ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧ್ಯಕ್ಷ ವಜಾಕ್ಕೆ ಕಾರ್ಯದರ್ಶಿ ಪತ್ರ: ರಾಜ್ಯಪಾಲರ ಅಂಗಳ ತಲುಪಿದ KPSC ಸಂಘರ್ಷ

ನಾಲ್ವರು ಸದಸ್ಯರ ಮೇಲೆಯೂ ಕ್ರಮಕ್ಕೆ ಆಗ್ರಹ
Published 29 ಜನವರಿ 2024, 23:30 IST
Last Updated 29 ಜನವರಿ 2024, 23:30 IST
ಅಕ್ಷರ ಗಾತ್ರ

ಬೆಂಗಳೂರು: ‘ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷ ಮತ್ತು ನಾಲ್ವರು ಸದಸ್ಯರು ಕರ್ತವ್ಯಲೋಪ ಎಸಗಿ, ಅಧಿಕಾರ ದುರುಪಯೋಗ ಮಾಡಿರುವುದಲ್ಲದೆ, ದುರ್ನಡತೆ ತೋರಿದ್ದಾರೆ. ಅವರ ಸದಸ್ಯತ್ವ ರದ್ದುಪಡಿಸಲು ಸೂಕ್ತ ಕ್ರಮ ವಹಿಸಬೇಕು’ ಎಂದು ಆಯೋಗದ ಕಾರ್ಯದರ್ಶಿ ಕೆ.ಎಸ್. ಲತಾಕುಮಾರಿ ಅವರು, ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಅವರಿಗೆ ಪತ್ರ ಬರೆದಿದ್ದಾರೆ.

ಏಳು ಪುಟಗಳ ತಮ್ಮ ಪತ್ರದಲ್ಲಿ ಅಧ್ಯಕ್ಷ ಶಿವಶಂಕರಪ್ಪ ಎಸ್‌. ಸಾಹುಕಾರ್, ಸದಸ್ಯರಾದ ವಿಜಯ್‌ಕುಮಾರ್‌ ಡಿ. ಕುಚನೂರೆ, ಎಂ.ಬಿ. ಹೆಗ್ಗಣ್ಣವರ, ಬಿ.ವಿ. ಗೀತಾ ಮತ್ತು ಮುಸ್ತಫಾ ಹುಸೇನ್‌ ಸಯ್ಯದ್‌ ಅಜೀಜ್‌ ಅವರ ಕಾರ್ಯವೈಖರಿಯ ಕುರಿತು ವಿವರ ನೀಡಿರುವ ಕಾರ್ಯದರ್ಶಿ, ‘ಸಂವಿಧಾನದ ವಿಧಿ 317ರಂತೆ ಸದಸ್ಯತ್ವ ರದ್ಧತಿಗೆ ಕ್ರಮ ತೆಗೆದುಕೊಳ್ಳಬೇಕು’ ಎಂದು ಕೋರಿದ್ದಾರೆ.

ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಮೂಲಕ ರಾಜ್ಯಪಾಲರಿಗೆ ಪತ್ರ ಬರೆದಿರುವ ಅವರು, ‘ರಾಜ್ಯ ಹಾಗೂ ಅಭ್ಯರ್ಥಿಗಳ ಹಿತಾಸಕ್ತಿ ಕಾಪಾಡಲು ಪತ್ರದಲ್ಲಿರುವ ಅಂಶಗಳನ್ನು ರಾಜ್ಯಪಾಲರಿಗೆ ಮನವರಿಕೆ ಮಾಡಬೇಕು ಎಂದೂ ಮನವಿ ಮಾಡಿದ್ದಾರೆ’ ಎಂದು ಸರ್ಕಾರದ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಇದೇ ಮೊದಲ ಬಾರಿಗೆ ಕೆಪಿಎಸ್‌ಸಿ ಕಾರ್ಯದರ್ಶಿಯೊಬ್ಬರು ಅಧ್ಯಕ್ಷ ಮತ್ತು ಸದಸ್ಯರ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದ್ದಾಗಿ ಮೂಲಗಳು ಹೇಳಿವೆ. 

ಪತ್ರದಲ್ಲಿದೆ ಏನಿದೆ?

‘ಆಯೋಗವು ಸೂಚಿಸಿದ ಅಭ್ಯರ್ಥಿಗೆ ಕಾನೂನು ಕೋಶದ ಮುಖ್ಯಸ್ಥರ ನೇಮಕಾತಿ ಆದೇಶ ಹೊರಡಿಸಿಲ್ಲವೆಂಬ ಕಾರಣಕ್ಕೆ ಆಯೋಗದ ಸಭೆಗಳನ್ನು ಬಹಿಷ್ಕರಿಸಲಾಗಿದೆ; ಆಯ್ಕೆ ಪಟ್ಟಿಗಳಿಗೆ ಅನುಮೋದನೆ ನೀಡುವುದಿಲ್ಲವೆಂದು ಅಧ್ಯಕ್ಷರು ಮತ್ತು ಕೆಲವು ಸದಸ್ಯರು ನಿರ್ಣಯಿಸಿರುವುದು ಕಾನೂನುಬಾಹಿರ ಮತ್ತು ಕರ್ತವ್ಯಲೋಪ. ತಮ್ಮ ಹುದ್ದೆಯ ಜವಾಬ್ದಾರಿಗಳನ್ನು ಅರಿಯಲು ಅಧ್ಯಕ್ಷರು ಮತ್ತು ಕೆಲವು ಸದಸ್ಯರು ವಿಫಲರಾಗಿದ್ದು, ಪರಿಪಕ್ವತೆ ಇಲ್ಲದವರಂತೆ ವರ್ತಿಸಿದ್ದಾರೆ. ನೇಮಕಾತಿ ಪ್ರಸ್ತಾವಗಳಿಗೆ ಅಧಿಸೂಚನೆ ಹೊರಡಿಸಲು ಅನುಮೋದನೆ ನೀಡದೆ ಮೂರು ತಿಂಗಳುಗಳಿಗಿಂತಲೂ ಹೆಚ್ಚು ಸಮಯ ಇಟ್ಟುಕೊಳ್ಳುವುದು, ಆಯ್ಕೆ ಪಟ್ಟಿಗಳನ್ನು ಪ್ರಕಟಿಸಲು ಅನುಮೋದನೆ ನೀಡದಿರುವುದು, ಪರೀಕ್ಷೆಗಳನ್ನು ನಡೆಸುವ ಪ್ರತಿ ಹಂತದಲ್ಲಿಯೂ ಆಯೋಗದ ಅನುಮೋದನೆ ಪಡೆಯಬೇಕೆಂದು ಕಡ್ಡಾಯಪಡಿಸಲಾಗುತ್ತಿದೆ. ಆಯೋಗವು ಅನುಮೋದನೆ ನೀಡದೆ ಯಾವುದೇ ಕಾರ್ಯವನ್ನು ಕಾರ್ಯದರ್ಶಿ ಕೈಗೊಳ್ಳಬಾರದೆಂದು ತಾಕೀತು ಮಾಡಲಾಗಿದೆ’.

‘ಕಾನೂನು ಕೋಶದ ಮುಖ್ಯಸ್ಥರ ಹುದ್ದೆಯ ನೇಮಕಾತಿ ಆದೇಶ ಹೊರಡಿಸುವವರೆಗೆ ಯಾವುದೇ ಕಡತ ಸಲ್ಲಿಸದಂತೆ ಅಧ್ಯಕ್ಷರಿಂದ ಟಿಪ್ಪಣಿ ಬಂದ ಸುಮಾರು ಒಂದೂವರೆ ತಿಂಗಳಿನಿಂದ ಯಾವುದೇ ಕಾರ್ಯಕಲಾಪಗಳನ್ನು ನಿರ್ವಹಿಸಿಲ್ಲ. ಇದು ಆಡಳಿತಾತ್ಮಕ ವಿಷಯಗಳಲ್ಲಿ ಅಧ್ಯಕ್ಷರ ಜ್ಞಾನದ ಕೊರತೆಯನ್ನು ತೋರಿಸುತ್ತದೆ. ಯಾವುದೇ ಕಡತವನ್ನು ಅನಗತ್ಯವಾಗಿ ಬಾಕಿ ಇರಿಸಿ ಅನುಮೋದನೆ ವಿಳಂಬ ಮಾಡಿದರೆ ಮತ್ತು ಸಕಾರಣಗಳು ಇಲದೇ ಕಡತಗಳನ್ನು ಹಿಂದಿರುಗಿಸಿದರೆ ಕಡತಗಳು ಅನುಮೋದನೆಯಾಗಿವೆ ಎಂದು ಪರಿಗಣಿಸಲಾಗುತ್ತದೆ’

‘ಆಯೋಗದ ಸಭೆಗಳಲ್ಲಿ ಕಾರ್ಯದರ್ಶಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ನೀಡದೆ, ಆಯೋಗವು ನಿರ್ಣಯಿಸಿದಂತೆ ಸಭಾ ನಡಾವಳಿಗಳನ್ನು ದಾಖಲಿಸುವ ಶೀಘ್ರ ಲಿಪಿಗಾರರ ರೀತಿಯಲ್ಲಿ ಕಾರ್ಯನಿರ್ವಹಿಸಲು ಅಧ್ಯಕ್ಷರು ಮತ್ತು ಸದಸ್ಯರು ಅಪೇಕ್ಷಿಸುತ್ತಾರೆ. ಅಂತಹ ಕಾರ್ಯನಿರ್ವಹಿಸಲು ಐಎಎಸ್‌ ಅಧಿಕಾರಿಯ ಅವಶ್ಯಕತೆ ಇಲ್ಲ. ಪರೀಕ್ಷೆಗಳಲ್ಲಿ ನಡೆಯುವ ದುರಾಚಾರ ತಡೆಗಟ್ಟಲು ಕಾರ್ಯದರ್ಶಿಯು ಕೈಗೊಳ್ಳುವ ಕ್ರಮಗಳಿಗೆ ಆಯೋಗದ ಅಧ್ಯಕ್ಷರು ಅನುಮೋದನೆ ನೀಡಿಲ್ಲ. ಅಲ್ಲದೆ, ಯಾವುದೇ ಟೆಂಡರ್‌ ಆಹ್ವಾನಿಸದಿರಲು ಸೂಚಿಸಿದ್ದಾರೆ. ಇಂತಹ ಆದೇಶಗಳನ್ನು ಪಾಲಿಸುವುದು ಅಸಾಧ್ಯವಾಗಿದೆ.

‘ಆಡಳಿತದಲ್ಲಿ ನುರಿತ, ಅನುಭವವಿರುವ ಅಧ್ಯಕ್ಷರು ಮತ್ತು ಸದಸ್ಯರನ್ನು ಆಯೋಗಕ್ಕೆ ನೇಮಿಸುವುದು ಸೂಕ್ತವೆಂದು ಪಿ.ಸಿ. ಹೋಟಾ ಸಮಿತಿಯ ವರದಿಯಲ್ಲಿ ತಿಳಿಸಲಾಗಿದೆ. ಈ ಎಲ್ಲ ಅಂಶಗಳನ್ನು ತಮ್ಮ ಗಮನಕೆ ತಂದರೆ, ನೀವು ಸೂಕ್ತ ಕ್ರಮ ತೆಗೆದುಕೊಂಡು, ನೇಮಕಾತಿ ಪ್ರಕ್ರಿಯೆಗಳು ಸುಗಮವಾಗಿ ನಡೆಯಲು ಮತ್ತು ಹುದ್ದೆಗಳಿಗೆ ಮುಕ್ತ, ನಿಷ್ಪಕ್ಷಪಾತವಾದ ಮತ್ತು ಅರ್ಹತೆ ಆಧಾರಿತ ನೇಮಕಾತಿಗಳನ್ನು ಕೈಗೊಳ್ಳಲು ಸಾಧ್ಯವಾಗಲಿದೆ ಎಂಬ ಭರವಸೆಯಿದೆ’ ಎಂದು ಪತ್ರದಲ್ಲಿ ಕಾರ್ಯದರ್ಶಿ ಉಲ್ಲೇಖಿಸಿದ್ದಾರೆ.

ಪತ್ರದಲ್ಲಿರುವ ಮುಖ್ಯ ಅಂಶಗಳು

* ಕಾನೂನು ಕೋಶದ ಮುಖ್ಯಸ್ಥರ ಹುದ್ದೆಗೆ ನೇಮಕಾತಿ ಆದೇಶ ಹೊರಡಿಸುವವರೆಗೂ ಸಭೆಗಳನ್ನು ನಡೆಸುವುದಿಲ್ಲ. ಆಯ್ಕೆ ಪಟ್ಟಿಗಳನ್ನು ಅನುಮೋದಿಸುವುದಿಲ್ಲವೆಂದು ಕೆಪಿಎಸ್‌ಸಿ ಅಧ್ಯಕ್ಷರು, ಸದಸ್ಯರು ತಿಳಿಸುವುದು ಗುರುತರವಾದ ಕರ್ತವ್ಯಲೋಪ

* ತಮ್ಮ ಕಾರ್ಯವ್ಯಾಪ್ತಿಗೆ ಬಾರದಿದ್ದರೂ ಆಯೋಗದ ಗಣಕ ಕೇಂದ್ರದ ಸಿಬ್ಬಂದಿಗೆ ತಾವು ಸೂಚಿಸಿದಂತೆ ಕರ್ತವ್ಯ ನಿರ್ವಹಿಸಲು ಒತ್ತಡ ಹೇರಿರುವುದು ಅಧಿಕಾರ ದುರ್ಬಳಕೆ, ಅಸಂವಿಧಾನಿಕ

* ಕೆಪಿಎಸ್‌ಸಿ ಅಧ್ಯಕ್ಷರು, ಸದಸ್ಯರ ಈ ಎಲ್ಲ ವರ್ತನೆಗಳಿಂದ ನೇಮಕಾತಿ ಪ್ರಕ್ರಿಯೆಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ

* ಆಯ್ಕೆ ಪಟ್ಟಿಗಳ ಕಡತಗಳಿಗೆ ಅನುಮೋದನೆ ನೀಡದ ಕಾರಣ ಹಲವು ಅಂತಿಮ ಆಯ್ಕೆ ಪಟ್ಟಿಗಳ ಫಲಿತಾಂಶ ಪ್ರಕಟಿಸಲು ಬಾಕಿಯಿದೆ

* ಈ ವರ್ತನೆಗಳಿಗೆ ಅವಕಾಶ ನೀಡಿದರೆ ಮುಂದೆ ಪರೀಕ್ಷಾ ಕಾರ್ಯಗಳಲ್ಲಿಯೂ ಇತರ ಅಕ್ರಮಗಳಿಗೆ ದಾರಿ ಆಗಬಹುದು

* ಅಭ್ಯರ್ಥಿಗಳ ಹಿತಾಸಕ್ತಿ ಕಾಪಾಡಲು, ಕೆಪಿಎಸ್‌ಸಿ ಗೌರವದ ದೃಷ್ಟಿಯಿಂದ ಅಧ್ಯಕ್ಷರು, ಸದಸ್ಯರ ನೇಮಕಾತಿ ಮತ್ತು ಶಿಸ್ತು ಪ್ರಾಧಿಕಾರಿ ರಾಜ್ಯಪಾಲರ ಗಮನಕ್ಕೆ ತರುವುದು ಅನಿವಾರ್ಯವಾಗಿದೆ

ಸಂವಿಧಾನದ ಅನುಚ್ಚೇದ 317ರಲ್ಲಿ ಏನಿದೆ?

ಲೋಕಸೇವಾ ಆಯೋಗದ ಸದಸ್ಯನನ್ನು ತೆಗೆದುಹಾಕುವುದು ಮತ್ತು ಅಮಾನತಿನಲ್ಲಿಡುವ ಕುರಿತು ಸಂವಿಧಾನದ ಅನುಚ್ಛೇದ 317ರಲ್ಲಿ ತಿಳಿಸಲಾಗಿದೆ. 317 (1)ರಲ್ಲಿ ಅಧ್ಯಕ್ಷ ಅಥವಾ ಸದಸ್ಯನ ದುರ್ವತನೆಯ ಕಾರಣಕ್ಕೆ ರಾಷ್ಟ್ರಪತಿಯು ಸುಪ್ರೀಂ ಕೋರ್ಟ್‌ನ ಅಭಿಪ್ರಾಯ ಕೇಳಿ ಕಳುಹಿಸಿದ ಕೋರಿಕೆಯ ಬಗ್ಗೆ ಸುಪ್ರೀಂ ಕೋರ್ಟ್‌ 145ನೇ ಅನುಚ್ಚೇದದ ಮೇರೆಗೆ ನಿಯಮಿಸಲಾದ ಪ್ರಕ್ರಿಯೆಗೆ ಅನುಸಾರವಾಗಿ ವಿಚಾರಣೆ ನಡೆಸಿ, ಅಧ್ಯಕ್ಷ ಅಥವಾ ಸಂದರ್ಭಾನುಸಾರ ಇತರ ಯಾರೇ ಸದಸ್ಯನನ್ನು ಅಂಥ ಯಾವುದೇ ಕಾರಣದ ಮೇಲೆ ತೆಗೆದು ಹಾಕತಕ್ಕದ್ದೆಂದು ವರದಿ ಮಾಡಿದ ನಂತರ ರಾಷ್ಟ್ರಪತಿ ಆದೇಶದ ಮೂಲಕ ಮಾತ್ರವೇ ತೆಗೆದು ಹಾಕತಕ್ಕದ್ದು. 317 (2)ರಲ್ಲಿ ಒಕ್ಕೂಟ ಆಯೋಗದ ಅಥವಾ ಜಂಟಿ ಆಯೋಗದ ಸಂದರ್ಭದಲ್ಲಿ ರಾಷ್ಟ್ರಪತಿ ಹಾಗೂ ಒಂದು ರಾಜ್ಯದ ಆಯೋಗದ ಸಂದರ್ಭದಲ್ಲಿ ರಾಜ್ಯಪಾಲ, ಆಯೋಗದ ಯಾವ ಅಧ್ಯಕ್ಷನಿಗೆ ಅಥವಾ ಯಾವ ‌ಸದಸ್ಯನಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನ ಅಭಿಪ್ರಾಯ ಕೇಳಿ ಕೋರಿಕೆ ಕಳುಹಿಸಲಾಗಿದೆಯೊ ಆ ಅಧ್ಯಕ್ಷನನ್ನು ಅಥವಾ ಇತರ ಸದಸ್ಯನನ್ನು ಅಂಥ ಅಭಿಪ್ರಾಯ ಕೋರಿಕೆಯ ಮೇಲೆ ಸುಪ್ರೀಂ ಕೋರ್ಟ್‌ನಿಂದ ವರದಿ ಸ್ವೀಕರಿಸಿದ ಬಳಿಕ ರಾಷ್ಟ್ರಪತಿಯು ಆದೇಶಗಳನ್ನು ಮಾಡುವವರೆಗೆ ಅಮಾನತಿನಲ್ಲಿ ಇಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT