ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಕೆದಾಟು ಡಿಪಿಆರ್‌: ಸಿಕ್ಕಿತೇ ಒಪ್ಪಿಗೆ?

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆ ಇಂದು
Last Updated 5 ಜುಲೈ 2022, 23:30 IST
ಅಕ್ಷರ ಗಾತ್ರ

ನವದೆಹಲಿ: ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ(ಸಿಡಬ್ಲ್ಯೂಎಂಎ) ಸಭೆ ನವದೆಹಲಿಯಲ್ಲಿ ಬುಧವಾರ(ಜುಲೈ 6) ನಡೆಯಲಿದೆ. ಮೇಕೆದಾಟು ಬಳಿ ಸಮತೋಲನ ಜಲಾಶಯ ನಿರ್ಮಿಸುವ ಉದ್ದೇಶ ಹೊಂದಿರುವ ವಿಸ್ತೃತ ಯೋಜನಾ ವರದಿಗೆ (ಡಿಪಿಆರ್) ಸಭೆಯಲ್ಲಿ ಅನುಮೋದನೆ ಸಿಗುವ ವಿಶ್ವಾಸದಲ್ಲಿ ಕರ್ನಾಟಕ ಸರ್ಕಾರ ಇದೆ.

ಮೇಕೆದಾಟುಯೋಜನೆಯ ಡಿಪಿಆರ್‌ಗೆಕಾವೇರಿ ನದಿ ನಿರ್ವಹಣಾಪ್ರಾಧಿಕಾರವೇ ಅನುಮೋದನೆನೀಡಬೇಕು ಎಂದು ಕೇಂದ್ರ ಜಲ ಆಯೋಗ ಈ ಹಿಂದೆಯೇ ಷರತ್ತು ವಿಧಿಸಿತ್ತು. ಪ್ರಾಧಿಕಾರವು ಈಗಾಗಲೇ ಐದು ಸುತ್ತಿನ ಸಭೆಗಳನ್ನು ನಡೆಸಿದೆ. ಬುಧವಾರ ನಡೆಯುವ ಸಭೆಯಲ್ಲಿ ಕರ್ನಾಟಕ,ತಮಿಳುನಾಡು, ಪುದುಚೇರಿ ಮತ್ತು ಕೇರಳ ರಾಜ್ಯಗಳ ಹಾಗೂ ಕೇಂದ್ರ ಸರ್ಕಾರದ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಸಭೆಯನ್ನು ಈ ಮೊದಲು ಜೂನ್ 16ಕ್ಕೆ ನಿಗದಿ ಮಾಡಲಾಗಿತ್ತು. ಬಳಿಕ ಜೂನ್‌ 23ಕ್ಕೆ ಮುಂದೂಡಲಾಗಿತ್ತು. ತಮಿಳುನಾಡು ಸರ್ಕಾರದ ಮನವಿಯ ಮೇರೆಗೆ ಸಭೆಯನ್ನು ಜುಲೈ 6ಕ್ಕೆ ನಿಗದಿ ಮಾಡಲಾಯಿತು.

ಮೇಕೆದಾಟು ಯೋಜನೆಯ ಬಗ್ಗೆ ಚರ್ಚಿಸದಂತೆ ಪ್ರಾಧಿಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿತಮಿಳುನಾಡು ಸರ್ಕಾರವು ಸುಪ್ರೀಂ ಕೋರ್ಟ್‌ ಮೊರೆ ಹೋಗಿದೆ. ಜತೆಗೆ,‘ಮೇಕೆದಾಟುಯೋಜನೆ ಚರ್ಚೆಗೆ ತೆಗೆದುಕೊಳ್ಳದಂತೆ ಪ್ರಾಧಿಕಾರಕ್ಕೆ ತಡೆ ನೀಡಬೇಕು. ಈ ವಿಚಾರದಲ್ಲಿ ಮಧ್ಯಪ್ರವೇಶಿಸಬೇಕು’ ಎಂದು ಆಗ್ರಹಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಜೂನ್‌ನಲ್ಲಿಪತ್ರ ಬರೆದಿದ್ದಾರೆ.

ಈ ನಡುವೆ, ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್‌ ಶೆಖಾವತ್‌ ಅವರನ್ನು ಭೇಟಿ ಮಾಡಿರುವ ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಡಿಪಿಆರ್‌ಗೆ ಒಪ್ಪಿಗೆ ನೀಡುವಂತೆ ಒತ್ತಡ ಹೇರಿದ್ದಾರೆ.

ಯೋಜನೆ ಅನುಷ್ಠಾನಕ್ಕಾಗಿ ಬಜೆಟ್‌ನಲ್ಲಿ ₹1 ಸಾವಿರ ಕೋಟಿ ಮೀಸಲಿಡಲಾಗಿದೆ. ವಿಧಾನಸಭಾ ಚುನಾವಣಾ ದಿನಾಂಕ ಘೋಷಣೆಗೆ ಮುನ್ನ ಯೋಜನೆಗೆ ಚಾಲನೆ ನೀಡಬೇಕು ಎಂದು ಕರ್ನಾಟಕ ಸರ್ಕಾರದ ಯೋಚನೆ.ಯೋಜನೆಗೆ ತ್ವರಿತ ಅನುಮೋದನೆ ನೀಡಿದರೆ ಬಿಜೆಪಿಗೆ ರಾಜಕೀಯವಾಗಿ ಲಾಭವಾಗಲಿದೆ ಎಂಬುದನ್ನು ಮುಖ್ಯಮಂತ್ರಿ ಅವರು ಕೇಂದ್ರ ಸಚಿವರ ಗಮನಕ್ಕೆ ತಂದಿದ್ದಾರೆ ಎಂದು ಕರ್ನಾಟಕ ಸರ್ಕಾರದ ಮೂಲಗಳು ಹೇಳಿವೆ.

ಮೇಕೆದಾಟು ಯೋಜನೆಯನ್ನು ಕರ್ನಾಟಕ ಸರ್ಕಾರವುನಿಯಮ ಉಲ್ಲಂಘಿಸಿ ಕೈಗೆತ್ತಿಕೊಂಡಿದೆ ಎಂಬ ಪತ್ರಿಕಾ ವರದಿಯೊಂದನ್ನು ಆಧರಿಸಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ಚೆನ್ನೈ ಪೀಠವು 2021ರ ಮೇ 21ರಂದು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿತ್ತು.ಜತೆಗೆ, ಮೇಕೆದಾಟು ಸ್ಥಳ ಪರಿಶೀಲನೆಗಾಗಿ ಸಮಿತಿಯೊಂದನ್ನು ರಚಿಸಿ ಆದೇಶ ನೀಡಿತ್ತು. ಈ ಆದೇಶವನ್ನು ಪ್ರಶ್ನಿಸಿ ಕರ್ನಾಟಕ ಸರ್ಕಾರವು ಜೂನ್‌ 9ರಂದು ಮೇಲ್ಮನವಿ ಸಲ್ಲಿಸಿತ್ತು. ‘ಮೇಕೆದಾಟು ಯೋಜನೆಯನ್ನು ಪ್ರಶ್ನಿಸಿ ತಮಿಳುನಾಡು ಸಲ್ಲಿಸಿರುವ ಅರ್ಜಿಯ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇರುವಾಗ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ವಿಚಾರಣೆ ನಡೆಸುವ ಅಧಿಕಾರ ಎನ್‌ಜಿಟಿಗೆ ಇಲ್ಲ’ ಎಂದು 2021ರ ಜೂನ್‌ 17ರಂದು ಸುಪ್ರೀಂ ಕೋರ್ಟ್‌ ಆದೇಶ ಹೊರಡಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ತಮಿಳುನಾಡು ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದೆ.

ಕರ್ನಾಟಕ ಸರ್ಕಾರದ ವಾದವೇನು?

ಸುಪ್ರೀಂಕೋರ್ಟ್‌ ಆದೇಶದ ಮೇರೆಗೆ ಕಾವೇರಿ ನದಿ ನೀರಿನಲ್ಲಿ ಕರ್ನಾಟಕದ ಪಾಲಿನ4.75 ಟಿಎಂಸಿ ಅಡಿ ನೀರು ಬಳಕೆ ಮಾಡಿಕೊಳ್ಳಲು ಡಿಪಿಆರ್ ಸಿದ್ಧಪಡಿಸಲಾಗಿದೆ. ಈ ನೀರನ್ನು ಬೆಂಗಳೂರಿನ ಜನರಿಗೆ ಕುಡಿಯುವ ನೀರು ಪೂರೈಸಲುಬಳಸಲಾಗುವುದು. ತಮಿಳುನಾಡಿಗೆ ಹಂಚಿಕೆಯಾದ ನೀರನ್ನು ಚಾಚೂ ತಪ್ಪದೆ ಬಿಡಲಾಗುತ್ತಿದೆ.ಆದರೆ, ಕರ್ನಾಟಕದ ಪಾಲಿನ ನೀರು ಬಳಸಿಕೊಳ್ಳಲು ತಮಿಳುನಾಡು ಸರ್ಕಾರ ಅಡ್ಡಿ ಮಾಡುತ್ತಿರುವುದು ಸರಿಯಲ್ಲ. ಬೆಂಗಳೂರಿನಲ್ಲಿ 30 ರಾಜ್ಯಗಳ ಜನರು ಮತ್ತು ವಿದೇಶಿ ಪ್ರಜೆಗಳು ನೆಲೆಸಿದ್ದಾರೆ. ಸುಮಾರು 1.30 ಕೋಟಿ ಜನ ವಾಸವಿದ್ದಾರೆ. ಹೀಗಾಗಿ, ಯೋಜನೆಗೆಆಕ್ಷೇಪ ಎತ್ತಿರುವುದು ಸರಿಯಲ್ಲ.

ತಮಿಳುನಾಡು ಸರ್ಕಾರದ ವಾದವೇನು?

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿಮೇಕೆದಾಟುಬಗ್ಗೆ ಚರ್ಚಿಸುವ ನಿರ್ಧಾರವೇ ಆಘಾತಕಾರಿ ಮತ್ತು ಕಾನೂನುಬಾಹಿರ.ಈ ವಿಚಾರ ಸುಪ್ರೀಂ ಕೋರ್ಟ್‌ನಲ್ಲಿರುವಾಗ ಚರ್ಚಿಸಲು ಪ್ರಾಧಿಕಾರಕ್ಕೆ ಅಧಿಕಾರವಿಲ್ಲ. ಇದು ನ್ಯಾಯಾಂಗ ನಿಂದನೆಯಾಗಲಿದೆ. ಇದರ ವಿರುದ್ಧವೂ ಸುಪ್ರೀಂ ಕೋರ್ಟ್‌ನಲ್ಲಿ ಹೋರಾಟ ನಡೆಸಲಾಗುವುದು. ಕಾವೇರಿ ನದಿಗೆ ಅಡ್ಡಲಾಗಿ ಅಣೆಕಟ್ಟೆ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT