ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಂಎ ವಂಚನೆ ಪ್ರಕರಣ: ಮನ್ಸೂರ್‌ ಖಾನ್‌ ಸೆರೆ –ಇ.ಡಿ ಅಧಿಕಾರಿಗಳ ವಿಚಾರಣೆ

ದುಬೈನಿಂದ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಆರೋಪಿ
Last Updated 20 ಜುಲೈ 2019, 2:25 IST
ಅಕ್ಷರ ಗಾತ್ರ

ಬೆಂಗಳೂರು: ಐಎಂಎ (ಐ ಮಾನಿಟರಿ ಅಡ್ವೈಸರಿ) ಸಮೂಹ ಕಂಪನಿ ಸಂಸ್ಥಾಪಕ ಹಾಗೂ ವ್ಯವಸ್ಥಾಪಕ ನಿರ್ದೇಶಕ ಮೊಹಮ್ಮದ್‌ ಮನ್ಸೂರ್‌ ಖಾನ್‌ ಅವರನ್ನು ಶುಕ್ರವಾರ ಬೆಳಗಿನ ಜಾವ ದೆಹಲಿಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಬಂಧಿಸಿದ್ದಾರೆ.

ದುಬೈನಲ್ಲಿ ತಲೆಮರೆಸಿಕೊಂಡಿದ್ದ ಮನ್ಸೂರ್‌ ಖಾನ್‌ ಅವರ ಮನವೊಲಿಸಿ ವಿಶೇಷ ತನಿಖಾ ತಂಡದ (ಎಸ್‌ಐಟಿ) ಅಧಿಕಾರಿಗಳು ಏರ್‌ ಇಂಡಿಯಾ (AI–916) ವಿಮಾನದಲ್ಲಿ ಬೆಳಗಿನ ಜಾವ 1.50ಕ್ಕೆ ದೆಹಲಿಗೆ ಕರೆತರುತ್ತಿದ್ದಂತೆ, ಇ.ಡಿ ಅಧಿಕಾರಿಗಳು ವಶಕ್ಕೆ ಪಡೆದರು. ದೆಹಲಿಯಲ್ಲೇ ವಿಚಾರಣೆ ಮಾಡುತ್ತಿದ್ದು, ಆ ನಂತರ ಆರೋಪಿಯನ್ನು ಬೆಂಗಳೂರಿಗೆ ಕರೆತರಲಿದ್ದಾರೆ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.

ರಂಜಾನ್ ಸಮಯದಲ್ಲಿ ಕಂಪನಿ ಬಂದ್‌ ಮಾಡಿ, ದುಬೈಗೆ ಪರಾರಿಯಾಗಿದ್ದ ಖಾನ್‌ ಪತ್ತೆಗೆ ‘ಇಂಟರ್‌ ಪೋಲ್‌’ ಬ್ಲೂ ಕಾರ್ನರ್‌ ನೋಟಿಸ್‌ ಹೊರಡಿಸಿತ್ತು. ಎರಡು ವಾರಗಳ ಹಿಂದೆ ದುಬೈಗೆ ತೆರಳಿದ್ದ ಎಸಿಪಿ ದರ್ಜೆಯ ಎಸ್‌ಐಟಿ ಅಧಿಕಾರಿಗಳಿಬ್ಬರು ಆರೋಪಿ ಅಡಗುತಾಣ ಪತ್ತೆ ಹಚ್ಚಿದ್ದರು. ಅವರ ಮನವೊಲಿಸಿ ವಾಪಸ್‌ ಕರೆತಂದರು ಎಂದೂ ಮೂಲಗಳು ಸ್ಪಷ್ಟಪಡಿಸಿವೆ.

ಕಮರ್ಷಿಯಲ್‌ ಸ್ಟ್ರೀಟ್‌ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ ಅಪರಾಧ (73/2019) ಪ್ರಕರಣದಲ್ಲಿ ಮನ್ಸೂರ್‌ ಖಾನ್‌ ಪ್ರಮುಖ ಆರೋಪಿಯಾಗಿದ್ದು, 60 ಸಾವಿರ ಷೇರುದಾರರಿಗೆ ₹ 1,410 ಕೋಟಿ ವಂಚಿಸಿದ ಆರೋಪ ಎದುರಿಸುತ್ತಿದ್ದಾರೆ.

ಐಎಂಎ ಜ್ಯೂವೆಲ್ಸ್‌ ಕಂಪನಿಯು 17 ಅಧೀನ ಕಂಪನಿಗಳನ್ನು ಹೊಂದಿದೆ. ಐದು ಕಂಪನಿಗಳಲ್ಲಿ ಲಕ್ಷಕ್ಕೂ ಹೆಚ್ಚು ಜನ ₹ 4,084 ಕೋಟಿ ಹೂಡಿದ್ದರು. ಇದರಲ್ಲಿ ₹ 3,298 ಕೋಟಿ ಹಿಂತಿರುಗಿಸಲಾಗಿದೆ. ಐಎಂಎಗೆ ಸೇರಿರುವ ₹ 209 ಕೋಟಿ ಮೌಲ್ಯದ ಆಸ್ತಿಯನ್ನು ಇ.ಡಿ ಈಗಾಗಲೇ ಜಪ್ತಿ ಮಾಡಿದೆ.

ಎಸ್ಐಟಿ– ಇ.ಡಿ ಶೀತಲ ಸಮರ?
‘ಮನ್ಸೂರ್‌ ಖಾನ್‌ ಅವರನ್ನು ದುಬೈಯಿಂದ ವಾಪಸ್‌ ಕರೆತಂದಿರುವ ಶ್ರೇಯ ಯಾರಿಗೆ ಸಿಗಬೇಕು’ ಎಂಬ ವಿಷಯದಲ್ಲಿ ಎಸ್‌ಐಟಿ ಹಾಗೂ ಇ.ಡಿ ಅಧಿಕಾರಿಗಳ ನಡುವೆ ಶೀತಲ ಸಮರ ನಡೆಯುತ್ತಿದೆ.

‘ಖಾನ್‌ ಅವರನ್ನು ವಾಪಸ್‌ ಕರೆತಂದಿದ್ದು ನಾವು. ಹದಿನೈದು ದಿನಗಳ ಹಿಂದೆಯೇ ನಮ್ಮ ಎಸಿಪಿ ದರ್ಜೆಯ ಇಬ್ಬರು ಅಧಿಕಾರಿಗಳು ದುಬೈಗೆ ತೆರಳಿದ್ದರು. ಸ್ಥಳೀಯ ಮೂಲಗಳ ನೆರವಿನಿಂದ ಐದು ದಿನಗಳ ಹಿಂದೆ ಆರೋಪಿಯನ್ನು ಸಂಪರ್ಕಿಸಿ, ಮನವೊಲಿಸಿದರು’ ಎಂದು ಎಸ್‌ಐಟಿ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ದುಬೈನಿಂದ ಮಂಗಳೂರು ಮಾರ್ಗವಾಗಿ ಖಾನ್‌ ಅವರನ್ನು ಬೆಂಗಳೂರಿಗೆ ತರುವ ಉದ್ದೇಶವಿತ್ತು. ಆದರೆ, ಆಗಲಿಲ್ಲ. ದೆಹಲಿಗೆ ಕರೆದೊಯ್ಯುವಂತೆ ಕಾನ್ಸುಲೇಟ್‌ ಕಚೇರಿ ಅಧಿಕಾರಿಗಳು ಸೂಚಿಸಿದರು. ಆರೋಪಿಗೂ ನಾವೇ ಟಿಕೆಟ್‌ ಬುಕ್‌ ಮಾಡಿ ಕರೆತಂದೆವು. ದೆಹಲಿ ವಿಮಾನ ನಿಲ್ದಾಣದಲ್ಲಿ ಬಂದಿಳಿಯುತ್ತಿದ್ದಂತೆ ಇ.ಡಿ ಅಧಿಕಾರಿಗಳು ವಶಕ್ಕೆ ಪಡೆದರು’ ಎಂದರು.

‘ಭಾರತ ಮತ್ತು ದುಬೈ ನಡುವೆ ಗಡಿಪಾರು ಒಪ್ಪಂದವಿದ್ದು, ಔಪಚಾರಿಕ ಪ್ರಕ್ರಿಯೆ ಮೂಲಕ ಆರೋಪಿಯನ್ನು ವಶಕ್ಕೆ ಪಡೆಯಲು ಕಾಲಾವಕಾಶ ಹಿಡಿಯುವುದರಿಂದ ರಹಸ್ಯ ಕಾರ್ಯಾಚರಣೆ ನಡೆಸಿ ಅವರನ್ನು ವಾಪಸ್‌ ಕರೆತಂದೆವು. ಅವರ ಪಾಸ್‌ಪೋರ್ಟ್‌ ಜಪ್ತಿ ಆಗಿದ್ದರಿಂದ ಕಾನ್ಸುಲೇಟ್‌ ಜನರಲ್‌ ಕಚೇರಿಯಿಂದ ತಾತ್ಕಾಲಿಕ ದಾಖಲೆಗಳನ್ನು ಪಡೆಯಲಾಯಿತು’ ಎಂದು ವಿವರಿಸಿದರು.

‘ಒಂದೇ ವಿಮಾನದಲ್ಲಿ ಮನ್ಸೂರ್‌ ಖಾನ್‌ ಜೊತೆ ನಮ್ಮ ಅಧಿಕಾರಿಗಳು ಪ್ರಯಾಣಿಸಿದರು. ಕೇಂದ್ರ ಸರ್ಕಾರದ ಅಧೀನದಲ್ಲಿ ಇ.ಡಿ ಕೆಲಸ ಮಾಡುವುದರಿಂದ ಐಎಂಎ ಮಾಲೀಕರನ್ನು ಮೊದಲಿಗೆ ಈ ಸಂಸ್ಥೆಯ ವಶಕ್ಕೆ ಪಡೆದಿದೆ. ನಮ್ಮ ಅಧಿಕಾರಿಗಳೂ ಅಲ್ಲೇ ಇದ್ದಾರೆ. ಬೆಂಗಳೂರಿನಿಂದ ಮತ್ತಿಬ್ಬರು ಇನ್‌ಸ್ಪೆಕ್ಟರ್‌ಗಳನ್ನು ದೆಹಲಿಗೆ ಕಳುಹಿಸಲಾಗಿದೆ’ ಎಂದು ಅವರು ತಿಳಿಸಿದರು.

ಇ.ಡಿ ವಿಚಾರಣೆ ಬಳಿಕ ಖಾನ್‌ ಅವರನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಿ ಬೆಂಗಳೂರಿಗೆ ಕರೆತರಲಾಗುವುದು. ಆನಂತರ ಎಸ್‌ಐಟಿ ಅಧಿಕಾರಿಗಳು ಅವರನ್ನು ಪ್ರಶ್ನಿಸಲಿದ್ದಾರೆ ಎಂದೂ ಅವರು ನುಡಿದರು.

ಸ್ಫೋಟಕ ಮಾಹಿತಿ ನಿರೀಕ್ಷೆ
ಐಎಂಎ ಸಮೂಹ ಕಂಪನಿಗಳನ್ನು ಬಂದ್‌ ಮಾಡಿಮನ್ಸೂರ್‌ ಖಾನ್‌ ಪರಾರಿಯಾದ ಬಳಿಕ ಆಡಿಯೊ ಧ್ವನಿಸುರುಳಿಗಳನ್ನು ಬಿಡುಗಡೆ ಮಾಡಿದ್ದರು. ಅದರಲ್ಲಿ ತಮ್ಮಿಂದ ಹಣ ಪಡೆದ ಕೆಲವರ ಹೆಸರನ್ನು ಬಹಿರಂಗಪಡಿಸಿದ್ದರು. ಆನಂತರ ಬಿಡುಗಡೆ ಮಾಡಿದ್ದ ಇನ್ನೊಂದು ಆಡಿಯೋದಲ್ಲಿ ಮತ್ತಷ್ಟು ಸ್ಫೋಟಕ ಮಾಹಿತಿಗಳಿದ್ದವು.

ಈಚೆಗೆ ಬಿಡುಗಡೆ ಮಾಡಿದ್ದ ಆಡಿಯೊದಲ್ಲಿ ಖಾನ್‌ ಭಾರತಕ್ಕೆ ಹಿಂತಿರುಗುವ ಇಚ್ಛೆ ವ್ಯಕ್ತಪಡಿಸಿದ್ದರು. ಬೆಂಗಳೂರಿಗೆ ಮರಳಿದ ಬಳಿಕ ತಮ್ಮಿಂದ ಹಣ ಪಡೆದ ರಾಜಕಾರಣಿಗಳು, ಅಧಿಕಾರಿಗಳ ಹೆಸರನ್ನು ಕೋರ್ಟ್‌ ಮತ್ತು ಎಸ್‌ಐಟಿ ಅಧಿಕಾರಿಗಳ ಮುಂದೆ ಬಹಿರಂಗಪಡಿಸುವುದಾಗಿಯೂ ಹೇಳಿದ್ದರು.

ಖಾನ್‌ ಈಗ ಹೊಸ ಹೆಸರುಗಳನ್ನು ಬಹಿರಂಗಪಡಿಸಬಹುದೆಂದು ನಿರೀಕ್ಷಿಸಲಾಗಿದೆ. ಹಾಗೇನಾದರೂ ಆದಲ್ಲಿ ಇನ್ನಷ್ಟು ‘ತಲೆ ದಂಡ’ ಆಗಬಹುದು ಎಂದು ಭಾವಿಸಲಾಗಿದೆ.

ಐಎಂಎ ಹಗರಣದ ಬಗ್ಗೆ ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT