ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕ್ರೈಸ್‌ ಲೋಪ: ‘ಲೋಕಾ’ ತನಿಖೆಗೆ ಶಾಲಿನಿ ರಜನೀಶ್‌ ಅವರಿಗೆ ಪತ್ರ

ಒಬ್ಬರೇ, ಒಂದೇ ದರಕ್ಕೆ ಆಹಾರ ಸಾಮಗ್ರಿ ಪೂರೈಕೆ ಹಿಂದೆ ಅನುಮಾನ
Published 4 ಸೆಪ್ಟೆಂಬರ್ 2024, 20:31 IST
Last Updated 4 ಸೆಪ್ಟೆಂಬರ್ 2024, 20:31 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ (ಕ್ರೈಸ್‌) ವ್ಯಾಪ್ತಿಯಲ್ಲಿರುವ ವಸತಿ ಶಾಲೆಗಳಿಗೆ ಆಹಾರ ಸಾಮಗ್ರಿ  ಪೂರೈಕೆಯನ್ನು ಎರಡೂವರೆ ವರ್ಷಗಳಿಂದ ಒಬ್ಬರೇ, ಒಂದೇ ದರಕ್ಕೆ ಪೂರೈಸುತ್ತಿರುವುದು ಅನುಮಾನಕ್ಕೆ ಕಾರಣವಾಗಿದ್ದು, ಈ ಬಗ್ಗೆ ಲೋಕಾಯುಕ್ತ ತನಿಖೆಗೆ ಒಪ್ಪಿಸಬೇಕು ಎಂದು ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರಿಗೆ ವಿಧಾನಮಂಡಲದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿ ಸೂಚಿಸಿದೆ.

ವಸತಿ ಶಿಕ್ಷಣ ಸಂಸ್ಥೆಗಳಲ್ಲಿ ಮೂಲಸೌಕರ್ಯ ಕೊರತೆಯಿಂದ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿರುವುದು ಸೇರಿದಂತೆ ಹಲವು ಲೋಪದೋಷಗಳ ಕುರಿತು ಶಾಸಕ ಪಿ.ಎಂ. ನರೇಂದ್ರಸ್ವಾಮಿ ಅಧ್ಯಕ್ಷತೆಯಲ್ಲಿ ಆಗಸ್ಟ್‌ 30ರಂದು ನಡೆದ ಸಮಿತಿಯ ಸಭೆಯಲ್ಲಿ ಚರ್ಚೆ ನಡೆದಿದೆ. ವಿದ್ಯಾರ್ಥಿ ನಿಲಯಗಳಲ್ಲಿ ನಿಗದಿಪಡಿಸಿರುವುದಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಇರುವುದನ್ನು ಹೈಕೋರ್ಟ್‌ ಕೂಡಾ ಗಮನಿಸಿದೆ. ಈ ಹಿನ್ನೆಲೆಯಲ್ಲಿ ಸಮಗ್ರ ತನಿಖೆ ನಡೆಸಬೇಕು. ನಿರ್ಲಕ್ಷ್ಯ ತೋರಿಸಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಮಿತಿ ಹೇಳಿದೆ.

ಸಮಿತಿಯ ನಿರ್ದೇಶನದ ಅನ್ವಯ, ಮುಖ್ಯ ಕಾರ್ಯದರ್ಶಿಗೆ ಮಂಗಳವಾರ (ಸೆ. 3) ಪತ್ರ ಬರೆದಿರುವ ವಿಧಾನಸಭೆಯ ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷಿ, ‘ಈ ಕುರಿತಂತೆ ಕ್ರಮ ಕೈಗೊಂಡ ಮಾಹಿತಿಯನ್ನು ವಿಧಾನಸಭಾ ಸಚಿವಾಲಯಕ್ಕೆ ನೀಡಬೇಕು’ ಎಂದೂ ತಿಳಿಸಿದ್ದಾರೆ.

ಪರಿಶಿಷ್ಟರ ಅಭಿವೃದ್ಧಿಗೆ ವಿವಿಧ ಯೋಜನೆಗಳನ್ನು ರೂಪಿಸಿ ಅನುಷ್ಠಾಗೊಳಿಸಲು ಅನುದಾನ ಬಿಡುಗಡೆ ಮಾಡಿದರೂ ಸಮರ್ಪಕವಾಗಿ ಬಳಕೆ ಆಗುತ್ತಿಲ್ಲ.‌ ಸಕಾಲದಲ್ಲಿ ಕ್ರಿಯಾ ಯೋಜನೆಗಳನ್ನು ಸಿದ್ಧಪಡಿಸುವುದರಲ್ಲಿ ಸಮಾಜ ಕಲ್ಯಾಣ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಅಡಿಯಲ್ಲಿರುವ ನಿಗಮ, ಮಂಡಳಿ, ಅಧೀನ ಸಂಸ್ಥೆಗಳು ವಿಫಲವಾಗುತ್ತಿವೆ ಎಂದೂ ಸಮಿತಿ ಹೇಳಿದೆ.

ಈ ಕುರಿತಂತೆ ಸಮಿತಿಯ ನಿರ್ದೇಶನದ ಅನ್ವಯ ಮುಖ್ಯ ಕಾರ್ಯದರ್ಶಿಗೆ ಜುಲೈ 16ರಂದೇ ಪತ್ರ ಬರೆದಿದ್ದ ಎಂ.ಕೆ. ವಿಶಾಲಾಕ್ಷಿ, ತೆಗೆದುಕೊಂಡ ಕ್ರಮದ ಮಾಹಿತಿ ನೀಡುವಂತೆ ತಿಳಿಸಿದ್ದರು. ಆದರೆ, ಕ್ರಮ ತೆಗೆದುಕೊಂಡ ಬಗ್ಗೆ ಮುಖ್ಯ ಕಾರ್ಯದರ್ಶಿ ಕಚೇರಿಯಿಂದ ಈವರೆಗೂ ಯಾವುದೇ ಮಾಹಿತಿ ಬಂದಿಲ್ಲ ಎಂದೂ ಅವರು ಮಂಗಳವಾರ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT