ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

BSY ಜೈಲಿಗೆ ಕಳಿಸುವವರು ಬಂದು ವಾದ ಮಂಡಿಸಲಿ: ಹೈಕೋರ್ಟ್‌ನಲ್ಲಿ ವಕೀಲರ ಸವಾಲು

Published : 30 ಆಗಸ್ಟ್ 2024, 15:23 IST
Last Updated : 30 ಆಗಸ್ಟ್ 2024, 15:23 IST
ಫಾಲೋ ಮಾಡಿ
Comments

ಬೆಂಗಳೂರು: ‘ದಿನ ಬೆಳಗಾಯ್ತು ಎಂದರೆ ಪೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ–2012) ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜೈಲಿಗೆ ಹೋಗುತ್ತಾರೆ ಎಂದು ಆಡಳಿತಾರೂಢ ಕಾಂಗ್ರೆಸ್‌ ಸಚಿವರು, ಶಾಸಕರು ಹೇಳಿಕೆ ನೀಡುತ್ತಿದ್ದಾರೆ. ಹಾಗಾದರೆ, ಅಂತಹವರೆಲ್ಲಾ ಬಂದು ಕೋರ್ಟ್‌ನಲ್ಲಿ ವಾದ ಮಂಡಿಸಲಿ’ ಎಂದು ಬಿ.ಎಸ್‌.ಯಡಿಯೂರಪ್ಪ ಪರ ಹಿರಿಯ ವಕೀಲರು ಹೈಕೋರ್ಟ್‌ನಲ್ಲಿ ನ್ಯಾಯಪೀಠದ ಮುಂದೆ ಮೌಖಿಕ ಸವಾಲು ಹಾಕಿದರು.

‘ಪೋಕ್ಸೊ ಪ್ರಕರಣದಲ್ಲಿ ಜಾಮೀನು ಮತ್ತು ಬೆಂಗಳೂರಿನ ಸದಾಶಿವನಗರ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ ರದ್ದುಪಡಿಸಬೇಕು’ ಎಂದು ಕೋರಿ ಬಿ.ಎಸ್.ಯಡಿಯೂರಪ್ಪ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಯಡಿಯೂರಪ್ಪ ಪರ ಹಾಜರಿದ್ದ ಹಿರಿಯ ವಕೀಲ ಸಿ.ವಿ.ನಾಗೇಶ್, ‘ದಿನ ಬೆಳಗಾಯ್ತು ಎಂದರೆ ಒಬ್ಬರಲ್ಲಾ ಒಬ್ಬ ಸಚಿವರು ಯಡಿಯೂರಪ್ಪ ಅವರನ್ನು ಪೋಕ್ಸೊ ಪ್ರಕರಣದಲ್ಲಿ ಪ್ರಾಸಿಕ್ಯೂಟ್ ಮಾಡಲಾಗುತ್ತದೆ. ಅವರು ನ್ಯಾಯಾಲಯಕ್ಕೆ ಶರಣಾಗಬೇಕು. ಜೈಲಿಗೆ ಹೋಗುತ್ತಾರೆ. ತಡೆಯಾಜ್ಞೆ ತೆರವು ಮಾಡುವಂತೆ ಮಾಡುತ್ತೇವೆ ಎನ್ನುತ್ತಿದ್ದಾರೆ. ಹಾಗಾದರೆ, ಅಂತಹವರೆಲ್ಲಾ ಇಲ್ಲಿಗೆ ಬಂದು ವಾದ ಮಂಡಿಸಲಿ ನೋಡೋಣ’ ಎಂದು ಮೌಖಿಕವಾಗಿ ಸವಾಲು ಎಸೆದರು.

‘ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಎಲ್ಎ, ಎಂಪಿಗಳು ಪೋಸ್ಕೊ, ಪೋಸ್ಕೊ ಎಂದು ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ. ಯಡಿಯೂರಪ್ಪನವರ ಹಣೆಬರಹದಲ್ಲಿ ಇದ್ದರೆ ಅವರು ಜೈಲಿಗೆ ಹೋಗುತ್ತಾರೆ ಬಿಡಿ’ ಎಂದರು.

ಇದಕ್ಕೆ ನ್ಯಾಯಮೂರ್ತಿಗಳು, ‘ಅದೇನದು ಪೋಸ್ಕೊ, ಪೋಸ್ಕೊ’ ಎಂದು ಪ್ರಶ್ನಿಸಿದರಲ್ಲದೆ, ‘ಅದು ಪೋಸ್ಕೊ ಅಲ್ಲ ಪೋಕ್ಸೊ’ ಎಂದು ಲಘು ಧಾಟಿಯಲ್ಲಿ ಹೇಳಿದರು. ಆಗ ನಾಗೇಶ್ ಅವರು, ‘ಪೋಸ್ಕೊ ಎಂದು ನಾನು ಹೇಳುತ್ತಿಲ್ಲ. ಯಡಿಯೂರಪ್ಪ ಅವರನ್ನು ಸ್ಮರಿಸುತ್ತಿರುವ ರಾಜಕಾರಣಿಗಳು ಪೋಸ್ಕೊ, ಪೋಸ್ಕೊ ಎನ್ನುತ್ತಿದ್ದಾರೆ’ ಎಂದು ತಾವು ನುಡಿದ ಪದದ ವ್ಯಂಗ್ಯವನ್ನು ಬಿಡಿಸಿಟ್ಟರು. 

ಸಿಐಡಿ ಪರ ಹಾಜರಾಗಿದ್ದ ವಿಶೇಷ ಪ್ರಾಸಿಕ್ಯೂಟರ್‌ ಅಶೋಕ್ ಎನ್‌.ನಾಯ್ಕ್ ಅವರು, ‘ಈ ಪ್ರಕರಣದಲ್ಲಿ ಹೆಚ್ಚುವರಿ ದೋಷಾರೋಪ ಪಟ್ಟಿ ಸಲ್ಲಿಸಲಾಗುತ್ತಿದ್ದು ಅದಕ್ಕಾಗಿ ಸ್ವಲ್ಪ ಕಾಲಾವಕಾಶ ನೀಡಬೇಕು’ ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು. ‘ಅಂತಿಮವಾಗಿ ನ್ಯಾಯಪೀಠವು ಮಧ್ಯಂತರ ಆದೇಶ ಮುಂದುವರಿಯಲಿದ್ದು, ವಿಚಾರಣೆಯನ್ನು ಸೆಪ್ಟೆಂಬರ್ 5ಕ್ಕೆ ಮುಂದೂಡಲಾಗಿದೆ‘ ಎಂದು ಆದೇಶಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT