ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೈ’ಹಿಡಿದ ನಂಜುಂಡಿ; ಪಕ್ಷಕ್ಕೆ ಬಲ –ಡಿ.ಕೆ. ಶಿವಕುಮಾರ್

Published 25 ಏಪ್ರಿಲ್ 2024, 15:56 IST
Last Updated 25 ಏಪ್ರಿಲ್ 2024, 15:56 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನ ಪರಿಷತ್‌ ಸ್ಥಾನಕ್ಕೆ ರಾಜೀನಾಮೆ ನೀಡಿರುವ ವಿಶ್ವಕರ್ಮ ಸಮುದಾಯದ ಮುಖಂಡ ಕೆ.ಪಿ. ನಂಜುಂಡಿ ಅವರು, ಬಿಜೆಪಿ ತ್ಯಜಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ಕಾಂಗ್ರೆಸ್‌ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಸಮ್ಮುಖದಲ್ಲಿ ಬುಧವಾರ ಕಾಂಗ್ರೆಸ್‌ ಪಕ್ಷ ಸೇರಿದರು.

ಈ ಸಂದರ್ಭದಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್‌, ‘ಹಿಂದುಳಿದ ವರ್ಗದ ನಾಯಕರಾದ ನಂಜುಂಡಿ ಅವರು ಕಾಂಗ್ರೆಸ್ ಪಕ್ಷಕ್ಕೆ ವಾಪಸಾಗಿದ್ದಾರೆ. ನನ್ನ ರಾಜಕಾರಣದ ಅನುಭವದಲ್ಲಿ ಸಿದ್ದರಾಮಯ್ಯ ಅವರನ್ನು ಬಿಟ್ಟರೆ ಹಿಂದುಳಿದ ವರ್ಗದ ಪೈಕಿ ಕಾಯಕ ಸಮಾಜದಲ್ಲಿ ಸಂಘಟನೆಗೆ ಶಕ್ತಿ ಹೊಂದಿರುವವರು ನಂಜುಂಡಿ ಎಂದು ಭಾವಿಸಿದ್ದೇನೆ’ ಎಂದರು. 

‘ರಾಜ್ಯ ಸರ್ಕಾರ ನೀಡುತ್ತಿರುವ ಹಣ ಮತ್ತು ಉಳಿತಾಯದಿಂದ ಬಡ ಮಹಿಳೆಯರು ಸಣ್ಣಪುಟ್ಟ ಚಿನ್ನದ ಆಭರಣ ಹಾಗೂ ಮಾಂಗಲ್ಯ ಮಾಡಿಸಿಕೊಳ್ಳುತ್ತಿದ್ದಾರೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಇಂತಹ ಒಂದೇ ಒಂದು ತೀರ್ಮಾನ ತೆಗೆದುಕೊಳ್ಳಲು ಆಗಲಿಲ್ಲ. ಹೀಗಾಗಿ, ಕಾಂಗ್ರೆಸ್ ಪಕ್ಷದಲ್ಲಿ ಇರಬೇಕೆಂದು ನಿರ್ಧರಿಸಿದೆ ಎಂದು ನಂಜುಂಡಿ ನನ್ನ ಬಳಿ ಹೇಳಿದರು’ ಎಂದರು.

ಸುರ್ಜೇವಾಲಾ ಮಾತನಾಡಿ, ‘ಹಿಂದುಳಿದ ವರ್ಗದ ನಾಯಕರಾದ ನಂಜುಂಡಿ ಅವರು ವಿಶ್ವಕರ್ಮ ಸಮಾಜ ಮಾತ್ರವಲ್ಲ, ಹಿಂದುಳಿದ ವರ್ಗಗಳ ಧ್ವನಿಯಾಗಿದ್ದಾರೆ’ ಎಂದರು.

ಕಾಂಗ್ರೆಸ್‌ ಸೇರಿದ ಬಳಿಕ ಮಾತನಾಡಿದ ನಂಜುಂಡಿ, ‘ನಾನು ಕಾಂಗ್ರೆಸ್ ಪಕ್ಷದಲ್ಲಿ 15 ವರ್ಷಗಳ ಕಾಲ ಇದ್ದೆ. ಆಗ ನನಗೆ ಸಂಪೂರ್ಣ ಸ್ವಾತಂತ್ರ್ಯವಿತ್ತು.‌ ಕಾರಣಾಂತರಗಳಿಂದ ಬಿಜೆಪಿಗೆ ಹೋದೆ. ಹಿಂದುಳಿದ ವರ್ಗದ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಒದಗಿಸಬಹುದು ಎಂಬ ನಿರೀಕ್ಷೆಯಿಂದ ಬಿಜೆಪಿಗೆ ಹೋಗಿದ್ದೆ. ವಿಧಾನ ಪರಿಷತ್ ಸದಸ್ಯನಾಗುವುದು ನನ್ನ ಉದ್ದೇಶ ಆಗಿರಲಿಲ್ಲ. ಹಿಂದುಳಿದ ಸಮಾಜದ ಧ್ವನಿಯಾಗುವುದು ನನ್ನ ಉದ್ದೇಶ. ಅವರು ನನ್ನನ್ನು ಪರಿಷತ್‌ ಸದಸ್ಯನಾಗಿ ಮಾಡಿ ಕೂರಿಸಿದರು’ ಎಂದರು.

‘ಕೋವಿಡ್ ಸಮಯದಲ್ಲಿ ನಮ್ಮ ಸಮಾಜದವರಿಗೆ ₹ 2 ಸಾವಿರ ಕೊಡುವಂತೆ ಹಿಂದಿನ ಬಿಜೆಪಿ ಸರ್ಕಾರಕ್ಕೆ ಮನವಿ ಮಾಡಿದ್ದೆ. ಆದರೆ, ಹಣ ಕೊಡಲಿಲ್ಲ ಎಂಬ ಕೊರಗಿದೆ. ಅಂದು ನಮಗೆ ಶಕ್ತಿ ತುಂಬಿ ಧ್ವನಿಯಾಗಿ ನಿಂತವರು ಡಿ.ಕೆ. ಶಿವಕುಮಾರ್. ಕಾಂಗ್ರೆಸ್ ಪಕ್ಷಕ್ಕೆ ಬರುವಂತೆ ಸಿದ್ದರಾಮಯ್ಯ ಆಹ್ವಾನಿಸಿದರು. ಕಾಂಗ್ರೆಸ್ ಪಕ್ಷದ ಸಿದ್ಧಾಂತ, ತತ್ವಗಳನ್ನು ನಂಬಿ ಪಕ್ಷ ಸೇರಿದ್ದೇನೆ’ ಎಂದರು.

ವಿಧಾನಪರಿಷತ್​​ ಸರ್ಕಾರದ ಮುಖ್ಯ ಸಚೇತಕ ಸಲೀಂ ಅಹಮದ್‌, ವಿಧಾನಪರಿಷತ್​​ ಸದಸ್ಯ ದಿನೇಶ್‌ ಗೂಳಿಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT