ಬುಧವಾರ, 6 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧುಚಂದ್ರಕ್ಕೆ 60 ದಿನಗಳ ಹೈಕೋರ್ಟ್‌ ಪೆರೋಲ್‌

Published 2 ಮೇ 2023, 20:40 IST
Last Updated 2 ಮೇ 2023, 20:40 IST
ಅಕ್ಷರ ಗಾತ್ರ

ಬೆಂಗಳೂರು: ತನ್ನ ಪ್ರೇಯಸಿಯನ್ನು ಮದುವೆಯಾಗಲು ಕೊಲೆ ಅಪರಾಧಿಯೊಬ್ಬರಿಗೆ 15 ದಿನಗಳ ಅವಕಾಶ ಕಲ್ಪಿಸಿದ್ದ ಹೈಕೋರ್ಟ್‌ ಇದೀಗ; ಮಧುಚಂದ್ರ ಮತ್ತು ಇತರೆ ಧಾರ್ಮಿಕ ಕಾರ್ಯಕ್ರಮಗಳಿಗೆಂದು ಪೆರೋಲ್‌ ಅವಧಿಯನ್ನು 60 ದಿನಗಳ ಕಾಲ ವಿಸ್ತರಿಸಿದೆ. 

ಈ ಸಂಬಂಧ ಕೈದಿ ಆನಂದ್‌ ಎಂಬುವರು ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ಪುರಸ್ಕರಿಸಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ’ಅರ್ಜಿದಾರರು ಪೆರೋಲ್ ಅವಧಿಯಲ್ಲಿ ಪ್ರತಿ ಭಾನುವಾರ ಬೆಳಗ್ಗೆ 10ರಿಂದ ಸಂಜೆ 5 ಗಂಟೆಯೊಳಗೆ ಸಂಬಂಧಪಟ್ಟ ಠಾಣೆಗೆ ಹಾಜರಾಗಬೇಕು‘ ಎಂಬ ಷರತ್ತಿನೊಂದಿಗೆ ಅವಧಿ ವಿಸ್ತರಿಸಿದೆ.  

’ನಾನು ನನ್ನ ಪ್ರೇಯಸಿಯನ್ನು 2023ರ ಏಪ್ರಿಲ್‌ 11ರಂದು ನೋಂದಣಾಧಿಕಾರಿ ಸಮ್ಮುಖದಲ್ಲಿ ಕಾನೂನುಬದ್ಧವಾಗಿ ವಿವಾಹವಾಗಿದ್ದೇನೆ. ಆದರೆ, ನನ್ನ ಪತ್ನಿಯ ಕಡೆಯವರು ಹಿಂದೂ ಧರ್ಮದ ಸಂಪ್ರದಾಯಗಳಿಗೆ ಅನುಗುಣವಾಗಿ ಜೂನ್ ಮೊದಲ ವಾರದಲ್ಲಿ ಬಂಧು–ಬಾಂಧವರ ಉಪಸ್ಥಿತಿಯಲ್ಲಿ ಕಲ್ಯಾಣ ಮಂಟಪದಲ್ಲಿ ನಮ್ಮ ಲಗ್ನ ನೆರವೇರಿಸಲು ನಿಶ್ಚಯಿಸಿದ್ದಾರೆ. ಹೀಗಾಗಿ, ಲಗ್ನದ ನಂತರದ ಮಧುಚಂದ್ರ ಮತ್ತು ದೇವಸ್ಥಾನಗಳಿಗೆ ಭೇಟಿ ನೀಡುವ ಅನೂಚಾನ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ನನಗೆ ಇನ್ನಷ್ಟು ಸಮಯ ಬೇಕಿದೆ. ಆದರೆ, ಈ ಹಿಂದೆ ಮಂಜೂರು ಮಾಡಿರುವ ಪೆರೋಲ್ ಅವಧಿ ಏಪ್ರಿಲ್ 20ಕ್ಕೆ ಕೊನೆಯಾಗಲಿದ್ದು ಸಾಂಪ್ರದಾಯಿಕ ವಿಧಿವಿಧಾನಗಳನ್ನು ಪೂರೈಸಲು ಪುನಃ 60 ದಿನಗಳ ಕಾಲ ಪೆರೋಲ್ ಅವಧಿ ವಿಸ್ತರಿಸಬೇಕು‘ ಎಂದು ಅರ್ಜಿದಾರರು ಕೋರಿದ್ದರು.

ಅರ್ಜಿದಾರರ ಪರ ವಕೀಲ ಡಿ.ಮೋಹನ್ ಕುಮಾರ್, ಕೆ.ರಾಘವೇಂದ್ರ ಗೌಡ ಮತ್ತು ರಾಜ್ಯ ಪ್ರಾಸಿಕ್ಯೂಷನ್‌ ಪರವಾಗಿ ಎಂ.ವಿನೋದ್ ಕುಮಾರ್ ವಾದ ಮಂಡಿಸಿದ್ದರು.  

ಪ್ರಕರಣವೇನು?

ಸ್ಥಿರಾಸ್ತಿ ವ್ಯಾಜ್ಯವೊಂದಕ್ಕೆ ಸಂಬಂಧಿಸಿದಂತೆ 2015ರ ಆಗಸ್ಟ್‌ 16ರಂದು ಮಾಸ್ತಿ ಹೋಬಳಿಯ ನಾಗದೇನಹಳ್ಳಿಯಲ್ಲಿ ನಡೆದಿದ್ದ ವ್ಯಕ್ತಿಯೊಬ್ಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆನಂದ್‌ (ಘಟನೆ ನಡೆದಾಗ 21 ವರ್ಷ) ಅವರನ್ನು ಮಾಸ್ತಿ ಠಾಣೆ ಪೊಲೀಸರು 2015ರ ಆಗಸ್ಟ್‌ 17ರಂದು ಬಂಧಿಸಿದ್ದರು. ನಂತರ ಸೆಷನ್ಸ್‌ ನ್ಯಾಯಾಲಯ 2019ರಲ್ಲಿ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಇದನ್ನು ಪ್ರಶ್ನಿಸಲಾದ ಮೇಲ್ಮನವಿಯಲ್ಲಿ ಹೈಕೋರ್ಟ್ ವಿಭಾಗೀಯ ನ್ಯಾಯಪೀಠವು ಶಿಕ್ಷೆಯ ಪ್ರಮಾಣವನ್ನು 10 ವರ್ಷಗಳಿಗೆ ಇಳಿಸಿದೆ.  

‘ಕೈದಿ ಆನಂದನನ್ನು ನಾನು ಕಳೆದ ಒಂಬತ್ತು ವರ್ಷಗಳಿಂದ ಮನದುಂಬಿ ಪ್ರೀತಿಸುತ್ತಿದ್ದೇನೆ. ಈಗ ಅವನನ್ನೇ ಮದುವೆಯಾಗಬೇಕು. ಆದ್ದರಿಂದ, ಇದಕ್ಕಾಗಿ ಅವಕಾಶ ಮಾಡಿಕೊಡುವಂತೆ ಜೈಲು ಅಧಿಕಾರಿಗಳಿಗೆ ನಿರ್ದೇಶಿಸಬೇಕು’ ಎಂದು ಕೋಲಾರ ಜಿಲ್ಲೆಯ ದಿಣ್ಣೆ ಕೊತ್ತೂರಿನ ಜಿ.ನೀತಾ (30) ಎಂಬುವರು (ಕೈದಿಯ ಪ್ರಿಯತಮೆ) ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ಈ ಮೊದಲು ಪುರಸ್ಕರಿಸಿದ್ದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಆನಂದ್‌ಗೆ ಮದುವೆಗೆಂದು ಪೆರೋಲ್‌ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT