ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇಂಟ್‌ ಜೆರೊಸ ಪ್ರಕರಣ: ವಿಧಾನಸಭೆಯಲ್ಲಿ ಗದ್ದಲ

ಪೋಷಕರ ದೂರಿನ ಬಗ್ಗೆ ಎಫ್‌ಐಆರ್‌ ದಾಖಲಿಸಲು ಮತ್ತು ಎಸ್‌ಐ ಅಮಾನತಿಗೆ ಬಿಜೆಪಿ ಆಗ್ರಹ
Published 15 ಫೆಬ್ರುವರಿ 2024, 16:22 IST
Last Updated 15 ಫೆಬ್ರುವರಿ 2024, 16:22 IST
ಅಕ್ಷರ ಗಾತ್ರ

ಬೆಂಗಳೂರು: ಮಂಗಳೂರು ನಗರದ ವೆಲೆನ್ಸಿಯಾ ಸೇಂಟ್‌ ಜೆರೋಸ ಪ್ರೌಢಶಾಲೆ ಘಟನೆ ವಿಚಾರದಲ್ಲಿ ಸ್ಥಳದಲ್ಲಿ ಹಾಜರಿರದ ಶಾಸಕ ಭರತ್‌ ಶೆಟ್ಟಿ ಮೇಲೆ ದುರುದ್ದೇಶದಿಂದ ಎಫ್‌ಐಆರ್‌ ದಾಖಲಿಸಿದ್ದು, ಆದ್ದರಿಂದ ಎಸ್‌ಐ ಅನ್ನು ಅಮಾನತುಗೊಳಿಸಬೇಕು ಎಂದು ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯರು ಗದ್ದಲ ಎಬ್ಬಿಸಿ ಧರಣಿಗೆ ಮುಂದಾದಾಗ ಸಭಾಧ್ಯಕ್ಷರು ಕಲಾಪವನ್ನು ಶುಕ್ರವಾರಕ್ಕೆ ಮುಂದೂಡಿದರು.

ಶೂನ್ಯವೇಳೆಯಲ್ಲಿ ಬಿಜೆಪಿ ಭರತ್‌ ಶೆಟ್ಟಿ ಅವರು ಪ್ರಸ್ತಾಪಿಸಿದ ವಿಷಯಕ್ಕೆ ಗೃಹ ಸಚಿವ ಜಿ.ಪರಮೇಶ್ವರ ಅವರು ಉತ್ತರ ನೀಡಿ, ‘ಬಿಜೆಪಿ ಶಾಸಕರಾದ ವೇದವ್ಯಾಸ ಕಾಮತ್‌ ಮತ್ತು ಡಾ.ಭರತ್‌ ಶೆಟ್ಟಿ ಅವರು ಬಜರಂಗದಳದ ಮುಖಂಡರ ಜತೆ ಸೇರಿ ಶಾಲೆಯ ಆಡಳಿತ ಮಂಡಳಿಗೆ ಬೆದರಿಕೆ ಹಾಕಿದ್ದಾರೆ. ಶಾಂತಿ ಮತ್ತು ನೆಮ್ಮದಿಗೆ ಭಂಗ ತರುವ ಪ್ರಯತ್ನ ನಡೆಸಿದ್ದಾರೆ’ ಎಂದು ಹೇಳಿದರು.

ಇದನ್ನು ಆಕ್ಷೇಪಿಸಿದ ಭರತ್ ಶೆಟ್ಟಿ, ‘ಆ ಘಟನೆ ನಡೆದ ಸಂದರ್ಭದಲ್ಲಿ ನಾನು ಅಲ್ಲಿ ಇರಲಿಲ್ಲ. ವಿಧಾನಮಂಡಲದ ಅಧಿವೇಶನದಲ್ಲಿ ಭಾಗವಹಿಸಲೆಂದು ಬೆಂಗಳೂರಿಗೆ ಬಂದಿದ್ದೆ. ವಿಮಾನದಲ್ಲಿ ಪ್ರಯಾಣ ಮಾಡಿದ್ದಕ್ಕೆ ಬೋರ್ಡಿಂಗ್‌ ಪಾಸ್ ಕೂಡ ಇದೆ’ ಎಂದರು.

ಅದಕ್ಕೆ ಸಮಜಾಯಿಷಿ ನೀಡಿದ ಪರಮೇಶ್ವರ ಅವರು, ‘ನಾನು ಆ ವಿಚಾರವನ್ನು ಪರಿಶೀಲಿಸಿದಾಗ, ಶಾಸಕರು ಅಲ್ಲಿ ಇರಲಿಲ್ಲ ಎಂಬುದು ಗೊತ್ತಾಯಿತು’ ಎಂದರು. ಈ ಹೇಳಿಕೆ ಕುರಿತು ಬಿಜೆಪಿ ಸದಸ್ಯರು ಪರಮೇಶ್ವರ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಇದರಿಂದ ಪರಮೇಶ್ವರ ಅವರು ಕೆಲ ಕ್ಷಣ ಗೊಂದಲಕ್ಕೆ ಒಳಗಾದರು.

ಆಗ ಪರಮೇಶ್ವರ ಅವರ ನೆರವಿಗೆ ಧಾವಿಸಿದ ಸಚಿವರಾದ ದಿನೇಶ್‌ ಗುಂಡೂರಾವ್‌ ಮತ್ತು ಪ್ರಿಯಾಂಕ್ ಖರ್ಗೆ ಅವರು, ಭರತ್‌ ಶೆಟ್ಟಿ ಅವರು ‘ಎಕ್ಸ್‌’ ಖಾತೆಯಲ್ಲಿ ಆ ಶಾಲೆ ಕುರಿತು ಬರೆದಿದ್ದ ವಿಚಾರವನ್ನು ಸಚಿವರು ಗಮನಕ್ಕೆ ತಂದರು.  ‘ಹಿಂದೂ ಧರ್ಮ, ಶ್ರೀರಾಮ, ದೇವರ ಮೂರ್ತಿಗಳು ಮತ್ತು ಪ್ರಧಾನಿ ಮೋದಿ ಬಗ್ಗೆ ಶಾಲಾ ಶಿಕ್ಷಕಿ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಮತಾಂತರಕ್ಕೆ ಪ್ರಚೋದಿಸುತ್ತಿದ್ದಾರೆ. ಆದ್ದರಿಂದ ಆ ಶಾಲೆಗೆ ಹಿಂದೂಗಳು ಮಕ್ಕಳನ್ನು ಸೇರಿಸಬಾರದು ಎಂದು ಭರತ್‌ ಶೆಟ್ಟಿ ಅವರು ‘ಎಕ್ಸ್‌’ ಖಾತೆಯಲ್ಲಿ ಬರೆದುಕೊಂಡಿದ್ದಾರೆ’ ಎಂದು ಎಕ್ಸ್‌ ಹೇಳಿಕೆಯನ್ನು ಓದಿದ ಪರಮೇಶ್ವರ, ‘ಇದು ಜಿಲ್ಲೆಯ ಕೋಮುಸೂಕ್ಷ್ಮತೆಯನ್ನು ಕೆರಳಿಸುವಂತಹದ್ದು’ ಎಂದು ಹೇಳಿದರು.

‘ಶಾಸಕರ ಅಭಿಪ್ರಾಯದಲ್ಲಿ ತಪ್ಪೇನಿದೆ? ನಮ್ಮ ದೇವರು, ಧರ್ಮ, ಆಚಾರ– ವಿಚಾರವನ್ನು ಅವಹೇಳನ ಮಾಡಿದರೆ ಕೇಳಿಸಿಕೊಂಡು ಸುಮ್ಮನಿರಲು ಸಾಧ್ಯವಿಲ್ಲ. ಅದೇನು ಮಾಡಿಕೊಳ್ಳುತ್ತೀರೋ ಮಾಡಿಕೊಳ್ಳಿ. ಇದು ನಮ್ಮ ದೃಢ ನಿಲುವು’ ಎಂದು ಬಿಜೆಪಿ ಶಾಸಕರು ಏರಿದ ಧ್ವನಿಯಲ್ಲಿ ಪರಮೇಶ್ವರ ವಿರುದ್ಧ ಮುಗಿಬಿದ್ದರು.

ಬಿಜೆಪಿ ಸದಸ್ಯರ ಗದ್ದಲಕ್ಕೆ ಕೆರಳಿ ಕೆಂಡವಾದ ‍ಪರಮೇಶ್ವರ, ‘ನಿಮಗೊಬ್ಬರಿಗೇ ಅಲ್ಲ ರೀ ನಮಗೂ ಜೋರಾಗಿ ಮಾತನಾಡಲು ಬರುತ್ತದೆ. ನೀವು ಹೇಳಿದಂತೆ ಕೇಳಲು ಇಲ್ಲಿರುವುದಲ್ಲ. ನಾನ್ಸೆನ್ಸ್‌ , ಬಿಹೇವ್‌ ಯುವರ್‌ಸೆಲ್ಫ್‌’ ಎಂದು ಗುಡುಗಿದರು.

ಸಚಿವರಾದ ಪ್ರಿಯಾಂಕ್‌ ಖರ್ಗೆ ಮತ್ತು ದಿನೇಶ್‌ ಗುಂಡೂರಾವ್‌ ಅವರು ಬಿಜೆಪಿ ಸದಸ್ಯರ ವಿರುದ್ಧ ಅಬ್ಬರಿಸಿದರು. ಬಿಜೆಪಿಯ ಸುನಿಲ್‌ಕುಮಾರ್‌, ಭರತ್‌ ಶೆಟ್ಟಿ, ಎಸ್‌.ಎನ್‌.ಚನ್ನಬಸಪ್ಪ ಮತ್ತು ಇತರರು ಖರ್ಗೆ ಮತ್ತು ದಿನೇಶ್‌ ವಿರುದ್ಧ ಹರಿಹಾಯ್ದರು. ಗದ್ದಲ ತಾರಕಕ್ಕೇರಿದ ಕಾರಣ ಯಾರು ಏನು ಮಾತನಾಡುತ್ತಿದ್ದಾರೆ ಎಂಬುದು ಕೇಳದಷ್ಟು ಗದ್ದಲ ಆವರಿಸಿತು.

ಪೋಷಕರ ದೂರಿನ ಬಗ್ಗೆ ಕ್ರಮ ಏಕಿಲ್ಲ:

ಬಸವರಾಜ ಬೊಮ್ಮಾಯಿ ಮಾತನಾಡಿ, ‘ಶಾಲೆಯ ಬಗ್ಗೆ ನಮಗೂ ಗೌರವವಿದೆ. ಆದರೆ ಶಿಕ್ಷಕಿ ಪ್ರಭಾ  ಅವರು ಹಿಂದೂ ಧರ್ಮ, ದೇವರು ಮತ್ತು ಸಂಸ್ಕೃತಿಯ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಕುರಿತು ಪೋಷಕರು ನೀಡಿರುವ ದೂರಿನ ಬಗ್ಗೆ ಈವರೆಗೂ ಎಫ್‌ಐಆರ್‌ ಏಕೆ ದಾಖಲಿಸಿಲ್ಲ. ಆದರೆ, ನಿನ್ನೆಯಷ್ಟೇ ಶಾಸಕರ ವಿರುದ್ಧ ದೂರು ನೀಡಿದ ಹಿನ್ನೆಲೆಯಲ್ಲಿ ಶಾಸಕರ ಮೇಲೆ ಎಫ್‌ಐಆರ್‌ ದಾಖಲಿಸಲಾಗಿದೆ. ಪೋಷಕರ ದೂರಿನ ಬಗ್ಗೆ ಏಕೆ ಕ್ರಮ ತೆಗೆದುಕೊಳ್ಳಲಿಲ್ಲ’ ಎಂದು ಪ್ರಶ್ನಿಸಿದರು.

‘ಆ ದೂರಿನ ಕುರಿತು ತನಿಖೆ ನಡೆಸಿ ಬಳಿಕ ಕ್ರಮ ಜರುಗಿಸುತ್ತೇವೆ’ ಎಂದು ಪರಮೇಶ್ವರ ಅವರು ಸಮಜಾಯಿಷಿ ನೀಡಿದರು. ‘ಇದು ಸರ್ಕಾರದ ತಾರತಮ್ಯ ಧೋರಣೆಗೆ ನಿದರ್ಶನ’ ಎಂದು ಬೊಮ್ಮಾಯಿ ಟೀಕಿಸಿದರು. 

ವಿರೋಧಪಕ್ಷದ ನಾಯಕ ಅಶೋಕ ಮಾತನಾಡಿ, ರಾಮ, ಹಿಂದೂ ಸಂಸ್ಕೃತಿ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಶಿಕ್ಷಕಿಯನ್ನು ಬಂಧಿಸಬೇಕು. ಬಿಜೆಪಿ ಶಾಸಕರ ವಿರುದ್ಧ ಎಫ್ಐಆರ್ ದಾಖಲಿಸಿದ ಪೋಲಿಸರನ್ನು ಅಮಾನುತುಗೊಳಿಸಬೇಕು ಎಂದು ಆಗ್ರಹಿಸಿದರು.

ಶಿಕ್ಷಕಿಯ ತಪ್ಪಿಲ್ಲ:ಚಿವ ಪರಮೇಶ್ವರ

‘ಸಿಸ್ಟರ್‌ ಪ್ರಭಾರವರು ಯಾವುದೇ ಧರ್ಮಕ್ಕೂ ಅವಮಾನ ಆಗುವ ರೀತಿಯಲ್ಲಿ ನಡೆದುಕೊಂಡಿಲ್ಲ. ಆದರೆ ಸ್ಥಳೀಯ ಶಾಸಕ ವೇದವ್ಯಾಸ ಕಾಮತ್‌ ಅವರು ಶಾಸಕ ಡಾ. ಭರತ್‌ ಶೆಟ್ಟಿ ಬಜರಂಗ ದಳದ ಮುಖಂಡ ಶರಣ್‌ ಪಂಪ್‌ವೆಲ್‌ ಮುಂತಾದವರ ಜತೆ ಶಾಲೆಯ ಗೇಟ್‌ ಬಳಿ ಅಕ್ರಮವಾಗಿ ಸೇರಿ ಜೈಶ್ರೀರಾಮ್‌ ಎಂದು ಘೋಷಣೆ ಕೂಗಿ ಕ್ರೈಸ್ತ ಧರ್ಮದ ವಿರುದ್ಧ ಮಾತನಾಡಿದ್ದಾರೆ’ ಎಂದು ಸಚಿವ ಜಿ.ಪರಮೇಶ್ವರ ಅವರು ತಮ್ಮ ಲಿಖಿತ ಉತ್ತರದಲ್ಲಿ ತಿಳಿಸಿದರು. ‘ಅಲ್ಲದೇ ಶಾಲಾ ಆಡಳಿತ ಮಂಡಳಿಯ ನಿಯಮಗಳನ್ನು ಉಲ್ಲಂಘಿಸುವಂತೆಯೂ ವಿದ್ಯಾರ್ಥಿಗಳನ್ನು ಪ್ರಚೋದಿಸಿದ್ದಾರೆ. ಶಾಲಾ ಆಡಳಿತ ಮಂಡಳಿ ವಿರುದ್ಧ ಮಾತನಾಡಿ ಬೆದರಿಕೆಯನ್ನೂ ಹಾಕಿದ್ದಾರೆ. ಹಿಂದೂ ಮತ್ತು ಕ್ರೈಸ್ತ ಧರ್ಮದ ಮಧ್ಯೆ ಗಲಭೆ ಸೃಷ್ಟಿಸಲು ಪ್ರಚೋದನೆ ನೀಡಿದ್ದಾರೆ’ ಎಂದು ಹೇಳಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಸವರಾಜ ಬೊಮ್ಮಾಯಿ ಶಿಕ್ಷಕಿಯನ್ನು ತನಿಖೆಗೆ ಒಳಪಡಿಸದೆ ಸರ್ಕಾರವೇ ಅವರನ್ನು ದೋಷಮುಕ್ತ ಮಾಡಿದ್ದು ಸರಿಯಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT