ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಪಿಎಸ್‌ಸಿ ‘ಅಸಾಂವಿಧಾನಿಕ ಆಯ್ಕೆ’ಗೆ ಅಸ್ತು?

ಎಚ್‌ಎಲ್‌ಸಿ ಹುದ್ದೆ– ಕಾಯಂ ಕಾರ್ಯದರ್ಶಿ ಹೊರಗಿಟ್ಟು ನೇಮಕ
Published 13 ಫೆಬ್ರುವರಿ 2024, 15:40 IST
Last Updated 13 ಫೆಬ್ರುವರಿ 2024, 15:40 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದಲ್ಲಿ (‌ಕೆಪಿಎಸ್‌ಸಿ) ಅಧ್ಯಕ್ಷ ಹಾಗೂ ಕೆಲವು ಸದಸ್ಯರು ಮತ್ತು ಕಾರ್ಯದರ್ಶಿ ನಡುವೆ ಸಂಘರ್ಷಕ್ಕೆ ಕಾರಣವಾಗಿದ್ದ ಕಾನೂನು ಕೋಶದ ಮುಖ್ಯಸ್ಥ (ಎಚ್‌ಎಲ್‌ಸಿ) ಹುದ್ದೆಗೆ ನಿವೃತ್ತ ನ್ಯಾ‌ಯಾಧೀಶ ಎಸ್‌.ಬಿ. ವಸ್ತ್ರದಮಠ ನೇಮಕಕ್ಕೆ ಅನುಮೋದನೆ ನೀಡಲಾಗಿದೆ. ನ. 15ರಂದು ಹೊರಡಿಸಿದ್ದ ನೇಮಕಾತಿ ಅಧಿಸೂಚನೆಯಂತೆ ಈ ನೇಮಕಾತಿ ನಡೆದಿದೆ.

ಕೆಪಿಎಸ್‌ಸಿ ಕಾರ್ಯದರ್ಶಿಯಾಗಿದ್ದ ಕೆ.ಎಸ್‌. ಲತಾಕುಮಾರಿ ‌ಅವರು ಫೆ. 7ರಿಂದ 10 ದಿನಗಳ ರಜೆಯಲ್ಲಿ ತೆರಳಿದ ಕಾರಣ ಆ ಹುದ್ದೆಯನ್ನು ಸಮಾಜ ಕಲ್ಯಾಣ ಇಲಾಖೆಯ ಆಯುಕ್ತ ರಾಕೇಶ್ ಕುಮಾರ್ ಅವರಿಗೆ ಹೆಚ್ಚುವರಿಯಾಗಿ ನೀಡಲಾಗಿತ್ತು. ರಾಕೇಶ್‌ ಕುಮಾರ್‌ ಅವರ ಸಭಾ ಸೂಚನೆಯಂತೆ ಮಂಗಳವಾರ (ಫೆ.13) ಆಯೋಗದ ಸಭೆ ನಡೆದಿದೆ. ಅಧ್ಯಕ್ಷ ಮತ್ತು ಎಲ್ಲ 10 ಸದಸ್ಯರು ಸಭೆಯಲ್ಲಿದ್ದು, ವಸ್ತ್ರದಮಠ ಅವರ ನೇಮಕಕ್ಕೆ ಅನುಮೋದನೆ ಪಡೆಯಲಾಗಿದೆ ಎಂದು ಕೆಪಿಎಸ್‌ಸಿ ಮೂಲಗಳು ತಿಳಿಸಿವೆ.‌

ಎಚ್‌ಎಲ್‌ಸಿ ಹುದ್ದೆಗೆ ನೇಮಕಕ್ಕೆ ನ. 15ರಂದು ಹೊರಡಿಸಿದ್ದ ಅಧಿಸೂಚನೆಯನ್ನು ಆಡಳಿತಾತ್ಮಕ ಕಾರಣ ನೀಡಿ ಲತಾಕುಮಾರಿ ಅವರು ಹಿಂಪಡೆದಿದ್ದರು. ಅಲ್ಲದೆ, ಜ. 9ರಂದು ಹೊಸ ಅಧಿಸೂಚನೆಯನ್ನು ಅವರು ಹೊರಡಿಸಿದ್ದರು. ಮೊದಲ ಅಧಿಸೂಚನೆಯಂತೆ ನಡೆದಿದ್ದ ಎಚ್ಎಲ್‌ಸಿ ಆಯ್ಕೆಗೆ ಸಂಬಂಧಿಸಿದ ನಡಾವಳಿಯಲ್ಲಿ ಯಾವುದೇ ಸ್ಪಷ್ಟ ಮಾಹಿತಿ ಇಲ್ಲದೇ ಇರುವುದರಿಂದ, ಅದು ‘ಅಸಾಂವಿಧಾನಿಕ ಆಯ್ಕೆ’ ಪ್ರಕ್ರಿಯೆ ಎಂದು ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದರು.

ಈ ಮಧ್ಯೆ, ನ. 15ರ ಅಧಿಸೂಚನೆಯಂತೆ ಆಯೋಗದ ಆಯ್ಕೆ ಸಮಿತಿ ಶಿಫಾರಸು ಮಾಡಿದ್ದ ಅಭ್ಯರ್ಥಿಯನ್ನೇ ನೇಮಿಸಿ ಆದೇಶ ಹೊರಡಿಸದಿದ್ದರೆ ಯಾವುದೇ ಆಯ್ಕೆ ಪಟ್ಟಿ ಅಥವಾ ಕಡತಕ್ಕೆ ಅನುಮೋದನೆ ನೀಡುವುದಿಲ್ಲವೆಂದು ಆಯೋಗದ ಕೆಲವು ಸದಸ್ಯರು ಪಟ್ಟು ಹಿಡಿದಿದ್ದರು. ಹೀಗಾಗಿ ಸುಮಾರು ಒಂದೂವರೆ ತಿಂಗಳು ಆಯೋಗದ ಸಭೆಯೇ ನಡೆದಿರಲಿಲ್ಲ. ಮಂಗಳವಾರ ನಡೆದ ಸಭೆಗೆ ಈ ಎಲ್ಲ ಸದಸ್ಯರೂ ಹಾಜರಾಗಿದ್ದು, ಲತಾಕುಮಾರಿ ಅವರು ‘ಅಸಾಂವಿಧಾನಿಕ ಆಯ್ಕೆ’ ಎಂದಿದ್ದ ಪ್ರಕ್ರಿಯೆಗೇ ಅನುಮೋದನೆ ನೀಡಲಾಗಿದೆ.

ಆಯೋಗದ ನಾಲ್ವರು ಸದಸ್ಯರು ಜ. 31 ಮತ್ತು ಫೆ. 6ರಂದು ಅನುಮೋದಿಸಿದ್ದ ಅಂತಿಮ ಆಯ್ಕೆ ಪಟ್ಟಿಗಳು ಮತ್ತು ನೇಮಕಾತಿ ಅಧಿಸೂಚನೆಗಳಿಗೂ ಮಂಗಳವಾರ ನಡೆದ ಸಭೆಯಲ್ಲಿ ಸ್ಥಿರೀಕರಿಸಿ ಒಪ್ಪಿಗೆ ನೀಡಲಾಗಿದೆ ಎಂದೂ ಕೆಪಿಎಸ್‌ಸಿ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT