ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಪಿಎಸ್‌ಸಿ: ಅಧ್ಯಕ್ಷ, ಕಾರ್ಯದರ್ಶಿ ‘ಸಂಘರ್ಷ’ ತೀವ್ರ; ಸಿಎಸ್‌ಗೆ ಪತ್ರ

ರಾಜ್ಯಪಾಲರಿಂದ ತಿಳಿವಳಿಕೆ ಕೊಡಿಸಿ: ಸಿಎಸ್‌ಗೆ ಪತ್ರ
Published 20 ಜನವರಿ 2024, 22:16 IST
Last Updated 20 ಜನವರಿ 2024, 22:16 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದಲ್ಲಿ (‌ಕೆಪಿಎಸ್‌ಸಿ) ಅಧ್ಯಕ್ಷರು ಮತ್ತು ಕೆಲವು ಸದಸ್ಯ‌ರು ಹಾಗೂ ಕಾರ್ಯದರ್ಶಿ ನಡುವಿನ ‘ಸಂಘರ್ಷ’ ಮತ್ತಷ್ಟು ತೀವ್ರಗೊಂಡಿದ್ದು, ಪ್ರಕರಣ ರಾಜ್ಯ ಸರ್ಕಾರದ ಅಂಗಳ ತಲುಪಿದೆ. ಅಧ್ಯಕ್ಷರು ಮತ್ತು ಸದಸ್ಯರಿಗೆ ರಾಜ್ಯಪಾಲರ ಮೂಲಕ ತಿಳಿವಳಿಕೆ ಕೊಡಿಸಬೇಕು ಎಂದು ಮುಖ್ಯ ಕಾರ್ಯದರ್ಶಿ ರಜನೀಶ್‌ ಗೋಯಲ್‌ಗೆ ಕೆಪಿಎಸ್‌ಸಿ ಕಾರ್ಯದರ್ಶಿ ಕೆ.ಎಸ್‌. ಲತಾ ಕುಮಾರಿ ಪತ್ರ ಬರೆದಿದ್ದಾರೆ. 

‘ಆಯೋಗ ಮತ್ತು ಸರ್ಕಾರಕ್ಕೆ ಮುಜುಗರ ಉಂಟಾಗದ ರೀತಿಯಲ್ಲಿ ಪಾರದರ್ಶಕತೆ ಮತ್ತು ದಕ್ಷತೆಯಿಂದ ಕಾರ್ಯನಿರ್ವಹಿಸುವಂತೆ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರಿಗೆ ಅರಿವು ಮೂಡಿಸಬೇಕು. ವಿವಿಧ ಹುದ್ದೆಗಳಿಗೆ ನಿಯಮಾನುಸಾರ ಆಯ್ಕೆ ಪೂರ್ಣಗೊಳಿಸಲು ಸೂಚನೆ ನೀಡಬೇಕು’ ಎಂದೂ ಕಾರ್ಯದರ್ಶಿ ಮನವಿ ಮಾಡಿದ್ದಾರೆ’ ಎಂದು ಸರ್ಕಾರದ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಕೆಪಿಎಸ್‌ಸಿ ಕಾನೂನು ಕೋಶದ ಮುಖ್ಯಸ್ಥ (ಎಚ್‌ಎಲ್‌ಸಿ) ಹುದ್ದೆಗೆ ನೇಮಕಾತಿಗೆ ಸಂಬಂಧಿಸಿದಂತೆ ಈ ಪತ್ರ ಬರೆಯಲಾಗಿದೆ. ‘ಆಯೋಗದ ಸಿಬ್ಬಂದಿ ಜತೆ ಐವರು ಸದಸ್ಯರು ಅನುಚಿತವಾಗಿ ವರ್ತಿಸಿದ್ದಾರೆ. ಬಳಿಕ, ಕಚೇರಿಗೆ ಗೈರು ಹಾಜರಾಗಿರುವ ಈ ಸಿಬ್ಬಂದಿ, ವಯೋನಿವೃತ್ತಿಗೆ ಕೋರಿಕೆ ಸಲ್ಲಿಸಿದ್ದು, ಭಯದ ವಾತಾವರಣ ಉಂಟು ಮಾಡಿದೆ’ ಎಂದೂ ಪತ್ರದಲ್ಲಿ ಉಲ್ಲೇಖಿಸಿದ್ದಾಗಿ ತಿಳಿದುಬಂದಿದೆ.

‘ನ್ಯಾಯಾಲಯ ಹಾಗೂ ನ್ಯಾಯಾಂಗ ನಿಂದನಾ ಪ್ರಕರಣಗಳಲ್ಲಿಯೂ ಕಾರ್ಯದರ್ಶಿಯನ್ನೇ ಪ್ರತಿವಾದಿಯಾಗಿ ಮಾಡಲಾಗುತ್ತದೆ. ಎಚ್‌ಎಲ್‌ಸಿ ಹುದ್ದೆ ಭರ್ತಿಗೆ ಕಾರ್ಯದರ್ಶಿಯ ಸಹಮತ ಅಗತ್ಯ. ಆಯೋಗದ ಆಯ್ಕೆ ಸಮಿತಿ ನಡೆಸಿದ ಎಚ್‌ಎಲ್‌ಸಿ ಆಯ್ಕೆ ಪ್ರಕ್ರಿಯೆ ಪಾರದರ್ಶಕವಾಗಿರದ ಕಾರಣ ಕಡತವನ್ನು ಹಿಂದಿರುಗಿಸಿ, ವಿವರ ಕೇಳಲಾಗಿತ್ತು. ಇಂತಹ ಅಸಂಬದ್ಧ ಪ್ರಶ್ನೆಗಳನ್ನು ಕೇಳದೇ, ಸಮಿತಿಯ ನಿರ್ಣಯದಂತೆ ಎಚ್‌ಎಲ್‌ಸಿ ನೇಮಕಾತಿ ಆದೇಶ ಹೊರಡಿಸುವಂತೆ ಆಯೋಗದ ಅಧ್ಯಕ್ಷರು ಸೂಚಿಸಿದ್ದರು‘ ಎಂದು ಕಾರ್ಯದರ್ಶಿ ಪತ್ರದಲ್ಲಿ ವಿವರಿಸಿದ್ದಾರೆ.

‘ಎಚ್‌ಎಲ್‌ಸಿ ನೇಮಕಾತಿಯನ್ನು ಮುಂದಿಟ್ಟು ಅಧ್ಯಕ್ಷರು ಮತ್ತು ಕೆಲವು ಸದಸ್ಯರು ಆಯ್ಕೆ ಪಟ್ಟಿಗೆ ಅನುಮೋದನೆ ನೀಡುವುದಿಲ್ಲ ಎಂದಿರುವುದು ಅಸಾಂವಿಧಾನಿಕ. ಅಭ್ಯರ್ಥಿಗಳ ಹಿತದೃಷ್ಟಿಯಿಂದ ಮತ್ತು ಕೆಪಿಎಸ್‌ಸಿ ಮತ್ತು ರಾಜ್ಯದ ಹಿತಾಸಕ್ತಿ ಕಾಪಾಡುವ ಉದ್ದೇಶದಿಂದ ಬಾಕಿ ಇರುವ ಕಡತಗಳನ್ನು ತಕ್ಷಣ ವಿಲೇ ಮಾಡಬೇಕಿದೆ’ ಎಂದೂ ಪತ್ರದಲ್ಲಿ ಕಾರ್ಯದರ್ಶಿ ತಿಳಿಸಿದ್ದಾರೆ ಎಂದೂ ಮೂಲಗಳು ಹೇಳಿವೆ.

‘ಭಯದ ವಾತಾವರಣವಿದೆ– ಸ್ವಯಂ ನಿವೃತ್ತಿ ಕೊಡಿ’

‘ಜ. 12ರಂದು ನಡೆದ ಆಯೋಗದ ಸಭೆಯ ನಡಾವಳಿಯನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸುವಂತೆ ಅಧ್ಯಕ್ಷರು ಆದೇಶಿಸಿದ್ದ ಪ್ರತಿಯನ್ನು ಕಾರ್ಯದರ್ಶಿ ಮೂಲಕ ಕಳುಹಿಸದೆ ನೇರವಾಗಿ ಗಣಕ ಕೇಂದ್ರಕ್ಕೆ ಕಳುಹಿಸಲಾಗಿತ್ತು. ಎಲ್ಲ ಆಡಳಿತಾತ್ಮಕ ಕಾರ್ಯಗಳಿಗೆ ಕಾರ್ಯದರ್ಶಿಯೇ ಮುಖ್ಯಸ್ಥರಾಗಿರುವುದರಿಂದ, ಅವರ ಒಪ್ಪಿಗೆ ಪಡೆಯಲು ಗಣಕ ಕೇಂದ್ರದ ಮುಖ್ಯಸ್ಥೆ ಶೋಭಾ ಬಸವರಾಜು ಮುಂದಾಗಿದ್ದರು. ಆದರೆ, ಆಯೋಗದ ಸದಸ್ಯರಾದ ವಿಜಯಕುಮಾರ್‌ ಡಿ. ಕುಚನೂರೆ, ಎಂ.ಬಿ. ಹೆಗ್ಗಣ್ಣವರ್, ಬಿ.ವಿ. ಗೀತಾ ಮತ್ತು ಮುಸ್ತಫಾ ಹುಸೇನ್‌ ಸಯ್ಯದ್‌ ಅಜೀಜ್‌ ಅವರು ಗಣಕ ಕೇಂದ್ರಕ್ಕೆ ಏಕಾಏಕಿ ಬಂದು ತಕ್ಷಣವೇ ವೆಬ್‌ಸೈಟ್‌ನಲ್ಲಿ ಪ್ರಕಟಿಸುವಂತೆ ಒತ್ತಡ ಹೇರಿದ್ದಾರೆ.

‘ಅಧ್ಯಕ್ಷರೇ ಆದೇಶ ನೀಡಿರುವಾಗ ಕಾರ್ಯದರ್ಶಿಯ ಆದೇಶ ಏಕೆ ಬೇಕು?’ ಎಂದು ಏರುಧ್ವನಿಯಲ್ಲಿ ಪ್ರಶ್ನಿಸಿದ್ದಾರೆ. ‘31 ವರ್ಷಗಳ ಸೇವಾ ಅವಧಿಯಲ್ಲಿ ಎಂದೂ ಈ ರೀತಿಯ ಘಟನೆ ಆಗಿಲ್ಲ. ಎಲ್ಲ ಸಹೋದ್ಯೋಗಿಗಳ ಮುಂದೆ ನನ್ನನ್ನು ಅವಮಾನಿಸಿರುವುದರಿಂದ ನನಗೆ ಮಾನಸಿಕವಾಗಿ ನೋವಾಗಿದೆ. ಇಂತಹ ಉಸಿರುಗಟ್ಟಿಸುವ ಮತ್ತು ಭಯದ ವಾತಾವರಣದಲ್ಲಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲದ ಕಾರಣ ನನಗೆ ಸ್ವಯಂ ನಿವೃತ್ತಿ ನೀಡಬೇಕು’ ಎಂದು ಕಾರ್ಯದರ್ಶಿಗೆ ಶೋಭಾ ಪತ್ರ ನೀಡಿದ್ದಾರೆ. ಗಣಕ ಕೇಂದ್ರದ 10 ಸಿಬ್ಬಂದಿ ಈ ಘಟನೆಗೆ ಸಾಕ್ಷಿಯಾಗಿ ಸಹಿ ಹಾಕಿದ್ದಾರೆ’ ಎಂದು ಕೆ‍ಪಿಎಸ್‌ಸಿ ಮೂಲಗಳು ತಿಳಿಸಿವೆ.

ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಕೆಪಿಎಸ್‌ಸಿ ಕಾರ್ಯದರ್ಶಿಗೆ ಕರೆ ಮಾಡಿದರೂ ಅವರು ಸಂಪರ್ಕಕ್ಕೆ ಲಭ್ಯರಾಗಲಿಲ್ಲ.

‘ಎಚ್‌ಎಲ್‌ಸಿಯಿಂದ ರಾಜೀನಾಮೆ ಪಡೆಯಲು ಕಾರಣವಾದ ₹ 12 ಲಕ್ಷ ವೆಚ್ಚ’
‘ಕಾನೂನು ಕೋಶದ ಮುಖ್ಯಸ್ಥರಾಗಿದ್ದ (ಎಚ್‌ಎಲ್‌ಸಿ) ಎಸ್‌.ಎಚ್‌. ಹೊಸಗೌಡರ್‌ ಅವರ ಅವಧಿ 2024ರ ಅ. 23ರವರೆಗೂ ಇತ್ತು. ಆದರೆ, ಕೋರ್ಟ್‌ನಲ್ಲಿರುವ ಆಯೋಗದ ಅಧ್ಯಕ್ಷರ ವೈಯಕ್ತಿಕ ಪ್ರಕರಣದಲ್ಲಿ ವಕೀಲರಿಗೆ ಪಾವತಿಸಬೇಕಿದ್ದ ಸಂಭಾವನೆ ₹ 12 ಲಕ್ಷಕ್ಕೂ ಹೆಚ್ಚಿನ ಮೊತ್ತವನ್ನು ಆಯೋಗದಿಂದ ಪಾವತಿಸಬೇಕೆಂದು ಅಭಿಪ್ರಾಯ ನೀಡಲು ನಿರಾಕರಿಸಿದ್ದ ಹೊಸಗೌಡರ್‌, ‘ನ್ಯಾಯಾಲಯದ ಪ್ರಕರಣ ವೈಯಕ್ತಿಕವಾಗಿದ್ದು, ಸ್ವಂತ ವೆಚ್ಚದಿಂದ ಭರಿಸಬೇಕು’ ಎಂದು ಅಭಿಪ್ರಾಯ ನೀಡಿದ್ದರು. ಈ ಕಾರಣಕ್ಕೆ ಹೊಸಗೌಡರ್‌ ಮೇಲೆ ಒತ್ತಡ ಹೇರಿ ಬಲವಂತವಾಗಿ ರಾಜೀನಾಮೆ ಪತ್ರ ಪಡೆಯಲಾಗಿದೆ. ಅಲ್ಲದೆ, ಹೊಸಗೌಡರ್‌ ಅವರನ್ನು ಕರ್ತವ್ಯದಿಂದ ಬಿಡುಗಡೆ ಮಾಡುವಂತೆ ಕಾರ್ಯದರ್ಶಿಗೆ ಸೂಚಿಸಿ, ಈ ವಿಷಯವನ್ನು ಆಯೋಗದ ಸಭೆಗೆ ಮಂಡಿಸಲು ಸೂಚಿಸಲಾಗಿದೆ. ಕಾನೂನು ಕೋಶದ ಮುಖ್ಯಸ್ಥರು ಯಾವುದೇ ಒತ್ತಡಕ್ಕೆ ಮಣಿಯದೆ, ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಅಧ್ಯಕ್ಷರು ಮತ್ತು ಸದಸ್ಯರು ಅವಕಾಶ ನೀಡದಿರುವುದು ಈ ಹಿಂದೆಯೂ ನಡೆದಿದೆ’ ಎಂಬುದಾಗಿ ಪತ್ರದಲ್ಲಿ ಕಾರ್ಯದರ್ಶಿ ವಿವರಿಸಿದ್ದಾರೆ ಎಂದೂ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT