ಬೆಳಗಾವಿ: ‘ಗ್ಯಾರಂಟಿ ಯೋಜನೆಗಳನ್ನು ಸ್ಥಗಿತಗೊಳಿಸುವ ಚಿಂತನೆ ನಡೆದಿಲ್ಲ. ಇದು ಜನರ ಅಭಿಪ್ರಾಯ ಅಷ್ಟೇ’ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ನಗರದಲ್ಲಿ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಗ್ಯಾರಂಟಿ ಯೋಜನೆ ಸ್ಥಗಿತಗೊಳಿಸಲು ನಾನೇ ಹೇಳಿದ್ದೇನೆಂದು ಸುದ್ದಿ ಬರುತ್ತಿದೆ. ನಾನು ಆ ಮಾತು ಹೇಳಿಲ್ಲ. ಜನರ ಅಭಿಪ್ರಾಯದ ಮೇರೆಗೆ ಸರ್ಕಾರ ನಿರ್ಧಾರ ತೆಗೆದುಕೊಳ್ಳಲಿದೆ. ಜನ ಗ್ಯಾರಂಟಿ ಇರಲಿ ಎಂದರೆ ಮುಂದುವರೆಯುತ್ತವೆ. ಅವರೇ ಬೇಡವೆಂದರೆ ನಿಲ್ಲಿಸುವ ನಿರ್ಧಾರ ಕೈಗೊಳ್ಳಲಾಗುವುದು’ ಎಂದರು.
‘ಐದು ವರ್ಷ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಇರುತ್ತಾರೆ. ಬದಲಾವಣೆಯ ಸಂದರ್ಭವೇ ಬಂದಿಲ್ಲ. ಸಂಪುಟ ವಿಸ್ತರಣೆ ವರಿಷ್ಠರಿಗೆ ಬಿಟ್ಟಿದ್ದು. ನಮ್ಮ ಪಾತ್ರ ಅದರಲ್ಲಿ ಏನೂ ಇರುವುದಿಲ್ಲ’ ಎಂದರು.