾರಿ: ಇಲ್ಲಿನ‌ ವಿಜಯನಗರ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯದ ಸಸ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರ ನೇಮಕಾತಿಯಲ್ಲಿ ಅಕ್ರಮ ‌ನಡೆದಿರುವುದರಿಂದ ‌ತಮಗೆ ಅನ್ಯಾಯವಾಗಿದೆ ಎಂದು ಅಭ್ಯರ್ಥಿ ಹಾಗೂ ಅದೇ ವಿಭಾಗದ ಅತಿಥಿ ಉಪನ್ಯಾಸಕಿ ಬಿ.ಶ್ರೀವಾಣಿ ಆರೋಪಿಸಿದರು.

‘ವಿಭಾಗದಲ್ಲಿರುವ‌ ಎರಡು ಹುದ್ದೆಗಳಲ್ಲಿ ಒಂದು ಸಾಮಾನ್ಯ ವರ್ಗಕ್ಕೆ ಮತ್ತು‌ ಇನ್ನೊಂದು ಪರಿಶಿಷ್ಟ ಜಾತಿಗೆ ಮೀಸಲಾಗಿತ್ತು. ಸಾಮಾನ್ಯ ವರ್ಗದಲ್ಲಿದ್ದ ನಾನು ಸಂದರ್ಶನ ಹೊರತುಪಡಿಸಿ ಮಿಕ್ಕೆಲ್ಲ ವಿಷಯಗಳಲ್ಲಿ ಅತ್ಯಧಿಕ ಅಂಕ ಪಡೆದಿದ್ದೆ. ಆದರೆ ನನಗಿಂತ ಕಡಿಮೆ ಅಂಕ ಪಡೆದಿದ್ದ ಪರಿಶಿಷ್ಟ ಜಾತಿಯ ಎಂ.ಸಿದ್ದೇಶ್ವರಿ ಅವರಿಗೆ ನೇಮಕ ಪತ್ರ ನೀಡಲಾಗಿದೆ. ಸಂದರ್ಶನದಲ್ಲಿ‌ ಅಕ್ರಮ ನಡೆದಿರುವ ಸಾಧ್ಯತೆ ಇದ್ದು, ಆ ಪ್ರಕ್ರಿಯೆಯ ವಿಡಿಯೊ ದೃಶ್ಯಾವಳಿಗಳನ್ನು ಬಹಿರಂಗಪಡಿಸಬೇಕು’ ಎಂದು ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

‘ಸೆ.5ರಂದು‌ ಸಂದರ್ಶನ ನಡೆದಿತ್ತು. ಆದರೆ ಆಯ್ಕೆ ಪಟ್ಟಿಯನ್ನು ಇಲ್ಲಿವರೆಗೂ ಪ್ರಕಟಿಸಿಲ್ಲ. ಅಭ್ಯರ್ಥಿಗಳು ಸಂದರ್ಶನದಲ್ಲಿ ಗಳಿಸಿದ ಅಂಕಗಳನ್ನು ಬಹಿರಂಗಪಡಿಸಿದಿರುವುದು ಅನುಮಾನ ಮೂಡಿಸಿದೆ’ ಎಂದರು.

‘ಪರಿಶಿಷ್ಟ‌ ಜಾತಿಗೆ ಮೀಸಲಿರುವ ಹುದ್ದೆಗೆ ನೇಮಕವಾಗಿರುವ ಕವಿತಾ ಅವರಿಗೆ ಅಲ್ಲಿ ಸ್ಥಾನ ಕೊಡುವ ಸಲುವಾಗಿಯೇ, ಸಿದ್ದೇಶ್ವರಿ ಅವರನ್ನು ಸಾಮಾನ್ಯ‌ ವರ್ಗದಡಿ‌ ನೇಮಿಸಲಾಗಿದೆ’ ಎಂದು ದೂರಿದರು.

ಹೈಕೋರ್ಟ್ ಮೋರೆ: ನೇಮಕಾತಿಗೆ ತಡೆ ಕೋರಿ ಹೈಕೋರ್ಟ್ ಮೊರೆ ಹೋಗುವುದಾಗಿ ಹೇಳಿದರು.

ಕುಲಪತಿ ಹೇಳಿಕೆ: ನೇಮಕಾತಿಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ಸಾಮಾನ್ಯ ಎಂದು‌ ಘೋಷಣೆಯಾಗಿರುವ ಹುದ್ದೆಗೆ ಅರ್ಹರಾದ ಯಾವ ವರ್ಗದವರನ್ನು ಬೇಕಾದರೂ ನೇಮಕ‌ ಮಾಡಬಹುದು. ಆಯ್ಕೆ ಪಟ್ಟಿಯನ್ನು ಪ್ರಕಟಿಸಲೇಬೇಕು ಎಂಬ ನಿಯಮವಿಲ್ಲ. ಆಯ್ಕೆಯಾದವರಿಗೆ‌ ನೇಮಕಾತಿ ಪತ್ರ‌ ನೀಡಲಾಗುವುದು. ಅವರು ಬಂದು ಸೇವೆಗೆ ಸೇರಿಕೊಳ್ಳುತ್ತಾರೆ ಅಷ್ಟೇ' ಎಂದು ಕುಲಪತಿ ಪ್ರೊ.ಎಂ.ಎಸ್.ಸುಭಾಷ್ ಪ್ರತಿಕ್ರಿಯೆ ‌ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT