ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾನೂನು ಆಯೋಗಕ್ಕೆ ಪತ್ರ ಬರೆದ ಕೆಪಿಎಸ್‌ಸಿ ಅಧ್ಯಕ್ಷ

‘ಕಾರ್ಯದರ್ಶಿಗಳಿಂದ ನಿಯಮ ಉಲ್ಲಂಘನೆ ಆರೋಪ‘
Published 5 ಫೆಬ್ರುವರಿ 2024, 23:30 IST
Last Updated 5 ಫೆಬ್ರುವರಿ 2024, 23:30 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯ ಸರ್ಕಾರ ರೂಪಿಸಿರುವ ನಿಯಮಗಳಡಿ ಕೆಪಿಎಸ್‌ಸಿ ಮತ್ತು ಆಯೋಗದ ಕಾರ್ಯದರ್ಶಿಗೆ ಇರುವ ಅಧಿಕಾರಗಳ ಕುರಿತು ಕಾನೂನು ಸಲಹೆ ನೀಡುವಂತೆ ರಾಜ್ಯ ಕಾನೂನು ಆಯೋಗದ ಅಧ್ಯಕ್ಷ ಎಸ್‌. ಆರ್‌. ಬನ್ನೂರುಮಠ ಅವರಿಗೆ ಕೆಪಿಎಸ್‌ಸಿ ಅಧ್ಯಕ್ಷ ಶಿವಶಂಕರಪ್ಪ ಎಸ್‌. ಸಾಹುಕಾರ್‌ ಅವರು ಪತ್ರ ಬರೆದಿದ್ದಾರೆ.

‘ಆಯೋಗವು ಸಾಂವಿಧಾನಿಕ ಸಂಸ್ಥೆಯಾಗಿದ್ದು, ಸಂವಿಧಾನದ ವಿಧಿ 315ರಿಂದ 320ರವರೆಗೆ‌ ಆಯೋಗದ ರಚನೆ ಮತ್ತು ಕಾರ್ಯನಿರ್ವಹಣೆ ಕುರಿತು ವಿವರಿಸಲಾಗಿದೆ. ಎಲ್ಲ ನೇಮಕಾತಿ ಮತ್ತು ಇಲಾಖಾ ಪರೀಕ್ಷೆಗಳ ಪ್ರಕ್ರಿಯೆಗಳು ಆಯೋಗದ ಆದೇಶ, ನಿರ್ದೇಶನದ ಅನುಸಾರ ನಡೆಯಬೇಕಿದೆ. ಆದರೆ, ಆಯೋಗಕ್ಕೆ ಕಾರ್ಯದರ್ಶಿಗಳಾಗಿ ನಿಯೋಜನೆಗೊಳ್ಳುವ ಕೆಲವು ಐಎಎಸ್‌ ಅಧಿಕಾರಿಗಳು ತಾವೇ ಆಯೋಗ ಎಂಬಂತೆ ವರ್ತಿಸಿ ಕಾರ್ಯನಿರ್ವಹಿಸುತ್ತಿದ್ದಾರೆ’ ಎಂದು ಪತ್ರದಲ್ಲಿ ಅವರು ದೂರಿದ್ದಾರೆ.

‘ಆಯೋಗದ ಹಿಂದಿನ ಕಾರ್ಯದರ್ಶಿ ಸುರಳ್ಕರ್‌ ವಿಕಾಸ್‌ ಕಿಶೋರ್‌ ಮತ್ತು ಹಾಲಿ ಕಾರ್ಯದರ್ಶಿ ಕೆ.ಎಸ್‌. ಲತಾಕುಮಾರಿ ಅವರು ಆಯೋಗದ ಅನುಮೋದನೆ ಪಡೆಯದೆ ಮತ್ತು ಗಮನಕ್ಕೆ ತಾರದೆ ಕಾರ್ಯನಿರ್ವಹಿಸಿದ್ದಾರೆ. ಆಯೋಗದ ಅಧ್ಯಕ್ಷರ ಜೊತೆ ಸಮಾಲೋಚನೆ ನಡೆಸದೆ ವಿಶೇಷ ಸಭೆಗಳನ್ನು ನಿಗದಿಪಡಿಸಿದ್ದಾರೆ. ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಎಲ್ಲ ಅಭ್ಯರ್ಥಿಗಳು ಗಳಿಸಿರುವ ಅಂಕಗಳನ್ನು ಅರ್ಹತಾ ಪಟ್ಟಿಯ ಜೊತೆ ವೆಬ್‌ಸೈಟ್‌ನಲ್ಲಿ ಪ್ರಕಟಿಸುವ ಮೂಲಕ ನಿಯಮ ಉಲ್ಲಂಘಿಸಿದ್ದಾರೆ’ ಎಂದು ಅವರು ಪತ್ರದಲ್ಲಿ ದೂರಿದ್ದಾರೆ.

‘ಹಿಂದಿನ ಕಾರ್ಯದರ್ಶಿಯ ವಿರುದ್ಧ ಹೈಕೋರ್ಟ್‌ನಲ್ಲಿ ದಾಖಲಾಗಿದ್ದ ನ್ಯಾಯಾಂಗ ನಿಂದನಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ಎಸ್‌ಎಲ್‌ಪಿ ಸಲ್ಲಿಸಲು ವಕೀಲರ ನೇಮಕಕ್ಕೆ ಮತ್ತು ಶುಲ್ಕ ಪಾವತಿಗೆ ಹಾಲಿ ಕಾರ್ಯದರ್ಶಿ ಆಯೋಗದ ಅನುಮೋದನೆ ಪಡೆದಿಲ್ಲ. ರಾಜ್ಯೇತರ ಸಿವಿಲ್‌ ಸರ್ವೀಸ್‌ಗೆ ಸಂಬಂಧಿಸಿದ ಪರೀಕ್ಷೆ ನಡೆಸುವ ಸಂಬಂಧ ಆಯೋಗದ ನಿರ್ಣಯವನ್ನು ಪಾಲಿಸದೆ ಮತ್ತು ಆಯೋಗದ ಅನುಮೋದನೆ ಪಡೆಯದೆ ಪರೀಕ್ಷೆ ನಡೆಸಿದ್ದಾರೆ. ಪೂರ್ಣ ಆಯೋಗದ ಅನುಮೋದನೆ ಪಡೆಯದೆ ಒಂಬತ್ತು ಅಂತಿಮ ಆಯ್ಕೆ ಪಟ್ಟಿಗಳನ್ನು ಪ್ರಕಟಿಸಿದ್ದಾರೆ. ಶಿಷ್ಟಾಚಾರದ ನಿಯಮಗಳನ್ನು ಮೀರಿ ಅಧ್ಯಕ್ಷರು ಮತ್ತು ಸದಸ್ಯರ ವಿರುದ್ಧ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ’ ಎಂದೂ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

‘ನಿಯಮ ಮತ್ತು ಆಯೋಗದ ನಿರ್ಣಯಗಳ ವಿರುದ್ಧ ಕಾರ್ಯದರ್ಶಿಗಳು ಕಾರ್ಯನಿರ್ವಹಿಸುತ್ತಿರುವುದು ಕಾನೂನಾತ್ಮಕವಾಗಿದೆಯೇ ಎಂಬ ಬಗ್ಗೆ ಕಾನೂನು ಸಲಹೆ ನೀಡಬೇಕು’ ಎಂದೂ ಅವರು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT