ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಪಿಎಸ್‌ಸಿ ಕಲಹ: ಅಧ್ಯಕ್ಷರಿಗೆ ಸಡ್ಡು, ಆಯ್ಕೆ ಪಟ್ಟಿಗೆ ಅಸ್ತು

ಕಾರ್ಯದರ್ಶಿಯಿಂದ ಸಭೆ, ನಾಲ್ವರು ಸದಸ್ಯರಿಂದ ಅನುಮೋದನೆ
Published 31 ಜನವರಿ 2024, 23:30 IST
Last Updated 31 ಜನವರಿ 2024, 23:30 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದಲ್ಲಿ (ಕೆಪಿಎಸ್‌ಸಿ) ಅಧ್ಯಕ್ಷ ಮತ್ತು ಕಾರ್ಯದರ್ಶಿಯ ನಡುವೆ ನಡೆಯುತ್ತಿರುವ ಸಂಘರ್ಷ ತಾರಕಕ್ಕೆ ಏರಿದೆ. ಅಧ್ಯಕ್ಷರ ಸೂಚನೆಯನ್ನು ಧಿಕ್ಕರಿಸಿರುವ ಕಾರ್ಯದರ್ಶಿ ಕೆ.ಎಸ್‌. ಲತಾ ಕುಮಾರಿ ಅವರು ಆಯೋಗದ ಸಭೆ ನಡೆಸಿ, ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡಿದ್ದ ವಿವಿಧ ಇಲಾಖೆಗಳ ಒಟ್ಟು 666 ಹುದ್ದೆಗಳ ಅಂತಿಮ ಆಯ್ಕೆ ಪಟ್ಟಿಗೆ ಅನುಮೋದನೆ ಪಡೆದುಕೊಂಡಿದ್ದಾರೆ.

‘ಕರ್ತವ್ಯಲೋಪ ಮತ್ತು ಅಧಿಕಾರ ದುರುಪಯೋಗ, ದುರ್ನಡತೆ ತೋರಿಸಿರುವ ಅಧ್ಯಕ್ಷರು ಮತ್ತು ನಾಲ್ವರು ಸದಸ್ಯರ (ವಿಜಯಕುಮಾರ್‌ ಡಿ. ಕುಚನೂರೆ, ಎಂ.ಬಿ. ಹೆಗ್ಗಣ್ಣವರ, ಬಿ.ವಿ. ಗೀತಾ, ಮುಸ್ತಫಾ ಹುಸೇನ್‌ ಸಯ್ಯದ್‌ ಅಜೀಜ್‌) ಸದಸ್ಯತ್ವ ರದ್ದುಪಡಿಸಲು ಸೂಕ್ತ ಕ್ರಮವಹಿಸಬೇಕು’ ಎಂದು ಕೋರಿ ರಾಜ್ಯಪಾಲರಿಗೆ ಪತ್ರ ಬರೆದ ಬೆನ್ನಲ್ಲೆ, ಕಾರ್ಯದರ್ಶಿಯವರು ಆಯೋಗದ ಸಭೆಯನ್ನು ಬುಧವಾರ ನಡೆಸಿದ್ದಾರೆ.

ಕಾರ್ಯದರ್ಶಿಯ ಸಲಹೆಯಂತೆ ಆಯೋಗದ ಹಿರಿಯ ಸದಸ್ಯ ರೊನಾಲ್ಡ್‌ ಅನಿಲ್‌ ಫರ್ನಾಂಡಿಸ್‌ ಅಧ್ಯಕ್ಷತೆಯಲ್ಲಿ ಬುಧವಾರ ಬೆಳಿಗ್ಗೆ 11 ಗಂಟೆಗೆ ಸಭೆ ನಡೆದಿದೆ. ಸದಸ್ಯರಾದ ಆರ್‌. ಗಿರೀಶ್‌, ಬಿ. ಪ್ರಭುದೇವ ಮತ್ತು ಶಾಂತಾ ಹೊಸಮನಿ ಈ ಸಭೆಗೆ ಹಾಜರಾಗಿದ್ದರು. ತಮ್ಮ ಕಚೇರಿಯಲ್ಲಿಯೇ ಇದ್ದ ಅಧ್ಯಕ್ಷ ಶಿವಶಂಕರಪ್ಪ ಎಸ್‌. ಸಾಹುಕಾರ್‌ ಮತ್ತು ಕೆಲವು ಸದಸ್ಯರು ಹಾಜರಾಗಲಿಲ್ಲ ಎಂದು ಕೆಪಿಎಸ್‌ಸಿ ಮೂಲಗಳು ತಿಳಿಸಿವೆ.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿನ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ (ಎಇಇ) (ಗ್ರೇಡ್‌–1) ಹುದ್ದೆಗಳ ಆಯ್ಕೆ ಪಟ್ಟಿಯೂ ಸೇರಿದಂತೆ ವಿವಿಧ ಇಲಾಖೆಗಳ ಒಟ್ಟು ಒಂಬತ್ತು ನೇಮಕಾತಿ ಅಧಿಸೂಚನೆಗಳ ಅಂತಿಮ ಆಯ್ಕೆ ಪಟ್ಟಿಗೆ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಎಇಇ ತಾತ್ಕಾಲಿಕ ಪಟ್ಟಿಗೆ ಸಲ್ಲಿಕೆಯಾಗಿದ್ದ ಆಕ್ಷೇಪಣೆಗಳ ಪರಿಶೀಲನೆಗೆ ಸದಸ್ಯರಾದ ಶಾಂತಾ ಹೊಸಮನಿ ಅಧ್ಯಕ್ಷತೆಯಲ್ಲಿ ಉಪ ಸಮಿತಿ ರಚಿಸಲಾಗಿತ್ತು. ಸಭೆಯಲ್ಲಿದ್ದ ಅವರ ಅಭಿಪ್ರಾಯ ಮತ್ತು ಪತ್ರ ಪಡೆದು ಎಇಇ ಪಟ್ಟಿಗೆ ಅನುಮೋದನೆ ನೀಡಲಾಗಿದೆ ಎಂದು ಮೂಲಗಳು ಹೇಳಿವೆ.

‘ಬುಧವಾರ ನಿಗದಿಯಾಗಿದ್ದ ಸಭೆಯ ಸೂಚನಾ ಪತ್ರವನ್ನು ಕಾರ್ಯದರ್ಶಿಯು ಎಲ್ಲ ಸದಸ್ಯರಿಗೆ ನೀಡಿದ್ದರು. ಸಭೆ ಆರಂಭವಾಗುತ್ತಿದ್ದಂತೆಯೇ ಅಧ್ಯಕ್ಷರು ಹಾಜರಾಗಿ, ತಾವು ಬೆಳಿಗ್ಗೆ ನೀಡಿದ್ದ ಟಿಪ್ಪಣಿಯನ್ನು ಓದುವಂತೆ ಕಾರ್ಯದರ್ಶಿಗೆ ಸೂಚಿಸಿದರು. ಆ ಟಿಪ್ಪಣಿಯಲ್ಲಿ, ‘ಸಭೆ ಆಯೋಜಿಸುತ್ತಿರುವ ವಿಚಾರ ಆಯೋಗದ ಅಧ್ಯಕ್ಷರ ಗಮನಕ್ಕೆ ತಂದಿಲ್ಲ ಮತ್ತು ಅನುಮತಿ ಪಡೆದಿಲ್ಲ. ಸಭೆಯ ಕಾರ್ಯಸೂಚಿಯ ಬಗ್ಗೆಯೂ ಅಧ್ಯಕ್ಷರ ಬಳಿ ಚರ್ಚಿಸಿಲ್ಲ. ಇದು ಸರಿಯಾದ ಕ್ರಮವಲ್ಲ. ಇನ್ನು ಮುಂದೆ ಅಧ್ಯಕ್ಷರ ಒಪ್ಪಿಗೆ ಪಡೆದು, ಕಾರ್ಯಸೂಚಿಗಳ ಬಗ್ಗೆ ಚರ್ಚಿಸಿ ಸಭೆ ಆಯೋಜಿಸಬೇಕು. ಈ ಬಗ್ಗೆ ಆಯೋಗದ ಸಭೆಗಳ ನಿರ್ಣಯಗಳನ್ನು ಮತ್ತು ಸರ್ಕಾರದ ನಿಯಮಗಳನ್ನು ಪಾಲಿಸಬೇಕು’ ಎಂದು ಅಧ್ಯಕ್ಷರು ಉಲ್ಲೇಖಿಸಿದ್ದರು. ಕಾರ್ಯದರ್ಶಿ ಟಿಪ್ಪಣಿ ಓದಿ ಮುಗಿಸುತ್ತಿದ್ದಂತೆ, ಇಂದಿನ ಸಭೆಯನ್ನು ಮುಂದೂಡುವಂತೆ ಸೂಚಿಸಿ ಅಧ್ಯಕ್ಷರು ಸಭೆಯಿಂದ ತೆರಳಿದರು’ ಎಂದು ಮೂಲಗಳು ಹೇಳಿವೆ.

ಆದರೆ, ಸಭೆಯಲ್ಲಿದ್ದ ಇತರ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಕಾರ್ಯದರ್ಶಿ, ‘ಟಿಪ್ಪಣಿಯಲ್ಲಿ ಅಧ್ಯಕ್ಷರು ತಿಳಿಸಿದ ಎಲ್ಲ ವಿಷಯಗಳನ್ನು ಮೊದಲೇ ಅಧ್ಯಕ್ಷರು ಮತ್ತು ಸದಸ್ಯರಿಗೆ ತಿಳಿಸಿದ್ದೇನೆ. ಅದರ ಅನ್ವಯವೇ ಸಭೆ ಕರೆದಿದ್ದೇನೆ. ಸಭೆಯ ಕಾರ್ಯಸೂಚಿಯಲ್ಲಿ ಅಂತಿಮ ಆಯ್ಕೆ ಪಟ್ಟಿಗಳನ್ನು ಪ್ರಕಟಿಸುವ ಅತ್ಯಂತ ತುರ್ತು ವಿಷಯವೂ ಇದೆ. ಇದು ಜರೂರು ಇರುವುದರಿಂದ ಆಯೋಗದ ಸಭೆಗೆ ಮಂಡಿಸಲಾದ ಅಂತಿಮ ಆಯ್ಕೆ ಪಟ್ಟಿಗೆ ಅನುಮೋದನೆ ನೀಡಬೇಕು ಎಂದು ಕೋರಿದರು. ಸಭೆಯಲ್ಲಿದ್ದ ಎಲ್ಲ ನಾಲ್ವರು (ರೊನಾಲ್ಡ್‌ ಅನಿಲ್‌ ಫರ್ನಾಂಡಿಸ್‌, ಆರ್‌. ಗಿರೀಶ್‌, ಬಿ. ಪ್ರಭುದೇವ ಮತ್ತು ಶಾಂತಾ ಹೊಸಮನಿ) ಅನುಮೋದನೆ ನೀಡಿದ್ದಾರೆ’ ಎಂದೂ ಗೊತ್ತಾಗಿದೆ.

ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಿದ್ದ ಹುದ್ದೆಗಳ ಅಂತಿಮ ಆಯ್ಕೆ ಪಟ್ಟಿ ಹಲವು ತಿಂಗಳುಗಳಿಂದ ಪ್ರಕಟಣೆಗೆ ಬಾಕಿ ಉಳಿದಿತ್ತು. ಅಭ್ಯರ್ಥಿಗಳ ಹಿತದೃಷ್ಟಿಯಿಂದ ಮತ್ತು ಸರ್ಕಾರಕ್ಕೆ ಮುಜುಗರ ಉಂಟಾಗಬಾರದೆಂಬ ಕಾರಣಕ್ಕೆ ಪಟ್ಟಿಗೆ ಸದಸ್ಯರು ಅನುಮೋದನೆ ನೀಡಿದ್ದಾರೆ. ಸಭೆ ಮುಗಿಯುತ್ತಿದ್ದಂತೆ ಅನುಮೋದನೆ ನೀಡಿದ ಆಯ್ಕೆ ಪಟ್ಟಿಗಳನ್ನೂ ಕೆಪಿಎಸ್‌ಸಿ ವೆಬ್‌ಸೈಟ್‌ನಲ್ಲಿ ಕಾರ್ಯದರ್ಶಿ ಅಪ್‌ಲೋಡ್‌ ಮಾಡಿದ್ದಾರೆ. ಅಲ್ಲದೆ, ಈ ಪಟ್ಟಿಗಳನ್ನು ಮುಚ್ಚಿದ ಲಕೋಟೆಯಲ್ಲಿ ಸರ್ಕಾರಕ್ಕೆ ಕಳುಹಿಸಿದ್ದಾರೆ ಎಂದೂ ಗೊತ್ತಾಗಿದೆ.

ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಕಾರ್ಯದರ್ಶಿ ಮತ್ತು ಅಧ್ಯಕ್ಷರಿಗೆ ಕರೆ ಮಾಡಿದರೂ ಸಂಪರ್ಕಕ್ಕೆ ಲಭ್ಯರಾಗಲಿಲ್ಲ.

ಏನಿದು ಜಟಾಪಟಿ?: ಕೆಪಿಎಸ್‌ಸಿಯಲ್ಲಿ ಸದ್ಯ ಅಧ್ಯಕ್ಷ ಮತ್ತು 10 ಸದಸ್ಯರಿದ್ದಾರೆ. ಕೆಪಿಎಸ್‌ಸಿ ಕಾನೂನು ಕೋಶದ ಮುಖ್ಯಸ್ಥರ (ಎಚ್‌ಎಲ್‌ಸಿ) ಆಯ್ಕೆ ವಿಷಯದಲ್ಲಿ ಅಧ್ಯಕ್ಷ ಮತ್ತು ಕೆಲವು ಸದಸ್ಯರ ನಡುವೆ ಸಂಘರ್ಷ ಆರಂಭವಾಯಿತು. ತಾವು ಸೂಚಿಸಿದ ಅಭ್ಯರ್ಥಿಯನ್ನು ಎಚ್‌ಎಲ್‌ಸಿ ಆಗಿ ನೇಮಿಸುವವರೆಗೆ ಆಯೋಗದ ಸಭೆಗಳಿಗೆ ಹಾಜರಾಗುವುದಿಲ್ಲ. ಯಾವುದೇ ನೇಮಕಾತಿ ಅಧಿಸೂಚನೆ ಮತ್ತು ಆಯ್ಕೆ ಪಟ್ಟಿಗಳಿಗೆ ಸಹಿ ಹಾಕುವುದಿಲ್ಲವೆಂದು ಆರು ಸದಸ್ಯರು (ವಿಜಯಕುಮಾರ್‌ ಡಿ. ಕುಚನೂರೆ, ಎಂ.ಬಿ. ಹೆಗ್ಗಣ್ಣವರ, ಡಾ. ಶಾಂತಾ ಹೊಸಮನಿ, ಡಾ.ಎಚ್‌.ಎಸ್‌. ನರೇಂದ್ರ, ಬಿ.ವಿ. ಗೀತಾ, ಮುಸ್ತಫಾ ಹುಸೇನ್‌ ಸಯ್ಯದ್‌ ಅಜೀಜ್‌) ಡಿ. 28ರಂದು ಪತ್ರ ನೀಡಿದ್ದರು. ಕಳೆದ ಒಂದೂವರೆ ತಿಂಗಳಿನಿಂದ ಆಯೋಗದ ‌ಸಭೆ ನಡೆದಿಲ್ಲ. ಈ ಜಟಾಪಟಿಯ ಮಧ್ಯೆಯೇ, ಮುಖ್ಯ ಕಾರ್ಯದರ್ಶಿಯ ಮೂಲಕ ರಾಜ್ಯಪಾಲರಿಗೆ ಜ. 25ರಂದು ಕಾರ್ಯದರ್ಶಿ ಪತ್ರ ಬರೆದಿದ್ದರು.

ಕಾರ್ಯದರ್ಶಿ ವರ್ಗಾವಣೆಗೆ ಯತ್ನ?

ಈ ಮಧ್ಯೆ, ಕಾರ್ಯದರ್ಶಿಯನ್ನು ವರ್ಗಾವಣೆ ಮಾಡಲು ತೆರೆಮರೆಯಲ್ಲಿ ತೀವ್ರ ಯತ್ನ ನಡೆಯುತ್ತಿದೆ ಎಂದು ಗೊತ್ತಾಗಿದೆ. ಕಾರ್ಯದರ್ಶಿಯಾಗಿದ್ದ ವಿಕಾಸ್‌ ಕಿಶೋರ್‌ ಸುರಳ್ಕರ್‌ ಅವರನ್ನೂ ಸರ್ಕಾರದ ಮೇಲೆ ಒತ್ತಡ ತಂದು ವರ್ಗಾವಣೆ ಮಾಡಲಾಗಿತ್ತು. ಇದೀಗ ಲತಾ ಕುಮಾರಿ ಅವರನ್ನೂ ವರ್ಗಾವಣೆ ಮಾಡಲು ಪ್ರಯತ್ನಗಳು ನಡೆಯುತ್ತಿವೆ. ಮುಖ್ಯ ಕಾರ್ಯದರ್ಶಿ, ಡಿಪಿಎಆರ್‌ ಕಾರ್ಯದರ್ಶಿ, ಕೆಲವು ಸಚಿವರನ್ನು ಭೇಟಿ ಮಾಡಿರುವ ಕೆಲವರು ಈ ಯತ್ನ ಮುಂದುವರಿಸಿದ್ದಾರೆ. ಕೆಪಿಎಸ್‌ಸಿ ಅಧ್ಯಕ್ಷರು ಮತ್ತು ಕೆಲವು ಸದಸ್ಯರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಇತ್ತೀಚೆಗೆ ಭೇಟಿ ಮಾಡಿ ಕೆಪಿಎಸ್‌ಸಿಯಲ್ಲಿನ ಬೆಳವಣಿಗೆಗಳ ಬಗ್ಗೆ ವಿವರಿಸಿದ್ದರು. ಕಾರ್ಯದರ್ಶಿಯ ವರ್ಗಾವಣೆ ಮಾಡಬೇಕೆಂಬ ಬೇಡಿಕೆಗೆ ಮುಖ್ಯಮಂತ್ರಿ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ ಎಂದು ಮುಖ್ಯಮಂತ್ರಿ ಸಚಿವಾಲಯದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT