ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರೆಗೆ ಸರಿದ ಬಂಡಾಯ | ಬಿಜೆಪಿ–ಜೆಡಿಎಸ್‌ ನಿರಾಳ– ಕಾಂಗ್ರೆಸ್‌ಗೂ ನೆಮ್ಮದಿ

Published 4 ಏಪ್ರಿಲ್ 2024, 0:06 IST
Last Updated 4 ಏಪ್ರಿಲ್ 2024, 0:06 IST
ಅಕ್ಷರ ಗಾತ್ರ

ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಯ ಮೊದಲ ಹಂತದ 14 ಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಗುರುವಾರ ಕೊನೆಗೊಳ್ಳಲಿದ್ದು, ಬಿಜೆಪಿ ಮತ್ತು ಕಾಂಗ್ರೆಸ್‌ ನಾಯಕರು ವಿವಿಧ ಕ್ಷೇತ್ರಗಳಲ್ಲಿದ್ದ ಅತೃಪ್ತಿಯನ್ನು ಶಮನಗೊಳಿಸಿದ್ದಾರೆ. ಈ ಬಾರಿ ಕಾಂಗ್ರೆಸ್‌ಗಿಂತ ಬಿಜೆಪಿಯು ಹೆಚ್ಚು ಕ್ಷೇತ್ರಗಳಲ್ಲಿ ಅಸಮಾಧಾನ, ಭಿನ್ನಮತದ ಬೇಗೆಗೆ ಗುರಿಯಾಗಿತ್ತು. ರಾಜ್ಯ ನಾಯಕರಿಗೆ ಬಗ್ಗದ ಬಂಡುಕೋರರನ್ನು ಮಣಿಸುವಲ್ಲಿ ಗೃಹ ಸಚಿವ ಅಮಿತ್ ಶಾ ಮೊದಲ ಹಂತದ ಯಶಸ್ಸು ಕಂಡಿದ್ದಾರೆ. ಬೆರಳೆಣಿಕೆ ಕ್ಷೇತ್ರಗಳಲ್ಲಿದ್ದ ಅಸಮಾಧಾನಕ್ಕೆ ಕಾಂಗ್ರೆಸ್‌ ನಾಯಕರು ಉಪಶಮನ ಕಂಡುಕೊಂಡಿದ್ದಾರೆ

ಬಿಜೆಪಿಯಲ್ಲಿ ಅಭ್ಯರ್ಥಿಗಳ ಪಟ್ಟಿ ಪ್ರಕಟವಾದ ನಂತರ ಹೆಡೆ ಎತ್ತಿದ್ದ ಬಂಡಾಯ ಬಹುತೇಕ ತಣ್ಣಗಾಗಿದೆ. ಮೊದಲ ಹಂತದಲ್ಲಿ ಬಿ.ಎಸ್‌.ಯಡಿಯೂರಪ್ಪ ಮತ್ತು ಬಿ.ವೈ.ವಿಜಯೇಂದ್ರ ಅವರು ಅಸಮಾಧಾನಿತರನ್ನು ಭೇಟಿ ಮಾಡಿ ಸಮಾಧಾನಗೊಳಿಸುವಲ್ಲಿ ಯಶಸ್ವಿಯಾದರೆ, ಪಟ್ಟು ಬಿಡಲೊಪ್ಪದ ಅತೃಪ್ತರನ್ನು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರೇ ಕರೆಸಿ ಸಮಸ್ಯೆ ಬಗೆಹರಿಸಿದ್ದಾರೆ. 

ಚಿಕ್ಕಬಳ್ಳಾಪುರದಲ್ಲಿ ಬಂಡಾಯದ ಬಾವುಟ ಹಾರಿಸಿದ್ದ ಎಸ್‌.ಆರ್‌.ವಿಶ್ವನಾಥ್ ಮತ್ತು ಅಭ್ಯರ್ಥಿ ಡಾ.ಕೆ.ಸುಧಾಕರ್ ಅವರನ್ನು ಮಂಗಳವಾರ ಒಟ್ಟಿಗೆ ಕೂರಿಸಿಕೊಂಡು ಮಾತನಾಡಿದ್ದ ಶಾ, ಬುಧವಾರ ಬೆಳಿಗ್ಗೆ ಒಟ್ಟಿಗೆ ಉಪಹಾರ ಮಾಡಿ ಕ್ಷೇತ್ರದಲ್ಲಿ ಸಕಾರಾತ್ಮಕ ಸಂದೇಶ ನೀಡಬೇಕು. ಸುಧಾಕರ್‌ ಅವರನ್ನು ಗೆಲ್ಲಿಸಿಕೊಂಡು ಬರಲು ಶ್ರಮಿಸಬೇಕು ಎಂದು ಸೂಚನೆ ನೀಡಿದ್ದರು.

ಚುನಾವಣಾ ಉಸ್ತುವಾರಿ ರಾಧಾಮೋಹನ್ ದಾಸ್ ಅಗರ್‌ವಾಲ್ ಅವರ ಜತೆ ಎಸ್.ಆರ್. ವಿಶ್ವನಾಥ್ ಅವರನ್ನು ಸುಧಾಕರ್ ಭೇಟಿ ಮಾಡಿದರು. ಯಲಹಂಕ ಕ್ಷೇತ್ರದಲ್ಲಿ ಹೆಚ್ಚಿನ ಪ್ರಮಾಣದ ಮತ ಕೊಡಿಸುವುದಾಗಿಯೂ ವಿಶ್ವನಾಥ್‌ ಭರವಸೆ ನೀಡಿದರು.

ಮಂಡ್ಯ ಸಂಸದೆ ಸುಮಲತಾ ಅಂಬರೀಷ್‌ ಅವರು, ‘ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ, ಬಿಜೆಪಿಯನ್ನು ಸೇರುತ್ತೇನೆ’ ಎಂದು ಹೇಳುವ ಮೂಲಕ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಇದ್ದ ಮೊದಲ ಸವಾಲನ್ನು ನಿವಾರಿಸಿದ್ದಾರೆ.

ಚಾಮರಾಜನಗರ ಕ್ಷೇತ್ರದಲ್ಲಿ ಸಂಸದ ವಿ.ಶ್ರೀನಿವಾಸ್‌ ಪ್ರಸಾದ್ ಅವರು ಕಾಂಗ್ರೆಸ್‌ಗೆ ಬೆಂಬಲ ವ್ಯಕ್ತಪಡಿಸಿದರೆ ಕಷ್ಟ ಆಗಬಹುದು ಎಂಬ ಕಾರಣಕ್ಕೆ ಬಿ.ವೈ.ವಿಜಯೇಂದ್ರ ಅವರು ಶ್ರೀನಿವಾಸ್‌ಪ್ರಸಾದ್‌ ಅವರನ್ನು ಭೇಟಿ ಮಾಡಿ ಪಕ್ಷದ ಅಭ್ಯರ್ಥಿಗೆ ಬೆಂಬಲ ಕೋರಿದರು. ತಾವು ತಟಸ್ಥವಾಗಿ ಉಳಿಯುವುದಾಗಿ ಪ್ರಸಾದ್‌ ಹೇಳಿದ್ದಾಗಿ ಎಂದು ಮೂಲಗಳು ಹೇಳಿವೆ.

ಮೈಸೂರಿನಲ್ಲಿ ವಿಧಾನಪರಿಷತ್ತಿನ ಸದಸ್ಯ ಎಚ್.ವಿಶ್ವನಾಥ್ ಅವರನ್ನು ಭೇಟಿ ಮಾಡಿ ಯದುವೀರ ಒಡೆಯರ್‌ ಅವರನ್ನು ಬೆಂಬಲಿಸುವಂತೆ ವಿಜಯೇಂದ್ರ ಮನವಿ ಮಾಡಿದರು. ತಾವು ಒಡೆಯರ್‌ ಅವರನ್ನೇ ಬೆಂಬಲಿಸುವುದಾಗಿ ವಿಶ್ವನಾಥ್‌ ಭರವಸೆ ನೀಡಿದರು.

ಕೊಪ್ಪಳದಲ್ಲಿ ಸಂಸದ ಕರಡಿ ಸಂಗಣ್ಣ, ಚಿತ್ರದುರ್ಗದಲ್ಲಿ ಹೊಳಲ್ಕೆರೆ ಶಾಸಕ ಚಂದ್ರಪ್ಪ, ಹಾಸನದಲ್ಲಿ ಮಾಜಿ ಶಾಸಕ ಪ್ರೀತಂಗೌಡ ಅವರ ಮನವೊಲಿಸುವಲ್ಲಿ ರಾಜ್ಯನಾಯಕರು ಯಶಸ್ವಿಯಾಗಿದ್ದಾರೆ.

ಅಳಿದುಳಿದ ಅತೃಪ್ತಿ:

ತುಮಕೂರು: ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರನ್ನು ಯಡಿಯೂರಪ್ಪ ಸಮಾಧಾನಗೊಳಿಸಿದ್ದರು. ಹಾಗಿದ್ದರೂ ಸೋಮಣ್ಣ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಅವರು ಹಾಜರಿರಲಿಲ್ಲ

ದಾವಣಗೆರೆ: ಅಭ್ಯ‌ರ್ಥಿ ಗಾಯತ್ರಿ ಸಿದ್ದೇಶ್ವರ ವಿರುದ್ಧ ಮಾಜಿ ಶಾಸಕರೆಲ್ಲರೂ ತಿರುಗಿ ಬಿದ್ದಿದ್ದರು. ಅದನ್ನು ಅಮಿತ್‌ ಶಾ ಬಗೆಹರಿಸಿದ್ದಾರೆ. ನಾಮಪತ್ರ ಸಲ್ಲಿಕೆ ವೇಳೆ ಅತೃಪ್ತ ನಾಯಕರು ಹಾಜರಿರುತ್ತಾರೊ ಇಲ್ಲವೋ ಎಂಬ ಕುತೂಹಲ ಇದೆ

ಬೆಳಗಾವಿ: ಜಗದೀಶ ಶೆಟ್ಟರ್‌ ವಿರುದ್ಧ ಇದ್ದ ಅತೃಪ್ತ ನಾಯಕರ ಮನವೊಲಿಸಿರುವ ನಾಯಕರು, ಬಿಜೆಪಿ ಶಾಸಕರಾದ ಜಾರಕಿಹೊಳಿ ಸಹೋದರರ ಜತೆಗೂ ಮಾತುಕತೆ ನಡೆಸಿದ್ದಾರೆ. ಅವರು ಕೈಕೊಟ್ಟರೆ ಕಷ್ಟ ಆಗಬಹುದು ಎಂಬ  ಲೆಕ್ಕಾಚಾರವೂ ಇದೆ

ರಾಯಚೂರು: ಸಂಸದ ರಾಜಾ ಅಮರೇಶ್ವರನಾಯಕಗೆ ಮತ್ತೆ ಟಿಕೆಟ್‌ ನೀಡಿದ್ದರಿಂದ ಮಾಜಿ ಸಂಸದ ಬಿ.ವಿ. ನಾಯಕ ಆಕ್ರೋಶಗೊಂಡಿದ್ದರು. ಬಹಿರಂಗವಾಗಿ ಯಾವುದೇ ಬಂಡಾಯ ಚಟುವಟಿಕೆ ನಡೆಸುತ್ತಿಲ್ಲ. ಆದರೆ, ಬುಧವಾರ ನಡೆದ ಸಭೆಯಿಂದ ದೂರ ಉಳಿದಿದ್ದರು

ಬೆಂಕಿ ಆರಿದರೂ ‘ಕೈ’ಯಲ್ಲಿ ಕಿಡಿ

ಕಾಂಗ್ರೆಸ್‌ಗೆ ತೀವ್ರ ತಲೆನೋವು ತಂದಿಟ್ಟಿದ್ದ ಕೋಲಾರ ಕ್ಷೇತ್ರದಲ್ಲಿ ಮಾಜಿ ವಿಧಾನಸಭಾಧ್ಯಕ್ಷ ಕೆ.ಆರ್ ರಮೇಶ್‌ ಕುಮಾರ್‌ ಮತ್ತು ಕೆ.ಎಚ್. ಮುನಿಯಪ್ಪ ಅವರ ‘ಬಣ’ಗಳ ನಡುವಣ ರಾಜಕೀಯ ಮೇಲಾಟ ನುಂಗಲಾರದ ತುತ್ತಾಗಿದೆ.

ರಾಜ್ಯಸಭೆ ಮಾಜಿ ಸದಸ್ಯಎಲ್‌. ಹನುಮಂತಯ್ಯ ಮತ್ತು ಮುನಿಯಪ್ಪ ಅವರ ಅಳಿಯ ಚಿಕ್ಕಪೆದ್ದಣ್ಣ ನಡುವೆ ಟಿಕೆಟ್‌ಗಾಗಿ ಭಾರಿ ಪೈಪೋಟಿ ಏರ್ಪಟ್ಟಿತ್ತು. ಅಳಿಯನಿಗೆ ಟಿಕೆಟ್ ಕೊಡಿಸಲು ಮುನಿಯಪ್ಪ ಇನ್ನಿಲ್ಲದ ಪ್ರಯತ್ನ ಪಟ್ಟಿದ್ದರು. ಈ ಪೈಪೋಟಿಯಿಂದ ಟಿಕೆಟ್‌ ಮೂರನೇ ವ್ಯಕ್ತಿ ಪಾಲಾಗಿದೆ. ಚುನಾವಣಾ ಫಲಿತಾಂಶದಲ್ಲಿ ಈ ಬಣ ರಾಜಕೀಯ ಯಾವ ರೀತಿಯ ಪರಿಣಾಮ ಬೀರಬಹುದು ಎನ್ನುವಕುತೂಹಲವಿದೆ.

ಬಾಗಲಕೋಟೆಯಿಂದ ಟಿಕೆಟ್‌ ಸಿಕ್ಕಿಲ್ಲವೆಂದು ಮುನಿಸಿಕೊಂಡಿದ್ದವೀಣಾ ಕಾಶಪ್ಪನವರ ಪಕ್ಷದ ನಾಯಕರ ಮಾತಿಗೆ ಮಣಿದಿದ್ದಾರೆ. ಅವರಿಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸ್ಥಾನ ನೀಡಲಾಗಿದೆ. ಆದರೆ, ಟಿಕೆಟ್‌ ಕೈ ತಪ್ಪಿದ ನೋವು ಇನ್ನೂ ಅವರಲ್ಲಿದೆ.

ದಾವಣಗೆರೆಯಲ್ಲಿ ಟಿಕೆಟ್‌ ನಿರೀಕ್ಷಿಸಿದ್ದ ಜಿ.ಬಿ. ವಿನಯ್‌ಕುಮಾರ್ (ಇನ್‌ಸೈಟ್ಸ್‌ ಐಎಎಸ್‌ ಸಂಸ್ಥೆಯ ಸಂಸ್ಥಾಪಕ) ಕೂಡಾ ಬೇಸರದಲ್ಲಿದ್ದಾರೆ. ಚಿತ್ರದುರ್ಗ ಟಿಕೆಟ್‌ ವಿಚಾರದಲ್ಲಿಯೂ ಗೊಂದಲ ಉಂಟಾಗಿತ್ತು. ಬಿ.ಎನ್‌ ಚಂದ್ರಪ್ಪ (ಪರಿಶಿಷ್ಟ ಜಾತಿ ಎಡಗೈ) ಅವರಿಗೆ ಟಿಕೆಟ್‌ ಘೋಷಣೆಯಾದನಂತರವೂ ಬೋವಿ ಸಮುದಾ ಯಕ್ಕೆ ಚಿತ್ರದುರ್ಗದ ಟಿಕೆಟ್‌ ನೀಡಬೇಕೆಂಬ ಕೂಗು ಮುನ್ನೆಲೆಗೆಬಂದಿದೆ.

ಚಿಕ್ಕಬಳ್ಳಾಪುರದಲ್ಲಿ ಟಿಕೆಟ್‌ಗಾಗಿ ಪೈಪೋಟಿ ನಡೆಸಿದ್ದ ಶಿವಶಂಕರ ರೆಡ್ಡಿ ಮತ್ತು ವೀರಪ್ಪ ಮೊಯಿಲಿ ಅವರು, ರಕ್ಷಾ ರಾಮಯ್ಯ ಅವರಿಗೆ ಟಿಕೆಟ್‌ ಘೋಷಣೆ ಆಗುತ್ತಿದ್ದಂತೆ ಪಕ್ಷ ಚಟುವಟಿಕೆಯಿಂದಲೇದೂರವಾಗಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಗೌರಿಬಿದನೂರು ಕ್ಷೇತ್ರದಲ್ಲಿ ಸೋಲು ಕಂಡಿದ್ದ ಶಿವಶಂಕರ ರೆಡ್ಡಿ, ಲೋಕಸಭೆ ಚುನಾವಣೆಯ ಟಿಕೆಟ್‌ ಗಿಟ್ಟಿಸಿಕೊಳ್ಳಲು ಕಸರತ್ತು ನಡೆಸಿದ್ದರು. ರಕ್ಷಾ ರಾಮಯ್ಯ ಅವರು ಬುಧವಾರ ನಾಮಪತ್ರ ಸಲ್ಲಿಸುವ ವೇಳೆ ಅಂತರ ಕಾಯ್ದುಕೊಂಡ ರೆಡ್ಡಿ ನಡೆ ಮುಂದಿನ ದಿನಗಳಲ್ಲಿ ಹೇಗಿರಬಹುದು ಎನ್ನುವುದು ಗೊಂದಲಕ್ಕೆಕಾರಣವಾಗಿದೆ.

ಚಾಮರಾಜನಗರದಲ್ಲಿ ವಿರೋಧ ವ್ಯಕ್ತಪಡಿಸಿದ್ದ ಶಾಸಕರನ್ನು ಒಲಿಸಿಕೊಂಡು, ಸುನಿಲ್ ಬೋಸ್‌ಗೆ ಪಕ್ಷ ಟಿಕೆಟ್ ನೀಡಿದೆ. ನಾಮಪತ್ರ ಸಲ್ಲಿಸುವ ವೇಳೆ, ಕೆಲವು ಕಡೆಗಳಲ್ಲಿ ‘ಬೋಸ್ ಗೋಬ್ಯಾಕ್‌’ ಭಿತ್ತಿಪತ್ರಗಳು ಕಾಣಿಸಿಕೊಂಡಿವೆ. ಇದು ಬಿಜೆಪಿಯವರ ಕೆಲಸ ಎಂದು ಬೋಸ್ ಮತ್ತು ಅವರ ತಂದೆ ಸಚಿವ ಮಹದೇವಪ್ಪ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT