ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸಿಎಫ್ ಆಯ್ಕೆ: ಸರ್ಕಾರಕ್ಕೆ ಕೆಪಿಎಸ್‌ಸಿ ಸಡ್ಡು!

‘ಸಂದರ್ಶನ ಸಮಿತಿ’ ರಚನೆ ವಿಚಾರ: ಕಾರ್ಯದರ್ಶಿ ಮತ್ತು ಅಧ್ಯಕ್ಷ, ಸದಸ್ಯರ ನಡುವೆ ತಿಕ್ಕಾಟ
Published 25 ಏಪ್ರಿಲ್ 2023, 2:48 IST
Last Updated 25 ಏಪ್ರಿಲ್ 2023, 2:48 IST
ಅಕ್ಷರ ಗಾತ್ರ

ಬೆಂಗಳೂರು: ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ಎಸಿಎಫ್‌) ಹುದ್ದೆಗಳಿಗೆ ನೇಮಕಾತಿಗೆ ನಾಲ್ವರ ಸದಸ್ಯರ ಸಂದರ್ಶನ ಸಮಿತಿ ರಚಿಸಬೇಕೆಂಬ ರಾಜ್ಯ ಸರ್ಕಾರದ ನಿರ್ದೇಶನವನ್ನು ಒಪ್ಪಲು ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಅಧ್ಯಕ್ಷರು ಮತ್ತು ಸದಸ್ಯರು ನಿರಾಕರಿಸಿದ್ದಾರೆ.

ಆದರೆ, ‘ಸಂದರ್ಶನ ಸಮಿತಿ ರಚಿಸಿ ಮಾನದಂಡಗಳನ್ನು ನಿಗದಿಪಡಿಸಿರುವ ಸರ್ಕಾರದ ಕ್ರಮ ಅಳವಡಿಸಿಕೊಂಡರೆ ಪಾರದರ್ಶಕವಾಗಿ ಸಂದರ್ಶನ ಪ್ರಕ್ರಿಯೆ ನಡೆಸಿ, ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಬಹುದು’ ಎಂದು ಕೆಪಿಎಸ್‌ಸಿ ಕಾರ್ಯದರ್ಶಿ ಸುರಳ್ಕರ್‌ ವಿಕಾಸ್‌ ಕಿಶೋರ್‌ ತಿಳಿಸಿದ್ದಾರೆ.

ವಿವಿಧ ಹುದ್ದೆಗಳಿಗೆ ಅಭ್ಯರ್ಥಿಗಳ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಕೆಪಿಎಸ್‌ಸಿ ಕಾರ್ಯದರ್ಶಿ ಮತ್ತು ಅಧ್ಯಕ್ಷರು ಹಾಗೂ ಸದಸ್ಯರ ಮಧ್ಯೆ ಕೆಲವು ತಿಂಗಳುಗಳಿಂದ ಮುಸುಕಿನ ಗುದ್ದಾಟ ನಡೆಯುತ್ತಿದ್ದು, ಈ ಭಿನ್ನ ನಿಲುವು ಆಯೋಗದೊಳಗಿನ ತಿಕ್ಕಾಟವನ್ನು ಮತ್ತಷ್ಟು ತೀವ್ರಗೊಳಿಸಿದೆ.

ಎಸಿಎಫ್‌ ಹುದ್ದೆಗಳ ನೇಮಕಾತಿಗೆ ಮೌಖಿಕ ಸಂದರ್ಶನ ನಡೆಸಲು ಸಮಿತಿ ರಚಿಸುವ ಪ್ರಸ್ತಾವಕ್ಕೆ ಮುಖ್ಯಮಂತ್ರಿ ಅನುಮೋದನೆ ನೀಡಿದ್ದು, ಈ ಬಗ್ಗೆ ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಾರ್ಚ್‌ 15ರಂದು ಕೆಪಿಎಸ್‌ಸಿ ಕಾರ್ಯದರ್ಶಿಗೆ ಪತ್ರ ಬರೆದಿದ್ದರು. ಆದರೆ, ಈ ನಿರ್ದೇಶನ ಒಪ್ಪಲು ಅಸಾಧ್ಯ ಎಂದು ಇದೇ 13ರಂದು ನಡೆದ ಸಭೆಯಲ್ಲಿ ಆಯೋಗ ನಿರ್ಣಯಿಸಿದೆ. ನಿರ್ಣಯ ಮತ್ತು ತಮ್ಮ ಅಭಿಪ್ರಾಯವನ್ನು ಪ್ರತ್ಯೇಕ ಪತ್ರಗಳ ಮೂಲಕ ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ
ಕಾರ್ಯದರ್ಶಿಗೆ ಕೆಪಿಎಸ್‌ಸಿ ಕಾರ್ಯದರ್ಶಿ ಇದೇ 17ರಂದು ತಿಳಿಸಿದ್ದಾರೆ.

ಏನಿದು ಪ್ರಕರಣ?:
ಕೆಪಿಎಸ್‌ಸಿ ಒಬ್ಬರು ಸದಸ್ಯ, ಸರ್ಕಾರದ ಪ್ರಧಾನ ಕಾರ್ಯದರ್ಶಿಗಿಂತ ಕಡಿಮೆ ಇಲ್ಲದಂತೆ ಕರ್ತವ್ಯ ಸಲ್ಲಿಸಿದ ಒಬ್ಬ ನಿವೃತ್ತ ಐಎಎಸ್‌ ಅಥವಾ ಐಪಿಎಸ್‌ ಅಧಿಕಾರಿ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹುದ್ದೆಗಿಂತ ಕಡಿಮೆ ಇಲ್ಲದಂತೆ ಕರ್ತವ್ಯ ಸಲ್ಲಿಸಿದ ಒಬ್ಬ ನಿವೃತ್ತ ಐಎಫ್‌ಎಸ್‌ ಅಧಿಕಾರಿ, ವಿಶ್ವವಿದ್ಯಾಲಯದ ಪ್ರಾಧ್ಯಾಪಕರ ಹುದ್ದೆಗಿಂತ ಕಡಿಮೆ ಇಲ್ಲದಂತೆ ಕರ್ತವ್ಯ ಸಲ್ಲಿಸುತ್ತಿರುವ ಒಬ್ಬ ಸಂಬಂಧಿಸಿದ ವಿಷಯ ತಜ್ಞ ಹೀಗೆ ನಾಲ್ವರು ಎಸಿಎಫ್‌ ಹುದ್ದೆಗಳಿಗೆ ಆಯ್ಕೆಯಸಂದರ್ಶನ ಸಮಿತಿಯಲ್ಲಿ ಇರಬೇಕು ಎಂದು ಕೆಪಿಎಸ್‌ಸಿಗೆ ಅರಣ್ಯ ಇಲಾಖೆ ತಿಳಿಸಿತ್ತು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಕೆಪಿಎಸ್‌ಸಿ, ‘ಈ ರೀತಿಯ ನಿರ್ದೇಶನವು ಸಂವಿಧಾನದ 320ನೇ ವಿಧಿಯಲ್ಲಿ ಆಯೋಗಕ್ಕೆ ನೀಡಿರುವ ಸ್ವಾಯತ್ತತೆಯ ಸ್ಪಷ್ಟ ಉಲ್ಲಂಘನೆ. ಸಂವಿಧಾನದ 320 (3) (ಎ)ಅಡಿ ಆಯ್ಕೆ ವಿಧಾನದ ನಿಯಮಗಳನ್ನು ಬದಲಿಸುವುದಾದರೆ ರಾಜ್ಯ ಸರ್ಕಾರವು ಆಯೋಗದೊಂದಿಗೆ ಸಮಾಲೋಚಿಸಬೇಕೆಂಬ ನಿಬಂಧನೆಯಿದೆ. ಆಯೋಗದ ಅಭಿಪ್ರಾಯ ಪಡೆಯದೆ ಈ ನಿರ್ದೇಶನ ನೀಡಲಾಗಿದೆ. ಎಸಿಎಫ್ ಹುದ್ದೆಗಳಿಗೆ ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆ ಈಗಾಗಲೇ ನಡೆದಿದ್ದು, ಈ ಹಂತದಲ್ಲಿ ಬದಲಾವಣೆ ಅಳವಡಿಸಿಕೊಳ್ಳಲು ಆಯೋಗಕ್ಕೆ ಸಾಧ್ಯವಿರುವುದಿಲ್ಲ’ ಎಂದು ಆಯೋಗದ ನಿರ್ಣಯವನ್ನು ಕಾರ್ಯದರ್ಶಿ ಸರ್ಕಾರಕ್ಕೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಸರ್ಕಾರ ತಿಳಿಸಿದಂತೆ ಸಂದರ್ಶನ ಸಮಿತಿ ರಚಿಸಿದರೆ ಪಾರದರ್ಶಕವಾಗಿ, ನ್ಯಾಯಯುತವಾಗಿ, ಮುಕ್ತವಾಗಿ ಸಂದರ್ಶನ ನಡೆಸಿ, ಪ್ರತಿಭಾನ್ವಿತ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಬಹುದು .
ಸುರಳ್ಕರ್‌ ವಿಕಾಸ್‌ ಕಿಶೋರ್‌, ಕಾರ್ಯದರ್ಶಿ, ಕೆಪಿಎಸ್‌ಸಿ

ಇದರ ಜತೆಗೆ ತಮ್ಮ ಅಭಿಪ್ರಾಯ ತಿಳಿಸಿರುವ ಕಾರ್ಯದರ್ಶಿ, ‘‌ಸರ್ಕಾರದ ನಿರ್ದೇಶನದಂತೆ ಸಮಿತಿ ರಚಿಸಿದರೆ ಪಾರದರ್ಶಕ ಮತ್ತು ಮುಕ್ತ ವ್ಯವಸ್ಥೆಯಡಿ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಬಹುದು. ಆಯೋಗ ನಡೆಸುತ್ತಿರುವ ನೇಮಕಾತಿಗಳ ವ್ಯಕ್ತಿತ್ವದ ಪರೀಕ್ಷೆಗಳ (ಸಂದರ್ಶನ) ಕುರಿತು ಸಾರ್ವಜನಿಕ ವಲಯದಲ್ಲಿ ಅಪನಿಂದನೆ, ಅಸಮಾಧಾನ ವ್ಯಕ್ತವಾಗುತ್ತಿದೆ. ಅದನ್ನು ಹೋಗಲಾಡಿಸಲು ಇಂತಹ ಸುಧಾರಣಾ ಕ್ರಮ ತೆಗೆದುಕೊಳ್ಳಲು ಆಯೋಗವೇ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಬೇಕಿತ್ತು. ಆದರೆ, ಸರ್ಕಾರವೇ ತಿಳಿಸಿರುವುದು ಶ್ಲಾಘನೀಯ. ಅಭ್ಯರ್ಥಿಗಳೂ ಇದಕ್ಕೆ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ’ ಎಂದಿದ್ದಾರೆ.

ಎಸಿಎಫ್‌ 16 ಹುದ್ದೆಗಳಿಗೆ 1:5 ಅನುಪಾತದಲ್ಲಿ ಸಂದರ್ಶನಕ್ಕೆ ಅರ್ಹತೆ ಪಡೆದ 80 ಅಭ್ಯರ್ಥಿಗಳ ಪಟ್ಟಿಯನ್ನು ಅನುಮೋದನೆಗಾಗಿ ಆಯೋಗಕ್ಕೆ ಏಪ್ರಿಲ್‌ 3ರಂದೇ ಕಾರ್ಯದರ್ಶಿ ಸಲ್ಲಿಸಿದ್ದಾರೆ. ಆದರೆ, ಸಂದರ್ಶನ ಸಮಿತಿ ರಚಿಸುವ ಕುರಿತ ಗೊಂದಲ ಅಂತ್ಯಗೊಳ್ಳುವವರೆಗೆ ಪಟ್ಟಿಗೆ ಅನುಮೋದನೆ ನೀಡದಿರಲು ಆಯೋಗ ನಿರ್ಧರಿಸಿದೆ.

ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಕೆಪಿಎಸ್‌ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌ ಅವರಿಗೆ ಕರೆ ಮಾಡಿದರೂ, ಅವರು ಸಂಪರ್ಕಕ್ಕೆ ಲಭ್ಯರಾಗಲಿಲ್ಲ.

ಪೊಲೀಸ್ ಇಲಾಖೆಯ ಎಡಿ ಹುದ್ದೆ ಆಯ್ಕೆಗೂ ‘ಸಂದರ್ಶನ ಸಮಿತಿ’

ಅರಣ್ಯ ಇಲಾಖೆ ಸೂಚಿಸಿದ ಮಾದರಿಯಲ್ಲಿಯೇ ನ್ಯಾಯ ವಿಜ್ಞಾನ ಪ್ರಯೋಗಾಲಯದಲ್ಲಿ ಖಾಲಿ ಇರುವ ಗ್ರೂಪ್‌ ‘ಎ’ ವೃಂದದ ಸಹಾಯಕ ನಿರ್ದೇಶಕರ ಹುದ್ದೆಗಳಿಗೆ ಮೌಖಿಕ ಸಂದರ್ಶನ ನಡೆಸಲು ನಾಲ್ವರು ಸದಸ್ಯರ ಸಂದರ್ಶನ ಸಮಿತಿ ರಚಿಸುವಂತೆ ಒಳಾಡಳಿತ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕೆಪಿಎಸ್‌ಸಿ ಕಾರ್ಯದರ್ಶಿಗೆ ಏ. 12ರಂದು ಪತ್ರ ಬರೆದಿದ್ದಾರೆ.

‘ಕೆಪಿಎಸ್‌ಸಿಯ ಒಬ್ಬ ಸದಸ್ಯ, ಪ್ರಧಾನ ಕಾರ್ಯದರ್ಶಿ ಹುದ್ದೆಗಿಂತ ಕಡಿಮೆ ಇಲ್ಲದಂತೆ ಕರ್ತವ್ಯ ನಿರ್ವಹಿಸಿದ ಒಬ್ಬ ನಿವೃತ್ತ ಐಎಎಸ್‌/ ಐಪಿಎಸ್‌ ಅಧಿಕಾರಿ, ಎಡಿಜಿಪಿ ಹುದ್ದೆಗಿಂತ ಕಡಿಮೆ ಇಲ್ಲದಂತೆ ಕರ್ತವ್ಯ ಸಲ್ಲಿಸಿರುವ ಒಬ್ಬ ನಿವೃತ್ತ ಐಪಿಎಸ್‌ ಅಧಿಕಾರಿ, ವಿಶ್ವವಿದ್ಯಾಲಯ ಪ್ರೊಫೆಸರ್‌ ಹುದ್ದೆಗಿಂತ ಕಡಿಮೆ ಇಲ್ಲದಂತೆ ಕರ್ತವ್ಯ ನಿರ್ವಹಿಸುತ್ತಿರುವ ಸಂಬಂಧಿಸಿದ ಒಬ್ಬ ವಿಷಯ ತಜ್ಞ ಸಮಿತಿಯಲ್ಲಿರಬೇಕು’ ಎಂದು ಸೂಚಿಸಿ‌ ಪೊಲೀಸ್‌ ಮಹಾನಿರ್ದೇಶಕ ಪ್ರವೀಣ್‌ ಸೂದ್‌ ಬರೆದ ಪತ್ರವನ್ನು ಅವರು ಉಲ್ಲೇಖಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT