ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಂಎ: ವಂಚನೆಯೇ ಉದ್ದೇಶ?

Last Updated 27 ಜೂನ್ 2019, 20:02 IST
ಅಕ್ಷರ ಗಾತ್ರ

ಬೆಂಗಳೂರು: ‘ಐ ಮಾನಿಟರಿ ಅಡ್ವೈಸರಿ’ (ಐಎಂಎ) ವ್ಯವಸ್ಥಾಪಕ ನಿರ್ದೇಶಕ ಮನ್ಸೂರ್‌ ಖಾನ್‌, ಷೇರುದಾರರಿಗೆ ವಂಚನೆ ಮಾಡುವ ಉದ್ದೇಶದಿಂದಲೇ ಸಮೂಹ ಕಂಪನಿ ತೆರೆದಿದ್ದರು’ ಎಂಬ ಸಂಗತಿ ಜಾರಿ ನಿರ್ದೇಶನಾಲಯದ ತನಿಖೆಯಿಂದ ಬಯಲಾಗಿದೆ.

‘ಷೇರು ಹಣವನ್ನು ಚಿನಿವಾರ ಪೇಟೆಯಲ್ಲಿ ತೊಡಗಿಸುವುದಾಗಿ ಹೂಡಿಕೆದಾರರ ಜತೆ ಕಂಪನಿ ಒಪ್ಪಂದ ಮಾಡಿಕೊಂಡಿದ್ದರೂ, ಅಕ್ರಮ ಹಣ ವರ್ಗಾವಣೆ ದಂಧೆ ಬಿಟ್ಟು ಮತ್ಯಾವುದೇ ವ್ಯವಹಾರ ಮಾಡಿಲ್ಲ’ ಎಂಬ ಅಂಶವನ್ನು ಜಾರಿ ನಿರ್ದೇಶನಾಲಯದ (ಇ.ಡಿ) ಪ್ರಾಥಮಿಕ ತನಿಖೆ ಬಹಿರಂಗಪಡಿಸಿದೆ.

‘ಷೇರುದಾರರಿಗೆ ಮಾಸಿಕ ಶೇ 3 ರಷ್ಟು ಲಾಭಾಂಶ ನೀಡುವಂಥ ಯಾವುದೇ ವ್ಯವಹಾರವನ್ನು ಕಂಪನಿ ನಡೆಸುತ್ತಿರಲಿಲ್ಲ. ಹಣ ವಂಚಿಸುವ ಉದ್ದೇಶದಿಂದಲೇ ಖಾನ್‌
ಸ್ಕೀಂ ರೂಪಿಸಿದ್ದರು. ಅವರ ನಿರ್ದೇಶನದಂತೆ ನಾವು ನಡೆಯುತ್ತಿದ್ದೆವು’ ಎಂದು ಕಂಪನಿ ನಿರ್ದೇಶಕರು ಒಪ್ಪಿಕೊಂಡಿದ್ದಾರೆ. ನಿರ್ದೇಶಕರ ಹೇಳಿಕೆಗಳನ್ನು ತನಿಖಾಧಿಕಾರಿಗಳು ದಾಖಲಿಸಿಕೊಂಡಿದ್ದಾರೆ.

‘₹ 4,000 ಕೋಟಿಗೂ ಅಧಿಕ ಹಣ ದೋಚಿ ಪರಾರಿಯಾಗಿರುವ ಖಾನ್‌, ಷೇರುದಾರರಿಗೆ ಮೊದಮೊದಲು ಶೇ 2.5ರಿಂದ ಶೇ 3ರಷ್ಟು ಲಾಭಾಂಶ ನೀಡಿದ್ದರು. ಬಳಿಕ ನಿಲ್ಲಿಸಿದ್ದರು. ಇದರಿಂದಾಗಿ ಆತಂಕ ಸೃಷ್ಟಿಯಾಯಿತು ಎಂದು ನಿರ್ದೇಶಕರು ಹೇಳಿದ್ದಾರೆ. ಮತ್ತೆ ನಿರ್ದೇಶಕರನ್ನು ವಿಚಾರಣೆಗೆ ಒಳಪ‍ಡಿಸುವುದಾಗಿ ಮೂಲಗಳು
ತಿಳಿಸಿವೆ.

‘ಷೇರು ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿ ಖರೀದಿಸಿದ ಸ್ಥಿರಾಸ್ತಿಗಳ ಮಾರುಕಟ್ಟೆ ಬೆಲೆಯನ್ನು ಉತ್ಪ್ರೇಕ್ಷೆಗೊಳಿಸಿ ಭಾರಿ ಪ್ರಮಾಣದಲ್ಲಿ ಬ್ಯಾಂಕ್‌ ಸಾಲ ಪಡೆಯಲುಮನ್ಸೂರ್‌ ಖಾನ್‌ ಯೋಜನೆ ರೂಪಿಸಿದ್ದರು’ ಎಂದು ಕಂಪನಿ ಆಡಿಟರ್‌ ಹೇಳಿರುವುದಾಗಿ ಮೂಲಗಳು ಸ್ಪಷ್ಟಪಡಿಸಿವೆ.

ಚರಾಸ್ತಿ ಜಪ್ತಿಗೂ ಕ್ರಮ: ಕಂಪನಿಯ ₹ 12 ಕೋಟಿ ಮೌಲ್ಯದ ಚರಾಸ್ತಿಯನ್ನು ಜಪ್ತಿ ಮಾಡಲು ಇ.ಡಿ ಪ್ರಕ್ರಿಯೆ ಆರಂಭಿಸಿದೆ.

ಎಫ್‌ಐಆರ್‌ ನಿರೀಕ್ಷೆಯಲ್ಲಿದ್ದ ಜಾರಿ ನಿರ್ದೇಶನಾಲಯ

‘ಐಎಂಎ ವಿರುದ್ಧ ತನಿಖೆ ಕೈಗೆತ್ತಿಕೊಳ್ಳುವಲ್ಲಿ ಜಾರಿ ನಿರ್ದೇಶನಾಲಯ ನಿರ್ಲಕ್ಷ್ಯ ಮಾಡಿಲ್ಲ. ಪೊಲೀಸರ ತನಿಖೆ ಆರಂಭವಾಗುತ್ತಿದ್ದಂತೆ, ಇ.ಡಿ ರಂಗ ಪ್ರವೇಶ ಮಾಡಿದೆ. ಜೂನ್‌ 9 ರಂದು ಕಮರ್ಷಿಯಲ್ ಸ್ಟ್ರೀಟ್‌ ಠಾಣೆಯಲ್ಲಿ ಎಫ್ಐಆರ್‌ ದಾಖಲಾದ ತಕ್ಷಣವೇ ಜೂನ್‌ 12ರಂದು ಇ.ಡಿ ಇಸಿಐಆರ್ ದಾಖಲಿಸಿದೆ’ ಎಂದು ಉನ್ನತ ಮೂಲಗಳು ತಿಳಿಸಿವೆ.

‘ಐಎಂಎ ಸಮೂಹ ಕಂಪನಿಯ ವಂಚನೆ ಪ್ರಕರಣ ಕುರಿತು ಮೊದಲು ಎಫ್‌ಐಆರ್‌ ದಾಖಲಿಸಿ ತನಿಖೆ ನಡೆಸಬೇಕಾದವರು ಪೊಲೀಸರು. ಆನಂತರವಷ್ಟೇ ಇ.ಡಿ ಪಾತ್ರ ಬರುತ್ತದೆ. ನಮ್ಮ ತನಿಖೆಗೆ ಅರ್ಹವಾಗಿರುವಂತಹ ಪ್ರಕರಣಗಳನ್ನು ಮಾತ್ರ ನಾವು ಕೈಗೆತ್ತಿಕೊಳ್ಳುತ್ತೇವೆ’ ಎಂದೂ ಇ.ಡಿ ಮೂಲಗಳು ಸ್ಪಷ್ಟಪಡಿಸಿವೆ.

‘ಐಎಂಎ ಚಟುವಟಿಕೆ ಕುರಿತು ಆದಾಯ ತೆರಿಗೆ ಇಲಾಖೆಯು (ಐ.ಟಿ) ರೀಜನಲ್‌ ಎಕನಾಮಿಕ್‌ ಇಂಟಲಿಜೆನ್ಸ್‌ ಹಾಗೂ ಆರ್‌ಬಿಐನ ರಾಜ್ಯ ಮಟ್ಟದ ಸಮನ್ವಯ ಸಮಿತಿ ಸಭೆಯಲ್ಲಿ ಎಚ್ಚರಿಕೆ ನೀಡಿತ್ತು. ಅಂದಿನಿಂದ ಕಂಪನಿಯ ಚಟುವಟಿಕೆ ಮೇಲೆಇ.ಡಿ ನಿಗಾ ವಹಿಸಿತ್ತು. ಪೊಲೀಸರು ದೂರು ದಾಖಲಿಸದೆ ನಾವು ಏನೂ ಮಾಡುವಂತಿರಲಿಲ್ಲ’ ಎಂದೂ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT