ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಡಿತರ ವಿತರಣೆಗೆ ‘ಐರಿಸ್‌’ ಕಣ್ಗಾವಲು

ಪದಾರ್ಥಗಳು ಕಾಳಸಂತೆ ಪಾಲಾಗುವುದು ತಡೆಯಲು ಏಪ್ರಿಲ್‌ 1ರಿಂದ ಯಂತ್ರ ಅಳವಡಿಕೆ ಕಡ್ಡಾಯ
Last Updated 27 ಮಾರ್ಚ್ 2023, 20:17 IST
ಅಕ್ಷರ ಗಾತ್ರ

ಬೆಂಗಳೂರು: ಉಚಿತವಾಗಿ ವಿತರಿಸುವ ಪಡಿತರ ಪದಾರ್ಥಗಳು ಕಾಳಸಂತೆ ಪಾಲಾಗುವುದನ್ನು ತಡೆಯಲು, ಅರ್ಹ ಫಲಾನುಭವಿಗಳಿಗೇ ದೊರೆಯುವಂತೆ ಮಾಡಲು ನ್ಯಾಯಬೆಲೆ ಅಂಗಡಿಗಳಲ್ಲಿ ಏ.1ರಿಂದಲೇ ಐರಿಸ್‌ (ಕಣ್ಣಿನ ಪಾಪೆ) ಸ್ಕ್ಯಾನ್‌ ಕಡ್ಡಾಯಗೊಳಿಸಿ ಆಹಾರ ಇಲಾಖೆ ಆದೇಶ ಹೊರಡಿಸಿದೆ.

ಪ್ರತಿ ತಿಂಗಳು ಗ್ರಾಹಕರಿಗೆ ಪಡಿತರ ವಿತರಿಸಲು ನ್ಯಾಯಬೆಲೆ ಅಂಗಡಿಗಳಲ್ಲಿ ಬಯೋಮೆಟ್ರಿಕ್‌ ವ್ಯವಸ್ಥೆ ಅಳವಡಿಸಿಕೊಳ್ಳಲಾಗಿತ್ತು. ಜತೆಗೆ, ಆಧಾರ್‌ಗೆ ಜೋಡಣೆ ಮಾಡಲಾಗಿದ್ದ ಮೊಬೈಲ್‌ ನಂಬರ್‌ಗೆ ಕಳುಹಿಸುವ ಒಟಿಪಿ ಪಡೆದು ಗ್ರಾಹಕರ ಕುಟುಂಬದ ಒಬ್ಬ ಸದಸ್ಯ ಅಥವಾ ಅವರು ಸೂಚಿಸಿದವರ ಬಳಿ ಪಡಿತರ ಪದಾರ್ಥಗಳನ್ನು ನೀಡಲಾಗುತ್ತಿತ್ತು. ಹಲವು ಗ್ರಾಹಕರು ದೂರದ ಊರುಗಳಲಿದ್ದರೂ, ಒಟಿಪಿ ನೀಡಿ ಪಡಿತರ ಪದಾರ್ಥಗಳನ್ನುಬೇರೆಯವರಿಗೆ ನೀಡುತ್ತಿದ್ದರು. ಇಲ್ಲವೇ, ನ್ಯಾಯಬೆಲೆ ಅಂಗಡಿ
ಗಳಿಗೇ ನೀಡಿ ಮರಳಿಸಿ, ಹಣ ಪಡೆಯುತ್ತಿದ್ದರು ಎಂಬ ದೂರುಗಳಿದ್ದವು. ಗ್ರಾಮೀಣಪ್ರದೇಶದಲ್ಲಿನ ಸರ್ವರ್‌ ಸಮಸ್ಯೆ, ಆಧಾರ್‌ಗೆ ನೀಡಿದ್ದ ಬೆರಳಚ್ಚುಗಳ ಪುನರಾವರ್ತನೆ, ಆಧಾರ್‌ಗೆ ಜೋಡಿಸಿದ್ದ ತಪ್ಪು ಮೊಬೈಲ್‌ ಸಂಖ್ಯೆಗಳಿಂದಾಗಿ ಒಟಿಪಿ ಪಡೆಯಲು ಪರದಾಟ
ಮತ್ತಿತರ ಕಾರಣಗಳಿಂದ ನೈಜ ಫಲಾನುಭವಿಗಳಿಗೆ ಪಡಿತರ ನೀಡಲು ಹಲವು ತೊಡಕುಗಳಿದ್ದವು.

ಬಯೊಮೆಟ್ರಿಕ್‌ ವಿಫಲತೆ, ಆಧಾರ್‌ಗೆ ಗ್ರಾಹಕರು ಜೋಡಿಸಿದ್ದ ತಪ್ಪು ಮೊಬೈಲ್‌ ಸಂಪರ್ಕದಿಂದಾಗಿ ಗ್ರಾಹಕರಿಗೆ ಸಮರ್ಪಕ
ವಾಗಿ ಪಡಿತರ ವಿತರಿಸಲು ಸಾಧ್ಯವಾಗಿರಲಿಲ್ಲ. 2022ರಲ್ಲಿ ಒಟಿಪಿ ದೊರೆಯದೇ ರಾಜ್ಯದಲ್ಲಿ ಪ್ರತಿ ತಿಂಗಳು 25 ಲಕ್ಷಕ್ಕೂ ಹೆಚ್ಚು ಗ್ರಹಕರಿಗೆ ಪಡಿತರ ವಿತರಣೆಯಲ್ಲಿ ವ್ಯತ್ಯಯವಾಗಿತ್ತು. ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಈ ಸಮಸ್ಯೆ ಇತ್ತು. ಅದಕ್ಕಾಗಿ ಅತ್ಯಾಧುನಿಕ ಐರಿಸ್‌
ಸ್ಕ್ಯಾನ್‌ ಸಾಧನಗಳ ಅಳವಡಿಕೆ ಕಡ್ಡಾಯಗೊಳಿಸಲಾಗಿದೆ ಎಂದು ಆದೇಶದಲ್ಲಿ ವಿವರಿಸಲಾಗಿದೆ.

ವಿತರಣಾ ಕೇಂದ್ರಗಳಿಗೆ ಹೊರೆ: ಮಾರುಕಟ್ಟೆಯಲ್ಲಿ ₹5 ಸಾವಿರದಿಂದ ₹20 ಸಾವಿರದವರೆಗೂ ಐರಿಸ್‌ ಸಾಧನಗಳು ದೊರೆಯುತ್ತಿವೆ. ನ್ಯಾಯಬೆಲೆ ಅಂಗಡಿಗಳೇ ಹಣಕೊಟ್ಟು ಸಾಧನಗಳನ್ನು ಸ್ವಂತಕ್ಕೆ ಖರೀದಿಸಲು ಸೂಚಿಸಲಾಗಿದೆ. ಕೋವಿಡ್‌ ಸಂಕಷ್ಟದ ಸಮಯದಲ್ಲಿ ಜಾರಿಗೆ ತಂದಿದ್ದ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆ ಸ್ಥಗಿತವಾಗಿದೆ. ಸದ್ಯಕ್ಕೆ ಪಡಿತರ ಕಾರ್ಡ್‌ ಹೊಂದಿರುವ ಪ್ರತಿ ಸದಸ್ಯರಿಗೆ 6 ಕೆ.ಜಿ ಅಕ್ಕಿ ದೊರೆಯುತ್ತದೆ. ಪಡಿತರ ಪ್ರಮಾಣ ಶೇ 40ರಷ್ಟು ಕಡಿಮೆ
ಯಾಗಿದ್ದು, ನ್ಯಾಯಬೆಲೆ ಅಂಗಡಿಗಳ ವರಮಾನವೂ ಕುಸಿದಿರುವ ಕಾರಣ ಇಂತಹ ಸಮಯದಲ್ಲಿ ಐರಿಸ್‌ ಸಾಧನ ಖರೀದಿಸಲು ಆರ್ಥಿಕ ಹೊರೆಯಾಗುತ್ತದೆ ಎನ್ನುವುದು ನ್ಯಾಯಬೆಲೆ ಅಂಗಡಿ ಮಾಲೀಕ ಅಳಲು.

ಐರಿಸ್‌ ಸ್ಕ್ಯಾನ್‌ ಹೇಗೆ?

ಪಡಿತರಚೀಟಿ ಹೊಂದಿರುವ ಕುಟುಂಬದ ಎಲ್ಲ ಸದಸ್ಯರ ಕಣ್ಣನ್ನು ಒಂದು ಬಾರಿ ಐರಿಸ್ ಯಂತ್ರದಲ್ಲಿ ಸ್ಕ್ಯಾನ್‌ ಮಾಡಿ ಕಣ್ಣಿನ ಗುರುತನ್ನು ಸಂಗ್ರಹಿಸಲಾಗುತ್ತದೆ. ಪಡಿತರ ಚೀಟಿಯಲ್ಲಿ ಹೆಸರಿರುವ ಕುಟುಂಬದ ಯಾವುದೇ ಸದಸ್ಯರು ಪ್ರತಿ ತಿಂಗಳು ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ, ಯಂತ್ರದ ಮುಂದೆ ನಿಂತಾಗ ಅವರಿಗೆ ನೀಡುವ ಪಡಿತರದ ಪ್ರಮಾಣದ ವಿವರ ಕಂಪ್ಯೂಟರ್‌ನಲ್ಲಿ ಮೂಡುತ್ತದೆ. ಅದಕ್ಕೆ ಅನುಗುಣವಾಗಿ ಪಡಿತರ ಪದಾರ್ಥ ವಿತರಿಸಲಾಗುತ್ತದೆ.

***

ಪ್ರತಿ ಕ್ವಿಂಟಲ್‌ ಅಕ್ಕಿಗೆ ₹ 124 ಕಮಿಷನ್‌ ಸಿಗುತ್ತದೆ. ಪಡಿತರ ಕಡಿತದ ನಂತರ ಮಳಿಗೆ ಬಾಡಿಗೆ ಕಟ್ಟಲು ಆಗಿಲ್ಲ. ಸರ್ಕಾರವೇ ಯಂತ್ರ ನೀಡಬೇಕು.

-ಟಿ.ಕೃಷ್ಣಪ್ಪಅಧ್ಯಕ್ಷರು, ನ್ಯಾಯಬೆಲೆ ಅಂಗಡಿಗಳ ಮಾಲೀಕರ ಸಂಘ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT