ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಂಭಮೇಳಕ್ಕೆ ವಿಧ್ಯುಕ್ತ ಚಾಲನೆ: ಜಲರಾಶಿಯ ಆಕರ್ಷಣೆ, ಬಾಗಿನ ಅರ್ಪಣೆ

ತ್ರಿವೇಣಿ ಸಂಗಮದಲ್ಲಿ ಕುಂಭಮೇಳಕ್ಕೆ ವಿಧ್ಯುಕ್ತ ಚಾಲನೆ
Last Updated 14 ಅಕ್ಟೋಬರ್ 2022, 17:13 IST
ಅಕ್ಷರ ಗಾತ್ರ

ತ್ರಿವೇಣಿ ಸಂಗಮ (ಮಂಡ್ಯ ಜಿಲ್ಲೆ): ಕಾವೇರಿ, ಹೇಮಾವತಿ, ಲಕ್ಷ್ಮಣತೀರ್ಥ ನದಿಗಳು ಕೂಡುವ ಕೆ.ಆರ್‌.ಪೇಟೆ ತಾಲ್ಲೂಕಿನ ತ್ರಿವೇಣಿ ಸಂಗಮದಲ್ಲಿ ಶುಕ್ರವಾರ ಕುಂಭಮೇಳ ಉದ್ಘಾಟನೆಯಾಗುತ್ತಿದ್ದಾಗ, ಕಣ್ಣು ಹಾಯಿಸಿದಷ್ಟೂ ದೂರ ಅಪಾರ ಜಲರಾಶಿ ದರ್ಶನವಾಗುತ್ತಿತ್ತು. ಕೆಆರ್‌ಎಸ್‌ ಜಲಾಶಯ ಭರ್ತಿಯಾಗಿದ್ದು, ಹಿನ್ನೀರು ಪ್ರದೇಶವೂ ಆಗಿರುವ ಕ್ಷೇತ್ರದ ಸೌಂದರ್ಯ ಇಮ್ಮಡಿಗೊಂಡಿತ್ತು.

ಸಂಗಮಕ್ಕೆ ಸಾಕ್ಷಿಯಾದ ಅಂಬಿಗರಹಳ್ಳಿ, ಪುರ, ಸಂಗಾಪುರದಲ್ಲಿ ಸಾವಿರಾರು ಭಕ್ತರು ನೆರೆದು, ನದಿ ತೀರದಲ್ಲಿ ನಿರ್ಮಿಸಿರುವ ಸ್ನಾನಘಟ್ಟಗಳಲ್ಲಿ ಪುಣ್ಯಸ್ನಾನ ಮಾಡಿ ಪುಳಕಗೊಂಡರು. ವಿವಿಧ ಜಿಲ್ಲೆ ಹಾಗೂ ಹೊರರಾಜ್ಯಗಳ ಸಾವಿರಾರು ಭಕ್ತರೂ ಸಂಗಮ ಕ್ಷೇತ್ರವನ್ನು ಸಂಪನ್ನಗೊಳಿಸಿದರು.

ಮೊದಲ ದಿನ ತ್ರಿವೇಣಿ ಸಂಗಮಕ್ಕೆ ಬಾಗಿನ ಅರ್ಪಿಸಲಾಯಿತು. ನದಿ ತೀರದಲ್ಲಿ ನಿರ್ಮಿಸಿರುವ ಮಲೆ ಮಹದೇಶ್ವರ ದೇವಾಲಯದಲ್ಲಿ ಪೂಜಾ ಕಾರ್ಯಗಳು ಶುರುವಾದವು. ಮಹಾಮಂಗಳಾರತಿಯಷ್ಟೇ ಅಲ್ಲದೆ, ವಾರಾಣಸಿ ಮಾದರಿಯ ಗಂಗಾರತಿಯೂ ಗಮನ ಸೆಳೆಯಿತು.

ಅತಿವೃಷ್ಟಿಯಲ್ಲೂ ನೀರಿಗೆ ತತ್ವಾರ:

ಕುಂಭಮೇಳಕ್ಕೆ ಚಾಲನೆ ನೀಡಿದ ಧರ್ಮಸ್ಥಳ ಧರ್ಮಾಧಿಕಾರಿ, ರಾಜ್ಯಸಭಾ ಸದಸ್ಯ ಡಿ.ವೀರೇಂದ್ರ ಹೆಗ್ಗಡೆ, ‘ಅತೀವೃಷ್ಟಿಯಾದರೂ ಮೇ, ಜೂನ್‌ ತಿಂಗಳು ಬಂದರೆ ನೀರಿಗೆ ತತ್ವಾರ ತಪ್ಪುವುದಿಲ್ಲ. ಧರ್ಮಸ್ಥಳದಲ್ಲಿ ನೇತ್ರಾವತಿ ನದಿ ತುಂಬಿ ಹರಿದರೂ ಬೇಸಿಗೆಯಲ್ಲಿ ನೀರು ಪಾತಾಳಕ್ಕಿಳಿಯುತ್ತದೆ. ಭಕ್ತರು ಗಬ್ಬು ನೀರಿನಲ್ಲೇ ಸ್ನಾನ ಮಾಡುತ್ತಾರೆ’ ಎಂದು ವಿಷಾದಿಸಿದರು.

‘ಕುಂಭಮೇಳದಲ್ಲಿ ನೀರನ್ನು ಪೂಜಿಸುವುದೆಂದರೆ ಕೃತಜ್ಞತೆ ಸಲ್ಲಿಸಿದಂತೆ. ತ್ರಿವೇಣಿ ಸಂಗಮದಲ್ಲಿ ಕಾವೇರಿಯೂ ಇರುವುದರಿಂದ ಕ್ಷೇತ್ರ ಅತ್ಯಂತ ಪವಿತ್ರವಾದುದು. ಗಂಗೆಯ ಉಪಕಾರವನ್ನು ಕುಂಭಮೇಳದಲ್ಲಿ ಸ್ಮರಿಸಬೇಕು’ ಎಂದರು.

ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿ ಮಠದ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ, ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ, ರೇಷ್ಮೆ, ಯುವಜನ ಸೇವೆ ಹಾಗೂ ಕ್ರೀಡಾ ಸಚಿವ ಕೆ.ಸಿ.ನಾರಾಯಣಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT