ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭಾ ಚುನಾವಣೆ | ಕೋಲಾರಕ್ಕೆ ಹನುಮಂತಯ್ಯ , ಕೇಂದ್ರಕ್ಕೆ ಮನ್ಸೂರ್‌?

18ಕ್ಕೆ ಕಾಂಗ್ರೆಸ್‌ ಕೇಂದ್ರ ಚುನಾವಣಾ ಸಮಿತಿ ಸಭೆ
Published 15 ಮಾರ್ಚ್ 2024, 0:30 IST
Last Updated 15 ಮಾರ್ಚ್ 2024, 0:30 IST
ಅಕ್ಷರ ಗಾತ್ರ

ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಕೋಲಾರ ಕ್ಷೇತ್ರದಿಂದ ರಾಜ್ಯಸಭೆಯ ಮಾಜಿ ಸದಸ್ಯ ಎಲ್‌.ಹನುಮಂತಯ್ಯ, ರಾಯಚೂರಿನಿಂದ ನಿವೃತ್ತ ಐಎಎಸ್‌ ಅಧಿಕಾರಿ ಜಿ. ಕುಮಾರ್‌ ನಾಯಕ್‌ ಹಾಗೂ ಬೆಂಗಳೂರು ಕೇಂದ್ರ ಕ್ಷೇತ್ರದಿಂದ ಮನ್ಸೂರ್ ಅಲಿ ಖಾನ್‌ ಅವರನ್ನು ಕಾಂಗ್ರೆಸ್‌ ಪಕ್ಷವು ಕಣಕ್ಕಿಳಿಸುವ ಸಂಭವ ಇದೆ. 

ಕಾಂಗ್ರೆಸ್‌ನ ಕೇಂದ್ರ ಚುನಾವಣಾ ಸಮಿತಿಯ ಸಭೆ ಇದೇ 18ಕ್ಕೆ ನಿಗದಿಯಾಗಿದೆ. ಕರ್ನಾಟಕ, ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಿಗೆ ಅಭ್ಯರ್ಥಿಗಳ ಹೆಸರನ್ನು ಅಂದು ಅಖೈರುಗೊಳಿಸಲಾಗುತ್ತದೆ. ಕರ್ನಾಟಕದಲ್ಲಿ ಏಳು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಕಾಂಗ್ರೆಸ್‌ ಈಗಾಗಲೇ ಪ್ರಕಟಿಸಿದೆ. ಉಳಿದ ಕ್ಷೇತ್ರಗಳಿಗೆ ಸಂಭವನೀಯ ಅಭ್ಯರ್ಥಿಗಳ ಪಟ್ಟಿಯನ್ನು ರಾಜ್ಯ ಘಟಕವು ಹೈಕಮಾಂಡ್‌ಗೆ ಕಳುಹಿಸಿಕೊಟ್ಟಿದೆ. ಬಿಜೆಪಿಯು 21 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿರುವುದರಿಂದ ಕಾಂಗ್ರೆಸ್‌ ಪಕ್ಷವು ಕಾರ್ಯತಂತ್ರದಲ್ಲಿ ಬದಲಾವಣೆ ಮಾಡಲು ಮುಂದಾಗಿದೆ. ಕೆಲವು ಕ್ಷೇತ್ರಗಳಿಗೆ ಕೊನೆಯ ಕ್ಷಣದಲ್ಲಿ ಸಂಭಾವ್ಯ ಅಭ್ಯರ್ಥಿಗಳು ಬದಲಾಗುವ ಸಂಭವ ಇದೆ. 

ಕೋಲಾರದಲ್ಲಿ ಆಹಾರ ಹಾಗೂ ನಾಗರಿಕ ಪೂರೈಕೆ ಸಚಿವ ಕೆ.ಎಚ್‌.ಮುನಿಯಪ್ಪ ಅವರನ್ನು ಹುರಿಯಾಳುವನ್ನಾಗಿ ಮಾಡಲು ಕಾಂಗ್ರೆಸ್‌ ಪಾಳಯ ಯೋಜಿಸಿತ್ತು. ಚುನಾವಣೆಯಲ್ಲಿ ಸ್ಪರ್ಧಿಸಲು ಮುನಿಯಪ್ಪ ಹಿಂದೇಟು ಹಾಕಿದ್ದರು. ಕುಟುಂಬದ ಸದಸ್ಯರೊಬ್ಬರಿಗೆ ಅವಕಾಶ ಕಲ್ಪಿಸುವಂತೆ ಮನವಿ ಮಾಡಿದ್ದರು. ಮುನಿಯಪ್ಪ ಅವರೇ ಸ್ಪರ್ಧಿಸಬೇಕು ಎಂದು ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್ ಸುರ್ಜೆವಾಲಾ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಒತ್ತಡ ಹೇರಿದ್ದರು. ಈ ನಡುವೆ, ಮುನಿಯಪ್ಪ ಸ್ಪರ್ಧೆಗೆ ಸಚಿವ ಎಂ.ಸಿ.ಸುಧಾಕರ್‌, ಶಾಸಕ ಕೊತ್ತೂರು ಮಂಜುನಾಥ್‌ ಹಾಗೂ ಮಾಜಿ ಸಚಿವ ಕೆ.ಆರ್.ರಮೇಶ್‌ ಕುಮಾರ್ ಬಣದಿಂದ ವಿರೋಧ ವ್ಯಕ್ತವಾಗಿತ್ತು. ಮುನಿಯಪ್ಪ ಅಥವಾ ಕುಟುಂಬ ಸದಸ್ಯರು ಸ್ಪರ್ಧಿಸಿದರೆ ಈ ಬಣದವರು ಮುಕ್ತ ಮನಸ್ಸಿನಿಂದ ಕೆಲಸ ಮಾಡಲಾರರು ಎಂಬ ಆತಂಕದಿಂದ ಪರ್ಯಾಯ ಅಭ್ಯರ್ಥಿಗಾಗಿ ‘ಕೈ’ ಪಾಳಯ ತಲಾಶೆ ನಡೆಸಿತು. ಎಲ್‌. ಹನುಮಂತಯ್ಯ ಅವರನ್ನು ಹುರಿಯಾಳುವನ್ನಾಗಿ ಮಾಡಿದರೆ ಎರಡೂ ಬಣದವರು ಒಪ್ಪಬಹುದು ಎಂಬ ವಿಶ್ವಾಸದಿಂದ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ. ಈ ಸಂಬಂಧ ಹನುಮಂತಯ್ಯ ಅವರೊಂದಿಗೆ ಹಿರಿಯ ನಾಯಕರು ಚರ್ಚಿಸಿದ್ದಾರೆ. ಅವಕಾಶ ನೀಡಿದರೆ ಸ್ಪರ್ಧಿಸಲು ಸಿದ್ಧ ಎಂದೂ ಹನುಮಂತಯ್ಯ ತಿಳಿಸಿದ್ದಾರೆ ಎಂದು ಗೊತ್ತಾಗಿದೆ. 

ಹನುಮಂತಯ್ಯ ಎಡಗೈ ಸಮುದಾಯಕ್ಕೆ ಸೇರಿದವರು. ಅವರ ರಾಜ್ಯಸಭಾ ಅವಧಿ ಏಪ್ರಿಲ್‌ 2ರವರೆಗೆ ಇದೆ. ರಾಜ್ಯಸಭಾ ಚುನಾವಣೆಯಲ್ಲಿ ಅವರಿಗೆ ಟಿಕೆಟ್‌ ಕೊಟ್ಟಿಲ್ಲ. ಎಡಗೈ ಸಮುದಾಯಕ್ಕೆ ಟಿಕೆಟ್‌ ನಿರಾಕರಿಸಿದ್ದಕ್ಕೆ ಮಾದಿಗ ಸಮುದಾಯವರು ಆಕ್ರೋಶ ವ್ಯಕ್ತಪಡಿಸಿದ್ದರು. ಹೀಗಾಗಿ, ಸಮುದಾಯದ ಸಿಟ್ಟು ತಣಿಸಲು ಹನುಮಂತಯ್ಯ ಅವರಿಗೆ ಕೋಲಾರದಿಂದ ಅವಕಾಶ ನೀಡಲಾಗುತ್ತಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. 

ಬೆಂಗಳೂರು ಕೇಂದ್ರ ಕ್ಷೇತ್ರದಿಂದ ಬಿಡಿಎ ಅಧ್ಯಕ್ಷ ಎನ್‌.ಎ.ಹ್ಯಾರಿಸ್‌ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಲು ಕಾಂಗ್ರೆಸ್‌ ಉತ್ಸುಕವಾಗಿತ್ತು. ಆದರೆ, ಅವರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ನಿರಾಕರಿಸಿದ್ದರು. ತಮ್ಮ ಬದಲು ಪುತ್ರ ನಲಪಾಡ್‌ ಹ್ಯಾರಿಸ್‌ಗೆ ಅವಕಾಶ ನೀಡುವಂತೆ ವಿನಂತಿಸಿದ್ದರು. ಇದಕ್ಕೆ ರಾಜ್ಯ ನಾಯಕರಿಂದ ಸಹಮತ ವ್ಯಕ್ತವಾಗಿಲ್ಲ. ಹೀಗಾಗಿ, ಮನ್ಸೂರ್‌ ಅಲಿ ಖಾನ್‌ ಹೆಸರು ಮುಂಚೂಣಿಗೆ ಬಂದಿದೆ.

ರಾಯಚೂರು ಕ್ಷೇತ್ರದಿಂದ ಜಿ.ಕುಮಾರ್ ನಾಯಕ್‌ ಸ್ಪರ್ಧಿಸುವುದು ಬಹುತೇಕ. ಬಿಜೆಪಿಯ ಹಾಲಿ ಸಂಸದ ರಾಜಾ ಅಮರೇಶ್ವರ ನಾಯಕ್‌ ಅವರಿಗೆ ಟಿಕೆಟ್‌ ಕೈ ತಪ್ಪುವ ಸಾಧ್ಯತೆ ಇದೆ. ಮಾಜಿ ಶಾಸಕ ರಾಜೂ ಗೌಡ ಅವರು ಟಿಕೆಟ್‌ಗೆ ಪ್ರಬಲ ಆಕಾಂಕ್ಷಿಯಾಗಿದ್ದರು. ಅವರು ಸುರಪುರ ವಿಧಾನಸಭಾ ಉಪಚುನಾವಣೆಗೆ ಪಕ್ಷದ ಅಭ್ಯರ್ಥಿಯಾಗುವುದು ಬಹುತೇಕ ಖಚಿತ. ಇದರಿಂದಾಗಿ, ಮಾಜಿ ಸಂಸದ ಬಿ.ವಿ.ನಾಯಕ್ ಅವರಿಗೆ ಬಿಜೆಪಿ ಮಣೆ ಹಾಕುವ ಸಂಭವ ಇದೆ. ಕುಮಾರ್ ನಾಯಕ್‌ ಅವರನ್ನು ಹುರಿಯಾಳುವನ್ನಾಗಿ ಮಾಡಿದರೆ ಪಕ್ಷಕ್ಕೆ ಹೆಚ್ಚಿನ ಅನುಕೂಲವಾಗಲಿದೆ ಎಂಬುದು ಕಾಂಗ್ರೆಸ್ ನಾಯಕರ ಲೆಕ್ಕಾಚಾರ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT