ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

5, 8ನೇ ತರಗತಿಗೆ ಬೋರ್ಡ್ ಪರೀಕ್ಷೆ ಬೇಡ: ಹೈಕೋರ್ಟ್

ಸರ್ಕಾರ ಹೊರಡಿಸಿದ್ದ ಸುತ್ತೋಲೆ ರದ್ದು
Last Updated 10 ಮಾರ್ಚ್ 2023, 19:32 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ಪಠ್ಯಕ್ರಮದ ಶಾಲೆಗಳ 5 ಮತ್ತು 8ನೇ ತರಗತಿಗಳ ವಿದ್ಯಾರ್ಥಿಗಳಿಗೆ ಶಾಲಾ ಮಟ್ಟದ ಮೌಲ್ಯಮಾಪನದ ಬದಲಾಗಿ ರಾಜ್ಯ ಮಟ್ಟದ ಮಂಡಳಿ (ಬೋರ್ಡ್) ಮೂಲಕ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರ ಹೊರಡಿಸಿದ್ದ ಸುತ್ತೋಲೆಯನ್ನು ಹೈಕೋರ್ಟ್ ರದ್ದುಪಡಿಸಿದೆ.

ಸುತ್ತೋಲೆಯನ್ನು ರದ್ದುಪಡಿಸುವಂತೆ ಕೋರಿ, ‘ಕರ್ನಾಟಕ ನೋಂದಾಯಿತ ಅನುದಾನ ರಹಿತ ಖಾಸಗಿ ಶಾಲೆಗಳ ಸಂಘ’ (ರುಪ್ಸಾ) ಹಾಗೂ ಇತರರು ಸಲ್ಲಿಸಿದ್ದ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಪ್ರದೀಪ್‌ ಸಿಂಗ್ ಯೆರೂರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಪುರಸ್ಕರಿಸಿದೆ.

‘ವಿದ್ಯಾರ್ಥಿಗಳ ಕಲಿಕೆಯ ಗುಣಮಟ್ಟ ಹಾಗೂ ಬುದ್ಧಿವಂತಿಕೆ ಪರೀಕ್ಷೆ ಮತ್ತು ಮೌಲ್ಯಮಾಪನದ ಕಾರ್ಯವಿಧಾನ ಸುಧಾರಿಸಲು ಸುತ್ತೋಲೆ ಹೊರಡಿಸಿರುವ ಸರ್ಕಾರದ ಉದ್ದೇಶ ಶ್ಲಾಘನೀಯವೇ ಸರಿ. ಆದರೆ, ಸುತ್ತೋಲೆ ಹೊರಡಿಸಲು ಅನುಸರಿಸಿದ ಪ್ರಕ್ರಿಯೆ ಮತ್ತು ವಿಧಾನಗಳು ಸೂಕ್ತವಾಗಿಲ್ಲ’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

‘ಇಂತಹ ವಿಧಾನವನ್ನು ಜಾರಿಗೆ ತರುವಾಗ, ರಾಜ್ಯ ಸರ್ಕಾರ ಅಥವಾ ಶಾಲೆಗಳು ನಿಯಮಗಳು ಹಾಗೂ ಪ್ರಕ್ರಿಯೆಗಳನ್ನು ಅಗತ್ಯವಾಗಿ ಅನುಸರಿಸಬೇಕು. ಯಾವುದೇ ಯೋಜನೆ ಕುರಿತು ಸುತ್ತೋಲೆ ಹೊರಡಿಸುವಾಗ, ಅದು ಶಾಸನಾತ್ಮಕ ತಳಹದಿಯಲ್ಲಿ ಇರಬೇಕು’ ಎಂದು ನ್ಯಾಯಪೀಠ ಹೇಳಿದೆ.

‘ಎಲ್ಲಿ ಬೇಕೆಂದರಲ್ಲಿ ಶಾಲೆಗಳು ನಾಯಿಕೊಡೆಗಳಂತೆ ತಲೆ ಎತ್ತುತ್ತಿರುವ ಇಂದಿನ ದಿನಮಾನಗಳಲ್ಲಿ ಒಂದನೇ ತರಗತಿಯಿಂದ 9ನೇ ತರಗತಿಯವರೆಗಿನ ಮಕ್ಕಳ ಬುದ್ಧಿವಂತಿಕೆ ತಪಾಸಣೆ, ಅಧ್ಯಯನದ ಗುಣಮಟ್ಟದಲ್ಲಿ ಸಮತೋಲನದ ಅಗತ್ಯವಿದೆ. ಹಾಗೆಯೇ, ಪರೀಕ್ಷಾ ಮೌಲ್ಯಮಾಪನದ ವಿಧಾನ ಮತ್ತು ಶಾಲೆಗಳ ಬೋಧನಾ ಸಿಬ್ಬಂದಿಯ ಮೌಲ್ಯಮಾಪನವು ಅವಶ್ಯವಿದೆ’ ಎಂದು ನ್ಯಾಯಪೀಠ ಹೇಳಿದೆ.

ಪ್ರಕರಣವೇನು?: 5 ಮತ್ತು 8ನೇ ತರಗತಿಗಳ ವಿದ್ಯಾರ್ಥಿಗಳಿಗೆ ರಾಜ್ಯ ಮಟ್ಟದ ಪರೀಕ್ಷೆ ನಡೆಸುವ ಕುರಿತು ಸರ್ಕಾರವು 2022ರ ಡಿಸೆಂಬರ್ 12, 13 ಮತ್ತು 2023ರ ಜನವರಿ 4ರಂದು ಸುತ್ತೋಲೆ ಹೊರಡಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT