ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜಕೀಯದಲ್ಲಿ ಯಾರೂ ಸನ್ಯಾಸಿಗಳಲ್ಲ: ಲಕ್ಷ್ಮಣ ಸವದಿ ಹೇಳಿಕೆ

ಮಂತ್ರಿ ಸ್ಥಾನದ ಕುರಿತು ಶಾಸಕ
Published 14 ಮೇ 2023, 20:40 IST
Last Updated 14 ಮೇ 2023, 20:40 IST
ಅಕ್ಷರ ಗಾತ್ರ

ಬೆಳಗಾವಿ: ‘ರಾಜಕೀಯದಲ್ಲಿ ಯಾರೂ ಸನ್ಯಾಸಿಗಳಲ್ಲ. ಶಾಸಕರಾದ ಮೇಲೆ ಮಂತ್ರಿ ಆಗಬೇಕು, ಮುಖ್ಯಮಂತ್ರಿ ಆಗಬೇಕು ಎಂಬ ಬಯಕೆ ಎಲ್ಲರಿಗೂ ಇರುತ್ತದೆ. ಆದರೆ, ಕಾಂಗ್ರೆಸ್‌ ಹೈಕಮಾಂಡ್‌ ಎಲ್ಲ ನಿರ್ಧಾರ ತೆಗೆದುಕೊಳ್ಳುತ್ತದೆ’ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.

ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಮುಖ್ಯಮಂತ್ರಿ ಯಾರಾಗಬೇಕು ಎಂದು ಎಲ್ಲ ಶಾಸಕರೂ ಸೇರಿ ನಿರ್ಧರಿಸುತ್ತಾರೆ. ಒಬ್ಬರೇ ನಿರ್ಧಾರ ಮಾಡುವುದಲ್ಲ. ಆದರೆ, ಸರ್ಕಾರದಲ್ಲಿ ಎಲ್ಲರ ಪಾಲೂ ಇರುತ್ತದೆ. ಏನೇ ಆದರೂ ಐದು ವರ್ಷ ಒಳ್ಳೆಯ ಆಡಳಿತ ಕೊಡುತ್ತೇವೆ’ ಎಂದರು.

‘ಸಿದ್ದರಾಮಯ್ಯ ಅವರಿಗೆ ಕೊಟ್ಟ ಮಾತಿನಂತೆ ನಾನು ಗೆಲ್ಲುವುದು ಮಾತ್ರವಲ್ಲದೇ, ಕುಡಚಿ ಹಾಗೂ ಕಾಗವಾಡ ಕ್ಷೇತ್ರಗಳಲ್ಲೂ ಕಾಂಗ್ರೆಸ್‌ ಗೆಲ್ಲಿಸಿದ್ದೇನೆ. ಚುನಾವಣಾ ಸಂದರ್ಭದಲ್ಲಿ ಜನರಿಗೆ ವಿಶ್ವಾಸ ಬರುವ ಮಾತು ಹೇಳಬೇಕು. ವಿನಾಕಾರಣ ವಿರೋಧಗಳು ಕೆಲಸಕ್ಕೆ ಬರುವುದಿಲ್ಲ’ ಎಂದರು.

‘ಚುನಾವಣೆ ಬಳಿಕ ಲಕ್ಷ್ಮಣ ಸವದಿಗೆ ಕಬ್ಬು ಹೇರಲು ಕಲಿಸೋಣ ಎಂದು ರಮೇಶ ಜಾರಕಿಹೊಳಿ ಹೇಳಿಕೆ ನೀಡಿದ್ದರು. ಈಗ ಅದರ ಬಗ್ಗೆ ಪ್ರತಿಕ್ರಿಯಿಸುವುದು ಸರಿಯಲ್ಲ. ಆದರೆ, ನನ್ನ ಅಭಿನಂದನೆ ಸಮಾರಂಭದಲ್ಲಿ ರೈತರ ಕಬ್ಬು ಕತ್ತರಿಸುವ ಯಂತ್ರ ತಂದು ಪೂಜೆ ಮಾಡಿಸಿದರು’ ಎಂದೂ ಹೇಳಿದರು.

‘ಸವದಿಯನ್ನು ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನದಿಂದ ಕೆಳಗಿಳಿಸುತ್ತೇವೆ ಎಂದೂ ರಮೇಶ ಜಾರಕಿಹೊಳಿ ಹೇಳಿದ್ದಾರೆ. ಅವರಿಗೆ ಬೇಕಾದದ್ದನ್ನು  ಅವರು ಮಾಡಲಿ, ನಮಗೆ ಸರಿ ಅನ್ನಿಸಿದ್ದನ್ನು ನಾವು ಮಾಡುತ್ತೇವೆ’ ಎಂದರು.

ಯಾವ ಜವಾಬ್ದಾರಿಗೂ ಸಿದ್ಧ: ‘ಜಿಲ್ಲೆಯ ಎಲ್ಲ ನಾಯಕರು, ಸತೀಶ ಜಾರಕಿಹೊಳಿ ಅವರ ನಾಯಕತ್ವದಲ್ಲಿ 12 ಕ್ಷೇತ್ರಗಳಲ್ಲಿ ಗೆಲ್ಲುವುದಾಗಿ ಹೇಳಿದ್ದೇವು. 11 ಕ್ಷೇತ್ರಗಳಲ್ಲಿ ಜಯ ಸಾಧಿಸಿದ್ದೇವೆ. ಜಿಲ್ಲೆಯಲ್ಲಿ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಗೆದ್ದಿದ್ದು ಖುಷಿಯಾಗಿದೆ. ದುರಾಡಳಿತದ ವಿರುದ್ಧ ಹಾಗೂ ಕಾಂಗ್ರೆಸ್‌ನ ಪರ ಜನ ತೀರ್ಪು ನೀಡಿದ್ದಾರೆ’ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.

‘ಜಿಲ್ಲೆಯಲ್ಲಿನ ನಾಯಕರು ಹಾಗೂ ಕಾರ್ಯಕರ್ತರ ಒಗ್ಗಟ್ಟೇ ಈ ಗೆಲುವಿಗೆ ಕಾರಣವಾಗಿದೆ. ಬೆಳಗಾವಿ ದೊಡ್ಡ ಜಿಲ್ಲೆ, ಎರಡನೇ ರಾಜಧಾನಿ ಕೂಡ. ಹೀಗಾಗಿ ಹೆಚ್ಚು ಸಚಿವ ಸ್ಥಾನಗಳು ಸಿಗುವ ಭರವಸೆ ಇದೆ’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಲಕ್ಷ್ಮೀ ಅಕ್ಕ, ಮಂತ್ರಿ ಪಕ್ಕಾ’ ಎಂದು ಅಭಿಮಾನಿಗಳು ಅಭಿಯಾನವನ್ನೇ ಆರಂಭಿಸಿದ್ದರು. ಅವರಿಗೆ ನಾನು ಋಣಿ. ನಮ್ಮ ಹೈಕಮಾಂಡ್‌ ಏನು ಜವಾಬ್ದಾರಿ ನೀಡಿದರೂ ನಿಭಾಯಿಸುತ್ತೇನೆ’ ಎಂದರು.

undefined undefined

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT