ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

LS polls: ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್‌ನಿಂದ ‘ಚೊಂಬು’ ಪ್ರತಿಭಟನೆ

Published 20 ಏಪ್ರಿಲ್ 2024, 15:25 IST
Last Updated 20 ಏಪ್ರಿಲ್ 2024, 15:25 IST
ಅಕ್ಷರ ಗಾತ್ರ

ಬೆಂಗಳೂರು: ‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನಿರಂತರವಾಗಿ ಕರ್ನಾಟಕಕ್ಕೆ ಅನ್ಯಾಯ, ಮೋಸ ಮಾಡುತ್ತಿದೆ’ ಎಂದು ಆರೋಪಿಸಿ ಚೊಂಬು ಹಿಡಿದು ಕಾಂಗ್ರೆಸ್ ಪಕ್ಷದ ನಾಯಕರು, ಕಾರ್ಯಕರ್ತರು ಶನಿವಾರ ಪ್ರತಿಭಟನೆ ನಡೆಸಿದರು.

ಅರಮನೆ ಮೈದಾನಕ್ಕೆ ಮೋದಿ ಬರುತ್ತಿದ್ದಾರೆಂಬ ಕಾರಣಕ್ಕೆ ಮೇಕ್ರಿ ವೃತ್ತದ ಬಳಿ ಶನಿವಾರ ಬೆಳಿಗ್ಗೆ ಚೊಂಬು ಹಿಡಿದುಕೊಂಡು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ನೇತೃತ್ವದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ತಕ್ಷಣ ಚೊಂಬು ಕಸಿದುಕೊಂಡ ಪೊಲೀಸರು, ಪ್ರತಿಭಟನಾ ನಿರತರನ್ನು ವಶಕ್ಕೆ ಪಡೆದರು.

ಈ ವೇಳೆ ಮಾತನಾಡಿದ ಸುರ್ಜೇವಾಲ, ‘ಬರ ಪರಿಹಾರ,‌‌ ಭದ್ರಾ ಮೇಲ್ದಂಡೆ ಯೋಜನೆ ಸೇರಿದಂತೆ ವಿವಿಧ ಯೋಜನೆಗಳಲ್ಲಿ ಅನುದಾನ ನೀಡಬೇಕಿದ್ದ ಕೇಂದ್ರ ಸರ್ಕಾರ‌ ರಾಜ್ಯಕ್ಕೆ ಚೊಂಬು ನೀಡಿದೆ. ಮೋದಿ ನೇತೃತ್ವದ ಕೇಂದ್ರ ಸರ್ಕಾರ ಚೊಂಬು ಸರ್ಕಾರ. ಕಳೆದ ಲೋಕಸಭಾ ಚುನಾವಣೆಯಲ್ಲಿ ಆಯ್ಕೆಯಾಗಿದ್ದ ಸಂಸದರು ರಾಜ್ಯಕ್ಕೆ ಬರೀ ಚೊಂಬು ನೀಡಲಷ್ಟೇ ಶಕ್ತರಾಗಿದ್ದಾರೆ’ ಎಂದು ಕಿಡಿಕಾರಿದರು.

ಸಚಿವರಾದ ಕೃಷ್ಣ ಬೈರೇಗೌಡ, ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ ರಮೇಶ್ ಬಾಬು, ಶಾಸಕ ರಿಜ್ವಾನ್ ಅರ್ಷದ್ ಸೇರಿದಂತೆ ಪಕ್ಷದ ಹಲವು ಕಾರ್ಯಕರ್ತರು ಪ್ರತಿಭಟನೆಯಲ್ಲಿದ್ದರು.

ನಗರದ ಭೂಪಸಂದ್ರದ ಬಸ್‌ ನಿಲ್ದಾಣದ ಬಳಿ ಪಕ್ಷದ ಕಾರ್ಯಕರ್ತರ ಜೊತೆ ಚೊಂಬು ಹಿಡಿದು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಎಂ.ವಿ. ರಾಜೀವ್ ಗೌಡ ಪ್ರತಿಭಟನೆ ನಡೆಸಿದರು. ‘ಅತಿ ಹೆಚ್ಚು ತೆರಿಗೆ ಪಾವತಿಸುವ ಕರ್ನಾಟಕಕ್ಕೆ ನರೇಂದ್ರ ಮೋದಿ ಸರ್ಕಾರ ಶೂನ್ಯ ಕೊಡುಗೆ ನೀಡುವ ಮೂಲಕ ಜನಸಾಮಾನ್ಯರ ಕೈಗೆ ಖಾಲಿ ಚೊಂಬು ಕೊಟ್ಟಿದೆ’ ಎಂದು ಅವರು ವ್ಯಂಗ್ಯವಾಡಿದರು.

‘ಬರ ಪರಿಹಾರ ವಿಚಾರದಲ್ಲಿ ಮೋದಿ ನಮಗೆ ಮೋಸ ಮಾಡಿದ್ದಾರೆ. ಅಷ್ಟೇ ಏಕೆ, ಅಧಿಕಾರಕ್ಕೆ ಬರುವ ಅತಿಯಾಸೆಯಿಂದ ಎಲ್ಲರ ಖಾತೆಗೆ ₹ 15 ಲಕ್ಷ ಹಾಕುತ್ತೇವೆ ಎಂದು ಅವರು ಹೇಳಿದ್ದು ದೊಡ್ಡ ಮೋಸ. ಚೊಂಬುಗಳನ್ನಷ್ಟೆ ನೀಡಿರುವ ಬಿಜೆಪಿಗೆ ಲೋಕಸಭಾ ಚುನಾವಣೆಯಲ್ಲಿ ಕನ್ನಡಿಗರು ಅದೇ ಚೊಂಬು ನೀಡಿ ಮನೆಗೆ ಕಳುಹಿಸಲಿದ್ದಾರೆ’ ಎಂದೂ ವಾಗ್ದಾಳಿ ನಡೆಸಿದರು. ಸಚಿವ ಬೈರತಿ ಸುರೇಶ್‌, ಕಾಂಗ್ರೆಸ್‌ ವಕ್ತಾರ ಎ.ಎನ್‌. ನಟರಾಜ್‌ ಗೌಡ ಇದ್ದರು.

ಗಾಂಧಿನಗರ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು ಚೊಂಬು ಹಿಡಿದು ಮೈಸೂರು ವೃತ್ತದ ಬಳಿ ಪ್ರತಿಭಟನೆ ನಡೆಸಿದರು.

ಮೇಕ್ರಿ ವೃತ್ತದ ಬಳಿ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ನೇತೃತ್ವದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಚೊಂಬು ಹಿಡಿದು ಶನಿವಾರ ಪ್ರತಿಭಟನೆ ನಡೆಸಿದರು. ಎಐಸಿಸಿ ಕಾರ್ಯದರ್ಶಿ ಅಭಿಷೇಕ್‌ ದತ್ತ ಶಾಸಕ ರಿಜ್ವಾನ್‌ ಅರ್ಷದ್‌ ಇದ್ದರು
ಮೇಕ್ರಿ ವೃತ್ತದ ಬಳಿ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ನೇತೃತ್ವದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಚೊಂಬು ಹಿಡಿದು ಶನಿವಾರ ಪ್ರತಿಭಟನೆ ನಡೆಸಿದರು. ಎಐಸಿಸಿ ಕಾರ್ಯದರ್ಶಿ ಅಭಿಷೇಕ್‌ ದತ್ತ ಶಾಸಕ ರಿಜ್ವಾನ್‌ ಅರ್ಷದ್‌ ಇದ್ದರು

ಪ್ರಧಾನಿಗೆ ಚೊಂಬು ತೋರಿಸಲು ಯತ್ನಿಸಿದ ನಲಪಾಡ್ 

ಅರಮನೆ ಮೈದಾನದಲ್ಲಿ ಶನಿವಾರ ಸಂಜೆ ನಡೆದ ಬಿಜೆಪಿ– ಜೆಡಿಎಸ್‌ ಪಕ್ಷದ ‘ವಿಜಯ ಸಂಕಲ್ಪ’ ಸಮಾವೇಶದಲ್ಲಿ ಭಾಗವಹಿಸಲು ಬಂದ ಪ್ರಧಾನಿ ಮೋದಿಯವರಿಗೆ ಚೊಂಬು ತೋರಿಸಲು ಯತ್ನಿಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದ ರಾಜ್ಯ ಯುವ ಕಾಂಗ್ರೆಸ್‌ ಅಧ್ಯಕ್ಷ ಮೊಹಮದ್‌ ನಲಪಾಡ್ ಅವರನ್ನು ಪೊಲೀಸರು ವಶಕ್ಕೆ ಪಡೆದರು. 

ಮೋದಿ ತೆರಳುವ ರಸ್ತೆಗೆ (ಮೇಕ್ರಿ ಸರ್ಕಲ್‌) ಅರ್ಧಗಂಟೆ ಮೊದಲೇ ನಲಪಾಡ್‌ ಮತ್ತು ಎಂಟು ಮಂದಿ ಕಪ್ಪು ಬಣ್ಣದ ಲ್ಯಾಂಡ್‌ ರೋವರ್ ಡಿಫೆಂಡರ್ ಕಾರಿನಲ್ಲಿ ಬಂದಿದ್ದರು. ಚೊಂಬು ಹಿಡಿದಿದ್ದ ಕೈಗಳನ್ನು ಬೆನ್ನ ಹಿಂದೆ ಹಿಡಿದಿದ್ದ ರಸ್ತೆಗಿಳಿದು ಮೋದಿ ಬರುವ ಹಾದಿಯಲ್ಲಿ ನಡೆಯತೊಡಗಿದ್ದರು. ಅವರ ವರ್ತನೆ ಗಮನಿಸಿದ ಪೊಲೀಸರು ನಲಪಾಡ್ ಮತ್ತು ಅವರ ಸ್ನೇಹಿತರನ್ನು ಸುತ್ತುವರಿದು ವಶಕ್ಕೆ ಪಡೆದರು. ಅವರನ್ನು ಅಲ್ಲಿಂದ ಕರೆದೊಯ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT