ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2 ಒಪ್ಪಂದ ಪತ್ರಕ್ಕೆ ಫಾಕ್ಸ್‌ಕಾನ್‌ ಸಹಿ – ಸಚಿವ ಎಂ.ಬಿ. ಪಾಟೀಲ

* ₹ 5 ಸಾವಿರ ಕೋಟಿ ಹೂಡಿಕೆ * 13 ಸಾವಿರ ಉದ್ಯೋಗ ಸೃಷ್ಟಿ
Published 2 ಆಗಸ್ಟ್ 2023, 16:20 IST
Last Updated 2 ಆಗಸ್ಟ್ 2023, 16:20 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯದಲ್ಲಿ ₹ 5,000 ಕೋಟಿ ಬಂಡವಾಳ ಹೂಡಿಕೆ ಸಂಬಂಧ ರಾಜ್ಯ ಸರ್ಕಾರದೊಂದಿಗೆ ಫಾಕ್ಸ್‌ಕಾನ್‌ ಒಪ್ಪಂದ ಪತ್ರಕ್ಕೆ ಸಹಿ ಮಾಡಿದೆ. ಈ ಯೋಜನೆಗಳಿಂದ 13 ಸಾವಿರ ಉದ್ಯೋಗ ಸೃಷ್ಟಿ ಆಗಲಿದೆ’ ಎಂದು ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ.

‘ಚೆನ್ನೈನ ಹೋಟೆಲ್ ಲೀಲಾ ಪ್ಯಾಲೇಸ್‌ನಲ್ಲಿ ಸೋಮವಾರ ನಡೆದ ಸಭೆಯಲ್ಲಿ ಫೋನ್ ಎನ್‌ಕ್ಲೋಸರ್ ಉತ್ಪಾದನಾ ಘಟಕ ಸ್ಥಾಪನೆ ಹಾಗೂ ಸೆಮಿಕಾನ್ ಉಪಕರಣಗಳ ಯೋಜನೆ ಅನುಷ್ಠಾನ ಕುರಿತು ಮಾತುಕತೆ ನಡೆಸಿದ ಫಾಕ್ಸ್‌ಕಾನ್ ಅಧ್ಯಕ್ಷ ಯಂಗ್ ಲಿಯು, ಎರಡು ಒಪ್ಪಂದ ಪತ್ರಗಳಿಗೆ ಸಹಿ ಹಾಕಿದರು’ ಎಂದು ಪಾಟೀಲ ಹೇಳಿದ್ದಾರೆ.

‘ಈ ಎರಡೂ ಒಪ್ಪಂದಗಳು, ಈ ಮೊದಲು ಮಾಡಿಕೊಂಡಿದ್ದ ₹ 14 ಸಾವಿರ ಕೋಟಿ ಹೂಡಿಕೆ ಆ್ಯಪಲ್ ಫೋನ್ ತಯಾರಿಕಾ ಘಟಕಗಳಿಗೆ ಹೊರತಾದವು. ಇದಕ್ಕೂ ದೊಡ್ಡಬಳ್ಳಾಪುರ ಸಮೀಪ ಭೂಮಿ ನೀಡಲಾಗುವುದು’ ಎಂದು ತಿಳಿಸಿದ್ದಾರೆ.

‘ಕರ್ನಾಟಕ ಸರ್ಕಾರದ ಜತೆ ಯೋಜಿತ ಹೂಡಿಕೆ ಒಪ್ಪಂದ ಮಾಡಿಕೊಳ್ಳಲಾಗಿದ್ದು, ನಮ್ಮ ಹೈಟೆಕ್ ಉದ್ಯಮಗಳಿಗೆ ರಾಜ್ಯ ಆಕರ್ಷಕ ತಾಣವಾಗಿದೆ. ಕರ್ನಾಟದಲ್ಲಿ ಉದ್ಯಮಕ್ಕೆ ಪೂರಕವಾದ ವಾತಾವರಣವಿದೆ. ನುರಿತ ಕೆಲಸಗಾರರ ಲಭ್ಯತೆಯೂ ಇಲ್ಲಿನ ವಿಶೇಷ. ಈ ಎರಡು ಪ್ರಮುಖ ಯೋಜನೆಗಳ ಮೂಲಕ ರಾಜ್ಯದಲ್ಲಿ ಹೊಸ ಅಧ್ಯಾಯ ಆರಂಭಿಸಲಿದ್ದೇವೆ’ ಎಂದು ಫಾಕ್ಸ್‌ಕಾನ್‌ ಅಧ್ಯಕ್ಷ ಯಂಗ್ ಲಿಯು ಹೇಳಿದ್ದಾರೆ.

ಎರಡು ಯೋಜನೆಗಳು ಯಾವುವು?

* ಫೋನ್ ಎನ್‌ಕ್ಲೋಸರ್‌: ಐಫೋನ್‌ಗಳ ಮೆಕ್ಯಾನಿಕಲ್ ಎನ್‌ಕ್ಲೋಸರ್‌ನಂತಹ ಸ್ಮಾರ್ಟ್‌ಫೋನ್‌ನ ಉಪ ಘಟಕಗಳನ್ನು ತಯಾರಿಸುವ ಸಂಸ್ಥೆಯಾದ ಫಾಕ್ಸ್ ಕಾನ್ ಇಂಡಸ್ಟ್ರಿಯಲ್ ಇಂಟರ್ ನೆಟ್ (ಎಫ್‌ಐಐ)ನ ಹೂಡಿಕೆ ಮೊತ್ತ 350 ದಶಲಕ್ಷ ಡಾಲರ್ (₹ 3000 ಕೋಟಿ) ಯೋಜನೆಯಡಿ 12 ಸಾವಿರ ಜನರಿಗೆ ಉದ್ಯೋಗ ದೊರೆಯಲಿದೆ. ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶದಲ್ಲಿ ಘಟಕ ಸ್ಥಾಪಿಸಲು ಎಫ್‌ಐಐ ಉದ್ದೇಶಿಸಿದೆ. * ಸೆಮಿಕಾನ್ ಉಪಕರಣಗಳು: ಅಪ್ಲೈಡ್‌ ಮೆಟೀರಿಯಲ್ಸ್‌ ಸಹಯೋಗದಲ್ಲಿ ಸೆಮಿಕಂಡಕ್ಟರ್ ಉತ್ಪಾದನಾ ಉಪಕರಣಗಳ ತಯಾರಿಸುವ ಸಂಸ್ಥೆಯ ಯೋಜಿತ ಯೋಜನೆಯ ಹೂಡಿಕೆ ಮೊತ್ತ 250 ದಶಲಕ್ಷ ಡಾಲರ್( ₹ 2000 ಕೋಟಿ‌). ಇದರಿಂದ 1000 ಜನರಿಗೆ ಉದ್ಯೋಗ ದೊರೆಯಲಿದೆ. ಈ ಯೋಜನೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿರುವ ಹೈಟೆಕ್ ಏರೋಸ್ಪೇಸ್ ಮತ್ತು ಡಿಫೆನ್ಸ್ ಪಾರ್ಕ್ - 2ನೇ ಹಂತದಲ್ಲಿ 35 ಎಕರೆ ಭೂಮಿ ಅಂತಿಮಗೊಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT