ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

KPSC: ಕಾರ್ಯದರ್ಶಿ ಅಮಾನತಿಗೆ ಆಗ್ರಹಿಸಿ ಮುಖ್ಯಮಂತ್ರಿಗೆ ಅಧ್ಯಕ್ಷರ ಪತ್ರ

Published 2 ಫೆಬ್ರುವರಿ 2024, 23:30 IST
Last Updated 2 ಫೆಬ್ರುವರಿ 2024, 23:30 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಅಧ್ಯಕ್ಷರಾಗಿ ತಾವು ನೇಮಕಗೊಂಡ ದಿನದಿಂದ ಈವರೆಗಿನ ಆಯೋಗದ ಕಾರ್ಯನಿರ್ವಹಣೆ ಕುರಿತು ವಿಚಾರಣೆಗೆ ಆದೇಶಿಸುವಂತೆ ಹಾಗೂ ವಿಚಾರಣೆ ಪೂರ್ಣಗೊಳ್ಳುವವರೆಗೆ ಆಯೋಗದ ಕಾರ್ಯದರ್ಶಿಯನ್ನು ಅಮಾನತಿನಲ್ಲಿ ಇರಿಸುವಂತೆ ಕೆಪಿಎಸ್‌ಸಿ ಅಧ್ಯಕ್ಷ ಶಿವಶಂಕರಪ್ಪ ಎಸ್‌. ಸಾಹುಕಾರ ಅವರು ಮುಖ್ಯಮಂತ್ರಿಯವರಿಗೆ ಪತ್ರ ಬರೆದಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶುಕ್ರವಾರ ಪತ್ರ ಬರೆದಿರುವ ಆಯೋಗದ ಅಧ್ಯಕ್ಷರು, ‘ಆಯೋಗದ ಕಾರ್ಯದರ್ಶಿಯಾಗಿರುವ ಕೆ.ಎಸ್‌. ಲತಾಕುಮಾರಿ ಅವರು ಸರ್ಕಾರದ ನಿಯಮಗಳು ಮತ್ತು ಆಯೋಗದ ಸಭೆಗಳ ನಿರ್ಣಯಗಳನ್ನು ಉಲ್ಲಂಘಿಸಿ ಕರ್ತವ್ಯಲೋಪ ಎಸಗಿದ್ದಾರೆ. ತಮ್ಮ ತಪ್ಪು ಮುಚ್ಚಿಕೊಳ್ಳಲು ಆಯೋಗ ತಪ್ಪು ಮಾಡಿದೆ ಎಂದು ಬಿಂಬಿಸಿ ಪತ್ರಿಕಾ ಪ್ರಕಟಣೆಗಳನ್ನು ನೀಡುತ್ತಿದ್ದಾರೆ’ ಎಂದು ದೂರಿದ್ದಾರೆ.

‘ಕಾರ್ಯದರ್ಶಿಯವರು ಆಯೋಗದ ನಿರ್ಣಯ ಮತ್ತು ಕಾನೂನು ಉಲ್ಲಂಘಿಸುತ್ತಿರುವ ಕುರಿತು ಜನವರಿ 10ರಂದು ನಿಮ್ಮ ಗಮನಕ್ಕೆ ತರಲಾಗಿತ್ತು. ಆ ಬಳಿಕವೂ ಆಯೋಗದ ಅನುಮೋದನೆ ಇಲ್ಲದೆ ತಾತ್ಕಾಲಿಕ ಮತ್ತು ಅಂತಿಮ ಆಯ್ಕೆಪಟ್ಟಿಗಳನ್ನು ಪ್ರಕಟಿಸಿದ್ದಾರೆ. ಆಯೋಗದ ಟಿಪ್ಪಣಿಗಳನ್ನು ಮಾಧ್ಯಮಗಳಿಗೆ ಬಹಿರಂಗಪಡಿಸಿ ಗೋಪ್ಯತೆಯನ್ನು ಉಲ್ಲಂಘಿಸಿದ್ದಾರೆ’ ಎಂದು ಆರೋಪಿಸಿದ್ದಾರೆ.

ಆಯೋಗದ ಅನುಮೋದನೆ ಇಲ್ಲದೆ ಕಾರ್ಯದರ್ಶಿಯವರು ಪರೀಕ್ಷಾ ದಿನಾಂಕ ನಿಗದಿ ಮಾಡಿದ್ದಾರೆ. ಪರೀಕ್ಷೆಯನ್ನೂ ನಡೆಸಿದ್ದಾರೆ ಮತ್ತು ಕೀ ಉತ್ತರಗಳನ್ನು ಪ್ರಕಟಿಸಿದ್ದಾರೆ. ಆಯೋಗದ ವೆಬ್‌ಸೈಟ್‌ ಅನ್ನು ವೈಯಕ್ತಿಕ ಸ್ವತ್ತು ಎಂಬಂತೆ ಬಳಸಿಕೊಳ್ಳುತ್ತಿದ್ದಾರೆ. ಕಾರ್ಯಸೂಚಿಯ ಕುರಿತು ಮಾಹಿತಿ ನೀಡದೇ ಸಭೆ ಕರೆದಿದ್ದು, ಸಭೆ ಮುಂದೂಡುವಂತೆ ನೀಡಿದ್ದ ಸೂಚನೆಯನ್ನು ಉಲ್ಲಂಘಿಸಿದ್ದಾರೆ. ಅಧ್ಯಕ್ಷರ ಗಮನಕ್ಕೆ ತರದೇ ಪರ್ಯಾಯ ಸಭೆ ನಡೆಸಿದ್ದಾರೆ ಎಂದು ಸಾಹುಕಾರ ಪತ್ರದಲ್ಲಿ ದೂರಿದ್ದಾರೆ.

ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಮಾಹಿತಿ, ದಾಖಲೆ ಒದಗಿಸುವಂತೆ ಟಿಪ್ಪಣಿ ನೀಡಿದ್ದರೂ, ಅದನ್ನು ಪಾಲಿಸಿಲ್ಲ. ಕಾನೂನು ಕೋಶದ ಮುಖ್ಯಸ್ಥರ ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡಿದ್ದರೂ ಆಯೋಗದ ಹೆಸರಿನಲ್ಲಿ ಹೊಸ ಅಧಿಸೂಚನೆ ಹೊರಡಿಸಿರುತ್ತಾರೆ ಎಂದು ಆರೋಪ ಮಾಡಿದ್ದಾರೆ.

‘ಕಾರ್ಯದರ್ಶಿಯವರು ತಮ್ಮ ತಪ್ಪು ಮುಚ್ಚಿಕೊಳ್ಳಲು ಆಯೋಗದ ಅಧ್ಯಕ್ಷರು, ಸದಸ್ಯರ ಕುರಿತು ತಪ್ಪಾಗಿ ಬಿಂಬಿಸುವ ಪತ್ರಿಕಾ ಪ್ರಕಟಣೆ ನೀಡುತ್ತಿದ್ದಾರೆ. ನಾನು ಅಧ್ಯಕ್ಷನಾಗಿ ನೇಮಕಗೊಂಡ ನಂತರ ಆಯೋಗದ ಒಟ್ಟಾರೆ ಕಾರ್ಯನಿರ್ವಹಣೆ, ಕರ್ತವ್ಯಲೋಪದ ಕುರಿತು ಸತ್ಯಾಸತ್ಯತೆ ಅರಿಯಲು ವಿಚಾರಣೆಗೆ ಆದೇಶಿಸಬೇಕು. ವಿಚಾರಣಾ ಪ್ರಕ್ರಿಯೆ ಮುಗಿಯುವವರೆಗೂ ಲತಾಕುಮಾರಿ ಅವರನ್ನು ಅಮಾನತಿನಲ್ಲಿ ಇರಿಸಬೇಕು’ ಎಂದು ಮನವಿ ಮಾಡಿದ್ದಾರೆ.

‘ಪತ್ರ ಬರೆದಿರುವುದು ದುರ್ನಡತೆ’

‘ಸಾಂವಿಧಾನಿಕ ಹುದ್ದೆಯಲ್ಲಿರುವ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರ ವಿರುದ್ಧ ರಾಜ್ಯಪಾಲರಿಗೆ ಪತ್ರ ಬರೆಯುವ ಅಧಿಕಾರ ಸರ್ಕಾರಿ ಅಧಿಕಾರಿಯಾಗಿರುವ ಕೆಪಿಎಸ್‌ಸಿ ಕಾರ್ಯದರ್ಶಿಯವರಿಗೆ ಇಲ್ಲ. ಆ ರೀತಿ ಪತ್ರ ಬರೆದು ದುರ್ನಡತೆ ಮತ್ತು ಕರ್ತವ್ಯಲೋಪ ಎಸಗಿರುವ ಲತಾಕುಮಾರಿ ಸರ್ಕಾರಕ್ಕೂ ಮುಜುಗರ ಉಂಟುಮಾಡಿರುತ್ತಾರೆ’ ಎಂದು ಶಿವಶಂಕರಪ್ಪ ಸಾಹುಕಾರ ಪತ್ರದಲ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT