ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಪಿಎಂಸಿ | ದಲ್ಲಾಳಿಗಳ ಹಾವಳಿ ತಡೆಗೆ ಸೂಚನೆ: ಶಿವಾನಂದ ಪಾಟೀಲ

ವಂಚನೆ ಹೆಚ್ಚಳ–ಆದಾಯ ಕುಸಿತದ ಬಗ್ಗೆ ಕಳವಳ
Published 9 ಫೆಬ್ರುವರಿ 2024, 15:58 IST
Last Updated 9 ಫೆಬ್ರುವರಿ 2024, 15:58 IST
ಅಕ್ಷರ ಗಾತ್ರ

ಬೆಂಗಳೂರು: ಕೆಲವು ಕೃಷಿ ಉತ್ಪನ್ನ ಮಾರುಕಟ್ಟೆ(ಎಪಿಎಂಸಿ)ಗಳಲ್ಲಿ ದಲ್ಲಾಳಿಗಳು ರೈತರಿಂದ ಹೆಚ್ಚುವರಿ ಕಮಿಷನ್‌ ಪಡೆಯುತ್ತಿರುವ, ಸರ್ಕಾರದ ಸವಲತ್ತುಗಳು ಮತ್ತು ವ್ಯಾಪಾರ ಪರವಾನಗಿ ಪಡೆದಿರುವ ದೂರುಗಳು ಬಂದಿದ್ದು ಅಂತಹ ಪರವಾನಗಿಗಳನ್ನು ಗುರುತಿಸಿ ರದ್ದುಪಡಿಸಬೇಕು ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಎಸ್‌. ಪಾಟೀಲ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದ ಅವರು, ಮಾರುಕಟ್ಟೆ ಶುಲ್ಕ ವಂಚನೆಯ ದೂರುಗಳು ಹೆಚ್ಚಾಗುತ್ತಿವೆ. ಎಪಿಎಂಸಿಗಳ ಆದಾಯವೂ ಕಡಿಮೆಯಾಗುತ್ತಿದೆ. ಎಲ್ಲಿ ಸೋರಿಕೆ ಆಗುತ್ತಿದೆ ಎಂಬುದನ್ನು ಪತ್ತೆ ಮಾಡಿ ತಡೆಗಟ್ಟಬೇಕು ಎಂದು ನಿರ್ದೇಶನ ನೀಡಿದರು.

ವಂಚನೆ ತಡೆಗೆ ವಿಚಕ್ಷಣ ದಳಗಳನ್ನು ಮತ್ತೆ ಸಕ್ರಿಯಗೊಳಿಸಲಾಗುವುದು. ಯಾವುದೇ ಕೃಷಿ ಉತ್ಪನ್ನ ಮಾರುಕಟ್ಟೆಗಳಿಂದ ರೈತರ ಶೋಷಣೆಯ ದೂರುಗಳು ಬರಬಾರದು. ಎಪಿಎಂಸಿಗಳು ರೈತ ಸ್ನೇಹಿಯಾಗಿರಬೇಕು, ಆರ್ಥಿಕ ಅಪರಾಧಗಳಿಗೆ ಅವಕಾಶ ನೀಡಬಾರದು. ಆರ್ಥಿಕವಾಗಿ ಸದೃಢಗೊಳಿಸಬೇಕು ಎಂದು ತಿಳಿಸಿದರು.

ಮಾರುಕಟ್ಟೆ ಶುಲ್ಕ ಸಂಗ್ರಹ ಗುರಿ ಸಾಧನೆ ತಲುಪಲು ಸಾಧ್ಯವಾಗದಿರುವುದಕ್ಕೆ ಬರ ಪರಿಸ್ಥಿತಿ ಕಾರಣ ಎಂಬ ಸಬೂಬು ಹೇಳಲಾಗುತ್ತಿದೆ. ಆದರೆ ಯಶವಂತಪುರ ಮಾರುಕಟ್ಟೆಗೆ ಈರುಳ್ಳಿ, ಬೆಳ್ಳುಳ್ಳಿ, ಬ್ಯಾಡಗಿ ಮತ್ತು ಹುಬ್ಬಳ್ಳಿ ಮಾರುಕಟ್ಟೆಗೆ ಮೆಣಸಿನಕಾಯಿ ದ್ವಿದಳ ಧಾನ್ಯಗಳ ಆವಕ ಹೆಚ್ಚಳವಾಗಿದೆ. ಈರುಳ್ಳಿ, ಬೆಳ್ಳುಳ್ಳಿ ಆವಕ ಪ್ರಮಾಣ ಮತ್ತು ಧಾರಣೆ ಗರಿಷ್ಠ ಮಟ್ಟ ತಲುಪಿದೆ. ಅದಕ್ಕೆ ತಕ್ಕಂತೆ ಶುಲ್ಕ ಸಂಗ್ರಹ ಪ್ರಮಾಣದಲ್ಲಿ ಏಕೆ ಏರಿಕೆ ಆಗಿಲ್ಲ ಎಂದು ಪ್ರಶ್ನಿಸಿದರು.

ಅಡಕೆ ಆವಕ ಪ್ರಮಾಣ ಹೆಚ್ಚಳವಾಗಿದೆ. ಅಡಕೆ ಬೆಳೆಯುವ ಪ್ರದೇಶ ವಿಸ್ತಾರವೂ ಇದಕ್ಕೆ ಕಾರಣ ಇರಬಹುದು. ಅಡಕೆ ವಹಿವಾಟು ಇರುವ ಎಪಿಎಂಸಿಗಳಲ್ಲಿ ಗುರಿ ತಲುಪದಿರಲು ಏನು ಕಾರಣ ಎಂದು ಪ್ರಶ್ನಿಸಿದರು. ಶುಲ್ಕ ಸಂಗ್ರಹ ಗುರಿಯಲ್ಲಿ ತೀರಾ ಕಳಪೆ ಸಾಧನೆ ಮಾಡಿರುವುದಕ್ಕೆ ಲೋಪ ಏನೆಂದು ತಿಳಿದುಕೊಂಡು ಸರಿಯಾಗಿ ಕೆಲಸ ಮಾಡಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT