ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನ: ಮಾನವ ಸರಪಳಿ ಕಾರ್ಯಕ್ರಮಕ್ಕೆ ಸಿಎಂ ಚಾಲನೆ

Published : 15 ಸೆಪ್ಟೆಂಬರ್ 2024, 6:42 IST
Last Updated : 15 ಸೆಪ್ಟೆಂಬರ್ 2024, 6:42 IST
ಫಾಲೋ ಮಾಡಿ
Comments

ಬೆಂಗಳೂರು: ರಾಜ್ಯದ ಶಕ್ತಿ ಕೇಂದ್ರ ವಿಧಾನಸೌಧದ ಆವರಣದಲ್ಲಿ ಒಂದೆಡೆ ಪೌರಕಾರ್ಮಿಕರು, ಇನ್ನೊಂದೆಡೆ ಐಎಎಸ್‌ ಅಧಿಕಾರಿಗಳು, ಸರ್ಕಾರಿ ಮತ್ತು ಖಾಸಗಿ ಶಾಲಾ ವಿದ್ಯಾರ್ಥಿಗಳು, ಲೈಂಗಿಕ ಅಲ್ಪಸಂಖ್ಯಾತರು, ಕಲಾವಿದರು, ಆಟೊ ಚಾಲಕರು, ಮುಖ್ಯಮಂತ್ರಿ ಮತ್ತು ಸಚಿವರು ಪರಸ್ಪರ ಕೈಹಿಡಿದು ಬೀದರ್‌ನಿಂದ ಚಾಮರಾಜನಗರದವರೆಗಿನ 2,500 ಕಿ.ಮೀ. ಉದ್ದದ ಮಾನವ ಸರಪಳಿಯನ್ನು ಬೆಸೆದರು.

ವಿಶ್ವ ಪ್ರಜಾಪ್ರಭುತ್ವ ದಿನಾಚರಣೆಯ ಭಾಗವಾಗಿ ಸಮಾಜ ಕಲ್ಯಾಣ ಇಲಾಖೆ ಆಯೋಜಿಸಿದ್ದ, ಎಲ್ಲ ಜಿಲ್ಲೆಗಳನ್ನು ಬೆಸೆದ ಈ ಸರಪಳಿಗೆ 22 ಲಕ್ಷಕ್ಕೂ ಹೆಚ್ಚು ಜನರು ಕೊಂಡಿಯಾದರು. 

ರಾಜ್ಯದ ಎಲ್ಲ ಇಲಾಖೆಗಳ ನೌಕರರು, ಶಾಲಾ–ಕಾಲೇಜು ವಿದ್ಯಾರ್ಥಿಗಳು, ರಾಜಕೀಯ ಪಕ್ಷಗಳ ಕಾರ್ಯಕರ್ತರು ಮೊದಲೇ ಸಿದ್ಧವಾಗಿದ್ದರು. ಬೆಳಿಗ್ಗೆ 9.57ರಿಂದ 9.59ರವರೆಗೆ ಪರಸ್ಪರ ಕೈಹಿಡಿದು, ‘ವಿಶ್ವದ ಅತ್ಯಂತ ಉದ್ದದ ಮಾನವ ಸರಪಳಿ’ ಎಂಬ ದಾಖಲೆ ನಿರ್ಮಿಸುವ ಯತ್ನ ಮಾಡಿದರು. ‘ಜೈಹಿಂದ್‌, ಜೈ ಕರ್ನಾಟಕ, ಜೈ ಪ್ರಜಾಪ್ರಭುತ್ವ’ ಎಂದು ಘೋಷಣೆ ಕೂಗಿ ವಿಶ್ವ ಪ್ರಜಾಪ್ರಭುತ್ವ ದಿನವನ್ನು ಸಂಭ್ರಮಿಸಿದರು.

ವಿಧಾನಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸಂವಿಧಾನದ ಪ್ರಸ್ತಾವನೆಯ ಓದು ಮತ್ತು ಪ್ರತಿಜ್ಞಾವಿಧಿ ಸ್ವೀಕರಿಸಲಾಯಿತು.

ಸಿದ್ದರಾಮಯ್ಯ ಮಾತನಾಡಿ, ‘ದೇಶದ ರಾಷ್ಟ್ರಪತಿಗೂ ಒಂದೇ ಮತ, ನನ್ನೊಂದಿಗೆ ನಿಂತಿರುವ ಪೌರ ಕಾರ್ಮಿಕ ಮಹಿಳೆಗೂ ಒಂದೇ ಮತ. ನಮ್ಮ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಎಲ್ಲರನ್ನೂ ಸಮಾನವಾಗಿ ನೋಡುತ್ತದೆ. ಪರಸ್ಪರ ಭೇದ ಮರೆತು ನಿರ್ಮಿಸಿದ ಈ ಮಾನವ ಸರಪಳಿ ಸರ್ವ ಸಮಾನತೆ ಸಾರುತ್ತದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT