ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹುಲಿ ಅಭಯಾರಣ್ಯದಲ್ಲಿ ಅಕ್ರಮ ಕಾಮಗಾರಿ:IFS ಅಧಿಕಾರಿ ವಿರುದ್ಧ ಕ್ರಮಕ್ಕೆ ನಿರ್ದೇಶನ

ಕಾಳಿ ಹುಲಿ ಅಭಯಾರಣ್ಯದಲ್ಲಿ ನಿಯಮಬಾಹಿರ ಕಾಮಗಾರಿ ಕುರಿತ ದೂರು
Published : 27 ಸೆಪ್ಟೆಂಬರ್ 2024, 20:13 IST
Last Updated : 27 ಸೆಪ್ಟೆಂಬರ್ 2024, 20:13 IST
ಫಾಲೋ ಮಾಡಿ
Comments

ನವದೆಹಲಿ: ಉತ್ತರ ಕನ್ನಡದ ಕಾಳಿ ಹುಲಿ ಅಭಯಾರಣ್ಯದಲ್ಲಿ ಪ್ರವಾಸೋದ್ಯಮ ಚಟುವಟಿಕೆಗೆ ನಿಯಮಬಾಹಿರವಾಗಿ ಅನುವು ಮಾಡಿಕೊಟ್ಟ ಆರೋಪದಲ್ಲಿ ಐಎಫ್‌ಎಸ್‌ ಅಧಿಕಾರಿ ಮರಿಯಾ ಕ್ರಿಸ್ತು ರಾಜ ವಿರುದ್ಧ ಕ್ರಮ ಕೈಗೊಳ್ಳುವಂತೆ ಕರ್ನಾಟಕದ ಮುಖ್ಯ ಕಾರ್ಯದರ್ಶಿ ಅವರಿಗೆ ಕೇಂದ್ರ ಅರಣ್ಯ, ಪರಿಸರ ಹಾಗೂ ತಾ‍ಪಮಾನ ಬದಲಾವಣೆ ಸಚಿವಾಲಯ ನಿರ್ದೇಶನ ನೀಡಿದೆ.

ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ಉಲ್ಲಂಘಿಸಿ ಹಲವು ಕಾಮಗಾರಿಗಳನ್ನು ನಡೆಸಿರುವ ಮರಿಯಾ ಕ್ರಿಸ್ತು ರಾಜ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಾಮಾಜಿಕ ಕಾರ್ಯಕರ್ತ ಅಕ್ಷೀವ್‌ ದೂರು ಸಲ್ಲಿಸಿದ್ದರು.

ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಪ್ರಧಾನಿಯವರ ಸಚಿವಾಲಯವು ಅರಣ್ಯ ಸಚಿವಾಲಯಕ್ಕೆ ಸೂಚಿಸಿತ್ತು. ‘ಈ ಪ್ರಕರಣದಲ್ಲಿ ಐಎಫ್‌ಎಸ್ ಅಧಿಕಾರಿ ವಿರುದ್ಧ ಆರೋಪವಿದೆ. ಶಿಸ್ತು ಪ್ರಾಧಿಕಾರವಾಗಿರುವ ರಾಜ್ಯ ಸರ್ಕಾರವೇ ಕ್ರಮ ಕೈಗೊಳ್ಳಬೇಕಿದೆ. ನಿಯಮಗಳನ್ನು ಪರಿಶೀಲಿಸಿ ಅಧಿಕಾರಿ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದು ಸಚಿವಾಲಯವು ಸೆಪ್ಟೆಂಬರ್ 20ರಂದು ಪತ್ರ ಬರೆದು ಸೂಚಿಸಿದೆ. 

ದೂರಿನಲ್ಲಿ ಏನಿತ್ತು?: ‘ಹುಲಿ ಮೀಸಲು ಪ್ರದೇಶದ ಕೋರ್ ಪ್ರದೇಶವಾದ ನುಜ್ಜಿ ನರ್ಸರಿ ಪ್ರದೇಶದಲ್ಲಿ ಬೃಹತ್ ಮರಗಳನ್ನು ಕಡಿದು ಆರ್ಕಿಡೇರಿಯಂ ನಿರ್ಮಿಸಲಾಗಿದೆ. ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ಕೋರ್ ಪ್ರದೇಶದಲ್ಲಿ ಯಾವುದೇ ಹೊಸ ಪ್ರವಾಸಿ ನಿರ್ಮಾಣ ಕಾಮಗಾರಿಗೆ ಅನುವು ಮಾಡಿಕೊಡುವುದಿಲ್ಲ ಎಂದು ಎನ್‌ಟಿಸಿಎ ಈ ಹಿಂದೆಯೇ ತೀರ್ಮಾನ ತೆಗೆದುಕೊಂಡಿದೆ. ಆದರೆ, ಈ ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ಕಾಮಗಾರಿ ನಡೆಸಲಾಗಿದೆ’ ಎಂದು ಅವರು ದೂರಿದ್ದರು.

‘ಹುಲಿ ಸಂರಕ್ಷಣಾ ಯೋಜನೆಯಲ್ಲಿ ಉಲ್ಲೇಖವಿರದಿದ್ದರೂ ಕ್ಯಾಸಲ್‌ ರಾಕ್‌ ವಲಯದಲ್ಲಿ ಕಾನೂನುಬಾಹಿರವಾಗಿ ಜಂಗಲ್ ರೈಡ್ ಹೆಸರಿನಲ್ಲಿ ಕೆನೋಪಿ ವಾಕ್ ಪ್ರದೇಶ, ಪಾಪುಲ್ವಾಡಿ ಜಲಪಾತ ಪ್ರದೇಶ ಸೇರಿದಂತೆ ಹಲವೆಡೆ ಜಂಗಲ್ ಸಫಾರಿ ಆರಂಭಿಸಲಾಗಿದೆ. ಅನುಮತಿ ನೀಡಿರುವ ಚಾರಣ ಪಥಗಳನ್ನು ಹೊರತುಪಡಿಸಿ ಇನ್ನೂ ಐದು ದಾರಿಗಳಲ್ಲಿ ಅಕ್ರಮವಾಗಿ ಚಾರಣಕ್ಕೆ ಅವಕಾಶ ಕಲ್ಪಿಸಿದ್ದಾರೆ’ ಎಂದು ದೂರಲಾಗಿತ್ತು.

‘ಶಿವಪುರ ಬಳಿ ತೂಗು ಸೇತುವೆಯನ್ನು ಅರಣ್ಯ ಸಂರಕ್ಷಣಾ ಕಾಯ್ದೆ 1980 ಅನ್ನು ಉಲ್ಲಂಘಿಸಿ ನಿರ್ಮಿಸಲಾಗಿದೆ. ಹೀಗಿದ್ದರೂ ತೂಗು ಸೇತುವೆ ಹಾಗೂ ಉಳವಿಯ ಸುತ್ತಮುತ್ತಲಿನ ಹುಲಿ ಮೀಸಲಿನ ವ್ಯಾಪ್ತಿಯ ಬಸವ ಜಲಪಾತ, ಮಹಾಮನೆ ಗವಿ, ಬಸವಧಾಮ ಆಶ್ರಮ, ಪಂಚಲಿಂಗೇಶ್ವರ ಗುಹೆ, ಹರಳಯ್ಯನ ಚಿಲುಮೆ, ವಿಭೂತಿ ಕಣಜ ಸೇರಿದಂತೆ ನಿಷೇಧಿತ ಪ್ರದೇಶಗಳಲ್ಲಿ ಅಕ್ರಮವಾಗಿ ಚಾರಣಕ್ಕೆ ಅವಕಾಶ ಮಾಡಲಾಗಿದೆ. ಕಾಳಿ ನದಿಯ ಹಿನ್ನೀರಿನಲ್ಲಿ ಬೋಟ್‌ ಸಫಾರಿ ಆರಂಭಿಸಲಾಗಿದೆ. ವನ್ಯಜೀವಿ ಕಾಯ್ದೆಗಳನ್ನು ಗಾಳಿಗೆ ತೂರಿ ಈ ಎಲ್ಲ ಚಟುವಟಿಕೆಗಳಿಗೆ ಅನುವು ಮಾಡಿಕೊಡಲಾಗಿದೆ’ ಎಂದು ದೂರಲಾಗಿತ್ತು.

ಒಂದೆಡೆ, ದಶಕಗಳಿಂದ ಅರಣ್ಯದೊಳಗೆ ವಾಸಿಸುತ್ತಿರುವ ಅರಣ್ಯವಾಸಿಗಳಿಗೆ ರಸ್ತೆ, ವಿದ್ಯುತ್ ಸಂಪರ್ಕ ನೀಡಲು ಬರುವುದಿಲ್ಲವೆಂದು ಮರಿಯಾ ಕ್ರಿಸ್ತು ರಾಜ ಅವರು ಪುನರ್ವಸತಿ ಹೆಸರಿನಲ್ಲಿ ನೂರಾರು ಕುಟುಂಬಗಳನ್ನು ಕಾಡಿನಾಚೆಗೆ ಸ್ಥಳಾಂತರಿಸಿದ್ದರು. ಇನ್ನೊಂದೆಡೆ, ಹುಲಿಕಾಡಿನಲ್ಲಿ ನಗರವಾಸಿಗಳ ಮೋಜುಮಸ್ತಿಗೆ ಎಲ್ಲೆಂದರಲ್ಲಿ ಅವಕಾಶ ನೀಡಿದ್ದರು ಎಂದು ದೂರಿನಲ್ಲಿ ುಲ್ಲೇಖಿಸಲಾಗಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT