ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವೇರಿ: ಬೆಂಗಳೂರಿನ ಹಿತಾಸಕ್ತಿ ಕಾಪಾಡಿ– ವಿವೇಕ್‌ ಸುಬ್ಬಾರೆಡ್ಡಿ

Published 26 ಸೆಪ್ಟೆಂಬರ್ 2023, 16:17 IST
Last Updated 26 ಸೆಪ್ಟೆಂಬರ್ 2023, 16:17 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯದ ಜನತೆಗೇ ನೀರಿಲ್ಲದಿರುವಾಗ ತಮಿಳುನಾಡಿಗೆ ನೀರು ಹರಿಸುವುದು ಹೇಗೆ‘ ಎಂದು ಪ್ರಶ್ನಿಸಿರುವ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್‌ ಸುಬ್ಬಾರೆಡ್ಡಿ, ‘ಕಾವೇರಿ ವಿಷಯದಲ್ಲಿ ರಾಜ್ಯ ಹಾಗೂ ಬೆಂಗಳೂರಿನ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕಿದೆ‘ ಎಂದು ಆಗ್ರಹಿಸಿದರು.

ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ, ‘ಜಲಸಂರಕ್ಷಣಾ ಸಮಿತಿ‘ ಕರೆ ನೀಡಿದ್ದ ಬೆಂಗಳೂರು ಬಂದ್‌ಗೆ ಬೆಂಬಲ ವ್ಯಕ್ತಪಡಿಸಿ ಮಂಗಳವಾರ ಸಿಟಿ ಸಿವಿಲ್‌ ಕೋರ್ಟ್‌ ಆವರಣದಲ್ಲಿ ವಕೀಲರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಕಾವೇರಿ ವಿಷಯದಲ್ಲಿ ಕರ್ನಾಟಕಕ್ಕೆ ಆಗಿರುವ ಅನ್ಯಾಯವನ್ನು ವಕೀಲರ ಸಂಘ ಸಹಿಸುವುದಿಲ್ಲ‘ ಎಂದರು.

‘ಬೆಂಗಳೂರಿಗೆ ಅಗತ್ಯವಿರುವ ಪ್ರಮಾಣದಲ್ಲಿ ನೀರನ್ನು ಪೂರೈಸುವ ಜವಾಬ್ದಾರಿ ಕೇವಲ ರಾಜ್ಯ ಸರ್ಕಾರದ್ದಷ್ಟೇ ಅಲ್ಲ, ಕೇಂದ್ರದ ಹೊಣೆಯೂ ಆಗಿದೆ. ಕಾವೇರಿ ವಿಚಾರದಲ್ಲಿ ರಾಜ್ಯಕ್ಕೆ ನ್ಯಾಯ ಸಿಗಬೇಕಿದೆ. ಹೀಗಾಗಿ ನಾವು ಬೆಂಬಲಿಸುತ್ತಿದ್ದೇವೆ‘ ಎಂದರು.

‘ಕಾವೇರಿ ವಿಚಾರಕ್ಕೆ ಸಂಬಂಧಿಸಿ ಕಾನೂನು ಸಮರದಲ್ಲಿ ಬೆಂಗಳೂರು ವಕೀಲರ ಸಂಘವು ಈಗಾಗಲೇ ರಾಜ್ಯದ ಪರವಾಗಿ ಮಧ್ಯಂತರ ಅರ್ಜಿ ಸಲ್ಲಿಸಿದೆ. ಬೆಂಗಳೂರಿಗೆ ಅಗತ್ಯವಿರುವಷ್ಟು ನೀರು ಸಿಗುವಂತಾಗಬೇಕು ಎಂದು ನ್ಯಾಯಪೀಠದ ಗಮನ ಸೆಳೆದಿದೆ. ಬೆಂಗಳೂರು ನಗರವು ಜಗತ್ತಿನ ಪ್ರಮುಖ ಶಕ್ತಿ ಕೇಂದ್ರಗಳಲ್ಲಿ ಒಂದಾಗಿದ್ದು, ಬೆಂಗಳೂರು ಜಲಮಂಡಳಿ ಪ್ರಕಾರ ನಗರಕ್ಕೆ 25 ಟಿಎಂಸಿ ಅಡಿ ನೀರು ಕುಡಿಯುವ ಉದ್ದೇಶಕ್ಕೆ ಅಗತ್ಯವಿದೆ ಎಂಬ ಅಂಶವನ್ನು ಕೋರ್ಟ್‌ ಗಮನಕ್ಕೆ ತರಲಾಗಿದೆ‘ ಎಂದರು. 

ನೂರಾರು ವಕೀಲರು ಕೋರ್ಟ್‌ ಆವರಣದಲ್ಲಿ ಒಗ್ಗೂಡಿ ಪ್ರತಿಭಟನೆಯಲ್ಲಿ ಸಾಂಕೇತಿಕವಾಗಿ ಪಾಲ್ಗೊಂಡರು. ಬೆಂಗಳೂರು ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಟಿ.ಜಿ.ರವಿ, ಖಜಾಂಚಿ ಎಂ.ಟಿ.ಹರೀಶ್‌ ಮತ್ತು ಹಿರಿ–ಕಿರಿಯ ವಕೀಲರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT