ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

KSPCB: ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಾಗಲು ಮಾರ್ಗಸೂಚಿ, ನಿಯಮಾವಳಿ ಬದಲು

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ
Published 4 ಸೆಪ್ಟೆಂಬರ್ 2023, 20:54 IST
Last Updated 4 ಸೆಪ್ಟೆಂಬರ್ 2023, 20:54 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಅಧ್ಯಕ್ಷರಾಗಲು ಇನ್ನು ಮುಂದೆ ‘ಪರಿಸರ ವಿಜ್ಞಾನ’ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರಲೇಬೇಕು ಎಂದೇನೂ ಅಲ್ಲ. ಎಂಜಿನಿಯರಿಂಗ್‌ ಪದವಿ (ಬಿಇ) ಪಡೆದರೂ ಸಾಕು.

ಕೆಎಸ್‌ಪಿಸಿಬಿ ಅಧ್ಯಕ್ಷ ಸ್ಥಾನದಿಂದ ಶಾಂತ್ ಎ. ತಿಮ್ಮಯ್ಯ ಅವರನ್ನು ವಜಾಗೊಳಿಸಿ ಆದೇಶ ಹೊರಡಿಸಿದ ಬೆನ್ನಲ್ಲೆ, ಆ ಸ್ಥಾನ ಮತ್ತು ಮಂಡಳಿಗೆ ಸದಸ್ಯರ ನಾಮನಿರ್ದೇಶನದ ಮಾರ್ಗಸೂಚಿ, ನಿಯಮ ಮತ್ತು ಷರತ್ತುಗಳನ್ನು ರಾಜ್ಯ ಸರ್ಕಾರ ತಿದ್ದುಪಡಿ ಮಾಡಿದೆ. ಈ ತಿದ್ದುಪಡಿ 2020ರ ಜೂನ್‌ 19ರಿಂದಲೇ ಅನ್ವಯ ಆಗಲಿದೆ. 

2020ರ ಜೂನ್ 19ರಂದು ಸರ್ಕಾರ ಹೊರಡಿಸಿದ್ದ ಆದೇಶದ ಪ್ರಕಾರ, ಅಧ್ಯಕ್ಷರಾಗಲು ಪರಿಸರ ವಿಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಅಥವಾ ಪರಿಸರ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಅಥವಾ ತತ್ಸಮಾನ ಪದವಿ ಅಥವಾ ಅಂಗೀಕೃತ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಪರಿಸರಕ್ಕೆ ಸಂಬಂಧಿಸಿದ ವಿಷಯದಲ್ಲಿ (ಅಲೈಡ್‌ ಸೈನ್ಸ್‌) ಪಡೆಯಬೇಕಿತ್ತು. ಈ ‘ಅರ್ಹತೆ’ಗೆ ತಿದ್ದುಪಡಿ ಮಾಡಲಾಗಿದ್ದು, ಎಂಜಿನಿಯರಿಂಗ್‌ ವಿಷಯದಲ್ಲಿ ಪದವಿ ಅಥವಾ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಅಥವಾ ತತ್ಸಮಾನ ಪದವಿ ಅಥವಾ ಅಂಗೀಕೃತ ವಿ.ವಿ ಅಥವಾ ಸಂಸ್ಥೆಯಿಂದ ಪರಿಸರಕ್ಕೆ ಸಂಬಂಧಿಸಿದ ವಿಷಯದಲ್ಲಿ ಪದವಿ ಪಡೆದರೆ ಸಾಕು.

ಅಧ್ಯಕ್ಷರಾಗುವವರ ವಯೋಮಿತಿಯನ್ನೂ ಸಡಿಲಿಸಿದೆ. ಈ ಹಿಂದೆ, ಅರ್ಜಿ ಸಲ್ಲಿಸುವ ಕೊನೆಯ ದಿನ 56 ವರ್ಷ ವಯಸ್ಸು ದಾಟಿದವರಿಗೆ ಅಧ್ಯಕ್ಷರಾಗಲು ಅವಕಾಶ ಇರಲಿಲ್ಲ. ಅದನ್ನು 65 ವರ್ಷ ದಾಟಿರಬಾರದು ಎಂದು ತಿದ್ದುಪಡಿ ಮಾಡಲಾಗಿದೆ. 

ಮಂಡಳಿಯ ಸದಸ್ಯ ಕಾರ್ಯದರ್ಶಿ ಹುದ್ದೆಗೆ ಹಿರಿಯ ಐಎಎಸ್‌ ಅಧಿಕಾರಿಯನ್ನು ನಿಯೋಜಿಸಲು ಈ ಹಿಂದೆ ಅವಕಾಶ ಇತ್ತು. ಹೊಸ ಆದೇಶದಲ್ಲಿ ಅಂತಹ ಐಎಎಸ್‌ ಅಧಿಕಾರಿ ಎಂಜಿನಿಯರಿಂಗ್‌ ಪದವಿ ಅಥವಾ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಅಥವಾ ತತ್ಸಮಾನ ಅಥವಾ ಅಂಗೀಕೃತ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಪರಿಸರಕ್ಕೆ ಸಂಬಂಧಿಸಿದ ವಿಷಯ (ಅಲೈಡ್‌ ಸೈನ್ಸ್‌) ಓದಿರಬೇಕು. ಜೊತೆಗೆ, ಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಿಸಿದ ವಿಷಯದಲ್ಲಿ ಅನುಭವ ಹೊಂದಿರಬೇಕು ಎಂದೂ ತಿಳಿಸಲಾಗಿದೆ.

ಮಂಡಳಿಗೆ ರಾಜ್ಯ ಸರ್ಕಾರ ಮಾಲಿನ್ಯ ನಿಯಂತ್ರಣ ಮತ್ತು ಪರಿಸರ ಸಂಬಂಧಿಸಿದ ವಿಷಯಗಳ ಜೊತೆ ನೇರ ಸಂಬಂಧ ಇರುವ ರಾಜ್ಯ ಸರ್ಕಾರದ ಇಲಾಖೆಗಳಿಂದ ಐವರು ಅಧಿಕಾರಿಗಳು, ಸ್ಥಳೀಯ ಸಂಸ್ಥೆಗಳಿಂದ ಐವರು, ಮೂವರು ಅಧಿಕಾರೇತರ ಸದಸ್ಯರು ಕಂಪನಿಗಳನ್ನು ಪ್ರತಿನಿಧಿಸುವ ಇಬ್ಬರನ್ನು ನಾಮನಿರ್ದೇಶನ ಮಾಡಲು ಕೂಡಾ ಅವಕಾಶ ಕಲ್ಪಿಸಲಾಗಿದೆ.    

ಕೆಎಸ್‌ಪಿಸಿಬಿ ಅಧ್ಯಕ್ಷ ಸ್ಥಾನದ ತಮ್ಮ ಅಧಿಕಾರಾವಧಿ ಮೊಟಕುಗೊಳಿಸಿದ್ದ ಕ್ರಮವನ್ನು ಪ್ರಶ್ನಿಸಿ ಶಾಂತ್.ಎ. ತಿಮ್ಮಯ್ಯ ಸಲ್ಲಿಸಿರುವ ತಕರಾರು ಅರ್ಜಿ ಇದೇ 7ರಂದು ಹೈಕೋರ್ಟ್‌ನಲ್ಲಿ ವಿಚಾರಣೆಗೆ ಬರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT