ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಪಿಎಸ್‌ಸಿ ತಿಕ್ಕಾಟ: ಹೆಚ್ಚುವರಿ ಆಯ್ಕೆ ಪಟ್ಟಿ ಗೊಂದಲ, ಅಭ್ಯರ್ಥಿಗಳ ಪೀಕಲಾಟ

Published 5 ಜೂನ್ 2023, 5:11 IST
Last Updated 5 ಜೂನ್ 2023, 5:11 IST
ಅಕ್ಷರ ಗಾತ್ರ

ಬೆಂಗಳೂರು: ವಿವಿಧ ಹುದ್ದೆಗಳಿಗೆ ಅಭ್ಯರ್ಥಿಗಳ ನೇಮಕಾತಿ ನಿಯಮಗಳ ಅನುಷ್ಠಾನ ವಿಚಾರದಲ್ಲಿ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಮತ್ತು ಆಯೋಗದ ಕಾರ್ಯದರ್ಶಿ ನಡುವೆ ಒಮ್ಮತ ಮೂಡದ ಕಾರಣ 133 ಇಲಾಖೆಗಳಿಗೆ ಹೆಚ್ಚುವರಿ ಪಟ್ಟಿಯಿಂದ ಆಯ್ಕೆ ನಿರೀಕ್ಷೆಯಲ್ಲಿರುವ ಸುಮಾರು 3,000 ಅಭ್ಯರ್ಥಿಗಳ ಭವಿಷ್ಯ ಅತಂತ್ರವಾಗಿದೆ.

ಕೆಪಿಎಸ್‌ಸಿ ನಡೆಸುವ ನೇಮಕಾತಿ ಪ್ರಕ್ರಿಯೆಗಳಿಗೆ ಸಂಬಂಧಿಸಿದಂತೆ ಆಯೋಗದ ಅಧ್ಯಕ್ಷರು ಮತ್ತು ಕಾರ್ಯದರ್ಶಿ ನಡುವೆ ಹಲವು ತಿಂಗಳುಗಳಿಂದ ತಿಕ್ಕಾಟ ನಡೆಯುತ್ತಿದೆ. ಹೆಚ್ಚುವರಿ ಆಯ್ಕೆ ಪಟ್ಟಿ ಪ್ರಕಟಿಸುವ ಕುರಿತ ಗೊಂದಲ ಪರಿಹರಿಸುವಂತೆ ಅಭ್ಯರ್ಥಿಗಳು ಈಗಾಗಲೇ ಮುಖ್ಯ ಕಾರ್ಯದರ್ಶಿಗೆ ದೂರು ನೀಡಿದ್ದಾರೆ. ಕೆಪಿಎಸ್‌ಸಿ ಸ್ವಾಯತ್ತ ಸಂಸ್ಥೆ ಆಗಿರುವುದರಿಂದ ಈ ವಿಚಾರದಲ್ಲಿ ಮುಖ್ಯಮಂತ್ರಿ ಮಧ್ಯಪ್ರವೇಶಿಸಿ ಗೊಂದಲಕ್ಕೆ ತಾರ್ಕಿಕ ಅಂತ್ಯ ಕಾಣಿಸಬೇಕು ಎಂದು ಅಭ್ಯರ್ಥಿಗಳು ಆಗ್ರಹಿಸಿದ್ದಾರೆ.

ಏನಿದು ಹೆಚ್ಚುವರಿ ಪಟ್ಟಿ ಪ್ರಕರಣ: ಕೆಪಿಎಸ್‌ಸಿ 2017ರಿಂದ 2022ರ ವರೆಗೆ ನಡೆಸಿದ 133 ಇಲಾಖೆಗಳ ತಾಂತ್ರಿಕ, ತಾಂತ್ರಿಕೇತರ, ಎಫ್‌ಡಿಎ, ಎಸ್‌ಡಿಎ, ವಸತಿ ಶಾಲೆ ಶಿಕ್ಷಕರು, ಮೌಲಾನ ಆಜಾದ್ ಶಿಕ್ಷಕರು ಸೇರಿದಂತೆ ಗ್ರೂಪ್‌ ‘ಬಿ’, ‘ಸಿ’ ಮತ್ತು ‘ಡಿ’ ಹುದ್ದೆಗಳಿಗೆ ‘ಕರ್ನಾಟಕ ಸಿವಿಲ್‌ ಸೇವಾ (ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ನೇರ ನೇಮಕಾತಿ ಮತ್ತು ಆಯ್ಕೆ) (ಸಾಮಾನ್ಯ) ನಿಯಮಗಳು 2006 ಮತ್ತು ತಿದ್ದುಪಡಿ ನಿಯಮಗಳು (2015 ಡಿ. 31)’ ಪ್ರಕಾರ ಅಂತಿಮ ಆಯ್ಕೆ ಪಟ್ಟಿಯ ಜೊತೆಗೆ ಹೆಚ್ಚುವರಿ ಆಯ್ಕೆ ಪಟ್ಟಿ ಪ್ರಕಟಿಸಬೇಕು. ಈ ಹೆಚ್ಚುವರಿ ಪಟ್ಟಿ ಒಂದೂವರೆ ವರ್ಷ ಅಥವಾ ಕೆಲವು ಇಲಾಖೆಗಳಲ್ಲಿ ಮುಂದಿನ ನೇಮಕಾತಿವರೆಗೂ ಚಾಲ್ತಿಯಲ್ಲಿರುತ್ತದೆ.

ಆದರೆ, ಕೆಪಿಎಸ್‌ಸಿ 2017ರಲ್ಲಿ ಈ ನಿಯಮ ಅಳವಡಿಸಿಕೊಳ್ಳುವ ಬದಲು ನಿರ್ಣಯವೊಂದನ್ನು ತೆಗೆದುಕೊಂಡು, ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಿದ ದಿನದಿಂದ ಒಂದೂವರೆ ವರ್ಷದ ಒಳಗೆ ನೇಮಕಾತಿ ಪ್ರಾಧಿಕಾರಗಳು ಖಾಲಿ ಹುದ್ದೆಗಳ ಕುರಿತು ಪ್ರಸ್ತಾವನೆ (ನಮೂನೆ–7) ಸಲ್ಲಿಸಿದರೆ ಹೆಚ್ಚುವರಿ ಪಟ್ಟಿಯನ್ನು ಸಿದ್ಧಪಡಿಸಲು ಕ್ರಮ ಕೈಗೊಂಡಿದೆ. ಆದರೆ, ಕೋವಿಡ್‌ ಕಾರಣದಿಂದ 2020 ಮತ್ತು 2021ರಲ್ಲಿ ಕಾಲಮಿತಿ ಒಳಗೆ ಖಾಲಿ ಹುದ್ದೆಗಳ ಪ್ರಸ್ತಾವನೆ ಸಲ್ಲಿಸಲು ಇಲಾಖೆಗಳಿಗೆ ಸಾಧ್ಯವಾಗಿಲ್ಲ. ಆದ್ದರಿಂದ, ಆಯೋಗವು ಹಲವು ಇಲಾಖೆಗಳು ಸಲ್ಲಿಸಿದ್ದ ಖಾಲಿ ಹುದ್ದೆಗಳ ಪಟ್ಟಿಯನ್ನು ತಿರಸ್ಕರಿಸಿ ಸಂಬಂಧಪಟ್ಟ ಇಲಾಖೆಗಳಿಗೆ ಮರಳಿಸಿದೆ.

ಇದನ್ನು ಪ್ರಶ್ನಿಸಿ ಕೆಲವು ಅಭ್ಯರ್ಥಿಗಳು ನ್ಯಾಯಾಲಯದ ಮೆಟ್ಟಿಲೇರಿದ್ದರು. ನ್ಯಾಯಾಲಯವು ನಿಯಮದ ಪ್ರಕಾರ ಅಂತಿಮ ಆಯ್ಕೆ ಪಟ್ಟಿಯ ಜೊತೆಗೇ ಹೆಚ್ಚುವರಿ ಪಟ್ಟಿಯನ್ನು ಆಯೋಗ ಸಿದ್ಧಪಡಿಸದಿರುವುದರಿಂದ ಪ್ರಸ್ತುತ ಹೆಚ್ಚುವರಿ ಪಟ್ಟಿ ಸಿದ್ಧಪಡಿಸುವಂತೆ ಆದೇಶಿಸಿದೆ.

ಈ ಮಧ್ಯೆ, ಕೋವಿಡ್‌ ಕಾರಣಕ್ಕೆ ನಿಯಮ ಸಡಿಲಿಸಿ, ಹೆಚ್ಚುವರಿ ಆಯ್ಕೆ ಪಟ್ಟಿ ಸಲ್ಲಿಕೆಯ ಅವಧಿಯನ್ನು 2023ರ ಫೆ. 28 ರವರೆಗೆ ವಿಸ್ತರಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್‌) ಆದೇಶ ಹೊರಡಿಸಿತ್ತು. ಆದರೆ, ಕಾರ್ಯಭಾರ ಒತ್ತಡದ ಕಾರಣದಿಂದ ಈ ಅವಧಿಯ ಒಳಗೆ ಎಲ್ಲ ಹೆಚ್ಚುವರಿ ಆಯ್ಕೆ ಪಟ್ಟಿಯನ್ನು ಸಿದ್ಧಪಡಿಸಿ ಆಯೋಗಕ್ಕೆ ಸಲ್ಲಿಸಲು ಕೆಪಿಎಸ್‌ಸಿಗೆ ಸಾಧ್ಯವಾಗಿಲ್ಲ. ಇದು ಎಲ್ಲ ಗೊಂದಲಗಳಿಗೆ ಕಾರಣವಾಗಿದೆ.

ಈ ಗೊಂದಲ ಬಗ್ಗೆ ಪ್ರತಿಕ್ರಿಯೆ ಪಡೆಯಲು ಕೆಪಿಎಸ್‌ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ ಅವರನ್ನು ಸಂಪರ್ಕಿಸಲು ಯತ್ನಿಸಿದರೂ ಅವರು ಕರೆ ಸ್ವೀಕರಿಸಲಿಲ್ಲ.

98 ಇಲಾಖೆಗಳಿಂದ ಖಾಲಿ ಹುದ್ದೆ ಪ್ರಸ್ತಾವ

ಹೆಚ್ಚುವರಿ ಆಯ್ಕೆ ಪಟ್ಟಿ ಸಲ್ಲಿಕೆ ಅವಧಿಯನ್ನು ಡಿಪಿಎಆರ್‌ ವಿಸ್ತರಿಸಿದ ಕಾರಣ 98 ಇಲಾಖೆಗಳು ಖಾಲಿ ಹುದ್ದೆಗಳ ಪ್ರಸ್ತಾವನೆಯನ್ನು ಕೆಪಿಎಸ್‌ಸಿಗೆ ಸಲ್ಲಿಸಿವೆ. ಆ ಪೈಕಿ, 84 ಇಲಾಖೆಗಳ ಖಾಲಿ ಹುದ್ದೆಗಳಿಗೆ ಹೆಚ್ಚುವರಿ ಪಟ್ಟಿಯನ್ನು ಆಯೋಗ ಈಗಾಗಲೇ ಸಿದ್ಧಪಡಿಸಿದೆ. ಒಟ್ಟು 133 ಇಲಾಖೆಗಳ ಹೆಚ್ಚುವರಿ ಪಟ್ಟಿಯ ಪೈಕಿ ಈಗಾಗಲೇ 75 ಪಟ್ಟಿಗೆ ಆಯೋಗ ಅನುಮೋದನೆ ನೀಡಿದೆ. 12 ಹೆಚ್ಚುವರಿ ಪಟ್ಟಿಗೆ ಅನುಮೋದನೆ ನೀಡದೆ ಕಾರ್ಯದರ್ಶಿಗೆ ವಾಪಸ್‌ ಮಾಡಿದೆ. ಇನ್ನೂ 31 ಹೆಚ್ಚುವರಿ ಪಟ್ಟಿ ಸಿದ್ಧವಾಗಿದ್ದು, ಆಯೋಗಕ್ಕೆ ಸಲ್ಲಿಕೆ ಆಗಬೇಕಿದೆ. ಆದರೆ, ಯಾವುದೇ ಹೆಚ್ಚುವರಿ ಪಟ್ಟಿಯಿಂದ ಹೆಚ್ಚುವರಿ ಆಯ್ಕೆ ಪಟ್ಟಿಯಲ್ಲಿ ಸಿದ್ಧಪಡಿಸಿಲ್ಲ ಎಂದು ಕೆಪಿಎಸ್‌ಸಿ ಮೂಲಗಳು ತಿಳಿಸಿವೆ.

ಹೆಚ್ಚುವರಿ ಆಯ್ಕೆ ಪಟ್ಟಿ ಕುರಿತು ಡಿಪಿಎಆರ್‌ನಿಂದ ಸ್ಪಷ್ಟೀಕರಣ ಬಂದಿದೆ. ಅದನ್ನು ಆಯೋಗದ ಗಮನಕ್ಕೆ ತಂದಿದ್ದೇನೆ. ನಿಯಮದ ಪ್ರಕಾರ ಪಟ್ಟಿ ತಯಾರಿಸಲಾಗಿದೆ.
ಸುರಳ್ಕರ್‌ ವಿಕಾಸ್‌ ಕಿಶೋರ್‌, ಕಾರ್ಯದರ್ಶಿ, ಕೆಪಿಎಸ್‌ಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT