ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆ ಚುನಾವಣೆ: 15 ಕ್ಷೇತ್ರಗಳಿಗೆ ಬಿಜೆಪಿ ಪಟ್ಟಿ ಇಂದು ಅಖೈರು?

Published 9 ಮಾರ್ಚ್ 2024, 23:30 IST
Last Updated 9 ಮಾರ್ಚ್ 2024, 23:30 IST
ಅಕ್ಷರ ಗಾತ್ರ

ನವದೆಹಲಿ: ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಕುರಿತು ಚರ್ಚಿಸಲು ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿ ಸಭೆ (ಸಿಇಸಿ) ಭಾನುವಾರ ಸಂಜೆ ನಡೆಯಲಿದ್ದು, ಕರ್ನಾಟಕದ 15ಕ್ಕೂ ಹೆಚ್ಚು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಅಖೈರುಗೊಳಿಸುವ ಸಂಭವ ಇದೆ. 

ಪಕ್ಷದ ಕೇಂದ್ರ ಚುನಾವಣಾ ಸಮಿತಿ ಸಭೆ ಕಳೆದ ಗುರುವಾರ ನಡೆದಿತ್ತು. ಶನಿವಾರ 195 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಾಗಿತ್ತು. ರಾಜ್ಯದ 28 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಸಂಬಂಧ ರಾಜ್ಯದ ಹಿರಿಯ ನಾಯಕರ ಜತೆಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸಮಾಲೋಚನೆ ನಡೆಸಿದ್ದರು. ಮಾರ್ಚ್‌ 8ಕ್ಕೆ ಸಿಇಸಿ ನಿಗದಿಯಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಗಳ ಪ್ರವಾಸದಲ್ಲಿದ್ದ ಕಾರಣ ಸಭೆಯನ್ನು ಮುಂದೂಡಲಾಗಿತ್ತು. ಇದೀಗ, ಭಾನುವಾರಕ್ಕೆ ಸಭೆ ನಿಗದಿಯಾಗಿದೆ. 

ಈ ಸಭೆಯಲ್ಲಿ ರಾಜ್ಯದ ನಾಯಕರಾದ ಕೇಂದ್ರ ಸಂಸದೀಯ ಮಂಡಳಿಯ ಸದಸ್ಯ ಬಿ.ಎಸ್‌.ಯಡಿಯೂರಪ್ಪ, ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ, ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಮತ್ತಿತರರು ಭಾಗಿಯಾಗಲಿದ್ದಾರೆ. 

ರಾಜ್ಯ ಘಟಕವು ಪ್ರತಿ ಲೋಕಸಭಾ ಕ್ಷೇತ್ರಕ್ಕೆ 2ರಿಂದ 3 ಹೆಸರುಗಳನ್ನು ಶಿಫಾರಸು ಮಾಡಿದೆ. ಪಕ್ಷದ ವರಿಷ್ಠರು ಮೂರು ಸಮೀಕ್ಷೆಗಳನ್ನು ನಡೆಸಿ ತಳಮಟ್ಟದ ‘ವಾಸ್ತವ’ ಮಾಹಿತಿಗಳನ್ನು ತರಿಸಿಕೊಂಡಿದ್ದಾರೆ. ವಯಸ್ಸಿನ ಕಾರಣಕ್ಕೆ ಕೆಲವು ಸಂಸದರಿಗೆ ಟಿಕೆಟ್‌ ಕೈ ತಪ್ಪುವ ಸಾಧ್ಯತೆ ಇದೆ. ಕೆಲವು ಸಂಸದರ ಕಾರ್ಯಕ್ಷಮತೆ ಬಗ್ಗೆ ವರಿಷ್ಠರಿಗೆ ತೃಪ್ತಿ ಇಲ್ಲ. ಈ ಎಲ್ಲ ಅಂಶಗಳನ್ನು ಪರಿಗಣಿಸಿ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಲಿದ್ದಾರೆ. ಕೆಲವು ಕ್ಷೇತ್ರಗಳಲ್ಲಿ ಹೊಸ ಮುಖಗಳನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT