ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

33 ಲೋಪ | ಕೆಪಿಎಸ್‌ಸಿ ಮೌನ: ಮರು ಪರೀಕ್ಷೆ, ತಪ್ಪಿತಸ್ಥರ ಮೇಲೆ ಕ್ರಮಕ್ಕೆ ಹಿಂದೇಟು

Published : 29 ಸೆಪ್ಟೆಂಬರ್ 2024, 23:30 IST
Last Updated : 29 ಸೆಪ್ಟೆಂಬರ್ 2024, 23:30 IST
ಫಾಲೋ ಮಾಡಿ
Comments

ಬೆಂಗಳೂರು: ಗೆಜೆಟೆಡ್‌ ಪ್ರೊಬೇಷನರಿ 384 ಹುದ್ದೆಗಳ ನೇಮಕಾತಿಗೆ ಆಗಸ್ಟ್‌ 27ರಂದು ನಡೆದ ಪೂರ್ವಭಾವಿ ಪರೀಕ್ಷೆಯ ಕನ್ನಡ ಪ್ರಶ್ನೆಪತ್ರಿಕೆಗಳಲ್ಲಿ, ಇಂಗ್ಲಿಷ್‌ನಿಂದ ಕನ್ನಡಕ್ಕೆ ಅನುವಾದಿಸಿದ ಪ್ರಶ್ನೆಗಳ ಪೈಕಿ ಒಟ್ಟು 33ರಲ್ಲಿ ಭಾಷಾಂತರ ವ್ಯತ್ಯಾಸ ಆಗಿದೆ ಎಂದು ಮೂವರು ವಿಷಯ ತಜ್ಞರ ಸಮಿತಿ ಕರ್ನಾಟಕ ಲೋಕಸೇವಾ ಆಯೋಗಕ್ಕೆ (ಕೆಪಿಎಸ್‌ಸಿ) ವರದಿ ನೀಡಿದೆ.

ಪ್ರಶ್ನೆ ಪತ್ರಿಕೆ 1 ಮತ್ತು 2ರಲ್ಲಿ ಆಗಿರುವ ಲೋಪಗಳ ಕುರಿತು ತಜ್ಞರ ಸಮಿತಿ ವಿವರವಾದ ವರದಿ ನೀಡಿದ್ದರೂ ಈ ಲೋಪ ಎಸಗಿದ ಅಧಿಕಾರಿ, ನೌಕರರ ಮೇಲೆ ಕ್ರಮ ತೆಗೆದುಕೊಳ್ಳಲು ಮತ್ತು ಮರು ಪರೀಕ್ಷೆಗೆ ದಿನಾಂಕ ಘೋಷಿಸಲು ಕೆಪಿಎಸ್‌ಸಿ ಹಿಂದೇಟು ಹಾಕುತ್ತಿದೆ. ಕೆಪಿಎಸ್‌ಸಿಯ ಈ ನಡೆ ಪುನಃ ಪರೀಕ್ಷೆ ಬರೆಯಲು ಕಾಯುತ್ತಿರುವ 2 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳನ್ನು ಹತಾಶರನ್ನಾಗಿ ಮಾಡಿದೆ.

ಪ್ರಶ್ನೆಪತ್ರಿಕೆಯಲ್ಲಿನ ಕನ್ನಡ ಅನುವಾದ ದೋಷಗಳಿಗೆ ಪರೀಕ್ಷಾರ್ಥಿಗಳು ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರವೂ ಸೇರಿದಂತೆ ಕನ್ನಡ ಪರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಕಾರಣ, ಮುಂದಿನ ಎರಡು ತಿಂಗಳ ಒಳಗೆ ಮರು ಪರೀಕ್ಷೆ ನಡೆಸುವಂತೆ  ಕೆಪಿಎಸ್‌ಸಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೆ.2ರಂದೇ ಸೂಚನೆ ನೀಡಿದ್ದರು. ಅಲ್ಲದೆ, ಈ ಲೋಪಗಳಿಗೆ ಕಾರಣರಾದ ಅಧಿಕಾರಿಗಳನ್ನು ಕರ್ತವ್ಯದಿಂದ ಬಿಡುಗಡೆ ಮಾಡಲಾಗುವುದು ಎಂದೂ ಹೇಳಿದ್ದರು.

ತಜ್ಞರ ವರದಿಯನ್ನು ರಾಜ್ಯ ಸರ್ಕಾರಕ್ಕೆ ಈಗಾಗಲೇ ಸಲ್ಲಿಸಿರುವ ಕೆಪಿಎಸ್‌ಸಿ, ಸರ್ಕಾರ ನೀಡುವ ಆದೇಶದಂತೆ ಮುಂದುವರಿಯಲು ನಿರ್ಣಯ ತೆಗೆದುಕೊಂಡಿದೆ. ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ತಜ್ಞರ ವರದಿಯ ಕುರಿತು ಚರ್ಚಿಸಲು ಕೂಡಾ ಆಯೋಗ ತೀರ್ಮಾನಿಸಿದೆ.

‘ಭಾಷಾಂತರದಲ್ಲಿ ವ್ಯತ್ಯಾಸವಿದೆಯೆಂದು ಅಭ್ಯರ್ಥಿಗಳು ಆಕ್ಷೇಪ ವ್ಯಕ್ತಪಡಿಸಿದ್ದ ಎಲ್ಲ 57 ಪ್ರಶ್ನೆ– ಉತ್ತರಗಳನ್ನು ಪರಿಶೀಲಿಸಿದ್ದ ವಿಷಯ ತಜ್ಞರ ಸಮಿತಿ, 33 ತಪ್ಪುಗಳನ್ನು ಗುರುತಿಸಿದ್ದರೂ ಆರು ಪ್ರಶ್ನೆಗಳಿಗೆ ಮಾತ್ರ ಕೃಪಾಂಕ ನೀಡಬಹುದು. ಉಳಿದವುಗಳನ್ನು ಅರ್ಥೈಸಿಕೊಂಡು ಅಭ್ಯರ್ಥಿ ಸರಿಯಾದ ಉತ್ತರಗಳನ್ನು ಗುರುತಿಸಬಹುದು’ ಎಂಬ ವಿಷಯ ತಜ್ಞರ ಅಭಿಪ್ರಾಯದ ಕುರಿತು ಆಯೋಗದ ಸಭೆಯಲ್ಲಿ ಗಂಭೀರ ಚರ್ಚೆಯಾಗಿದೆ. ಜೊತೆಗೆ, ಈ ತಪ್ಪುಗಳಿಗೆ ಕಾರಣರಾದವರ ಮೇಲೆ ಕ್ರಮ ತೆಗೆದುಕೊಳ್ಳಲು ಮತ್ತು ಮರು ಪರೀಕ್ಷೆಯ ದಿನಾಂಕವನ್ನು ತಕ್ಷಣ ಘೋಷಿಸಬೇಕೆಂದು ಆಯೋಗದ ಬಹುತೇಕ ಸದಸ್ಯರು ಸಭೆಯಲ್ಲಿ ಪಟ್ಟು ಹಿಡಿದಿದ್ದರು. ಆದರೆ, ಈ ಎರಡೂ ವಿಚಾರಗಳಲ್ಲಿ ನಿರ್ಣಯ ಕೈಗೊಳ್ಳದಿರುವುದಕ್ಕೆ ಸದಸ್ಯರ ನಡುವೆ ಕಾವೇರಿದ ವಾಗ್ವಾದವೂ ನಡೆದಿದೆ. ಆದರೂ ಯಾವುದೇ ತೀರ್ಮಾನ ಆಗಿಲ್ಲ’ ಎಂದು ಕೆಪಿಎಸ್‌ಸಿ ಮೂಲಗಳು ತಿಳಿಸಿವೆ.

57 ಪ್ರಶ್ನೆ–ಉತ್ತರಗಳಲ್ಲಿ ಲೋಪ– ಆಕ್ಷೇಪ:

ಆಗಸ್ಟ್‌ 27ರಂದು ನಡೆದ ಪೂರ್ವಭಾವಿ ಪರೀಕ್ಷೆ ಬರೆದಿದ್ದ ಅಭ್ಯರ್ಥಿಗಳು, ಪ್ರಶ್ನೆಪತ್ರಿಕೆ 1ರಲ್ಲಿ 28 ಮತ್ತು ಪ್ರಶ್ನೆಪತ್ರಿಕೆ 2ರಲ್ಲಿ 29 ಸೇರಿ ಒಟ್ಟು 57 ಪ್ರಶ್ನೆಗಳಲ್ಲಿ ಲೋಪದೋಷಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ಗಳನ್ನು ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದರು. ಹೀಗಾಗಿ, ಈ ಕುರಿತು ಅಭಿಪ್ರಾಯ ಪಡೆಯಲು ವಿಷಯ ತಜ್ಞರ ಸಮಿತಿಯನ್ನು ಕೆಪಿಎಸ್‌ಸಿ ನೇಮಿಸಿತ್ತು. ಜೊತೆಗೆ, ಎರಡೂ ಪ್ರಶ್ನೆಪತ್ರಿಕೆಗಳ ಕೀ ಉತ್ತರಗಳನ್ನು (ಸರಿ ಉತ್ತರ) ಆಯೋಗದ ಜಾಲತಾಣದಲ್ಲಿ ಪ್ರಕಟಿಸಿ, ಈ ಕೀ ಉತ್ತರಗಳಿಗೆ ಆಕ್ಷೇಪಣೆಗಳಿದ್ದರೆ ಸಲ್ಲಿಸಲು ಸೆ.4ರವರೆಗೆ ಅವಕಾಶ ನೀಡಿತ್ತು. 

ಈ 57 ಪ್ರಶ್ನೆಗಳಿಗೆ ಆಯೋಗ ಪ್ರಕಟಿಸಿದ್ದ ಕೀ ಉತ್ತರ, ಭಾಷಾಂತರದಲ್ಲಿ ವ್ಯತ್ಯಾಸ ಆಗಿದೆಯೇ? ಭಾಷಾಂತರ ವ್ಯತ್ಯಾಸವಾಗಿದ್ದರೆ ಕೃಪಾಂಕ ನೀಡಬೇಕೇ ಅಥವಾ ಕೀ ಉತ್ತರ ಪರಿಷ್ಕರಿಸಬೇಕೇ? ಭಾಷಾಂತರದಲ್ಲಿ ವ್ಯತ್ಯಾಸ ಇಲ್ಲದಿದ್ದರೂ ಪರಿಷ್ಕೃತಗೊಳ್ಳಲಿರುವ ಕೀ ಉತ್ತರಗಳ ಕುರಿತು ಪರಿಶೀಲಿಸಿ ತಜ್ಞರ ಸಮಿತಿಯು ಆಯೋಗಕ್ಕೆ ತನ್ನ ಅಭಿಪ್ರಾಯವನ್ನು ನೀಡಿದೆ.

ಈ ಕುರಿತು ಪ್ರತಿಕ್ರಿಯೆ ಪಡೆಯಲು ಕೆಪಿಎಸ್‌ಸಿ ಕಾರ್ಯದರ್ಶಿ ಕೆ. ರಾಕೇಶ್‌ ಕುಮಾರ್‌ ಮತ್ತು ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌ ಅವರನ್ನು ಸಂಪರ್ಕಿಸಲು ಯತ್ನಿಸಿದರೂ ಅವರು ಸಂಪರ್ಕಕ್ಕೆ ಲಭ್ಯರಾಗಲಿಲ್ಲ.

ವಿಷಯ ತಜ್ಞರ ವರದಿಯಲ್ಲಿ ಏನಿದೆ?
ಪತ್ರಿಕೆ 1ರಲ್ಲಿ ಒಟ್ಟು 18 ಪ್ರಶ್ನೆಗಳಲ್ಲಿ ಭಾಷಾಂತರದಲ್ಲಿ ಎಡವಟ್ಟು ಆಗಿದೆ. ಆದರೆ, ಈ ಪೈಕಿ ಭಾಷಾಂತರದ ತಪ್ಪಿನಿಂದಾಗಿ ಉತ್ತರಿಸಲು ಆಯ್ಕೆಗಳು ಇಲ್ಲದ ಕಾರಣ 2 ಪ್ರಶ್ನೆಗಳಿಗೆ ಕೃಪಾಂಕ ನೀಡುವ ಅವಶ್ಯಕತೆಯಿದೆ. ಅದರಲ್ಲೂ ಒಂದು ಪ್ರಶ್ನೆಯಲ್ಲಿ ಪದಗಳ ತಪ್ಪು ಬಳಕೆಯ ಕಾರಣಕ್ಕೆ ಕೃಪಾಂಕ ನೀಡಬಹುದು. ಕೆಲವು ಪ್ರಶ್ನೆಗಳಲ್ಲಿ ಭಾಷಾಂತರದಲ್ಲಿ ವ್ಯತ್ಯಾಸ ಆಗಿದ್ದರೂ ಕೀ ಉತ್ತರದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ ಎಂದು ತಿಳಿಸಿದೆ. ಇನ್ನು ಪತ್ರಿಕೆ 2ರಲ್ಲಿ 15 ಪ್ರಶ್ನೆಗಳಲ್ಲಿ ಭಾಷಾಂತರದಲ್ಲಿ ವ್ಯತ್ಯಾಸವಾಗಿದೆ. ಅದರಲ್ಲಿ ನಾಲ್ಕು ಪ್ರಶ್ನೆಗಳಿಗೆ ಕೃಪಾಂಕ ನೀಡಬೇಕು. ಉಳಿದ ಪ್ರಶ್ನೆಗಳಿಗೆ ಭಾಷಾಂತರದ ಸಮಸ್ಯೆ ಇದ್ದರೂ ಕೀ ಉತ್ತರದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಹೀಗಾಗಿ ಕೃಪಾಂಕ ನೀಡಬೇಕಿಲ್ಲ ಎಂದು ವರದಿಯಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT