ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೈಂಟಿ ಹೊಡೆಯಕ್ಕೆ 18 ಕಿ.ಮೀ. ಹೋಗ್ಬೇಕಾ?: ಮದ್ಯಪ್ರಿಯರಿಂದ ದಿಢೀರ್‌ ಧರಣಿ

ವಾಪಸ್ ಹೋಗೋವಾಗ ಏನಾದ್ರೂ ಆದ್ರೆ ಯಾರು ಹೊಣೆ?: ಪಾನ ಪ್ರಿಯರ ಪ್ರಶ್ನೆ
Last Updated 22 ನವೆಂಬರ್ 2018, 12:45 IST
ಅಕ್ಷರ ಗಾತ್ರ

ಧಾರವಾಡ: ‘ನೈಂಟಿ ಹೊಡಿಯೋಕ್ಕೆ ಗ್ರಾಮದಿಂದ 18 ಕಿ.ಮೀ. ದೂರ ಹೋಗಬೇಕಾ? ಇದಕ್ಕೆ ತಗಲುವ ಖರ್ಚು ನಮಗೆ ಕೊಡೋರ್ಯಾರು?’ ಇದು ತಾಲ್ಲೂಕಿನ ಹೆಬ್ಬಳ್ಳಿ ಗ್ರಾಮದ ಮದ್ಯಪ್ರಿಯರ ಪ್ರಶ್ನೆ.

ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ದಿಢೀರನೆ ಧರಣಿ ಆರಂಭಿಸಿದ ಮದ್ಯಪ್ರಿಯರು, ಯಾರದ್ದೋ ಮಾತನ್ನು ಕೇಳಿ ಊರಿಗಿರೋ ಒಂದೇ ಮದ್ಯದಂಗಡಿಯನ್ನು ಮುಚ್ಚಿಸಬಾರದು ಎಂದು ಆಗ್ರಹಿಸಿದರು.

ಕೆಲವು ದಿನಗಳ ಹಿಂದೆ ಗ್ರಾಮದಲ್ಲಿರುವ ಮದ್ಯದ ಅಂಗಡಿಗೆ ಸುತ್ತಮುತ್ತಲಿನ ಗ್ರಾಮಸ್ಥರು ಬರುವುದರಿಂದ ಊರಿನ ವಾತಾವರಣ ಹದಗೆಟ್ಟಿದೆ. ಅದನ್ನು ಮುಚ್ಚಿಸಬೇಕು ಎಂದು ಆಗ್ರಹಿಸಿ ಹೆಬ್ಬಳ್ಳಿ ಗ್ರಾಮದ ಹಲವರು ಜಿಲ್ಲಾಧಿಕಾರಿಯನ್ನು ಆಗ್ರಹಿಸಿದ್ದರು. ಹೀಗಾಗಿ ಮದ್ಯದ ಅಂಗಡಿ ಬಂದ್‌ ಮಾಡಲಾಗಿತ್ತು.

ಇದಕ್ಕೆ ಪ್ರತಿಯಾಗಿ ಮದ್ಯಪ್ರಿಯರು ತಮಗೆ ಮದ್ಯದಂಗಡಿ ಏಕೆ ಬೇಕು ಎಂಬುದಕ್ಕೆ ಉತ್ತರ ಸಮೇತ ಬಂದಿದ್ದರು.

‘ಶೆರೇ ಅಂಗಡಿ ಬೇಕೇ ಬೇಕು...’ ಎಂದು ಘೊಷಣೆ ಕೂಗತ್ತಾ, ‘ನಾವು ನಿತ್ಯ ನೂರು ರೂಪಾಯಿದ್ದು ಕುಡಿತೇವಿ. ಹೆಬ್ಬಳ್ಳಿಲಿರೋ ಬಾರ್ ಮುಚ್ಚಿಸಿದ್ರೆ ಶೆರೇ ಕುಡಿಯಕ್ಕೆ ಧಾರವಾಡಕ್ಕೆ ಬರ್ಬೇಕು. ಅದಕ್ಕೆ ₹40 ಬೇಕು.ಹೀಗಾಗಿ ಮನೆಗೆ ಏನನ್ನೂ ಕೊಡದಂಗಾಗ್ತೈತಿ. ಮರಳಿ ಊರಿಗೆ ಹೋಗೋವಾಗ ಏನಾದ್ರೂ ಆದ್ರೆ ಯಾರು ಹೊಣೆ? ಹಿಂಗಾಗಿ ಇರೋ ಶೆರೇ ಅಂಗಡಿನಾ ಮುಚ್ಚಿಸ್ಬಾರ್ದು’ ಎಂದು ಒತ್ತಾಯಿಸಿದರು.

ಎ.ಬಿ.ದೇಸಾಯಿ ಎಂಬುವವರು ಮಾತನಾಡಿ, ‘ಹೆಬ್ಬಳ್ಳಿಯಲ್ಲಿ ಇರೋ ಬಾರು ಮುಚ್ಚಿಸುವಂಗದ್ರೆ, ಎಲ್ಲಾ ಮದ್ಯಪ್ರಿಯರು ಹುಬ್ಬಳ್ಳಿಗೋ ಅಥವಾ ಧಾರವಾಡಕ್ಕೋ ಹೋಗಬೇಕು. ಒಂದೊಮ್ಮೆ ಮದ್ಯದಂಗಡಿ ಮುಚ್ಚಿಸುವಂತಿದ್ರೆ, ಇಡೀ ಜಗತ್ತಿನಲ್ಲಿರೋ ಅಂಗಡಿ ಮುಚ್ಚಿಸಲಿ, ನಮ್ಮೂರಿಂದೇ ಮಾತ್ರ ಏಕೆ?’ ಎನ್ನುವುದು ಇವರ ಬಲವಾದ ಪ್ರಶ್ನೆ.

‘ದುಡಿಯೋದೆ ₹200. ಇದರಲ್ಲಿ ಮನೆಗೂ ಕೊಡ್ಬೇಕು. ಮನೆತನನೂ ನಡೆಸ್ಬೇಕು. ಕುಡಿಯಲೂ ಬೇಕು. ಈಗ ಹೆಂಗೋ ನಮ್ಮ ಬದುಕು ನಡೀತಿದೆ. ಆದರೆ ಬಾರ್ ಬಂದ್ ಮಾಡಿದ್ರೆ ಖರ್ಚು ಹೆಚ್ಚಾಗಲಿದೆ. ಈ ಹೆಚ್ಚುವರಿ ಹಣ ಯಾರೋ ತಿಂತಾರ. ಹೀಗಾಗಿ ಊರಿನ ಶೆರೇ ಅಂಗಡಿ ಬಂದ್ ಮಾಡ್ಬಾರ್ದು’ ಎಂದು ಆಗ್ರಹಿಸಿದರು.

‘ಊರಿನಲ್ಲಿರೋ ಮದ್ಯಂದಗಡಿ ಬಂದ್ ಮಾಡಿದ್ದಾರೆ. ಹೀಗಿದ್ದರೂ ಗಾಡಿಯಲ್ಲಿ ಮದ್ಯ ಪೂರೈಕೆ ನಡೆಯುತ್ತಿದೆ. ಇದು ಹೇಗೆ ಸಾಧ್ಯವಾಗುತ್ತಿದೆ. ಎಂಟು ಮಂದಿ ಬೈಕ್‌, ಆಟೋ ರಿಕ್ಷಾದಲ್ಲಿ ಮದ್ಯ ಮಾರಾಟ ಮಾಡ್ತಿದಾರಾ. ಹೆಚ್ಚಿಗೆ ರೊಕ್ಕ ತಗೋತಾರ. ಹಂಗಂತ ಕುಡಿಯೋರು ಏನು ಬಿಟ್ಟಿಲ್ಲ. ಹಿಂಗಿರೋವಾಗ ಮದ್ಯದ ಅಂಗಡಿ ತೆಗೆದು ಗುಣಮಟ್ಟದ ಮದ್ಯವನ್ನುನ್ಯಾಯೋಚಿತ ಬೆಲೆಗೆ ಪೂರೈಕೆ ಮಾಡಿದರೆ ಸರ್ಕಾರಕ್ಕೇ ಲಾಭ’ ಎಂದರು ಗ್ರಾಮದ ಬಸಪ್ಪ ತಮ್ಮ ವಾದ ಮುಂದಿಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT