ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಧಕಿಯರಿಗೆ ಸಲಾಂ: ಗ್ರಾಮೀಣ ಕಲ್ಯಾಣ 'ದಿಲ್ ಷಾದ್' ಪಣ

ಸಮನ್ವಯದ ಗ್ರಾಮೀಣ ನಾಯಕಿ ದಿಲ್ಶಾದ್ ಬೇಗಂ
Last Updated 15 ಅಕ್ಟೋಬರ್ 2018, 2:03 IST
ಅಕ್ಷರ ಗಾತ್ರ

ಬೈಂದೂರು: ಮಹಿಳೆಯರ ಶಿಕ್ಷಣ ಮತ್ತು ಸಬಲೀಕರಣಕ್ಕೆ ಅಷ್ಟಾಗಿ ತೆರೆದುಕೊಳ್ಳದ, ಸಾರ್ವಜನಿಕ ಕ್ಷೇತ್ರದಿಂದ ದೂರವೇ ಉಳಿಯುತ್ತಿರುವ ಗ್ರಾಮೀಣ ಮುಸ್ಲಿಂ ಸಮುದಾಯದಲ್ಲಿ ಜನನ. ಎಸ್ಸೆಸ್ಸೆಲ್ಸಿವರೆಗೆ ಶಿಕ್ಷಣ; ಗೃಹಿಣಿಯಾಗಿ ಕುಟುಂಬ ನಿರ್ವಹಣೆ; ಮಕ್ಕಳ ಶಿಕ್ಷಣಕ್ಕೆ ಆದ್ಯತೆ; ಜತೆಗೆ ಸಾರ್ವಜನಿಕ ಸೇವೆ; ಗ್ರಾಮ ಪಂಚಾಯಿತಿಯಲ್ಲಿ 17 ವರ್ಷ ಸದಸ್ಯ ಸ್ಥಾನ; ಅದರಲ್ಲಿ ಎರಡೂವರೆ ವರ್ಷಗಳ ಒಂದು ಅವಧಿಗೆ ಉಪಾಧ್ಯಕ್ಷೆ; ಎರಡೂವರೆ ವರ್ಷಗಳ ಎರಡು ಅವಧಿಗಳಿಗೆ ಅಧ್ಯಕ್ಷೆ; ಈಗ ಚಾಲ್ತಿಯಲ್ಲಿರುವ ಐದು ವರ್ಷಗಳ ಅವಧಿಗೂ ಅಧ್ಯಕ್ಷೆ

ಇಷ್ಟು ಹೇಳಿದರೆ, ಪರಿಚಿತರ ಕಣ್ಣಮುಂದೆ ನಿಲ್ಲುವವರು ಶಿರೂರು ಗ್ರಾಮ ಪಂಚಾಯಿತಿಯ ಅಧ್ಯಕ್ಷೆ ಜಿ.ಯು. ದಿಲ್‍ಶಾದ್ ಬೇಗಂ.

ಶಿರೂರು ಗ್ರಾಮ ಪಂಚಾಯಿತಿ ಎಂದಾಗ ಅದರ ಸಂಕೀರ್ಣತೆ, ಸವಾಲುಗಳ ಅರಿವಾಗುತ್ತದೆ. ಅದು ಅವಿಭಜಿತ ಕುಂದಾಪುರ ತಾಲ್ಲೂಕಿನ ಅತ್ಯಂತ ದೊಡ್ಡ ಗ್ರಾಮ ಪಂಚಾಯಿತಿ. ಅಲ್ಲಿನ ಜನಸಂಖ್ಯೆ 17,432; ಭೂವಿಸ್ತಾರ 3624 ಹೆಕ್ಟೇರ್. 4,145 ಕುಟುಂಬಗಳ ವಾಸಸ್ಥಾನ.

ಪಂಚಾಯಿತಿಯ ಸದಸ್ಯ ಬಲ 44. ಮಹಿಳೆಯರದ್ದ ಮತ್ತು ಪುರುಷರದ್ದು ಸಮಾನ ಸಂಖ್ಯೆ. 16 ಜನ ಅಲ್ಪಸಂಖ್ಯಾತ ಸದಸ್ಯರಲ್ಲಿ 9 ಪುರುಷರು, 7 ಮಹಿಳೆಯರು. ಅವರೆಲ್ಲ ಮೂರು ಪ್ರತ್ಯೇಕ ರಾಜಕೀಯ ಪಕ್ಷಗಳ ಬೆಂಬಲದಿಂದ ಆಯ್ಕೆಯಾದವರು. ಎಲ್ಲರನ್ನು ಒಗ್ಗೂಡಿಸಿಕೊಂಡು ಸಮನ್ವಯದಿಂದ ನಡೆಯುತ್ತಿರುವುದರಿಂದ ಅಭಿವೃದ್ಧಿ ಸಾಧ್ಯವಾಗಿದೆ ಎನ್ನುತ್ತಾರೆ ದಿಲ್‍ಶಾದ್ ಬೇಗಂ.

ಅಧ್ಯಕ್ಷರಿಗೆ ನೀಡಲಾಗುವ ಎಲ್ಲ ತರಬೇತಿಗಳಲ್ಲಿ ಉತ್ಸುಕತೆಯಿಂದ ಅವರು ಭಾಗವಹಿಸುತ್ತಾರೆ. ಮಧ್ಯ ಪ್ರದೇಶದ ಭೋಪಾಲ್‌ನಲ್ಲಿ ನಡೆದ ಮಹಿಳಾ ಸದಸ್ಯರ ಸಬಲೀಕರಣ ತರಬೇತಿಗೂ ಹೋಗಿ ಬಂದಿದ್ದಾರೆ.

ಮಹಿಳಾ ಮೀಸಲಾತಿಯಡಿ ಸದಸ್ಯೆ, ಉಪಾಧ್ಯಕ್ಷೆ, ಅಧ್ಯಕ್ಷೆ ಹುದ್ದೆ ಲಭಿಸಿದ್ದರೂ, ಅವುಗಳನ್ನು ನಿಭಾಯಿಸಲು ಬೇಕಾದ ಅರ್ಹತೆ, ಸಾಮರ್ಥ್ಯ ಅವರಲ್ಲಿವೆ. ಆಡಳಿತ, ಸಭೆ, ಅಭಿವೃದ್ಧಿ ಹೊಣೆಯನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ.

ರಾಜ್ಯಸಭಾ ಸದಸ್ಯ ಆಸ್ಕರ್ ಫರ್ನಾಂಡಿಸ್‌ ಅವರು ಸಂಸದರ ಆದರ್ಶ ಗ್ರಾಮ ಯೋಜನೆಗೆ ಶಿರೂರನ್ನು ಆಯ್ಕೆ ಮಾಡಿಕೊಂಡು ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ನೀಡಿದ್ದಾರೆ. ಆಸ್ಪತ್ರೆಗೆ ಹೊಸ ಕಟ್ಟಡ ನಿರ್ಮಾಣವಾಗಿದೆ. ಪ್ರಸಕ್ತ ಅವಧಿಯ ಉಳಿದ ಎರಡು ವರ್ಷಗಳಲ್ಲಿ ಇನ್ನಷ್ಟು ಸಾಧಿಸಬೇಕು ಎನ್ನುವ ಅವರ ಸಾಧನೆ, ನಿರ್ವಹಣೆ ಮಹಿಳಾ ಸಾಮರ್ಥ್ಯದ ಅತ್ಯುತ್ತಮ ಮಾದರಿಗಳಲ್ಲಿ ಒಂದು ಎನ್ನುವಂತಿದೆ.

****

ಸಮುದ್ರದ ನೀರನ್ನು ಕುಡಿಯುವ ನೀರಾಗಿ ಪರಿವರ್ತಿಸುವ ಘಟಕ ಸ್ಥಾಪನೆಯ ಪ್ರಸ್ತಾವನೆ ಸರ್ಕಾರದ ಮುಂದಿದೆ. ಆಗಿರುವುದು ಕಡಿಮೆ. ಆಗಬೇಕಾಗಿರುವುದು ಅಪಾರ.
-ದಿಲ್‍ಶಾದ್ ಬೇಗಂ
ಶಿರೂರು ಗ್ರಾ.ಪಂ. ಅಧ್ಯಕ್ಷೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT