ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಆದಾಯಕ್ಕಿಂತ ಹೆಚ್ಚು ಆಸ್ತಿ: 11 ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ

Published 11 ಜುಲೈ 2024, 2:08 IST
Last Updated 11 ಜುಲೈ 2024, 2:08 IST
ಅಕ್ಷರ ಗಾತ್ರ

ಬೆಂಗಳೂರು: ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದ ಮೇಲೆ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಇಬ್ಬರು ನಿವೃತ್ತ ಎಂಜಿನಿಯರ್‌ಗಳೂ ಸೇರಿದಂತೆ 11 ಅಧಿಕಾರಿಗಳಿಗೆ ಸಂಬಂಧಿಸಿದ 56 ಸ್ಥಳಗಳ ಮೇಲೆ ಗುರುವಾರ ನಸುಕಿನ ಜಾವ ದಾಳಿ ಮಾಡಿರುವ ಲೋಕಾಯುಕ್ತ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ರಾಜ್ಯದ ಒಂಬತ್ತು ಜಿಲ್ಲೆಗಳಲ್ಲಿ ಶೋಧ ಕಾರ್ಯಾಚರಣೆ ಆರಂಭವಾಗಿದೆ. ಲೋಕಾಯುಕ್ತದ ಪೊಲೀಸ್‌ ವಿಭಾಗದ ಎಸ್‌ಪಿಗಳೂ ಸೇರಿದಂತೆ 100 ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ.

ಕೋಲಾರದ ತಹಶೀಲ್ದಾರ್‌ ವಿಜಯಣ್ಣ, ಸಣ್ಣ ನೀರಾವರಿ ಇಲಾಖೆಯ ನಿವೃತ್ತ ಮುಖ್ಯ ಎಂಜಿನಿಯರ್‌ ಎಂ.ರವೀಂದ್ರ, ಜಲ ಸಂಪನ್ಮೂಲ ಇಲಾಖೆಯ ಮೈಸೂರು ಸೂಪರಿಂಟೆಂಡಿಂಗ್‌ ಎಂಜಿನಿಯರ್‌ ಮಹೇಶ್‌ ಕೆ., ಲೋಕೋಪಯೋಗಿ ಇಲಾಖೆಯ ಸೂಪರಿಂಟೆಂಡಿಂಗ್‌ ಎಂಜಿನಿಯರ್‌ ಕೆ.ಜಿ. ಜಗದೀಶ್‌, ಧಾರವಾಡ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಶೇಖರ್‌ ಗೌಡ, ಗ್ರಾಮೀಣ ಕುಡಿಯುವ ನೀರು ಪೂರೈಕೆ ಇಲಾಖೆಯ ನಿವೃತ್ತ ಕಾರ್ಯನಿರ್ವಾಹಕ ಎಂಜಿನಿಯರ್‌ ಶಿವರಾಜು ಎಸ್‌., ಬಿಬಿಎಂಪಿ ಕೆಂಗೇರಿ ವಲಯದ ಕಂದಾಯ ಅಧಿಕಾರಿ ಬಸವರಾಜ ಮಾಗಿ, ದಾವಣಗೆರೆಯ ಕಾರ್ಯನಿರ್ವಾಹಕ ಎಂಜಿನಿಯರ್‌ ಡಿ.ಎಚ್‌. ಉಮೇಶ್‌, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಎಂ,ಎಸ್‌, ಪ್ರಭಾಕರ, ಬೆಳಗಾವಿಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಮಹದೇವ್‌ ಬೆನ್ನೂರು, ಹಾಸನದ ಗ್ರಾಮ ಪಂಚಾಯಿತಿಯೊಂದರ ಗ್ರೇಡ್‌-1 ಕಾರ್ಯದರ್ಶಿ ಎನ್‌.ಎಂ. ಜಗದೀಶ್‌ ಅವರ ಮನೆ, ಅವರಿಗೆ ಸಂಬಂಧಿಸಿದವರ ಮನೆಗಳು, ಇತರ ಸ್ಥಳಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಲೋಕಾಯುಕ್ತದ ಪೊಲೀಸ್‌ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.

ಈ ಎಲ್ಲ ಅಧಿಕಾರಿಗಳ ವಿರುದ್ಧ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದ ಮೇಲೆ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಲೋಕಾಯುಕ್ತ ಪೊಲೀಸ್‌ ಎಫ್‌ಐಆರ್‌ ದಾಖಲಿಸಿದ್ದಾರೆ. ನ್ಯಾಯಾಲಯದಿಂದ ಶೋಧನಾ ವಾರಂಟ್‌ ಪಡೆದು ಕಾರ್ಯಾಚರಣೆ ಆರಂಭಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT