ಗುರುವಾರ, 13 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ | ಹೊಸ ಅಧ್ಯಾಯ ಬರೆಯುವುದೇ ಆರ್‌ಸಿಬಿ?

ಅಭಿಮಾನಿ ಬಳಗವೇ ‘ವಿರಾಟ್ ಶಕ್ತಿ’, ಹತ್ತರಿಂದ ನಾಲ್ಕನೇ ಸ್ಥಾನಕ್ಕೆ ಜಿಗಿದ ಯಶೋಗಾಥೆ
Published 19 ಮೇ 2024, 23:30 IST
Last Updated 19 ಮೇ 2024, 23:30 IST
ಅಕ್ಷರ ಗಾತ್ರ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ರಾತ್ರಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದ ಜಯವು
ಅಭಿಮಾನಿಗಳಲ್ಲಿ ಸಂಭ್ರಮದ ಅಲೆಯನ್ನೇ ಎಬ್ಬಿಸಿತು. ಭಾನುವಾರದ ಬೆಳಗಿನವರೆಗೂ ರಾಜಧಾನಿಯ ರಸ್ತೆಗಳಲ್ಲಿ ಯುವಜನರ ಸಂತಸ ಹೊನಲಾಯಿತು. ತಮ್ಮ ನೆಚ್ಚಿನ ತಂಡ ಪ್ಲೇ ಆಫ್‌ ಹಂತ ಪ್ರವೇಶಿಸಿದ್ದರಿಂದ ಸಂಭ್ರಮ ಮುಗಿಲುಮುಟ್ಟಿತು. ಒಂದುವೇಳೆ ಆರ್‌ಸಿಬಿ ಕಪ್ ಗೆದ್ದರೆ ಹೇಗಿರುತ್ತದೆ?!

ಹಿಂದಿನ 16 ವರ್ಷಗಳಿಂದ ‘ಈ ಸಲ ಕಪ್ ನಮ್ದೇ...’ ಎಂದು ಹೇಳುತ್ತಲೇ ಬಂದಿರುವ ಅಭಿಮಾನಿಗಳ ಉತ್ಕಟ ಪ್ರೀತಿಗಾದರೂ ತಂಡವು ಈ ಸಲ ಟ್ರೋಫಿಗೆ ಮುತ್ತಿಕ್ಕಬೇಕು.ಈ ಬಾರಿಯ ಟೂರ್ನಿಯಲ್ಲಿ ಗೆದ್ದರಂತೂ ಅದು ಕ್ರಿಕೆಟ್ ಇತಿಹಾಸದಲ್ಲಿಯೇ ಹೊಸ ಅಧ್ಯಾಯ ಆಗಲಿದೆ. ಏಕೆಂದರೆ,ಹಿಂದಿನ ಎಲ್ಲ ಆವೃತ್ತಿಗಳಿಗಿಂತಲೂ ಈ ಬಾರಿ ತಂಡವು ನೋವು, ನಲಿವು ಎರಡನ್ನೂ ಕಂಡಿದೆ. ವೈಫಲ್ಯದ ಪ್ರಪಾತ
ದಿಂದ ಮೇಲೆದ್ದು ನಾಲ್ಕರ ಘಟ್ಟಕ್ಕೆ ಬಂದು ನಿಂತಿದೆ.

ಇಂದಿಗೆ ಸರಿಯಾಗಿ ಒಂದು ತಿಂಗಳ ಹಿಂದೆ ಕೋಲ್ಕತ್ತ ನೈಟ್‌ ರೈಡರ್ಸ್‌ ಎದುರು ಬರೀ 1 ರನ್ ಅಂತರದಿಂದ ಆರ್‌ಸಿಬಿ ತಂಡವು ಸೋತಿತು. ಅದು ತಂಡಕ್ಕೆ ಎಂಟನೇ ಪಂದ್ಯ ಹಾಗೂ ಏಳನೇ ಸೋಲಾಗಿತ್ತು. ಅಂಕಪಟ್ಟಿಯಲ್ಲಿ ಎರಡು ಪಾಯಿಂಟ್ಸ್‌ನೊಂದಿಗೆ ಕೊನೆಯ ಸ್ಥಾನದಲ್ಲಿ ಇತ್ತು. ಪ್ರತಿ ಸೋಲಿಗೂ ಸಾಗರದೋಪಾದಿಯಲ್ಲಿ ಟೀಕೆಗಳು ಹರಿದುಬಂದವು. ವ್ಯಂಗ್ಯಗಳು, ಮೀಮ್‌ಗಳಿಗೂ ಕೊರತೆ ಇರಲಿಲ್ಲ. ದಿಗ್ಗಜ ಕ್ರಿಕೆಟಿಗರಿಂದ ಹಿಡಿದು ಸಾಮಾನ್ಯರವರೆಗೂ ವ್ಯಂಗ್ಯವಾಡಿದವರೇ ಹೆಚ್ಚು. ಆದರೆ ಆರ್‌ಸಿಬಿಯ ಕಟ್ಟಾ ಅಭಿಮಾನಿಗಳು ಮಾತ್ರ ತಮ್ಮ ವಿಶ್ವಾಸ ಕಳೆದುಕೊಳ್ಳಲಿಲ್ಲ. ದುಬಾರಿ ಟಿಕೆಟ್‌ಗಳನ್ನು ವಿವಿಧ ಮೂಲಗಳಿಂದ ‘ಹರಸಾಹಸ’ ಮಾಡಿ ಖರೀದಿಸಿ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಲಗ್ಗೆ ಇಡುವುದನ್ನು ಬಿಡಲಿಲ್ಲ. ಅಷ್ಟೇಅಲ್ಲ, ಅಧಿಕೃತ ಪ್ರಸಾರದ ಟಿ.ವಿ. ಮತ್ತು ಆ್ಯಪ್‌ಗಳ ಮೂಲಕವೂ ಆರ್‌ಸಿಬಿ ಪಂದ್ಯವನ್ನು ಲಕ್ಷಾಂತರ ಜನ ವೀಕ್ಷಿಸಿದರು. ಬಹುಶಃ ತಂಡವು ಪುಟಿದೇಳಲು ಶಕ್ತಿ ನೀಡಿದ್ದು ಅಭಿಮಾನಿಗಳ ಈ ಅದಮ್ಯ ಪ್ರೀತಿಯೇ ಇರಬೇಕೇನೊ? 

ತನ್ನ ಒಂಬತ್ತನೇ ಪಂದ್ಯದಲ್ಲಿ ಆರ್‌ಸಿಬಿಯು ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಅದರ ತವರಿನಲ್ಲಿಯೇ ಮಣಿಸುವುದರೊಂದಿಗೆ ಎದ್ದು ನಿಂತಿತು. ಅಲ್ಲಿಂದ ಯಾರಿಗೂ ತಲೆಬಾಗಲಿಲ್ಲ. ಆದರೆ ಕಟ್ಟಕಡೆಯಲ್ಲಿ ಒಂದು ಕಠಿಣವಾದ ಸವಾಲು ಇತ್ತು. ಅದೇ ಚೆನ್ನೈ ಸೂಪರ್ ಕಿಂಗ್ಸ್‌ ತಂಡ. ಹಾಲಿ ಚಾಂಪಿಯನ್ ಚೆನ್ನೈ ತಂಡವು ಆರನೇ ಬಾರಿ ಪ್ರಶಸ್ತಿ ಗೆಲ್ಲುವ ಛಲದಲ್ಲಿತ್ತು. ಆ ತಂಡದ ಯುವನಾಯಕ ಋತುರಾಜ್ ಗಾಯಕವಾಡ ತಮ್ಮ ಛಾಪು ಮೂಡಿಸುವ ಕನಸು ಕಂಡಿದ್ದರು. ಎಲ್ಲಕ್ಕಿಂತ ಮಿಗಿಲಾಗಿ ಆ ತಂಡದ ಆಧಾರಸ್ತಂಭವೇ ಆಗಿರುವ ಮಹೇಂದ್ರಸಿಂಗ್ ಧೋನಿ ಅವರಿಗೆ ಟ್ರೋಫಿ ಗೆದ್ದು ಬೀಳ್ಕೊಡುಗೆ ನೀಡುವ ಭಾವನಾತ್ಮಕ ಸಂಗತಿಯೂ ಬೆಸೆದುಕೊಂಡಿತ್ತು. ಲೀಗ್ ಹಂತದಲ್ಲಿ ತನ್ನ ಕೊನೆಯ ಪಂದ್ಯಕ್ಕೂ ಮುನ್ನ ಚೆನ್ನೈ ತಂಡವು 14 ಅಂಕ ಗಳಿಸಿ ಮೂರನೇ ಸ್ಥಾನದಲ್ಲಿತ್ತು. ಆದರೆ ಪಕ್ಕಾ ತಂಡವಾಗಿ ಆಡಿದ ಬೆಂಗಳೂರು ಬಳಗವು ಮೇಲುಗೈ ಸಾಧಿಸಿ ಇತಿಹಾಸ ಬರೆಯಿತು. ಪಂದ್ಯದ ನಂತರ ತಂಡದ ತಾರೆ ವಿರಾಟ್ ಕೊಹ್ಲಿ ಅವರ ಕಂಗಳಿಂದ ಹರಿದ ಹರ್ಷಧಾರೆಯೇ ಎಲ್ಲವನ್ನೂ ಹೇಳುತ್ತಿತ್ತು.  

ಈ ಟೂರ್ನಿಯ ಅರಂಭದಿಂದಲೂ ‘ಆರೆಂಜ್ ಕ್ಯಾಪ್‌’ ಕಾಪಿಟ್ಟುಕೊಂಡಿರುವ ವಿರಾಟ್ ಕೂಡ ಹಲವು ಟೀಕೆಗಳನ್ನು ಎದುರಿಸಬೇಕಾಯಿತು. ವಿರಾಟ್ ಅವರ ಸ್ಟ್ರೈಕ್‌ರೇಟ್‌ ಬಗ್ಗೆ ಸುನಿಲ್ ಗಾವಸ್ಕರ್ ಟೀಕಿಸಿದರು. ಮುಂಬರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಕೊಹ್ಲಿ ಅವರಿಗೆ ಸ್ಥಾನ ಸಿಗುವುದು ಅನುಮಾನ ಎಂದು ಹೇಳಿದವರು ಮತ್ತೊಬ್ಬರು. ಇವೆಲ್ಲಕ್ಕೂ ಕೊಹ್ಲಿ ಕೂಡ ಖಡಕ್‌ ಆಗಿಯೇ ತಿರುಗೇಟು ನೀಡಿದರು.

ಪ್ರಸ್ತುತ ಕ್ರಿಕೆಟ್‌ನಲ್ಲಿ ಅತ್ಯಂತ ಹೆಚ್ಚು ವರ್ಚಸ್ವಿ, ಪ್ರತಿಭಾವಂತ ಮತ್ತು ಪ್ರಭಾವಿ ಆಟಗಾರ ಕೊಹ್ಲಿ ಎನ್ನುವುದ
ರಲ್ಲಿ ಎರಡು ಮಾತಿಲ್ಲ. ತಮ್ಮ ಬ್ಯಾಟಿಂಗ್, ಫಿಟ್‌ನೆಸ್‌ ಜೊತೆಗೆ ವ್ಯಕ್ತಿತ್ವದಲ್ಲಿಯೇ ಆಕ್ರಮಣಶೀಲತೆಯನ್ನು ಮೈಗೂಡಿಸಿಕೊಂಡಿದ್ದಾರೆ. ಅವರು 2008ರಲ್ಲಿ ಆರ್‌ಸಿಬಿಗೆ ಸೇರ್ಪಡೆಯಾದಾಗ ವೃತ್ತಿಜೀವನದ ಆರಂಭಿಕ ಹಂತದಲ್ಲಿದ್ದರು. ಹಿಂದಿನ ಒಂದೂವರೆ ದಶಕದಲ್ಲಿ ವಿರಾಟ್ ಬೆಳೆದ ರೀತಿ ಅನನ್ಯವಾದುದು. ಅವರ ಪ್ರತಿಭೆ, ವರ್ಚಸ್ಸಿಗೆ ದೊಡ್ಡ ಮೊತ್ತ ಹೂಡಿಕೆ ಮಾಡಲು ಎಲ್ಲ ತಂಡಗಳೂ ಸಿದ್ಧವಾಗಿವೆ. ಆದರೂ ಅವರು ಆರ್‌ಸಿಬಿಯನ್ನು ಬಿಟ್ಟು ಬೇರೆ ತಂಡಗಳಿಗೆ ಹೋಗಲಿಲ್ಲ. ಈ ಅವಧಿಯಲ್ಲಿ ತಂಡವು ಒಂಬತ್ತು ಸಲ ಪ್ಲೇ ಆಫ್ ಪ್ರವೇಶಿಸಿದೆ. ಮೂರು ಬಾರಿ ಫೈನಲ್‌ನಲ್ಲಿ ಎಡವಿದೆ. 

ಎರಡು ವರ್ಷಗಳ ಹಿಂದೆ ನಾಯಕತ್ವ ಬಿಟ್ಟುಕೊಟ್ಟ ವಿರಾಟ್, ನಾಯಕ ಫಫ್ ಡುಪ್ಲೆಸಿ ಅವರ ಭುಜಕ್ಕೆ ಭುಜ ಕೊಟ್ಟು, ತಂಡದಲ್ಲಿರುವ ಯುವ ಆಟಗಾರರಿಗೆ ಸ್ಫೂರ್ತಿ ತುಂಬುತ್ತಿದ್ದಾರೆ.  ‘ಆಟ ಮುಗಿಸುವ ಮುನ್ನ ಯಾವುದೇ ಕೊರಗೂ ಕಾಡದಂತೆ ಎಲ್ಲವನ್ನೂ ಸಾಧಿಸಿ ಹೋಗುವುದೇ ಗುರಿ’ ಎಂದು ತಮ್ಮ ನಿವೃತ್ತಿಯ ಯೋಜನೆ ಕುರಿತು ಪರೋಕ್ಷವಾಗಿ ಹೇಳಿದ್ದರು. ಎಲ್ಲ ಸಾಧನೆಗಳಲ್ಲಿ ಆರ್‌ಸಿಬಿ ಕಪ್ ಗೆಲ್ಲುವುದು ಕೂಡ ಎಂಬುದೂ ಅವರ ಮಾತುಗಳಲ್ಲಿ ಧ್ವನಿಸಿತ್ತು.  

ತಂಡದಲ್ಲಿ ವಿರಾಟ್ ಇರುವಾಗಲೇ ಪ್ರಶಸ್ತಿ ಗೆದ್ದರೆ ಆರ್‌ಸಿಬಿಯ ‘ಬ್ರ್ಯಾಂಡ್‌ ಮೌಲ್ಯ’ ಮತ್ತಷ್ಟು ಎತ್ತರಕ್ಕೆ ಏರುವುದರಲ್ಲಿ ಅನುಮಾನವಿಲ್ಲ. ಅಷ್ಟೇಅಲ್ಲ, ಈ ಸಲ ಕಪ್ ಜಯಿಸಿದರೆ ತಂಡದಲ್ಲಿರುವ ಯುವ ಆಟಗಾರರ ಭವಿಷ್ಯದ ಬಾಗಿಲು ತೆರೆಯಲಿದೆ. ಹೋದ ವರ್ಷ ಗುಜರಾತ್ ಟೈಟನ್ಸ್‌ನಲ್ಲಿದ್ದ ಎಡಗೈ ವೇಗಿ ಯಶ್ ದಯಾಳ್ ಅವರ ಒಂದೇ ಓವರ್‌ನಲ್ಲಿ ರಿಂಕು ಸಿಂಗ್ ಅವರು ಐದು ಸಿಕ್ಸರ್ ಬಾರಿಸಿದ್ದರು. ಆಗ ಯಶ್ ಅಪಾರ
ಟೀಕೆಗೊಳಗಾಗಿದ್ದರು. ನಂತರದ ಹರಾಜು ಪ್ರಕ್ರಿಯೆಯಲ್ಲಿ ಆರ್‌ಸಿಬಿಯು ₹ 5 ಕೋಟಿ ಕೊಟ್ಟು ಅವರನ್ನು ಖರೀದಿಸಿತ್ತು. ಇದರಿಂದಾಗಿ ತಂಡದ ವ್ಯವಸ್ಥಾಪನ ಮಂಡಳಿ ಟೀಕೆಗೆ ಗುರಿಯಾಗಿತ್ತು. ಆದರೆ ಈಗ ಅದೇ ಯಶ್, ಚೆನ್ನೈ ಎದುರಿನ ಪಂದ್ಯದ ಕೊನೆಯ ಓವರ್‌ನಲ್ಲಿ ಆರ್‌ಸಿಬಿಗೆ ಗೆಲುವಿನ ಕಾಣಿಕೆ ನೀಡಿದರು. 

ಆಸ್ಟ್ರೇಲಿಯಾದ ಕ್ಯಾಮರಾನ್ ಗ್ರೀನ್ ಅವರು ಆರಂಭಿಕ ಪಂದ್ಯಗಳಲ್ಲಿ ವೈಫಲ್ಯ ಅನುಭವಿಸಿದ್ದರು.
ಆಗ ಟಿ.ವಿ. ವೀಕ್ಷಕ ವಿವರಣೆಗಾರರು ಕಟುವಾಗಿ ಟೀಕಿಸಿದ್ದರು. ಬಾಲ್ಯದಿಂದಲೂ ಮೂತ್ರಪಿಂಡದ ಕಾಯಿಲೆ ಇದ್ದರೂ ಉತ್ತಮ ಆಲ್‌ರೌಂಡರ್ ಆಗಿ ಬೆಳೆದಿರುವ ಗ್ರೀನ್, ಆರ್‌ಸಿಬಿಯ ಸತತ ಆರು ಪಂದ್ಯಗಳ ಜಯದಲ್ಲಿ ಮಹತ್ವದ ಕಾಣಿಕೆ ನೀಡಿದ್ದಾರೆ. ವಿಶ್ವಕಪ್ ಟೂರ್ನಿಯಲ್ಲಿ ಆಡಲು ಆಯ್ಕೆಯಾಗಿರುವ ಮೊಹಮ್ಮದ್ ಸಿರಾಜ್, ಬಹುತೇಕ ತಮ್ಮ ಜೀವನದ ಕೊನೆಯ ಐಪಿಎಲ್ ಆಡುತ್ತಿರುವ ದಿನೇಶ್ ಕಾರ್ತಿಕ್, ಹರಾಜಿನಲ್ಲಿ ಮ್ಯಾನೇಜ್‌
ಮೆಂಟ್‌ನವರು ಆಯ್ಕೆ ಮಾಡಿಕೊಂಡು ಬಂದ ‘ಹಿಂದಿನ ಬೆಂಚಿನ’ ಹುಡುಗರನ್ನು ಕಟ್ಟಿಕೊಂಡು ತಂಡವನ್ನು ನಾಲ್ಕರ ಘಟ್ಟಕ್ಕೆ ತಂದಿರುವ ಆರ್‌ಸಿಬಿ ನಾಯಕ ಡುಪ್ಲೆಸಿ ಹಾಗೂ ಅಪಾರ ಅಭಿಮಾನಿ ಬಳಗಕ್ಕೆ ಪ್ರಶಸ್ತಿ ಜಯಿಸಿದ ಖುಷಿ ಅನುಭವಿಸುವ ಅವಕಾಶವನ್ನು ದೊರಕಿಸುವುದಕ್ಕಾದರೂ ಯುವಪಡೆ ಟ್ರೋಫಿ ಜಯಿಸಬೇಕಿದೆ.

ಇದರಿಂದಾಗಿ, ಕ್ರಿಕೆಟ್‌ ಜಗತ್ತಿನಲ್ಲಿ ಛಾಪು ಮೂಡಿಸಲು ಹಾತೊರೆಯುತ್ತಿರುವ ರಜತ್ ಪಾಟೀದಾರ್, ಸ್ವಪ್ನಿಲ್ ಸಿಂಗ್, ವೈಶಾಖ ವಿಜಯಕುಮಾರ್, ಮಹಿಪಾಲ್ ಲೊಮ್ರೊರ್ ಹಾಗೂ ಅನುಭವಿ ಕರ್ಣ ಶರ್ಮಾ ರಾತ್ರಿ
ಬೆಳಗಾಗುವುದರಲ್ಲಿ ತಾರೆಗಳಾಗಬಹುದು. 

ಈ ಹಿಂದೆ ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್,  ಎಬಿ ಡಿವಿಲಿಯರ್ಸ್, ಕ್ರಿಸ್ ಗೇಲ್, ಕೆ.ಎಲ್.ರಾಹುಲ್, ರಾಬಿನ್ ಉತ್ತಪ್ಪ, ಬ್ರೆಂಡನ್ ಮೆಕಲಂ, ಮನೀಷ್ ಪಾಂಡೆ ಅವರಂತಹ ಖ್ಯಾತನಾಮರು ಇದ್ದಾಗಲೂ ತಂಡಕ್ಕೆ ಪ್ರಶಸ್ತಿ ಜಯಿಸುವುದು ಸಾಧ್ಯವಾಗಿರಲಿಲ್ಲ. ಅಂದು ಅವರೆಲ್ಲ ಕಂಡ ಕನಸುಗಳನ್ನು ನನಸು ಮಾಡುವ ಅವಕಾಶ ಈಗ ರಾಯಲ್ ಚಾಲೆಂಜರ್ಸ್‌ಗೆ ಇದೆ. ಅದಕ್ಕಾಗಿ ಮುಂದಿರುವ ಪ್ಲೇ ಆಫ್ ಹಂತದ ಸವಾಲು ಮೀರಿ ನಿಲ್ಲಬೇಕಿದೆ.

ಹಿಂದಿನ ಆರು ಪಂದ್ಯಗಳಲ್ಲಿ ಕಂಡುಬಂದಂತಹ ಹೋರಾಟದ ಮನೋಭಾವವೇ ಮುಂದುವರಿದರೆ,
‘ಈ ಸಲ ಕಪ್ ನಮ್ಮದಾಯಿತು’ ಎಂಬ ಹೊಸ ಘೋಷವಾಕ್ಯ ಪ್ರತಿಧ್ವನಿಸಬಹುದಲ್ಲವೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT