ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ಗೆ ದಲಿತರ ನೆನಪಾಗುವುದು ಚುನಾವಣೆ ಸಮಯದಲ್ಲಿ ಮಾತ್ರ: ಬಿಜೆಪಿ ಟೀಕೆ

Published 22 ಆಗಸ್ಟ್ 2023, 11:07 IST
Last Updated 22 ಆಗಸ್ಟ್ 2023, 11:07 IST
ಅಕ್ಷರ ಗಾತ್ರ

ಬೆಂಗಳೂರು: ಕಾಂಗ್ರೆಸ್‌ ಪಕ್ಷಕ್ಕೆ ದಲಿತರು ನೆನಪಾಗುವುದು ಚುನಾವಣೆ ಸಮಯದಲ್ಲಿ ಮಾತ್ರ. ಚುನಾವಣೆಯಲ್ಲಿ ಒಮ್ಮೆ ಗೆದ್ದ ನಂತರ ದಲಿತರನ್ನು ಸಂಪೂರ್ಣವಾಗಿ ಮರೆಯುವ ಪರಿಪಾಠವನ್ನು ಕಾಂಗ್ರೆಸ್‌ ದಶಕಗಳ ಕಾಲದಿಂದ ರೂಢಿಸಿಕೊಂಡು ಬಂದಿದೆ ಎಂದು ಬಿಜೆಪಿ ಟೀಕಿಸಿದೆ.

ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರನ್ನು ಕುತಂತ್ರದಿಂದ ಚುನಾವಣೆಯಲ್ಲಿ ಸೋಲಿಸಿದ್ದನ್ನು ಗಮನಿಸಿದರೆ ಸಾಕು, ಕಾಂಗ್ರೆಸ್‌ ಪಕ್ಷಕ್ಕೆ ದಲಿತರ ಮೇಲೆ ಎಷ್ಟರ ಮಟ್ಟಿಗೆ ದ್ವೇಷವಿದೆ ಎಂಬುದು ಸಾಬೀತಾಗುತ್ತದೆ. ಸಿದ್ದರಾಮಯ್ಯನವರು ತಮ್ಮ ರಾಜಕೀಯ ಜೀವನದುದ್ದಕ್ಕೂ ದಲಿತ ನಾಯಕರನ್ನು ಜೊತೆಗಿರಿಸಿಕೊಂಡು ಅಧಿಕಾರಕ್ಕೇರಿದರು. ಆದರೆ, ಅಧಿಕಾರಕ್ಕೆ ಬಂದ ನಂತರ ಜೊತೆಗಿರುವ ದಲಿತ ನಾಯಕರನ್ನು ಕಾಲಕ್ರಮೇಣ ರಾಜಕೀಯವಾಗಿ ಮುಗಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಸಿದ್ದರಾಮಯ್ಯನವರ ಈ ದಲಿತ ವಿರೋಧಿ ರಾಜಕಾರಣದಿಂದಾಗಿ ರಾಜ್ಯದ ಹಲವಾರು ದಲಿತ ನಾಯಕರು ತಮ್ಮ ಅಸ್ತಿತ್ವವನ್ನು ಕಳೆದುಕೊಂಡಿದ್ದಾರೆ. ರಾಜಕಾರಣದಲ್ಲಿ ಪ್ರಬಲ ನಾಯಕರಾಗಿ ಹೊರಹೊಮ್ಮಬೇಕಾಗಿದ್ದವರು, ಸರಿಯಾದ ರಾಜಕೀಯ ಪ್ರಾತಿನಿಧ್ಯ ಸಿಗದೆ ಸೊರಗಿದ್ದಾರೆ ಎಂದು ಬಿಜೆಪಿ ಹೇಳಿದೆ.

ಸಿದ್ದರಾಮಯ್ಯನವರ ಕಾರಣಕ್ಕೆ, ಮಲ್ಲಿಕಾರ್ಜುನ ಖರ್ಗೆಯವರು ಮನಸ್ಸಿಲ್ಲದಿದ್ದರೂ ದೆಹಲಿಗೆ ವಲಸೆ ಹೋಗಬೇಕಾಯಿತು. ಆರು ಬಾರಿ ಸಂಸದರಾದ ಕೆ.ಎಚ್‌. ಮುನಿಯಪ್ಪ ಅವರು ಕೋಲಾರಕ್ಕಷ್ಟೆ ಸೀಮಿತವಾಗಿ, ಸಿದ್ದರಾಮಯ್ಯನವರ ಶಿಷ್ಯರಿಂದ ಸೋಲನ್ನು ಅನುಭವಿಸಬೇಕಾಯಿತು. ತಮ್ಮ ಬಹುಕಾಲದ ಒಡನಾಡಿ, ಹಿರಿಯ ದಲಿತ ನಾಯಕ ವಿ. ಶ್ರೀನಿವಾಸ್‌ ಪ್ರಸಾದ್‌ ಅವರನ್ನು ಸಿದ್ದರಾಮಯ್ಯನವರು ಅವಮಾನಗೊಳಿಸಿದ್ದು ಬಹಿರಂಗ ಸತ್ಯ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.

ಇದೆಲ್ಲದಕ್ಕೂ ಮೀರಿ, ಕೊರಟಗೆರೆಯಲ್ಲಿ 2013ರಲ್ಲಿ ಜಿ. ಪರಮೇಶ್ವರ್‌ ಅವರನ್ನು ಸೋಲಿಸಿದ್ದೆ ಸಿದ್ದರಾಮಯ್ಯನವರು ಎಂದು ಕಾಂಗ್ರೆಸ್‌ ಕಾರ್ಯಕರ್ತರೇ ಮಾತನಾಡುತ್ತಾರೆ. ದಲಿತ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಮನೆಗೆ ಬೆಂಕಿ ಇಟ್ಟವರನ್ನು ತಮ್ಮ ಓಲೈಕೆ ರಾಜಕಾರಣಕ್ಕಾಗಿ ಕಾಪಾಡಿಕೊಂಡು, ಅವರಿಗೆ ಟಿಕೆಟ್‌ ಅನ್ನು ನೀಡದೆ ದ್ರೋಹ ಬಗೆದರು. ಚುನಾವಣೆಗೂ ಮುನ್ನ ರಾಜ್ಯದಲ್ಲಿ ದಲಿತರೊಬ್ಬರು ಮುಖ್ಯಮಂತ್ರಿಯಾದರೆ ತಮಗೇನು ಅಭ್ಯಂತರವಿಲ್ಲ ಎಂದು ಹೇಳಿದ್ದ ಸಿದ್ದರಾಮಯ್ಯನವರು, ಚುನಾವಣೆಯ ನಂತರ ಸಂಪೂರ್ಣ ಉಲ್ಟಾ ಹೊಡೆದಿದ್ದಾರೆ ಎಂದು ಕುಟುಕಿದೆ.

ಐದು ವರ್ಷ ಸಿದ್ದರಾಮಯ್ಯನವರೆ ಮುಖ್ಯಮಂತ್ರಿಯಾಗಿರುತ್ತಾರೆ ಎಂದು ಆಗಾಗ ತಮ್ಮ ಆಪ್ತ ಬಣದ ಸಚಿವರ ಮುಖಾಂತರ ಬಹಿರಂಗ ಹೇಳಿಕೆಗಳನ್ನು ಕೊಡಿಸುವ ಮೂಲಕ ಟಾಂಗ್‌ ಕೊಡುತ್ತಿರುವುದೇ ಪರಮೇಶ್ವರ್‌ ಹಾಗೂ ಖರ್ಗೆಯವರಿಗೆ. ಇದಲ್ಲದೇ, ದಲಿತ ಸಮುದಾಯಗಳಿಗೆ ಮೀಸಲಿರುವ ಎಸ್‌.ಸಿ.ಎಸ್‌.ಪಿ/ಟಿ.ಎಸ್‌.ಪಿ ಅನುದಾನವನ್ನು ಇತರ ಉದ್ದೇಶಗಳಿಗೆ ಬಳಸಿಕೊಂಡಿರುವುದು, ಸಿದ್ದರಾಮಯ್ಯನವರಿಗೆ ದಲಿತರ ಮೇಲಿರುವ ದ್ವೇಷವನ್ನು ಮತ್ತಷ್ಟು ಎತ್ತಿ ತೋರಿಸುತ್ತಿದೆ ಎಂದು ಬಿಜೆಪಿ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT